Farmers Protest: 9 ರೈತ ಮುಖಂಡರ ಬಿಡುಗಡೆ, ಪೊಲೀಸ್ ದೌರ್ಜ್ಯನದ ವಿರುದ್ಧ ರೈತರ ಪ್ರತಿಭಟನೆ
ಚಂಡೀಗಢ, ಜೂನ್. 08: ಕುರುಕ್ಷೇತ್ರ ಜಿಲ್ಲೆಯ ಶಹಬಾದ್ ಬಳಿ ರಾಷ್ಟ್ರೀಯ ಹೆದ್ದಾರಿ 44 ಅನ್ನು ತಡೆದು ರೈತರು ಪ್ರತಿಭಟಿಸಿದ ನಂತರ ಬಂಧಿಸಲಾದ ಭಾರತೀಯ ಕಿಸಾನ್ ಯೂನಿಯನ್ (ಚಾರುಣಿ) ಅಧ್ಯಕ್ಷ ಗುರ್ನಾಮ್ ಸಿಂಗ್ ಚಾರುಣಿ ಮತ್ತು ಇತರ ಎಂಟು ಜನರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಬುಧವಾರ ಹರಿಯಾಣದ ವಿವಿಧ ಸ್ಥಳಗಳಲ್ಲಿ ರೈತರು ಭಾರೀ ಪ್ರತಿಭಟನೆ ನಡೆಸಿದ್ದಾರೆ.
ಮಂಗಳವಾರ, ಹರ್ಯಾಣ ಪೊಲೀಸರು ಸೂರ್ಯಕಾಂತಿ ಬೀಜಗಳನ್ನು ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್‌ಪಿ) ಖರೀದಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ತೆರವುಗೊಳಿಸಲು ಲಾಠಿ ಚಾರ್ಜ್ ಮತ್ತು ಜಲಫಿರಂಗಿ ಬಳಸಿದ್ದರು. ಈ ವೇಳೆ ಹಲವಾರು ಪ್ರತಿಭಟನಾಕಾರರನ್ನು ಬಂಧಿಸಿ, ಬಿಡುಗಡೆ ಮಾಡಲಾಯಿತು. ಆದರೆ, ಗುರ್ನಾಮ್ ಸಿಂಗ್ ಚಾರುಣಿ ಮತ್ತು ಇತರ ಎಂಟು ಬಿಕೆಯು (ಚಾರುಣಿ) ಬಣದ ನಾಯಕರನ್ನು ಪೋಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ.

ಬುಧವಾರ ಮಧ್ಯಾಹ್ನ ಬಂಧಿತ ಒಂಬತ್ತು ರೈತ ಮುಖಂಡರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರೈತ ಮುಖಂಡರ ಮೇಲೆ ಗಲಭೆ, ಕಾನೂನುಬಾಹಿರ ಸಭೆ ಮತ್ತು ಸಾರ್ವಜನಿಕ ಸೇವಕರನ್ನು ಕರ್ತವ್ಯದಿಂದ ತಡೆಯಲು ಕ್ರಿಮಿನಲ್ ಬಲವನ್ನು ಬಳಸಿದ ಆರೋಪಗಳ ಜೊತೆಗೆ, ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 307 ರ ಅಡಿಯಲ್ಲಿ ಕೊಲೆ ಯತ್ನದ ಆರೋಪವನ್ನೂ ದಾಖಲಿಸಲಾಗಿದೆ ಎಂದು ಕುರುಕ್ಷೇತ್ರ ಎಸ್ಪಿ ಸುರೀಂದರ್ ಸಿಂಗ್ ಭೋರಿಯಾ ಹೇಳಿದ್ದಾರೆ.
"ರೈತರು ಟ್ರಾಕ್ಟರ್‌ನಿಂದ ಪೊಲೀಸ್ ಸಿಬ್ಬಂದಿಯನ್ನು ಕೊಲ್ಲಲು ಪ್ರಯತ್ನಿಸಿದ್ದಾರೆ. ಘಟನೆಯ ವೀಡಿಯೊ ರೆಕಾರ್ಡಿಂಗ್ ಸಹ ಇದೆ" ಎಂದು ಎಸ್ಪಿ ಹೇಳಿದ್ದಾರೆ. ಆದರೆ, ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿರುವ ರೈತರ ಮೇಲೆ ಪೊಲೀಸರು ಸುಳ್ಳು ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂದು ಗುರ್ನಾಮ್ ಸಿಂಗ್ ಚಾರುಣಿ ಆರೋಪಿಸಿದ್ದಾರೆ.

"ಅವರು ಯಾವ ಆಧಾರದ ಮೇಲೆ ಸೆಕ್ಷನ್ 307 ಅನ್ನು ವಿಧಿಸಿದ್ದಾರೆಂದು ನಮಗೆ ತಿಳಿದಿಲ್ಲ, ಆದರೆ ಖಾತರಿಪಡಿಸಿದ ಎಂಎಸ್‌ಪಿಗಾಗಿ ನಾವು ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ. ಈ ಯುದ್ಧದಲ್ಲಿ ನಾವು ಗೆಲ್ಲುತ್ತೇವೆ" ಎಂದು ರೈತ ಮುಖಂಡ ಗುರ್ನಾಮ್ ಸಿಂಗ್ ಚಾರುಣಿ ನ್ಯಾಯಾಲಯಕ್ಕೆ ಕರೆದೊಯ್ಯುವಾಗ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಪೊಲೀಸರ ದಬ್ಬಾಳಿಕೆ ವಿರೋಧಿಸಿ ಮತ್ತು ಬಂಧಿತ ಮುಖಂಡರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ರೈತರು ಶಹಬಾದ್-ಲದ್ವಾ ರಸ್ತೆಯಲ್ಲಿ ಧರ್ಮಾಚರಣೆ ನಡೆಸಿ ಸಂಚಾರ ತಡೆ ನಡೆಸಿದರು. ಅಂಬಾಲ ಮತ್ತು ಯಮುನಾನಗರದಲ್ಲಿ ರೈತರು ರಸ್ತೆ ಮತ್ತು ಹೆದ್ದಾರಿಗಳನ್ನು ತಡೆದರು. ರೋಹ್ಟಕ್, ಹಿಸಾರ್, ಸಿರ್ಸಾ, ಕರ್ನಾಲ್‌ನ ಟೋಲ್ ಪ್ಲಾಜಾಗಳು ಸೇರಿದಂತೆ ಇತರ ಜಿಲ್ಲೆಗಳಲ್ಲಿ ಪ್ರತಿಭಟನೆಗಳನ್ನು ನಡೆಸಲಾಯಿತು. ಅಲ್ಲಿ ರೈತರು ಶಹಾಬಾದ್ ಪ್ರಕರಣದಲ್ಲಿ ಬಂಧಿತರನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದಾರೆ.
ಇದರ ಜೊತೆಗೆ, ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಮುಖಂಡ ರಾಕೇಶ್ ಟಿಕಾಯತ್ ಬುಧವಾರ ಶಹಾಬಾದ್ ತಲುಪಿ ಪ್ರತಿಭಟನಾ ನಿರತ ರೈತರಿಗೆ ಬೆಂಬಲ ನೀಡದ್ದಾರೆ. "ದೇಶದಲ್ಲಿ ಖಾತರಿಪಡಿಸಿದ ಎಮೆಸ್‌ಪಿಗಾಗಿ ಹೊಸ ಚಳವಳಿಯ ಪ್ರಾರಂಭವಾಗಿದೆ. ಹರಿಯಾಣದ ರೈತರಿಗೆ ನೀಡಿದ ಲಾಠಿಗಳ ಏಟು ದೇಶದ ಪ್ರತಿಯೊಬ್ಬ ರೈತರ ಬಳಿಗೂ ಕೊಂಡೊಯ್ಯಲಾಗುವುದು" ಎಂದು ರಾಕೇಶ್ ಟಿಕಾಯತ್ ರೈತರನ್ನು ಉದ್ದೇಶಿಸಿ ಹೇಳಿದ್ದಾರೆ.
ಬಿಜೆಪಿಯ ಮಿತ್ರಪಕ್ಷವಾದ ಜನನಾಯಕ್ ಜನತಾ ಪಕ್ಷದ (ಜೆಜೆಪಿ) ನಾಯಕರಾಗಿರುವ ಶಹಾಬಾದ್ ಶಾಸಕ ರಾಮ್ ಕರಣ್ ಕಲಾ, ರಾಜ್ಯ ಸರ್ಕಾರವು ರೈತರ ಬೇಡಿಕೆಯನ್ನು ಸ್ವೀಕರಿಸಲು ವಿಫಲವಾದರೆ ಹರಿಯಾಣ ಶುಗರ್ ಫೆಡರೇಶನ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ. 24 ಗಂಟೆಗಳ ಒಳಗೆ ಎಂಎಸ್‌ಪಿಯಲ್ಲಿ ಸೂರ್ಯಕಾಂತಿ ಬೀಜಗಳನ್ನು ಸಂಗ್ರಹಿಸಲು ಗಡುವು ನೀಡಿದ್ದಾರೆ.
''ಉಪಮುಖ್ಯಮಂತ್ರಿ ದುಷ್ಯಂತ್ ಚೌಟಾಲಾ ಅವರೊಂದಿಗೆ ನಾನು ಈ ಸಮಸ್ಯೆ ಬಗ್ಗೆ ಮಾತನಾಡಿದ್ದೇನೆ, ಅವರು ಈ ಸಮಸ್ಯೆಯನ್ನು ಪರಿಹರಿಸುವ ಭರವಸೆ ನೀಡಿದ್ದಾರೆ. ಬಂಧಿತ ರೈತರನ್ನು ಬಿಡುಗಡೆ ಮಾಡದಿದ್ದರೆ, ಸೂರ್ಯಕಾಂತಿ ಖರೀದಿಯನ್ನು ಎಂಎಸ್‌ಪಿಯಲ್ಲಿ ಪ್ರಾರಂಭಿಸದಿದ್ದರೆ ಮತ್ತು ಗಾಯಗೊಂಡ ರೈತರಿಗೆ ಪರಿಹಾರ ನೀಡದಿದ್ದರೆ ನಾನು ಶುಗರ್‌ಫೆಡ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ" ಎಂದು ಚಂಡೀಗಢದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ಧರಣಿ ನಿರತ ರೈತರ ಮೇಲೆ ಪೋಲೀಸ್ ಲಾಠಿ ಚಾರ್ಜ್ ಅನ್ನು ಖಂಡಿಸಿದ್ದಾರೆ.












Click it and Unblock the Notifications