PMGKAY: ಭಾರತದಲ್ಲಿ ಉಚಿತ ಅಕ್ಕಿ ವಿತರಣೆ ಯೋಜನೆ ವಿಸ್ತರಣೆ, ಎಷ್ಟು ವರ್ಷ? ವರದಿ-ವಿವರ
ಬೆಂಗಳೂರು, ನವೆಂಬರ್ 06: ಪಂಚರಾಜ್ಯ ಚುನಾವಣೆಗೆ ಉತ್ಸುಕತೆಯಿಂದ ಕೇಂದ್ರ ಬಿಜೆಪಿ ಸರ್ಕಾರ ರ‍್ಯಾಲಿ ನಡೆಸುತ್ತಿದೆ. ರ‍್ಯಾಲಿಯ ಸಮಾವೇಶದಲ್ಲಿ ಪಾಲ್ಗೊಂಡ ಪ್ರಧಾನಿ ನರೇಂದ್ರ ಮೋದಿಯವರು ಉಚಿತ ಪಡಿತರ ವಿತರಣೆಯನ್ನು ಮುಂದಿನ ಐದು ವರ್ಷದವರೆಗೆ ಮುಂದುವರಿಸುವುದಾಗಿ ಘೋಷಿಸಿದ್ದಾರೆ.
ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿ ಚುನಾವಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ಮುಂದಿನ ಐದು ವರ್ಷಗಳು ದೇಶದ 80 ಕೋಟಿ ಜನರ ಮನೆಯಲ್ಲಿ ಒಲೆ ಉರಿಯಲಿದೆ. ಹಸಿವಿಗಾಗಿ ಹೋರಾಟ ಅಂತ್ಯಗೊಳ್ಳಲಿದೆ. ಇದು 'ನಮ್ಮ ಸರ್ಕಾರದ ಗ್ಯಾರಂಟಿ' ಎಂದು ಶನಿವಾರ ಮತ್ತು ಭಾನುವಾರದ ತಮ್ಮ ಭಾಷಣಗಳಲ್ಲಿ ಪ್ರಧಾನಿ ಮೋದಿಯವರು ಆಶ್ವಾಸನೆ ನೀಡಿದ್ದಾರೆ.

ಅರ್ಹ ಫಲಾನುಭವಿಗಳಿಗೆ ಉಚಿತ ಪಡಿತರ ವಿತರಿಸುವ ಯೋಜನೆಯಾದ 'ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ (PMGKAY) ಯೋಜನೆ'ಯನ್ನು ಇನ್ನೂ ಐದು ವರ್ಷಗಳವರೆಗೆ ವಿಸ್ತರಿಸುವುದಾಗಿ ಪ್ರಧಾನಿ ಹೇಳಿದ್ದಾರೆ. ಚುನಾವಣೆ ಹೊತ್ತಲ್ಲಿ ಇಂತಹ ಘೋಷಣೆಗಳು ಗೆಲ್ಲುವ ತಂತ್ರಗಾರಿಕೆಯೂ ಹೌದು ಎನ್ನಲಾಗುತ್ತಿದೆ.
ಡಿಸೆಂಬರ್‌ಗೆ ಯೋಜನೆ ಮುಕ್ತಾಯದ ಸಮಯ
ಕೊರೊನಾ ನಂತರ PMGKAY ಅಡಿ ಕಳೆದ ಮೂರು ವರ್ಷಗಳಿಂದ ದೇಶದಲ್ಲಿ ಬಡವರಿಗೆ ಉಚಿತ ಪಡಿತರ ನೀಡಲಾಗುತ್ತಿದೆ. ಮುಂದಿನ ಡಿಸೆಂಬರ್ ಅಂತ್ಯಕ್ಕೆ ಉಚಿತ ಯೋಜನೆ ಮುಕ್ತಾಯಗೊಳ್ಳಲಿದೆ. ಈ ಸಮಯದಲ್ಲಿ ಮತ್ತೆ ಅದನ್ನು ಮುಂದಿನ ಐದು ವರ್ಷಗಳ ವರೆಗೆ ವಿಸ್ತರಣೆ ಮಾಡಲು ಕೇಂದ್ರ ಮನಸ್ಸು ಮಾಡಿದೆ. ಆಡಳಿತ ಪಕ್ಷದ ಈ ಚುನಾವಣಾ ತಂತ್ರವು ವಿಪಕ್ಷಗಳ ಮೈತ್ರಿ ಕೂಟವಾದ 'ಇಂಡಿಯಾ'ಗೆ (INDIA) ನುಂಗಲಾರದ ತುತ್ತಾಗಲಿದೆ.
ಕೋವಿಡ್ ಸಾಂಕ್ರಾಮಿಕ ವರ್ಷ 202ರಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ-2013 (NFSA) ಅಡಿ ಕೇಂದ್ರ ಸರ್ಕಾರ ದೇಶದ ಪಡಿತರ ಕಾರ್ಡ್ ಹೊಂದಿದ ಅರ್ಹರಿಗೆ ಐದು ಕೆ.ಜಿ ಉಚಿತ ಆಹಾರ ಧಾನ್ಯ ಒದಗಿಸಲು ಈ PMGKAY ಪರಿಚಯಿಸಲಾಯಿತು. ಅತ್ಯಂತ ಕಡಿಮೆ ಬೆಲೆಗೆ ಆಹಾರ ಧಾನ್ಯಗಳನ್ನು ಪಡೆಯಲು ಯುಪಿಎ ಸರ್ಕಾರವು ಅವಧಿಯಲ್ಲಿ ಜನರಿಗೆ ಅರ್ಹತೆ ನೀಡಲಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಯೋಜನೆಯ ಲಾಭ ಪಡೆಯುವವರ ಸಂಖ್ಯೆ-ಮಾಹಿತಿ
ಕಳೆದ ವರ್ಷ 2022ರಲ್ಲಿ ಗುಜರಾತ್ ಮತ್ತು ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಗೆ ವೇಳೆ ಈ ಯೋಜನೆಯನ್ನು 2022 ರಿಂದ 2023ರ ಡಿಸೆಂಬರ್ ವರೆಗೆ ಮತ್ತೆ ವಿಸ್ತರಣೆ ಮಾಡಲಾಯಿತು. ಸದ್ಯ ಉಚಿತ ಆಹಾರ ಧಾನ್ಯ ವಿತರಣೆ ಯೋಜನೆ ಮುಕ್ತಾಯಕ್ಕೆ ಇನ್ನೊಂದು ತಿಂಗಳಿರುವಾಗಲೇ ಮತ್ತೆ ಐದು ವರ್ಷ ವಿಸ್ತರಣೆ ಮಾಡುವುದಾಗಿ ಸ್ವತಃ ಪ್ರಧಾನಿಯೇ ಘೋಷಿಸಿದ್ದಾರೆ.
PMGKAY ಯೋಜನೆಯು NFSA ಅಡಿಯಲ್ಲಿ ಎರಡು ರೀತಿಯ ಪಡಿತರ ಚೀಟಿದಾರರನ್ನು ಒಳಗೊಂಡಿದೆ. 'ಅಂತ್ಯೋದಯ' ಅನ್ನ ಯೋಜನೆ (AAY) ಮತ್ತು ಆದ್ಯತಾ ಕುಟುಂಬಗಳಿಗೆ (PHH) ಪಡಿತರ ಚೀಟಿ ವ್ಯಾಪ್ತಿಯಲ್ಲಿ ಒಟ್ಟು 81.35 ಕೋಟಿ ಫಲಾನುಭವಿಗಳು (20 ಕೋಟಿ ಕುಟುಂಬ) ಒಳಗೊಂಡಿದೆ. ಅಂದರೆ ದೇಶದ ಮೂರನೇ ಎರಡರಷ್ಟು ಜನಸಂಖ್ಯೆ ಈ ಪಡಿತರ ಫಲಾನುಭವಿಗಳಾಗಿದ್ದಾರೆ ಎಂದು ಸರ್ಕಾರದ ಮೂಲಗಳು ಹೇಳುತ್ತವೆ.
ಕೇಂದ್ರ ಆಹಾರ ಸಚಿವರ ಪ್ರತಿಕ್ರಿಯೆ
ಎಎವೈ ಫಲಾನುಭವಿಗಳ ಕುಟುಂಬದಲ್ಲಿ ಸದಸ್ಯರು ಎಷ್ಟೇ ಇದ್ದರೂ ಅವರು ಪ್ರತಿ ತಿಂಗಳಿಗೆ ಉಚಿತ 35 ಕೆಜಿ ಆಹಾರಧಾನ್ಯಗಳನ್ನು ಪಡೆಯಲು ಅರ್ಹರಾಗಿದ್ದಾರೆ. ಬಿಪಿಎಲ್ ಕಾರ್ಡುದಾರರಿಗೆ ಕುಟುಂಬದ ಪ್ರತಿ ವ್ಯಕ್ತಿ ಉಚಿತವಾಗಿ ತಲಾ ಐದು ಕೆ.ಜಿಗೆ ಅರ್ಹರಾಗಿದ್ದಾರೆ.
PMGKAY ಯೋಜನೆ ಪರಿಚಯಿಸಿದ 2020ರ ಸಾಲಿನಲ್ಲಿ ಕೇಂದ್ರ ಸರ್ಕಾರವು ತನ್ನ ಕೇಂದ್ರ ಸಂಗ್ರಹಣೆ ಪೂಲ್‌ನಿಂದ 3.9 ಲಕ್ಷ ಕೋಟಿ ರೂಪಾಯಿ ವೆಚ್ಚದಲ್ಲಿ 1,118 ಲಕ್ಷ ಮೆಟ್ರಿಕ್ ಟನ್ ಆಹಾರಧಾನ್ಯಗಳನ್ನು ಅರ್ಹರಿಗೆ ವಿತರಿಸಿದೆ.
ಪಡಿತರ ಚೀಟಿ-ಅರ್ಹತೆ ಆಧಾರದಲ್ಲಿ ಪ್ರತಿ 5 ಕೆಜಿ ಮತ್ತು 35 ಕೆಜಿಯ ಸಂಪೂರ್ಣ ಪ್ರಮಾಣವು ಉಚಿತವಾಗಿ ಲಭ್ಯವಿರುತ್ತದೆ. ಹೆಚ್ಚುವರಿ ಆಹಾರಧಾನ್ಯಗಳ ಅಗತ್ಯವಿಲ್ಲ ಎಂದು ಕೇಂದ್ರ ಆಹಾರ ಸಚಿವ ಪಿಯೂಷ್ ಗೋಯಲ್ ಸ್ಪಷ್ಟಪಡಿಸಿದ್ದಾರೆ.












Click it and Unblock the Notifications