ಗುಜರಾತ್ ಎಎಪಿ ಅಭ್ಯರ್ಥಿ ಅಪಹರಣ ಪ್ರಕರಣ: ಸ್ವಪಕ್ಷದ ವಿರುದ್ಧ ಅಭ್ಯರ್ಥಿ ವಾಗ್ದಾಳಿ
ನವದೆಹಲಿ, ನವೆಂಬರ್ 16: ಗುಜರಾತ್ ಎಎಪಿ ಅಭ್ಯರ್ಥಿ ಅಪಹರಣ ಪ್ರಕರಣ ಸದ್ಯ ಯುಟರ್ನ್ ಪಡೆದುಕೊಂಡಿದೆ. ಅಪಹರಣಕ್ಕೊಳಗಾಗಿದ್ದಾರೆಂದು ದೂರಲಾಗಿದ್ದ ಗುಜರಾತ್‌ನ ಎಎಪಿ ಅಭ್ಯರ್ಥಿ ಪಕ್ಷದ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ಸೂರತ್ (ಪೂರ್ವ)ದ ಎಎಪಿ ಅಭ್ಯರ್ಥಿ ಕಾಂಚನ್ ಜರಿವಾಲಾ ನಿನ್ನೆಯಿಮದ ನಾಪತ್ತೆಯಾಗಿದ್ದರು. ಇದಕ್ಕೆ ಎಎಪಿ ಬಿಜೆಪಿ ಮೇಲೆ ಗಂಭೀರ ಆರೋಪವನ್ನು ಮಾಡಿತ್ತು.
ಬಿಜೆಪಿಯು ತನ್ನ ಗುಜರಾತ್ ಚುನಾವಣಾ ಅಭ್ಯರ್ಥಿಯೊಬ್ಬರನ್ನು ಅಪಹರಿಸಿದೆ ಎಂದು ಎಎಪಿ ಆಪಾದನೆ ಮಾಡಿತ್ತು. ಈ ಘಟನೆ ಇಂದು ಸಂಜೆ ವಿಚಿತ್ರ ತಿರುವು ಪಡೆದುಕೊಂಡಿದೆ. ಏಕೆಂದರೆ ಕಾಣೆಯಾದ ಅಭ್ಯರ್ಥಿ ತನ್ನದೇ ಪಕ್ಷದ ಮೇಲೆ ವಾಗ್ದಾಳಿ ನಡೆಸಿರುವ ವಿಡಿಯೋ ವೈರಲ್ ಆಗಿದೆ.
ಸೂರತ್ (ಪೂರ್ವ) ಅಭ್ಯರ್ಥಿ ಕಾಂಚನ್ ಜರಿವಾಲಾ ಅವರನ್ನು ಅಪಹರಿಸಲಾಗಿದೆ ಎಂದು ಎಎಪಿ ಇಂದು ಆರೋಪ ಮಾಡಿತ್ತು. ಕಾಂಚನ್ ಜರಿವಾಲಾ ಅವರಿಗೆ ಮುಂದಿನ ತಿಂಗಳ ಗುಜರಾತ್ ಚುನಾವಣೆಯಿಂದ ಹೊರಗುಳಿಯುವಂತೆ ಬಂದೂಕು ತೋರಿಸಿ ಬಲವಂತಪಡಿಸಲಾಗಿದೆ ಎಂದು ಎಎಪಿ ಆರೋಪಿಸಿತ್ತು. ಆದರೆ ಈ ಆರೋಪದ ಬಳಿಕ ಕಾಂಚನ್ ಜರಿವಾಲಾ ''ಎಎಪಿ ಗುಜರಾತ್ ವಿರೋಧಿ ಪಕ್ಷ. ದೇಶ ವಿರೋಧಿ ಪಕ್ಷವನ್ನು ಪ್ರತಿನಿಧಿಸದಿರಲು ನಿರ್ಧರಿಸಿದ್ದೇನೆ" ಎಂದು ಹೇಳಿಕೊಂಡಿದ್ದಾರೆ.
|
ಸ್ವಯಿಚ್ಚೆಯಿಂದ ನಾಮಪತ್ರ ವಾಪಸ್ಸು ಪಡೆದ ಎಂದ ಅಭ್ಯರ್ಥಿ
"ದೇಶವಿರೋಧಿ ಮತ್ತು ಗುಜರಾತ್ ವಿರೋಧಿ ಪಕ್ಷದ ಅಭ್ಯರ್ಥಿ ಏಕೆ ನೀವಾದಿರಿ ಎಂದು ನನ್ನ ಪ್ರಚಾರದ ಸಮಯದಲ್ಲಿ ಜನರು ನನ್ನನ್ನು ಕೇಳುತ್ತಿದ್ದರು. ನಾನು ನನ್ನ ಆಂತರಿಕ ಧ್ವನಿಯನ್ನು ಆಲಿಸಿದೆ. ಯಾವುದೇ ಒತ್ತಡವಿಲ್ಲದೆ ನಾನು ನನ್ನ ನಾಮಪತ್ರವನ್ನು ಹಿಂಪಡೆದಿದ್ದೇನೆ. ಎಎಪಿ ಪಕ್ಷವನ್ನು ನಾನು ಬೆಂಬಲಿಸಲು ಸಾಧ್ಯವಿಲ್ಲ" ಎಂದು ಕಾಂಚನ್ ಜರಿವಾಲಾ ವಿಡಿಯೋದಲ್ಲಿ ಹೇಳಿದ್ದಾರೆ.
"ಅಪಹರಣ"ದ ಬಗ್ಗೆ ದೂರು ನೀಡಲು ಮತ್ತು ಸೂರತ್ (ಪೂರ್ವ) ನಲ್ಲಿ ಚುನಾವಣೆಯನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಲು ಎಎಪಿ ನಾಯಕರು ಚುನಾವಣಾ ಆಯೋಗವನ್ನು ಭೇಟಿ ಮಾಡಿದ ಸ್ವಲ್ಪ ಸಮಯದ ನಂತರ ಈ ವಿಡಿಯೊ ಬಹಿರಂಗಗೊಂಡಿದೆ.
|
ಅಭ್ಯರ್ಥಿ ಕಾಂಚನ್ ಜರಿವಾಲಾ 'ಅಪಹರಣ' ಪ್ರಕರಣ
ಎಎಪಿಯ ಹಿರಿಯ ನಾಯಕ ಮನೀಶ್ ಸಿಸೋಡಿಯಾ ಅವರು 'ನಿನ್ನೆ ಶಾಸಕರನ್ನು ಅಪಹರಿಸಿ, 500 ಪೊಲೀಸರು ಚುನಾವಣಾ ಕಚೇರಿಗೆ ಎಳೆದೊಯ್ದರು ಮತ್ತು ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋಗಿ ಮೊದಲು ಬಂದೂಕು ತೋರಿಸಿ ನಾಮಪತ್ರ ಹಿಂಪಡೆಯುವಂತೆ ಒತ್ತಾಯಿಸಿದರು. ಈ ವೇಳೆ ಜರಿವಾಲಾ ಮತ್ತು ಅವರ ಕುಟುಂಬವನ್ನು ತಲುಪಲು ಸಾಧ್ಯವಾಗಲಿಲ್ಲ ಮತ್ತು ಅವರ ಮನೆಗೆ ಬೀಗ ಹಾಕಲಾಗಿದೆ' ಎಂದು ಮನೀಶ್ ಸಿಸೋಡಿಯಾ ಅವರು ಹೇಳಿದ್ದಾರೆ.
"ಅವರ ಮೇಲೆ ನಾಮಪತ್ರ ಹಿಂಪಡೆಯುವಂತೆ ಒತ್ತಡವಿದೆ. ಅವರನ್ನು ಚುನಾವಣಾ ಕಚೇರಿಯಲ್ಲಿ ಕುಳಿತುಕೊಳ್ಳುವಂತೆ ಒತ್ತಾಯಿಸಲಾಗಿದೆ ಮತ್ತು ಪೊಲೀಸರಿಂದ ಒತ್ತಡ ಹೇರಲಾಗುತ್ತಿದೆ. ಇದು ಪ್ರಜಾಪ್ರಭುತ್ವಕ್ಕೆ ಬಹಿರಂಗ ಬೆದರಿಕೆ ಎಂದು ನಾನು ಚುನಾವಣಾ ಆಯೋಗಕ್ಕೆ ಹೇಳಲು ಬಯಸುತ್ತೇನೆ" ಎಂದು ಸಿಸೋಡಿಯಾ ಆರೋಪಿಸಿದ್ದಾರೆ.

ಅಭ್ಯರ್ಥಿಯ ಅಪಹರಣವಾಗಿದೆ ಎಂದ ಎಎಪಿ
ಚುನಾವಣಾ ಆಯೋಗಕ್ಕೆ ತಮ್ಮ ಆರೋಪಗಳನ್ನು ಫ್ಲ್ಯಾಗ್ ಮಾಡಿದ ಸಿಸೋಡಿಯಾ ಅವರು- "ನಮ್ಮ ಅಭ್ಯರ್ಥಿಯನ್ನು ಅಪಹರಿಸಲಾಗಿದೆ. ಅವರು ಬಂದೂಕು ತೋರಿಸಿ ನಾಮಪತ್ರ ಹಿಂತೆಗೆದುಕೊಳ್ಳುವಂತೆ ಮಾಡಿದ್ದಾರೆ. ಚುನಾವಣಾ ಆಯೋಗಕ್ಕೆ ಇದಕ್ಕಿಂತ ದೊಡ್ಡ ವಿಚಾರ ಇನ್ಯಾವುದು ಇದೆ?" ಎಂದು ಟ್ವೀಟ್ ಮಾಡಿದ್ದಾರೆ.
ಮತ್ತೊಬ್ಬ ಎಎಪಿ ನಾಯಕ ರಾಘವ್ ಚಡ್ಡಾ ಅವರು ಜರಿವಾಲಾ ಅವರನ್ನು ಎಳೆದುಹಾಕುವ ವಿಡಿಯೊವನ್ನು ಪೋಸ್ಟ್ ಮಾಡಿದ್ದಾರೆ ಮತ್ತು ಪೊಲೀಸರು ಮತ್ತು ಬಿಜೆಪಿ ಜರಿವಾಲಾ ನಾಮಪತ್ರವನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿದರು.
"ಪೊಲೀಸರು ಮತ್ತು ಬಿಜೆಪಿ ಗೂಂಡಾಗಳು ಹೇಗೆ ಒಟ್ಟಾಗಿ ನಮ್ಮ ಸೂರತ್ ಪೂರ್ವ ಅಭ್ಯರ್ಥಿ ಕಾಂಚನ್ ಜರಿವಾಲಾ ಅವರನ್ನು ಆರ್‌ಒ ಕಚೇರಿಗೆ ಎಳೆದೊಯ್ದಿದ್ದಾರೆ ಎಂಬುದನ್ನು ವೀಕ್ಷಿಸಿ, ಅವರ ನಾಮಪತ್ರವನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ. 'ಇಲ್ಲಿ ಮುಕ್ತ ಮತ್ತು ನ್ಯಾಯಯುತ ಚುನಾವಣೆ' ಎಂಬ ಪದವು ತಮಾಷೆಯಾಗಿದೆ!" ಎಂದು ಅವರು ಟ್ವೀಟ್ ಮಾಡಿದ್ದಾರೆ.

ಸಿಸೋಡಿಯಾ, ಕೇಜ್ರಿವಾಲ್ ಟ್ವೀಟ್
ಪ್ರಧಾನಿ ನರೇಂದ್ರ ಮೋದಿಯವರ ತವರು ರಾಜ್ಯವಾದ ಗುಜರಾತ್‌ನಲ್ಲಿ ಬಿಜೆಪಿಗೆ ಸೋಲುವ ಭಯವಿದ್ದು, ಆದ್ದರಿಂದ ಆಪ್ ಅಭ್ಯರ್ಥಿಯನ್ನು ಅಪಹರಿಸಲು ಮುಂದಾಗಿದೆ ಎಂದು ಸಿಸೋಡಿಯಾ ಹೇಳಿದ್ದಾರೆ. ಇದು ಅಪಾಯಕಾರಿ, ಇದು ಕೇವಲ ಅಭ್ಯರ್ಥಿಯಲ್ಲ ಪ್ರಜಾಪ್ರಭುತ್ವದ ಅಪಹರಣವಾಗಿದೆ ಎಂದು ಅವರು ಆರೋಪಿಸಿದ್ದಾರೆ. ಹಲವು ಎಎಪಿ ನಾಯಕರು ಈ ಆರೋಪವನ್ನು ಟ್ವೀಟ್ ಮಾಡಿದ್ದಾರೆ.
"ಸೂರತ್ (ಪೂರ್ವ)ನ ಎಎಪಿ ಅಭ್ಯರ್ಥಿ ಕಾಂಚನ್ ಜರಿವಾಲಾ ಮತ್ತು ಅವರ ಕುಟುಂಬ ನಿನ್ನೆಯಿಂದ ನಾಪತ್ತೆಯಾಗಿದೆ. ಮೊದಲು ಬಿಜೆಪಿ ಜರಿವಾಲಾ ಅವರ ನಾಮಪತ್ರವನ್ನು ತಿರಸ್ಕರಿಸಲು ಪ್ರಯತ್ನಿಸಿತು. ನಂತರ ಅವರು ತಮ್ಮ ನಾಮಪತ್ರವನ್ನು ಹಿಂತೆಗೆದುಕೊಳ್ಳುವಂತೆ ಒತ್ತಡ ಹೇರಿದ್ದಾರೆ. ಅವರನ್ನು ಕಿಡ್ನಾಪ್ ಮಾಡಲಾಗಿದೆಯೇ?'' ಎಂದು ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
27 ವರ್ಷಗಳಿಂದ ಗುಜರಾತ್‌ನಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಎಎಪಿಯಿಂದ ಸೋಲಿನ ಭಯವನ್ನು ಎದುರಿಸುತ್ತಿದೆ. ಇದು ರಾಜ್ಯದಲ್ಲಿ ತ್ರಿಕೋನ ಸ್ಪರ್ಧೆಯಾಗಿದೆ. ಡಿಸೆಂಬರ್ 1 ಮತ್ತು 5 ರಂದು ಗುಜರಾತ್ ಹೊಸ ಸರ್ಕಾರಕ್ಕಾಗಿ ಮತ ಚಲಾಯಿಸುತ್ತದೆ. ಡಿಸೆಂಬರ್ 8 ರಂದು ಫಲಿತಾಂಶ ಪ್ರಕಟವಾಗಲಿದೆ.

ಬಿಜೆಪಿ ವಿರುದ್ಧ ಎಎಪಿ ಅಪಹರಣ ಆರೋಪ
ದೆಹಲಿಯ ನಾಗರಿಕ ಚುನಾವಣೆಗೆ ಮುಂಚಿತವಾಗಿ ಟಿಕೆಟ್‌ಗಾಗಿ ಲಂಚದ ಹಗರಣಕ್ಕೆ ಪಕ್ಷವು ಸಂಪರ್ಕ ಹೊಂದಿದೆ ಎಂದು ಬಿಜೆಪಿ ಆರೋಪಿಸಿದ್ದ ದಿನವೇ ಗುಜರಾತ್‌ನಲ್ಲಿ ಎಎಪಿ ಅಪಹರಣ ಆರೋಪವನ್ನು ಮಾಡಿದೆ. ಎಎಪಿ ಶಾಸಕ ಅಖಿಲೇಶ್ ಪತಿ ತ್ರಿಪಾಠಿ ಅವರ ಸಂಬಂಧಿ ಮತ್ತು ಆಪ್ತ ಸಹಾಯಕ ಸೇರಿದಂತೆ ಮೂವರನ್ನು ಲಂಚದ ಆರೋಪದ ಮೇಲೆ ಬಂಧಿಸಲಾಗಿತ್ತು. ಇದರಲ್ಲಿ ಮತ್ತೊಬ್ಬ ಎಎಪಿ ಶಾಸಕ ರಾಜೇಶ್ ಗುಪ್ತಾ ಅವರ ಹೆಸರೂ ಕೇಳಿಬಂದಿದ್ದು, ದೆಹಲಿ ಪೊಲೀಸರು ಆಡಿಯೋ ಮತ್ತು ವಿಡಿಯೋ ಪುರಾವೆಗಳನ್ನು ಹೊಂದಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಈ ಪ್ರಕರಣವು ಎಎಪಿಯ ನಿಜವಾದ ಮುಖವನ್ನು ಮತ್ತೊಮ್ಮೆ ಬಹಿರಂಗಪಡಿಸಿದೆ ಎಂದು ಬಿಜೆಪಿ ಹೇಳಿದೆ.












Click it and Unblock the Notifications