ಮಹಿಳಾ ಸರ್ಕಾರಿ ನೌಕರರಿಗೆ ಗುಡ್‌ನ್ಯೂಸ್; 3ನೇ ಮಗುವಿನ ಹೆರಿಗೆಗೂ ಸಿಗಲಿದೆ 1 ವರ್ಷ ರಜೆ!
ಚೆನ್ನೈ: ತಮಿಳುನಾಡಿನ ಸಿಎಂ ವಿಜಯ್ ನೇತೃತ್ವದ ಸರ್ಕಾರ ಮಹಿಳಾ ಸರ್ಕಾರಿ ನೌಕರರಿಗೆ ಮಹತ್ವದ ಘೋಷಣೆ ಮಾಡಿದೆ. ಇನ್ನು ಮುಂದೆ ಮೂರನೇ ಮಗುವಿನ ಹೆರಿಗೆಗೂ 365 ದಿನಗಳ ಅಂದರೆ ಒಂದು ವರ್ಷದ ಹೆರಿಗೆ ರಜೆ ನೀಡಲು ಸರ್ಕಾರ ನಿರ್ಧರಿಸಿದೆ. ಈ ಮೂಲಕ ಮೂರನೇ ಮಗುವಿಗೆ ನೀಡಲಾಗುತ್ತಿದ್ದ 12 ವಾರಗಳ ಹೆರಿಗೆ ರಜೆಯನ್ನು ಒಂದು ವರ್ಷಕ್ಕೆ ವಿಸ್ತರಿಸಲಾಗುತ್ತಿದೆ.
ತಮಿಳುನಾಡು ವಿಧಾನಸಭೆಯಲ್ಲಿ ಮಂಗಳವಾರ ಮಾನವ ಸಂಪನ್ಮೂಲ ನಿರ್ವಹಣಾ ಇಲಾಖೆಯ ಅನುದಾನ ಬೇಡಿಕೆಗಳ ಮೇಲಿನ ಚರ್ಚೆ ವೇಳೆ ಸಚಿವ ಡಿ. ಶರತ್‌ಕುಮಾರ್ ಈ ಮಹತ್ವದ ಘೋಷಣೆ ಮಾಡಿದ್ದಾರೆ. ಮಹಿಳಾ ಸಬಲೀಕರಣ ಮತ್ತು ಸಾಮಾಜಿಕ ಕಲ್ಯಾಣಕ್ಕೆ ಆದ್ಯತೆ ನೀಡುವ ಸರ್ಕಾರವಾಗಿ, ಮೂರನೇ ಮಗುವಿಗೆ ಪ್ರಸ್ತುತ ನೀಡಲಾಗುತ್ತಿರುವ 12 ವಾರಗಳ ಹೆರಿಗೆ ರಜೆಯನ್ನು 365 ದಿನಗಳಿಗೆ ಹೆಚ್ಚಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ಮಾನವ ಸಂಪನ್ಮೂಲ ನಿರ್ವಹಣಾ ಸಚಿವ ಡಿ. ಶರತ್‌ಕುಮಾರ್ ಅವರು ವಿಧಾನಸಭೆಯಲ್ಲಿ ಇಲಾಖೆಯ ಅನುದಾನ ಬೇಡಿಕೆ ಮಂಡಿಸುವ ವೇಳೆ ಈ ಐತಿಹಾಸಿಕ ತೀರ್ಮಾನವನ್ನು ಪ್ರಕಟಿಸಿದರು. ಸರ್ಕಾರವು ಮಹಿಳಾ ಸಬಲೀಕರಣ ಮತ್ತು ಸಾಮಾಜಿಕ ಕಲ್ಯಾಣಕ್ಕೆ ಸದಾ ಆದ್ಯತೆ ನೀಡುತ್ತಿದ್ದು, ನೌಕರರ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಈ ಹೊಸ ನಿಯಮವನ್ನು ಜಾರಿಗೆ ತರಲು ಶೀಘ್ರದಲ್ಲೇ ಅಧಿಕೃತ ಸರ್ಕಾರಿ ಆದೇಶ ಹೊರಬೀಳಲಿದೆ.
ಹಂತ ಹಂತವಾಗಿ ಹೆಚ್ಚಾದ ಹೆರಿಗೆ ರಜೆ
ತಮಿಳುನಾಡಿನಲ್ಲಿ ಮಹಿಳಾ ಸರ್ಕಾರಿ ನೌಕರರ ಹೆರಿಗೆ ರಜೆಯನ್ನು ಹಲವು ಹಂತಗಳಲ್ಲಿ ಹೆಚ್ಚಿಸಲಾಗಿದೆ. 2011ರಲ್ಲಿ ಇದ್ದ 90 ದಿನಗಳ ರಜೆಯನ್ನು ಆರು ತಿಂಗಳಿಗೆ ಹೆಚ್ಚಿಸಲಾಗಿತ್ತು. 2016ರಲ್ಲಿ ಇದನ್ನು ಒಂಬತ್ತು ತಿಂಗಳಿಗೆ ವಿಸ್ತರಿಸಲಾಯಿತು. ಬಳಿಕ 2021ರ ಜುಲೈನಲ್ಲಿ ಹೆರಿಗೆ ರಜೆಯನ್ನುಒಂದು ವರ್ಷ ಅಥವಾ 365 ದಿನಗಳಿಗೆ ಹೆಚ್ಚಿಸಲಾಗಿತ್ತು. ಇದೀಗ ಮೂರನೇ ಮಗುವಿನ ಹೆರಿಗೆಗೂ ಇದೇ 365 ದಿನಗಳ ಸೌಲಭ್ಯ ಕಲ್ಪಿಸಲು ಸರ್ಕಾರ ಮುಂದಾಗಿದೆ.
ಶೀಘ್ರದಲ್ಲೇ ಸರ್ಕಾರಿ ಆದೇಶ
ವಿಧಾನಸಭೆಯಲ್ಲಿ ಸಚಿವರು ಘೋಷಣೆ ಮಾಡಿದ ಬಳಿಕ ಈ ಸಂಬಂಧ ವಿಸ್ತೃತ ಸರ್ಕಾರಿ ಆದೇಶ (Government Order) ಶೀಘ್ರದಲ್ಲೇ ಹೊರಬೀಳಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿಧಾನಸಭೆಗೆ ನವಜಾತ ಶಿಶುವಿನೊಂದಿಗೆ ಬಂದಿದ್ದ ಟಿವಿಕೆ ಶಾಸಕಿ
ಈ ಘೋಷಣೆ ತಮಿಳುನಾಡು ವಿಧಾನಸಭೆಯಲ್ಲಿ ನವಜಾತ ಶಿಶುವಿನೊಂದಿಗೆ ಕಾಣಿಸಿಕೊಂಡಿದ್ದ ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಮೊದಲ ಬಾರಿಗೆ ಆಯ್ಕೆಯಾದ ಶಾಸಕಿ ಆರ್. ಪಲ್ಲವಿ ಕುರಿತ ಚರ್ಚೆಯ ನಡುವೆಯೇ ಹೊರಬಿದ್ದಿದೆ. ಚೆನ್ನೈನ ತಿರು.ವಿ.ಕ. ನಗರ ಕ್ಷೇತ್ರದಿಂದ 2026ರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿರುವ ಪಲ್ಲವಿ, ತಮ್ಮ ನವಜಾತ ಮಗುವನ್ನು ವಿಧಾನಸಭೆ ಆವರಣಕ್ಕೆ ಕರೆತರುತ್ತಿದ್ದಾರೆ. ಸದನದ ಕಲಾಪ ನಡೆಯುವ ವೇಳೆ ಮಗುವನ್ನು ಅಟೆಂಡರ್ ಬಳಿ ಬಿಟ್ಟು, ಕಲಾಪ ಮುಗಿದ ಬಳಿಕ ಮತ್ತೆ ಮಗುವಿನ ಬಳಿಗೆ ತೆರಳುತ್ತಿದ್ದಾರೆ ಎಂದು ವರದಿಯಾಗಿದೆ.
ಇತ್ತೀಚೆಗೆ ಅವರು ತಮ್ಮ ಮಗುವನ್ನು ಟಿವಿಕೆ ಸಂಸ್ಥಾಪಕ ಹಾಗೂ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರನ್ನು ಭೇಟಿಯಾಗಲು ಕೂಡ ಕರೆದುಕೊಂಡು ಹೋಗಿದ್ದರು. ವಿಜಯ್ ಅವರು ಮಗುವನ್ನು ಆಶೀರ್ವದಿಸಿದ್ದರು.
ಮಗುವನ್ನು ಎಲ್ಲೆಡೆ ಕರೆದುಕೊಂಡು ಹೋಗುತ್ತಿರುವುದಕ್ಕೆ ಪಲ್ಲವಿ ವಿರುದ್ಧ ಟೀಕೆಗಳು ವ್ಯಕ್ತವಾಗಿದ್ದವು. ಇದಕ್ಕೆ ಪ್ರತಿಕ್ರಿಯಿಸಿದ್ದ ಅವರು, ನವಜಾತ ಮಗುವನ್ನು ಮನೆಯಲ್ಲಿ ಬಿಟ್ಟು ಹೇಗೆ ಬರಲು ಸಾಧ್ಯ? ಎಂದು ಪ್ರಶ್ನಿಸಿ, ಇಂತಹ ವಿಚಾರದಲ್ಲಿ ಟ್ರೋಲ್ ಮಾಡುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.
ಮೂರನೇ ಮಗುವಿಗೂ ಒಂದು ವರ್ಷದ ಹೆರಿಗೆ ರಜೆ ನೀಡುವ ತಮಿಳುನಾಡು ಸರ್ಕಾರದ ನಿರ್ಧಾರವು ಮಹಿಳಾ ಸರ್ಕಾರಿ ನೌಕರರಿಗೆ ಮಹತ್ವದ ಸೌಲಭ್ಯವಾಗಿದ್ದು, ಸರ್ಕಾರದ ಅಧಿಕೃತ ಆದೇಶ ಹೊರಬಂದ ಬಳಿಕ ಇದರ ಸಂಪೂರ್ಣ ನಿಯಮಗಳು ಸ್ಪಷ್ಟವಾಗಲಿವೆ.


Click it and Unblock the Notifications
