ಮಲಯಾಳಂ ನಟ ದಿಲೀಪ್‌ಗೆ ಪೆಟ್ಟುಗಳ ಮೇಲೆ ಪೆಟ್ಟು
ತಿರುವನಂತಪುರಂ, ಜುಲೈ 11 : ಮಲಯಾಳಂ ನಟಿಯ ಅಪರಹಣ ಮತ್ತು ಲೈಂಗಿಕ ದೌರ್ಜನ್ಯದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ಮಲಯಾಳಂ ನಟ ದಿಲೀಪ್ ಅವರಿಗೆ ಒಂದರ ಹಿಂದೊಂದರಂತೆ ಸಂಕಷ್ಟಗಳು ಎದುರಾಗುತ್ತಿವೆ.
ಮಲಯಾಳಂ ಕಲಾವಿದರ ಸಂಘದಿಂದ ದಿಲೀಪ್ ಅವರನ್ನು ಉಚ್ಚಾಟಿಸಲಾಗಿದ್ದರೆ, ಅವರ ಮಾಜಿ ಹೆಂಡತಿ ಮಂಜು ವಾರಿಯರ್ ಅವರು, ತಮ್ಮಿಬ್ಬರಿಗೆ ಹುಟ್ಟಿದ ಮಗಳನ್ನು ತಮ್ಮ ಸುಪರ್ದಿಗೆ ಕೊಡಬೇಕೆಂದು ಕೋರ್ಟಿನ ಮೊರೆ ಹೋಗಿದ್ದಾರೆ.

ಮಲಯಾಳಂ ನಟಿಯ ಲೈಂಗಿಕ ದೌರ್ಜನ್ಯದ ಹಿಂದೆ ದಿಲೀಪ್ ಅವರ ಕೈವಾಡ ಇರುವ ಸುಳಿವು ಸಿಕ್ಕಾಗಲೇ, ಮಂಜು ವಾರಿಯರ್ ಅವರು ತಮ್ಮ ಮಾಜಿ ಗಂಡನ ವಿರುದ್ಧ ತಿರುಗಿಬಿದ್ದಿದ್ದರು. ನಟಿಯ ಅಪಹರಣದ ಹಿಂದೆ ಕಾಣದ ಕೈಗಳ ಸಂಚಿದ್ದು, ನಟಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಭಾಷಣ ಮಾಡಿದ್ದರು.
ಈಗ ದಿಲೀಪ್ ಅವರು ಬಂಧಿತರಾಗುತ್ತಿದ್ದಂತೆ, ಕೆಲ ತಿಂಗಳ ಹಿಂದೆ ಮಂಜು ವಾರಿಯರ್ ಅವರು ಮಾಡಿದ್ದ ಭಾಷಣದ ವಿಡಿಯೋ ತುಣುಕು ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಲಾರಂಭಿಸಿದೆ.
ಈ ಪ್ರಕರಣದ ಪ್ರಮುಖ ಆರೋಪಿ ಪಲ್ಸರ್ ಸುನಿ, ಜೈಲಿನಲ್ಲಿದ್ದಾಗ ದಿಲೀಪ್ ಮತ್ತಿತರ ಖ್ಯಾತನಾಮರ ಕೈವಾಡ ಈ ಪ್ರಕರಣದ ಹಿಂದಿದೆ ಎಂದು ಬಾಯಿಬಿಟ್ಟಿದ್ದ. ಅಲ್ಲದೆ, ಲೈಂಗಿಕ ದೌರ್ಜನ್ಯ ಎಸಗಿದಾಗ ಮಾಡಲಾಗಿದ್ದ ವಿಡಿಯೋ ಇದ್ದ ಪೆನ್ ಡ್ರೈವ್ ಅನ್ನು ದಿಲೀಪ್ ಅವರ ಹೆಂಡತಿಯ ಕೈಗೆ ಕೊಟ್ಟಿರುವುದಾಗಿಯೂ ಬಹಿರಂಗಪಡಿಸಿದ್ದ.
ಬಹುಭಾಷಾ ನಟಿ ಲೈಂಗಿಕ ಪ್ರಕರಣ: ನಟ ದಿಲೀಪ್ ಬಂಧನ
ಕನ್ನಡದ ಹಲವಾರು ಚಿತ್ರಗಳಲ್ಲಿ ನಟಿಸಿರುವ ಆ ಖ್ಯಾತ ಮಲಯಾಳಂ ನಟಿಯನ್ನು ಅಪಹರಿಸಿದ್ದ ಪಲ್ಸರ್ ಸುನಿ ಮತ್ತಿತರರು, ಚಲಿಸುತ್ತಿದ್ದ ವಾಹನದಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದರು. ಈ ಘಟನೆಯನ್ನೆಲ್ಲ ಪಲ್ಸರ್ ಸುನಿ ಮೊಬೈಲ್ ನಲ್ಲಿ ವಿಡಿಯೋ ರೆಕಾರ್ಡ್ ಮಾಡಿದ್ದ. ನಂತರ ಮೊಬೈಲನ್ನು ಎಲ್ಲೋ ಬಿಸಾಕಿದ್ದಾಗಿ ಸುಳ್ಳು ಹೇಳಿದ್ದ.












Click it and Unblock the Notifications