Maharashtra Election 2024: ಖಾತೆ ಹಂಚಿಕೆ, ಡಿಸಿಎಂ ಏಕನಾಥ್ ಶಿಂಧೆ ಹೊಸ ಬೇಡಿಕೆ
ಮುಂಬೈ, ಡಿಸೆಂಬರ್ 07: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ 2024ರ ಬಳಿಕ ರಾಜ್ಯದಲ್ಲಿ 'ಮಹಾಯತಿ' ಮೈತ್ರಿಕೂಟದ ಹೊಸ ಸರ್ಕಾರ ರಚನೆಯಾಗಿದೆ. ಗುರುವಾರ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವೀಸ್ ಪ್ರಮಾಣ ವಚನ ಸ್ವೀಕಾರ ಮಾಡಿದರು. ಉಪ ಮುಖ್ಯಮಂತ್ರಿಗಳಾಗಿ ಏಕನಾಥ್ ಶಿಂಧೆ, ಅಜಿತ್ ಪವಾರ್ ಸಂಪುಟ ಸೇರಿದ್ದಾರೆ. ಬಿಜೆಪಿಗೆ ಮುಖ್ಯಮಂತ್ರಿ ಪಟ್ಟವನ್ನು ಬಿಟ್ಟುಕೊಟ್ಟಿರುವ ಏಕನಾಥ್ ಶಿಂಧೆ ಖಾತೆಗಳ ವಿಚಾರದಲ್ಲಿ ಹೊಸ ಬೇಡಿಕೆಗಳನ್ನು ಇಡುತ್ತಿದ್ದಾರೆ. ದೇವೇಂದ್ರ ಫಡ್ನವೀಸ್ ಸಂಪುಟದಲ್ಲಿ ಇನ್ನೂ ಸಹ ಖಾತೆ ಹಂಚಿಕೆಯಾಗಿಲ್ಲ.
ಡಿಸೆಂಬರ್ 5ರಂದು ನೂತನ ಮುಖ್ಯಮಂತ್ರಿಗಳ ಪ್ರಮಾಣ ವಚನ ಸಮಾರಂಭ ನಡೆದಿದೆ. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಏಕನಾಥ್ ಶಿಂಧೆ, ಅಜಿತ್ ಪವಾರ್ ಜೊತೆ ಮೊದಲ ಸಚಿವ ಸಂಪುಟ ಸಭೆಯನ್ನು ನಡೆಸಿದ್ದಾರೆ. ಆದರೆ ಇನ್ನೂ ಸಹ ಇಬ್ಬರಿಗೂ ಖಾತೆಗಳ ಹಂಚಿಕೆಯನ್ನು ಮಾಡಿಲ್ಲ. ಶಿವಸೇನೆ (ಏಕನಾಥ್ ಶಿಂಧೆ ಬಣ) ಪ್ರಮುಖ ಖಾತೆಗಳಿಗಾಗಿ ಬೇಡಿಕೆ ಇಟ್ಟಿದೆ.

ಶಿವಸೇನೆ ಶಾಸಕರೊಬ್ಬರ ಪ್ರಕಾರ, "ಇನ್ನೂ ಖಾತೆ ಹಂಚಿಕೆಯ ಮಾತುಕತೆಗಳು ನಡೆಯುತ್ತಿವೆ. ಏಕನಾಥ್ ಶಿಂಧೆ ಗೃಹ ಸಚಿವ ಖಾತೆಗೆ ಬೇಡಿಕೆಯನ್ನು ಇಟ್ಟಿದ್ದಾರೆ". ಶಿಂಧೆ ಅಮಿತ್ ಶಾ ಮುಂದೆ ಸಹ ಈ ಬೇಡಿಕೆಯನ್ನು ಇಟ್ಟಿದ್ದರು. ಆದರೆ ಅವರು ಗೃಹ ಖಾತೆ ಬಿಜೆಪಿ ಬಳಿಯೇ ಇರಲಿದೆ ಎಂದು ಸ್ಪಷ್ಟಪಡಿಸಿದ್ದರು.
ಮೈತ್ರಿಕೂಟದ ಸರ್ಕಾರ: ಮಹಾರಾಷ್ಟ್ರ ವಿಧಾನಸಭೆಯಲ್ಲಿ ಸರ್ಕಾರ ರಚಿಸಲು ಬೇಕಾದ ಮ್ಯಾಜಿಕ್ ನಂಬರ್ 145. ಚುನಾವಣೆಯಲ್ಲಿ ಬಿಜೆಪಿ 132 ಸೀಟುಗಳಲ್ಲಿ ಜಯಗಳಿಸಿದೆ. ಆದ್ದರಿಂದ 'ಮಹಾಯತಿ' ಮೈತ್ರಿಕೂಟದ ಸರ್ಕಾರ ರಚನೆಯಾಗಿದೆ. ಮೈತ್ರಿಕೂಟ 230 ಶಾಸಕರ ಬಲ ಹೊಂದಿದೆ. ಇದರಲ್ಲಿ ಶಿವಸೇನೆ (ಏಕನಾಥ್ ಶಿಂಧೆ ಬಣ) 57, ಎನ್‌ಸಿಪಿ (ಅಜಿತ್ ಪವಾರ್ ಬಣ) 41 ಸೀಟುಗಳನ್ನು ಹೊಂದಿವೆ.
ಮೈತ್ರಿಕೂಟದಲ್ಲಿ ಶಿವಸೇನೆ (ಏಕನಾಥ್ ಶಿಂಧೆ), ಎನ್‌ಸಿಪಿ (ಅಜಿತ್ ಪವಾರ್) ಅವರನ್ನು ಉಪ ಮುಖ್ಯಮಂತ್ರಿ ಮಾಡಲಾಗಿದೆ. ಆದರೆ ಇದಕ್ಕೆ ಕಾನೂನಿನ ಪ್ರಕಾರ ಮಾನ್ಯತೆ ಇಲ್ಲ. ಆದ್ದರಿಂದ ಪ್ರಮುಖ ಖಾತೆಗಳನ್ನು ಅವರಿಗೆ ಹಂಚಿಕೆ ಮಾಡಬೇಕಿದೆ. ಈ ಕುರಿತು ದೇವೇಂದ್ರ ಫಡ್ನವೀಸ್ ತೀರ್ಮಾನವನ್ನು ಕೈಗೊಳ್ಳಬೇಕಿದೆ.
ಶುಕ್ರವಾರ ಸಹ 'ಮಹಾಯತಿ' ಮೈತ್ರಿಕೂಟದ ನಾಯಕರಿಂದ ಖಾತೆ ಹಂಚಿಕೆ ಕುರಿತು ಸಭೆ ನಡೆದಿದೆ. ಅಲ್ಲದೇ ಸಚಿವ ಸಂಪು ವಿಸ್ತರಣೆಯಾಗಿಲ್ಲ. ಕೇವಲ ಮೂರು ಜನರು ಮಾತ್ರ ಗುರುವಾರ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಚುನಾವಣೆಯಲ್ಲಿ 132 ಸೀಟು ಗೆದ್ದಿರುವ ಬಿಜೆಪಿಗೆ ಅತಿ ಹೆಚ್ಚು ಸಚಿವ ಸ್ಥಾನ ಸಿಗಲಿದೆ.
ಸಚಿವ ಸಂಪು ವಿಸ್ತರಣೆ, ಖಾತೆಗಳ ಹಂಚಿಕೆಯಲ್ಲಿ ಎನ್‌ಸಿಪಿ, ಶಿವಸೇನೆಗೆ ಸಹ ಆದ್ಯತೆ ನೀಡಬೇಕಿದೆ. 2022ರಲ್ಲಿ ಮಹಾಯತಿ ಸರ್ಕಾರ ರಚನೆಗೊಂಡಾಗ ದೇವೇಂದ್ರ ಫಡ್ನವೀಸ್, ಅಜಿತ್ ಪವಾರ್ ಉಪ ಮುಖ್ಯಮಂತ್ರಿಯಾಗಿದ್ದರು. ಈಗ ಏಕನಾಥ್ ಶಿಂಧೆ, ಅಜಿತ್ ಪವಾರ್ ಡಿಸಿಎಂ ಆಗಿದ್ದಾರೆ.
ಸರ್ಕಾರ ರಚನೆ ಸಮಯದಲ್ಲಿ ಏಕನಾಥ್ ಶಿಂಧೆ ಡಿಸಿಎಂ ಆಗಲು ಒಪ್ಪಿರಲಿಲ್ಲ. ತಮ್ಮ ಪುತ್ರನನ್ನು ಡಿಸಿಎಂ ಮಾಡಿ ಎಂದು ಬೇಡಿಕೆ ಇಟ್ಟಿದ್ದರು. ಹಾಲಿ ಸಂಸದರಾಗಿರುವ ಶ್ರೀಕಾಂತ್ ಶಿಂಧೆ ರಾಜ್ಯ ರಾಜಕೀಯಕ್ಕೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.
ಅಂತಿಮವಾಗಿ ದೇವೇಂದ್ರ ಫಡ್ನವೀಸ್ ಮನವೊಲಿಕೆ ಬಳಿಕ ಏಕನಾಥ್ ಶಿಂಧೆ ಉಪ ಮುಖ್ಯಮಂತ್ರಿಯಾಗಿ ಸಂಪುಟ ಸೇರಿದ್ದರು. ಏಕನಾಥ್ ಶಿಂಧೆ ಸಂಪುಟ ಸೇರದಿದ್ದರೆ ಶಿವಸೇನೆ ಶಾಸಕರು ಯಾರೂ ಸಹ ಸಚಿವರಾಗುವುದಿಲ್ಲ ಎಂದು ಶಾಸಕರು ಪಟ್ಟು ಹಿಡಿದಿದ್ದರು.












Click it and Unblock the Notifications