ಇಬ್ಬರು ಸಚಿವರನ್ನು ಸಂಪುಟದಿಂದ ಕೈಬಿಟ್ಟ ಗೋವಾ ಸಿಎಂ ಪರಿಕ್ಕರ್
ಪಣಜಿ, ಸೆಪ್ಟೆಂಬರ್ 24: ತೀವ್ರ ಅನಾರೋಗ್ಯಕ್ಕೆ ಈಡಾಗಿರುವ ಗೋವಾದ ಇಬ್ಬರು ಸಚಿವರನ್ನು ಗೋವಾ ಮುಖ್ಯಮಂತ್ರಿ ಮನೋಹರ ಪರಿಕ್ಕರ್ ಅವರು ಸಂಪುಟದಿಂದ ಕೈಬಿಟ್ಟಿದ್ದಾರೆ.
ಅನಾರೋಗ್ಯದಿಂದ ಅಮೆರಿಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಚಿವ ಫ್ರಾನ್ಸಿಸ್ ಡಿ ಸೋಜಾ ಹಾಗೂ ಕೆಲ ತಿಂಗಳುಗಳ ಹಿಂದೆ ಮೆದುಳು ಪಾರ್ಶ್ವಕ್ಕೆ ಒಳಗಾದ ಪಾಂಡುರಂಗ ಮಡೈಕರ್ ಅವರನ್ನು ಸಂಪುಟದಿಂದ ಮನೋಹರ ಪರಿಕ್ಕರ್ ಅವರು ಕೈಬಿಟ್ಟಿದ್ದಾರೆ.

ಫ್ರಾನ್ಸಿಸ್ ಅವರು ನಗರಾಭಿವೃದ್ಧಿ ಖಾತೆ ನಿರ್ವಹಿಸುತ್ತಿದ್ದರೆ, ಮಡೈಕರ್ ಅವರು ಇಂಧನ ಖಾತೆ ನಿರ್ವಹಿಸುತ್ತಿದ್ದರು. ಈ ಇಬ್ಬರ ಸ್ಥಾನಕ್ಕೆ ಮಿಲಿಂದ್ ನಾಯಕ್ ಮತ್ತು ನೀಲೇಶ್ ಕಾಬ್ರಾಲ್ ಅವರನ್ನು ಸೇರಿಸಿಕೊಳ್ಳಲಾಗಿದೆ. ಇಬ್ಬರಿಗೂ ಸೋಮವಾರ ರಾಜ್ಯಪಾಲೆ ಮೃದುಲಾ ಸಿನ್ಹಾ ಪ್ರಮಾಣವಚನ ಬೋಧಿಸಿದರು.
ಪರಿಕ್ಕರ್ ಅವರಿಗೆ ಸಹ ಅನಾರೋಗ್ಯ ಕಾಡಿತ್ತು, ಕೆಲವು ದಿನ ವಿದೇಶದಲ್ಲಿ ಚಿಕಿತ್ಸೆ ಪಡೆದು ವಾಪಸ್ಸಾಗಿದ್ದರು. ಈಗ ಮತ್ತೆ ದೆಹಲಿಯ ಏಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಅವರು ಮತ್ತೆ ಹಿಂದಿನ ಸ್ಥಿತಿಗೆ ಮರಳುತ್ತಿದ್ದಾರೆ.
ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಗೋವಾದ ಮುಖ್ಯಮಂತ್ರಿ ಬದಲಾಯಿಸುವ ಮಾತುಗಳು ಕೇಳಿಬಂದಿತ್ತು. ಆದರೆ ಬಿಜೆಪಿಯು ಇದನ್ನು ನಿರಾಕರಿಸಿತು. ಮನೋಹರ ಪರಿಕ್ಕರ್ ಅವರೇ ಗೋವಾ ಸಿಎಂ ಆಗಿ ಮುಂದುವರೆಯುತ್ತಾರೆ ಎಂದು ಸ್ವತಃ ಅಮಿತ್ ಶಾ ಸ್ಪಷ್ಟಪಡಿಸಿದ್ದರು.












Click it and Unblock the Notifications