7th Pay Commission: ಸರ್ಕಾರಿ ನೌಕರರಿಗೆ ಸೆಪ್ಟಂಬರ್ 3ನೇ ವಾರ ಸಿಹಿ ಸುದ್ದಿ ಘೋಷಣೆ
ಏಳನೇ ವೇತನ ಆಯೋಗದಡಿ (7th Pay Commission) ಕೇಂದ್ರ ಸರ್ಕಾರವು ತನ್ನ ನೌಕರರಿಗೆ ಸಿಹಿ ಸುದ್ದಿ ನೀಡಲು ಸಜ್ಜಾಗಿದೆ. ಇದೇ ಸೆಪ್ಟಂಬರ್ ಮೂರನೇ ವಾರದಂದು ವರ್ಷದ ಎರಡನೇ ತುಟ್ಟಿಭತ್ಯೆ ಹೆಚ್ಚಳ ಮಾಡಿ ಆದೇಶಿಸಲಿದೆ. ಈ ಮೂಲಕ ನೌಕರರಿಗೆ ಸರ್ಕಾರ ಕೊಡುಗೆ ನೀಡಲಿದೆ. ಆದರೆ ನೌಕರರು, ಕೇಂದ್ರ ಸರ್ಕಾರದಿಂದ ಕೋವಿಡ್ ವೇಳೆ ಉಳಿಸಿಕೊಂಡಿರುವ ಡಿಎ ಹೆಚ್ಚಳದ ಬಾಕಿ ಪಡೆಯಲಿದ್ದಾರೆಯೇ ಎಂಬುದು ಗೊತ್ತಾಗಬೇಕಿದೆ.
ಇತ್ತೀಚೆಗೆ ಕೇಂದ್ರ ಸರ್ಕಾರ ಏಕೀಕೃತ ಪಿಂಚಣಿ ಯೋಜನೆ (ಯುಪಿಎಸ್) ಜಾರಿಗೆ ತರಲು ಅನುಮೋದನೆ ನೀಡಿದೆ. ಇದರ ಬೆನ್ನಲ್ಲೆ ಇದೇ ತಿಂಗಳು ಮೂರನೇ ವಾರ ನೌಕರರ ತುಟ್ಟಿಭತ್ಯೆಯನ್ನು ಶೇಕಡಾ 3 ಇಲ್ಲವೇ 4ರಷ್ಟು ಹೆಚ್ಚಳ ಮಾಡಿ ಘೋಷಿಸುವುದು ಬಹುತೇಕ ಖಚಿತ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ತುಟ್ಟಿ ಭತ್ಯೆ ಹೆಚ್ಚಳದ ಮೂಲಗಳು ತಿಳಿಸುವ ಪ್ರಕಾರ, ಈ ವರ್ಷದ (2024) ಎರಡನೇ ತುಟ್ಟಿಭತ್ಯೆ ಹೆಚ್ಚಳದ ಅಧಿಕೃತ ಮಾಹಿತಿಯನ್ನು ನೌಕರರು ಸೆಪ್ಟೆಂಬರ್ ಮೂರನೇ ಪಡೆಯಲಿದ್ದಾರೆ. ಕೇಂದ್ರ ಸರ್ಕಾರವು ಶೇಕಡಾ 3-4 ಶೇಕಡಾ ಡಿಎ ಹೆಚ್ಚಳ ಮಾಡಲಿದೆ.
ತುಟ್ಟಿಭತ್ಯೆ ಪ್ರಮಾಣ ಶೇ.54 ತಲುಪುತ್ತದೆ?
ಈ ಮೂದಲು ಶೇಕಡ 3ರಷ್ಟು ಡಿಎ ಏರಿಕೆ ಆಗಬಹುದು ಎನ್ನಲಾಗಿತ್ತು. ಇದೀಗ ಶೇಕಡಾ 4 ರಷ್ಟು ಹೆಚ್ಚಿಸಬಹುದು. ಜನವರಿಯಲ್ಲಿ ಏರಿಕೆ ಮಾಡಬೇಕಿದ್ದ ತುಟ್ಟಿಭತ್ಯೆ ಹೆಚ್ಚಳ ಶೇಕಡ 4ರಷ್ಟು ಏರಿಕೆ ಮಾಡಿ ಮಾರ್ಚ್ ತಿಂಗಳಲ್ಲಿ ಆದೇಶಿಸಲಾಗಿತ್ತು. ಇದರಿಂದಾಗಿ ತುಟ್ಟಿಭತ್ಯೆ ಪ್ರಮಾಣ ಶೇ. 50ರಷ್ಟು ತಲುಪಿತು.
ಸೆಪ್ಟಂಬರ್ ಘೊಷಣೆಯೊಂದಿಗೆ ತುಟ್ಟಿಭತ್ಯೆ ಪ್ರಮಾಣ ಶೇಕಡ 54 ರಷ್ಟು ತಲುಪುವ ನಿರೀಕ್ಷೆ ಇದೆ. ತುಟ್ಟಿಭತ್ಯೆ ಮಾತ್ರವಲ್ಲದೇ ಪಿಂಚಣಿದಾರರಿಗೆ ತುಟ್ಟಿ ಪರಿಹಾರ ಸಹ ಘೋಷಣೆ ಆಗುವ ಸಾಧ್ಯತೆ ಇದೆ. ಪ್ರತಿ ವರ್ಷ ಇವುಗಳನ್ನು ಎರಡು ಭಾರಿ ಹೆಚ್ಚಿಸುವ ಮೂಲಕ ನೌಕರರನ್ನು ಹೆಚ್ಚುತ್ತಿರುವ ಬೆಲೆ ಏರಿಕೆಗಳ ಮಧ್ಯೆ ಆರ್ಥಿಕವಾಗಿ ಸಬಲರನ್ನಾಗಿ ಮಾಡುತ್ತದೆ.

ಬಾಕಿ ಡಿಎ ಹೆಚ್ಚಳ ಪಾವತಿ ಬಗ್ಗೆ ಸರ್ಕಾರ ಹೇಳಿದ್ದೇನು?
2020ರಲ್ಲಿ ಎದುರಾದ ಕೋವಿಡ್ ಸಂಕಷ್ಟದಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ಏರಿಕೆ ಮಾಡಿದ್ದ ಹದಿನೆಂಟು ತಿಂಗಳ ತುಟ್ಟಿಭತ್ಯೆ ಹಾಗೂ ತುಟ್ಟಿಪರಿಹಾರದ ಏರಿಕೆಯು ಈವರೆಗೆ ಪಾವತಿಯಾಗದೇ ಬಾಕಿ ಉಳಿದುಕೊಂಡಿದೆ. ಈ ಬಾರಿ ತುಟ್ಟಿಭತ್ಯೆ ಹೆಚ್ಚಳದ ಸಂದರ್ಭದಲ್ಲಿ ಈ ಬಗ್ಗೆಯು ಮಹತ್ವದ ಘೋಷಣೆ ಆಗಲಿದೆ ಎಂಬ ನಿರೀಕ್ಷೆಯಲ್ಲಿ ನೌಕರರು ಕಾಯುತ್ತಿದ್ದಾರೆ.
ಮುಂಗಾರು ಸಂಸತ್ ಅಧಿವೇಶನದಲ್ಲಿ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಅವರು, ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಕೊರೊನಾ ಸಾಂಕ್ರಾಮಿಕ ವೇಳೆ ಸ್ಥಗಿತಗೊಂಡಿದ್ದ ಡಿಎ ಮತ್ತು ಡಿಎಆರ್ ಹೆಚ್ಚಳ ಮರಳಿ ಸಿಗುವುದ ಅನುಮಾನ ಎಂದು ತಿಳಿಸಿದ್ದರು. ಹೀಗಾಗಿ ಒಂದಷ್ಟು ಜನ ಬಾಕಿ ಹೆಚ್ಚಳ ಮರಿಚಿಕೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನು ನೌಕರರ ತುಟ್ಟಿಭತ್ಯೆ ಪ್ರಮಾಣ ಶೇಕಡಾ 50ರಷ್ಟು ಮೀರಿದರೆ ಅದು ಮೂಲ ವೇತನ ಜೊತೆಗೆ ವಿಲೀನವಾಗುತ್ತದೆಯೇ ಎಂಬ ಪ್ರಶ್ನೆ ಶುರುವಾಗಿದೆ. ತಜ್ಞರ ಪ್ರಕಾರ ನೋಡುವುದಾದರೆ, ಸದ್ಯಕ್ಕೆ ಅದು ವಿಲೀನಗೊಳ್ಳವುದಿಲ್ಲ. ಬದಲಾಗಿ 8ನೇ ವೇತನ ಆಯೋಗ ಜಾರಿ ಆಗುವವರೆಗೂ ಎರಡು ಪ್ರತ್ಯೇಕವಾಗಿ ಮುಂದುವರಿಯಲಿವೆ ಎಂದಿದ್ದಾರೆ.
ಸದ್ಯ ಎಂಟನೇ ವೇತನ ಆಯೋಗ ಜಾರಿಯಾಗುವುದು 2026ರಲ್ಲಿ ಅಲ್ಲಿಯವರೆಗೂ ನೌಕರರು ಇನ್ನೂ ಎರಡು ಡಿಎ ಮತ್ತು ಡಿಆರ್ ಹೆಚ್ಚಳ ಪಡೆಯಲಿದ್ದಾರೆ.
8ನೇ ಆಯೋಗ ಯಾವಾಗ ಜಾರಿ?
ಕೇಂದ್ರ ಸರ್ಕಾರಿ ನೌಕರರು 8ನೇ ವೇತನ ಆಯೋಗ ರಚನೆ, ಜಾರಿಯನ್ನು ನಿರೀಕ್ಷಿಸುತ್ತಿವೆ. ಸದ್ಯ ಏಳನೇ ವೇತನ ಆಯೋಗ ಜಾರಿಯಾಗಿ ಎಂಟೂವರೆ ವರ್ಷಗಳು ಆಗಿವೆ. ಎಂಟನೇ ವೇನತ ಆಯೋಗ ರಚನೆ ಬಗ್ಗೆ ಯಾವ ಮಾಹಿತಿ ಇಲ್ಲ. ಈ ಸಂಬಂಧ ವಿವಿಧ ಸಂಘಟನೆಗಳು ಸಹ ಆಗ್ರಹಿಸಿರುವ. ಆದರೆ ಮೂಲಗಳ ಪ್ರಕಾರ, ಹೊಸ ವೇತನ ಆಯೋಗ ರಚಿಸುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಪಂಕಜ್ ಚೌಧರಿ ತಿಳಿಸಿದ್ದಾರೆ.
ಸದ್ಯ ಜಾರಿಯಲ್ಲಿರುವ ಏಳನೇ ವೇತನ ಆಯೋಗದಡಿಯೇ ಎರಡನೇ ತುಟ್ಟಿಭತ್ಯೆ ನಿರೀಕ್ಷೆ ಮಟ್ಟದಲ್ಲಿ ಹೆಚ್ಚಾದರೆ ಎಲ್ಲ ಸರ್ಕಾರಿ ನೌಕರರ ಮೊಗದಲ್ಲಿ ಮತ್ತೆ ಮಂದಹಾಸ ಮೂಡುತ್ತದೆ. ಪಿಂಚಣಿದಾರರು ಸಹ ತಮ್ಮ ಡಿಆರ್ ಏರಿಕೆ ಸಂಬಂಧ ಕಾಯುತ್ತಿದ್ದಾರೆ.












Click it and Unblock the Notifications