ಕರಿ ಕೋಟು ಬಿಟ್ಟು ಕೃಷಿ ಮಾಡಲು ಶುರು ಮಾಡಿದ ವಕೀಲ, ಡ್ರ್ಯಾಗನ್ ಫ್ರುಟ್‌ನಿಂದ ಲಕ್ಷ ಲಕ್ಷ ಲಾಭ
Dragon Fruit Farming: ಡಬಲ್ ಡಿಗ್ರಿ, ತ್ರಿಬಲ್ ಡಿಗ್ರಿ ತಗೋಳೋದು ಅದಕ್ಕೆ ಅನುಗುಣವಾಗಿ ಕೆಲಸಕ್ಕೆ ಸೇರಿವುದು. ತಮ್ಮ ಹೆಸರಿನ ಮುಂದೆ ಎಂಜಿನಿಯರ್, ಡಾಕ್ಟರ್, ಲಾಯರ್ ಎನ್ನುವ ಪದವಿ ಸೇರಿಸಿಕೊಳ್ಳೋದು ಕಾಮನ್. ಡಿಗ್ರಿ ಪಡೆದ ಮಾತ್ರಕ್ಕೆ ನಮ್ಮ ಕರಿಯರ್ ಅದೇ ಹಾದಿಯಲ್ಲಿ ಸಾಗಬೇಕು ಎನ್ನುವುದು ಖಂಡಿತಾ ಅನಿವಾರ್ಯ ಅಲ್ಲ. ಇದಕ್ಕೆ ಸರಿಯಾದ ಉದಾಹರಣೆ ಲುಧಿಯಾನ ಮೂಲದ ಜಸ್‌ಪ್ರೀತ್ ಸಿಂಗ್ . ಇವರು ಕಷ್ಟ ಪಟ್ಟು ಓದಿ ಮೂರು ಮೂರು ಪದವಿ ಪಡೆದಿದ್ದಾರೆ. ಆದರೆ ಕೊನೆಗೆ ಇವರು ಆಯ್ಕೆ ಮಾಡಿಕೊಂಡದ್ದು ಮಾತ್ರ ಕೃಷಿಯನ್ನು. ಕೃಷಿಯಲ್ಲಿಯೇ ನೆಮ್ಮದಿಯ ಬದುಕು ಕಂಡುಕೊಂಡಿದ್ದಾರೆ. ಅಷ್ಟೇ ಅಲ್ಲ ಕರಿ ಕೋಟು ತೊಟ್ಟು ಲಕ್ಷ ಲಕ್ಷ ಎಣಿಸಬಹುದಿತ್ತು. ಹಾಗೆಯ್ ಕೃಷಿ ಮಾಡಿಯೂ ಹಾಗೆಯೇ ದುಡಿಯುತ್ತಿದ್ದಾರೆಂಬುವುದು ಇವರ ವಿಶೇಷ.

ಟೆರೇಸ್ ಗಾರ್ಡನ್‌ನಿಂದ ಶುರುವಾದ Dragon Fruit Farming ಜರ್ನಿ :
ಹೌದು, ಜಸ್‌ಪ್ರೀತ್ ಸಿಂಗ್ BBA, MBA, LLB ಮತ್ತು LLM ಪದವಿ ಪಡೆದಿದ್ದಾರೆ. ಚಂಡೀಗಢದಲ್ಲಿ ಸುಮಾರು ಮೂರು ವರ್ಷಗಳವರೆಗೆ ಲಾಯರ್ ಆಗಿ ಪ್ರಾಕ್ಟೀಸ್ ಮಾಡುತ್ತಿದ್ದರು. ಇವರಿಗೆ ಕೃಷಿ ಮೇಲೆ ಮೊದಲಿನಿಂದಲೂ ಆಸಕ್ತಿ ಇತ್ತು. ಹಾಗಾಗಿಯೇ ಕೃಷಿ ಅವರ ಕೈ ಹಿಡಿದಿದೆ. ಈಗ ಕೃಷಿಯಿಂದಾನೇ ಲಕ್ಷ ಲಕ್ಷ ಸಂಪಾದನೆ ಮಾಡ್ತಿದ್ದಾರೆ. ಇವರ ಕೃಷಿ ಜೀವನ ಆರಂಭವಾದದ್ದು ಟೆರೇಸ್ ಗಾರ್ಡನ್‌ನಿಂದ. ನಂತರ ಇದೇ ಪೂರ್ಣ ಪ್ರಮಾಣದ ಉದ್ಯೋಗವಾಯಿತು.
ಮೊದಲ ಪ್ರಯತ್ನದಲ್ಲೇ ಸಕ್ಸಸ್ :
2013ರಲ್ಲಿ ಮೊದಲು ಟೆರೇಸ್ ಗಾರ್ಡನ್ (garden) ಮಾಡಿ ಡ್ರ್ಯಾಗನ್ ಹಣ್ಣು, ಅಂಜೂರ, ಪೀಚ್ ಹೀಗೆ ಬೇರೆ ಬೇರೆ ಬಗೆಯ ಬೆರ್ರಿ ಹಣ್ಣು ಬೆಳೆಯುತ್ತಾರೆ. ಆ ಟ್ರಾಯಲ್‌ನಲ್ಲಿ ಅವರಿಗೆ ಸಕ್ಸಸ್ ಸಿಗುತ್ತದೆ. ನಂತರ ಇದನ್ನೇ ದೊಡ್ಡ ಮಟ್ಟದಲ್ಲಿ ಮುಂದುವರೆಸುತ್ತಾರೆ. ಇನ್ನು ಕೃಷಿಯನ್ನೇ ವ್ಯವಹಾರ ಮಾಡುವ ಕೆಲಸಕ್ಕೆ 2016ರಲ್ಲಿ ಕೈ ಹಾಕುತ್ತಾರೆ. ಲುಧಿಯಾನದಲ್ಲಿ 1 ಎಕರೆ ಜಮೀನಿನಲ್ಲಿ ನಿಂಬೆ ಮತ್ತು ಪೇರಳೆ ಜೊತೆಗೆ ಡ್ರ್ಯಾಗನ್ ಫ್ರೂಟನ್ನು ಬೆಳೆಯುತ್ತಾರೆ. ಡ್ರ್ಯಾಗನ್ ಫ್ರುಟ್‌ನಿಂದಲೇ ಅತಿ ಹೆಚ್ಚು ಆದಾಯ ಗಳಿಸ್ತಾರೆ. ಮೊದಲು ಥೈಲ್ಯಾಂಡ್‌ನಿಂದ ರಾಯಲ್ ರೆಡ್ ತಳಿಯ 200 ಡ್ರಾಗನ್ ಫ್ರುಟ್ ಸಸಿಗಳನ್ನು ತರಿಸಿಕೊಳ್ತಾರೆ. ಆದರೆ ಇಲ್ಲಿ ಪ್ರತೀ ಸಸಿಗೆ 3,200 ರೂ.ವರೆಗೆ ಖರ್ಚಾಗುತ್ತದೆ.
ಗಿಡಗಳ ಕಸಿಯಿಂದ ಹಣ ಉಳಿತಾಯ :
ಗಿಡಕ್ಕಾಗಿ ಆಗುವ ಖರ್ಚನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಒಂದು ಉಪಾಯ ಮಾಡ್ತಾರೆ. ಪದೇ ಪದೇ ವಿದೇಶದಿಂದ ಸಸಿ ಖರೀದಿಸುವ ಬದಲು, ತಾವೇ ಸ್ವತಃ ಸಸಿ ಕಸಿ ಮಾಡೋ ವಿಧಾನ ಕಂಡು ಕೊಳ್ತಾರೆ. ಕಸಿ ಮಾಡುವ ಮೂಲಕ 30-40 ಸಸಿಗಳನ್ನು ತಾವೇ ಉತ್ಪಾದಿಸುತ್ತಾರೆ. ಕ್ರಮೇಣ ಈ ಸಂಖ್ಯೆಯನ್ನು 1,600 ಸಸಿಗಳವರೆಗೆ ಹೆಚ್ಚಿಸ್ತಾರೆ.
ಈ ಮೆಕ್ಸಿಕೋ ಹಾಗೂ ಮಧ್ಯ ಅಮೆರಿಕದ ( america) ಹಣ್ಣಿನ ಕೃಷಿ ಕೈ ಹಿಡಿಯುತ್ತಿದ್ದಂತೆ, ಬೆಳೆ ಬೆಳೆಯುವ ವಿಧಾನಗಳನ್ನೂ ಚೇಂಜ್ ಮಾಡಿಕೊಳ್ತಾರೆ. ರಿಂಗ್-ಪೋಲ್, ಟ್ರೆಲ್ಲಿಸ್ ಪದ್ದತಿಯನ್ನು ಅಳವಡಿಸಿಕೊಳ್ತಾರೆ. ರಿಂಗ್-ಪೋಲ್‌ನಲ್ಲಿ ಒಂದು ಕಂಬದ ಸುತ್ತ 4 ಡ್ರ್ಯಾಗನ್ ಹಣ್ಣಿನ ಗಿಡಗಳನ್ನು ಬೆಳೆಸಲಾಗ್ತದೆ. ಅವು ಮೇಲ್ಭಾಗದಲ್ಲಿರುವ ರಿಂಗ್‌ನ ಮೇಲೆ ಏರಿ ಬೆಳೆಯುತ್ತವೆ. ಇದರಿಂದ ಪ್ರತೀ ಎಕರೆಗೆ ಸುಮಾರು 1,600ರಿಂದ 1,800 ಗಿಡಗಳನ್ನು ಬೆಳೆಸಬಹುದು. ಪ್ರತಿ ಎಕರೆಗೆ ಸುಮಾರು 8-10 ಟನ್ ಇಳುವರಿಯೂ ಬರುತ್ತದೆ.
ಟ್ರೆಲ್ಲಿಸ್ ಪದ್ಧತಿ: ಇಲ್ಲಿ ಬೆಳೆ ಬೆಳೆಯುವುದಕ್ಕೆ ಹೆಚ್ಚಿನ ಭೂಮಿಯ ಅಗತ್ಯ ಇಲ್ಲ. ಈ ಪದ್ದತಿಯಲ್ಲಿ ಪ್ರತಿ ಎಕರೆಗೆ 8,000 ಸಸ್ಯಗಳನ್ನು ಬೆಳೆಯಬಹುದು. ಇನ್ನು ಬೆಳೆ ಬೆಳೆಯಲು ಹನಿ ನೀರಾವರಿ ಮತ್ತು ನೀರಿನಲ್ಲಿ ಕರಗುವ ರಸಗೊಬ್ಬರಗಳನ್ನು ಬಳಸಲಾಗ್ತದೆ. ರಾಸಾಯನಿಕ ಕೀಟನಾಶಕಗಳನ್ನು ಬಳಸುವುದಿಲ್ಲ.
ಹಳದಿ ಡ್ರಾಗಲ್ ಫ್ರುಟ್ :
ಈ ಕೃಷಿ ವ್ಯವಹಾರದಿಂದ ಹೆಚ್ಚು ಲಾಭ ಗಳಿಸುವ ಸಲುವಾಗಿ ಅವರು ಇಸ್ರೇಲಿ ಹಳದಿ ಡ್ರಾಗಲ್ ಫ್ರುಟ್ ಮತ್ತು ತೈವಾನೀಸ್ ಮಿ ಕ್ಸುವಾನ್‌ಲಾಂಗ್ ಅನ್ನು ಸೇರಿಸಿಕೊಳ್ತಾರೆ. ಇದು ಜುಲೈನಿಂದ ಜನವರಿವರೆಗೆ ಹಣ್ಣು ಬಿಡುತ್ತದೆ. ಇದು ಗಿಡದಿಂದ ಬೇಗನೇ ಉದುರುವುದಿಲ್ಲ. ಅಲ್ಲದೆ ಒಮ್ಮೆ ಬೆಳೆ ಕೊಯ್ಲು ಮಾಡಿದ ನಂತರ 15 ದಿನಗಳವರೆಗೆ ಈ ಹಣ್ಣಿಗೆ ಶೆಲ್ಫ್ ಲೈಫ್ ಇರುತ್ತದೆ. ಹನಿ ನೀರಾವರಿ ಮತ್ತು ನೀರಿನಲ್ಲಿ ಕರಗುವ ರಸ ಗೊಬ್ಬರಗನ್ನು ಬಳಸಲಾಗ್ತದೆ.
ಈಕ್ವೆಡಾರ್ ಪಲೋರಾ ಸಿಹಿ ಮತ್ತು ಸುವಾಸನೆ ಇರುವ ಹಳದಿ ಡ್ರ್ಯಾಗನ್. ಜಸ್ಪ್ರೀತ್ ಈ ತಳಿಯ ಎರಡು ಹಣ್ಣನ್ನು ಅಮೆರಿಕದಿಂದ ತರಿಸಿಕೊಳ್ತಾರೆ. ನಂತರ ನಿಧಾನವಾಗಿ ಈ ಬೆಳೆಯಲು ಶುರು ಮಾಡ್ತಾರೆ. ಈ ಹಳದಿ ಡ್ರಾಗನ್ ಬಗ್ಗೆ ತಾವೇ ಪ್ರಚಾರ ಮಾಡ್ತಾರೆ. ಹಳದಿ ಡ್ರಾಗನ್ ಅತಿ ಹೆಚ್ಚು ಬೆಲೆ ಕೊಡೋ ಹಣ್ಣು. ಪ್ರತೀ ಕೆಜಿಗೆ 1,200 ರಿಂದ 1,400 ರೂ.ವರೆಗೆ ದುಡ್ಡು ಬರುತ್ತದೆ. ಇನ್ನು ಇದನ್ನು ಹಣ್ಣಾದ ಕೂಡಲೇ ಗಿಡದಿಂದ ಕೀಳಬೇಕು ಅಂತೇನಿಲ್ಲ. ಆರು ತಿಂಗಳವರೆಗೆ ಗಿಡದಲ್ಲೇ ಬಿಡಬಹುದು. ಇದು ಪ್ರೀಮಿಯಂ ಬೆಲೆ ಕೊಡೋ ಹಣ್ಣು. ಕಾಲು ಎಕರೆ ಬೆಳೆಯಿಂದಲೇ ಐದು ಲಕ್ಷ ಆದಾಯ ಗಳಿಸ್ತಾರೆ.
ಮಾರ್ಕೆಟಿಂಗ್ ಹೇಗೆ ?:
ಹಣ್ಣು ಬೆಳೆದರೆ ಸಾಕಾ? ಅದನ್ನು ಮಾರುವ ಕಲೆಯೂ ಕೃಷಿಕನಿಗೆ ಗೊತ್ತಾದರೆ ಮಾತ್ರ ದುಡ್ಡು ಮಾಡೋದು ಸಾಧ್ಯ. ಇಲ್ಲಿ ಇವರು ಅನುಸರಿಸಿದ್ದು B2B, B2C ಅನ್ನುವ ಪದ್ದತಿಯನ್ನು. B2Bಯಲ್ಲಿ ಸ್ಥಳೀಯ ಚಿಲ್ಲರೆ ವ್ಯಾಪಾರಿಗಳು ಮತ್ತು ಹಣ್ಣಿನ ಮಾರುಕಟ್ಟೆಗಳಿಗೆ ಹಣ್ಣುಗಳನ್ನು ಪೂರೈಸುತ್ತಾರೆ. B2Cಯಲ್ಲಿ ಲುಧಿಯಾನ ಸುತ್ತಮುತ್ತಲಿನ 800 ಮನೆಗಳಿಗೆ ನೇರವಾಗಿ ಹಣ್ಣುಗಳನ್ನು ಪೂರೈಸುವುದು. ಇವರು ಡ್ರ್ಯಾಗನ್ ಫ್ರೂಟ್ ಜೊತೆಗೆ, ಆವಕಾಡೊ, ಕಿನ್ನೋ, ಬ್ಲೂಬೆರ್ರಿ, ಬ್ಲ್ಯಾಕ್‌ಬೆರಿ ಮತ್ತು ರಾಸ್ಪ್ಬೆರಿಗಳಂಥ ಅನೇಕ ವಿದೇಶಿ ಹಣ್ಣುಗಳನ್ನೂ ಬೆಳೆಯುತ್ತಾರೆ. ಈ ಮೂಲಕ ಹೆಚ್ಚಿನ ಲಾಭವನ್ನು ಗಳಿಸುತ್ತಾರೆ.
ಹೆಚ್ಚು ಬೆಳೆ ಬೆಳೆಯಲು, ಕೃಷಿ ವ್ಯವಹಾರ ಶುರು ಮಾಡಲು ದೊಡ್ಡ ಜಮೀನು ಬೇಕು ಎಂದೇನಿಲ್ಲ. ಸರಿಯಾದ ವಿಧಾನ ಅನುಸರಿಸುವ ಮೂಲಕ ಸಣ್ಣ ಭೂಮಿಯಲ್ಲಿ ಕೂಡಾ ದೊಡ್ಡ ಇಳುವರಿ ತೆಗೆಯಬಹುದು.


Click it and Unblock the Notifications
