ಓಮಿಕ್ರಾನ್ ಭೀತಿ: ಸೋಮವಾರ ಪಂಚರಾಜ್ಯ ಚುನಾವಣೆ ಬಗ್ಗೆ ಆರೋಗ್ಯ ಸಚಿವಾಲಯದ ಜೊತೆ ಆಯೋಗದ ಸಭೆ
ನವದೆಹಲಿ, ಡಿಸೆಂಬರ್ 27: ಕೊರೊನಾವೈರಸ್ ರೂಪಾಂತರಿ ಓಮಿಕ್ರಾನ್ ಸೋಂಕು ಹರಡುವಿಕೆ ಭೀತಿ ನಡುವೆ ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ನಡೆಸುವುದಕ್ಕೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗದ ಅಧಿಕಾರಿಗಳು ಸೋಮವಾರ ಕೇಂದ್ರ ಆರೋಗ್ಯ ಸಚಿವಾಲಯದ ಅಧಿಕಾರಿಗಳನ್ನು ಭೇಟಿ ಮಾಡಲಿದ್ದಾರೆ.
ಸೋಮವಾರ ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರನ್ನು ಭೇಟಿ ಮಾಡಲಿರುವ ಚುನಾವಣಾ ಆಯೋಗವು, ಪಂಚರಾಜ್ಯಗಳ ಚುನಾವಣೆ ಹಿನ್ನೆಲೆ ಓಮಿಕ್ರಾನ್ ರೂಪಾಂತರ ತಳಿಯ ಕುರಿತು ಮಾಹಿತಿ ಪಡೆದುಕೊಳ್ಳಲಿದೆ.
"ನಾವು ಮುಂದಿನ ವಾರ ಉತ್ತರ ಪ್ರದೇಶಕ್ಕೆ ಭೇಟಿ ನೀಡಲಿದ್ದೇನೆ. ರಾಜ್ಯದಲ್ಲಿನ ಸ್ಥಿತಿಗತಿಗಳನ್ನು ಪರಿಶೀಲಿಸಿದ ನಂತರ ಪರಿಸ್ಥಿತಿಗೆ ಅಗತ್ಯವಿರುವ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು," ಎಂದು ಕೇಂದ್ರ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ತಿಳಿಸಿದ್ದಾರೆ.

ಉತ್ತರ ಪ್ರದೇಶ ಚುನಾವಣಾ ಮುಂದೂಡಿಕೆಗೆ ಹೈಕೋರ್ಟ್ ಸಲಹೆ:
ಕೊರೊನಾವೈರಸ್ ರೂಪಾಂತರಿ ಓಮಿಕ್ರಾನ್ ಭೀತಿ ನಡುವೆ ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ನಡೆಸುವುದು ಬೇಡ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ. ರಾಜ್ಯ ವಿಧಾನಸಭೆ ಚುನಾವಣೆಯನ್ನು ಒಂದು ಅಥವಾ ಎರಡು ತಿಂಗಳ ಅವಧಿಗೆ ಮುಂದೂಡುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ಅಲಹಾಬಾದ್ ಹೈಕೋರ್ಟ್ ಒತ್ತಾಯಿಸಿದೆ. ರಾಜ್ಯದಲ್ಲಿ ಚುನಾವಣಾ ಪ್ರಚಾರದ ಮೆರವಣಿಗೆಗಳನ್ನು ನಿಷೇಧಿಸುವಂತೆ ಕೋರ್ಟ್ ಸಲಹೆ ನೀಡಿದೆ.
ದೇಶದಲ್ಲಿ ಭಯ ಹುಟ್ಟಿಸುತ್ತಿರುವ ಕೊವಿಡ್-19 ಹೊಸ ರೂಪಾಂತರಿ ಓಮಿಕ್ರಾನ್ ಸೋಂಕು ಹರಡುವಿಕೆ ನಡುವೆ ಚುನಾವಣಾ ಪ್ರಚಾರದ ಮೆರವಣಿಗೆಗಳನ್ನು ನಡೆಸದಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೂ ಕೋರ್ಟ್ ಒತ್ತಾಯಿಸಿದೆ. ಈ ಬಗ್ಗೆ ಯಾವುದೇ ಪ್ರಕರಣದ ನಂಟು ಹೊಂದಿಲ್ಲದ ಜಾಮೀನು ಅರ್ಜಿಯ ವಿಚಾರಣೆ ವೇಳೆ ಅಲಹಾಬಾದ್ ಉಚ್ಛ ನ್ಯಾಯಾಲಯವು ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ.
ಅಪಾಯದ ಮುನ್ನೆಚ್ಚರಿಕೆ ನೀಡಿದ ಹೈಕೋರ್ಟ್:
ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣಾ ಪ್ರಚಾರವನ್ನು ನಿಲ್ಲಿಸದಿದ್ದರೆ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆಯಲ್ಲಿ ಎದುರಿಸಿದ ಪರಿಸ್ಥಿತಿಗಿಂತ ಕೆಟ್ಟ ಸ್ಥಿತಿಯನ್ನು ನೋಡಬೇಕಾಗುತ್ತದೆ ಎಂದು ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್ ಎಚ್ಚರಿಸಿದ್ದಾರೆ.
ಪ್ರತಿನಿತ್ಯ ನೂರಾರು ಪ್ರಕರಣಗಳು ದಾಖಲಾಗುವುದಱ ನಡುವೆಯೂ ಚುನಾವಣಾ ಮೆರವಣಿಗೆ ಮತ್ತು ಸಮಾವೇಶಗಳನ್ನು ನಡೆಸಲಾಗುತ್ತಿದೆ. ನಿತ್ಯ ಅಲ್ಲಿ ಕಿಕ್ಕಿರಿದು ತುಂಬಿರುವ ಜನರು ಸಾಮಾಜಿಕ ಅಂತರವನ್ನು ಯಾವುದೇ ಕಾರಣಕ್ಕೂ ಪಾಲಿಸಲು ಸಾಧ್ಯವಾಗುವುದಿಲ್ಲ ಎಂದು ಉಲ್ಲೇಖಿಸಿದ ನ್ಯಾಯಾಧೀಶರು, "ಹೊಸ ರೂಪಾಂತರದ ಒಮಿಕ್ರಾನ್‌ನ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಕೋವಿಡ್‌ನ ಮೂರನೇ ಅಲೆ ಹೆಚ್ಚಾಗುವ ಸಾಧ್ಯತೆಯಿದೆ," ಎಂದರು. ನಂತರ ಕೊವಿಡ್-19 ಪ್ರಕರಣಗಳ ಸಂಖ್ಯೆಯ ಬಗ್ಗೆ ವರದಿಗಳನ್ನು ಉಲ್ಲೇಖಿಸಿದರು ಮತ್ತು ಲಾಕ್‌ಡೌನ್ ಅನ್ನು ಜಾರಿಗೊಳಿಸಿದ ದೇಶಗಳ ಬಗ್ಗೆ ಪ್ರಸ್ತಾಪಿಸಿದರು.
ಮುಂದಿನ ವಾರ ಯುಪಿಗೆ ಚುನಾವಣಾ ಆಯೋಗ:
"ಶುಕ್ರವಾರ ಡೆಹ್ರಾಡೂನ್‌ನಲ್ಲಿ ಚುನಾವಣಾ ಆಯೋಗವು ಮುಂದಿನ ವಾರ ಉತ್ತರ ಪ್ರದೇಶಕ್ಕೆ ಭೇಟಿ ನೀಡಲಿದೆ. ನಾವು ಅದನ್ನು ಪರಿಶೀಲಿಸಿದ ನಂತರ ಪರಿಸ್ಥಿತಿಗೆ ಅಗತ್ಯವಿರುವ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು" ಎಂದು ಸಿಇಸಿ ಸುಶೀಲ್ ಚಂದ್ರ ಹೇಳಿದರು. ಕೇಂದ್ರ ಚುನಾವಣಾ ಆಯೋಗವು ಈಗಾಗಲೇ ಪಂಜಾಬ್, ಗೋವಾ ಮತ್ತು ಉತ್ತರಾಖಂಡ್‌ಗಳಿಗೆ ಚುನಾವಣಾ ಪೂರ್ವ ಪರಿಸ್ಥಿತಿ ಪರಿವೀಕ್ಷಣೆ ಭಾಗವಾಗಿ ಭೇಟಿ ನೀಡಿದೆ ಎಂದು ಹೇಳಿದ್ದಾರೆ.












Click it and Unblock the Notifications