ಭಾರತಕ್ಕೆ ಸೂರ್ಯನ ಅಧ್ಯಯನ ಬೇಕಾ? ಬೇಡ್ವಾ? ಬನ್ನಿ ತಿಳಿಯೋಣ!
ಇಸ್ರೋ ಚಂದ್ರಯಾನ-3 ಮೂಲಕ ಭಾರತಕ್ಕೆ ಅದ್ಭುತ ಮೆರಗು ತಂದುಕೊಟ್ಟಿದೆ ಅಂತಾ ಇಡೀ ಜಗತ್ತೇ ಹೊಗಳುತ್ತಿದೆ. ಆದರೆ ಹೀಗೆ ಒಂದು ಗೆಲುವು ಸಿಕ್ಕ ತಕ್ಷಣವೆ ಸುಮ್ಮನೆ ಕೂರಲು ಆಗುತ್ತಾ? ಇಲ್ಲ ಅಲ್ವಾ. ಅದಕ್ಕೆ ಇಸ್ರೋ ವಿಜ್ಞಾನಿಗಳು ಸೂರ್ಯನಿಗೆ ಟಾರ್ಚ್ ಬಿಡಲು ಸಜ್ಜಾಗಿದ್ದಾರೆ. ನಿನ್ನೆ ಮಹತ್ವದ ಸೂರ್ಯಯಾನ ನೌಕೆ ಉಡಾಯಿಸಿದೆ. ಹಾಗಾದರೆ ಭಾರತಕ್ಕೆ ಸೂರ್ಯನ ಅಧ್ಯಯನ ಬೇಕಾ? ಬೇಡ್ವಾ? ಇದರಿಂದ ಏನು ಪ್ರಯೋಜನ? ಸಂಪೂರ್ಣ ಮಾಹಿತಿ ಇಲ್ಲಿದೆ.
ಸೂರ್ಯ ನಮ್ಮೆಲ್ಲರ ಗುರು ಇದ್ದಂತೆ, ಯಾಕಂದ್ರೆ ಸೂರ್ಯನೆ ಇಲ್ಲದೆ ಭೂಮಿ ಸೌರಮಂಡಲದ ಇತರ ಗ್ರಹಗಳು ವ್ಯರ್ಥ. ಅದರಲ್ಲೂ ಭೂಮಿ ಮೇಲಿನ ಜೀವ ರಾಶಿಗೆ ಇದೇ ಸೂರ್ಯ ಆಧಾರ. ಅಕಸ್ಮಾತ್ ಸೂರ್ಯ ಒಂದು ದಿನ ಕಾಣೆಯಾದರೂ ನಮ್ಮ, ನಿಮ್ಮೆಲ್ಲರ ಬದುಕು ಕೂಡ ಭೂಮಿ ಮೇಲಿಂದ ಕಾಣೆಯಾಗಿ ಹೋಗುತ್ತೆ. ಸೂರ್ಯ ಮಾನವನ ಮತ್ತು ಭೂಮಿ ಮೇಲೆ ಬದುಕಿರುವ ಕೋಟ್ಯಾನು ಕೋಟಿ ಜೀವ ರಾಶಿಗಳ ಜತೆ ಬೆರೆತು ಹೋಗಿದ್ದಾನೆ. ಆದರೆ ಮಾನವರು ಸೂರ್ಯನ ಬಗ್ಗೆ ತಿಳಿದಿರುವ ವಿಚಾರ ಮಾತ್ರ ನಗಣ್ಯ. ಹೀಗಾಗಿ ಭಾರತ ಸೂರ್ಯನ ಕಡೆ ಗುರಿ ಇಟ್ಟು ಈಗ ನೌಕೆ ಉಡಾಯಿಸಿ ನುಗ್ಗಿದೆ.

ಸೂರ್ಯನ ಕಡೆ ನುಗ್ಗುತ್ತಿದೆ ಭಾರತ
ಭಾರತದ ಹೆಮ್ಮೆ & ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದ ಬೃಹತ್ ಸಂಸ್ಥೆ ಇಸ್ರೋಗೆ ಮತ್ತೊಂದು ಸವಾಲು ಎದುರಾಗಿದೆ. ಅದೇನೆಂದರೆ 'ಚಂದ್ರಯಾನ-3' ಯೋಜನೆ ಸಕ್ಸಸ್ ಆದ ನಂತರ ಈಗ 'ಆದಿತ್ಯ ಎಲ್ 1' ಅಂದರೆ ಸೂರ್ಯನ ಯೋಜನೆಯ ಸವಾಲು ಇದೆ. ಆದರೆ ಚಂದ್ರನ ಮೇಲೆ ಲ್ಯಾಂಡರ್ ಇಳಿಸಿದ ಕೆಲಸಕ್ಕಿಂತ ಸೂರ್ಯನ ಮೇಲೆ ಉಪಗ್ರಹ ಹಾರಿಸುವ ಸವಾಲು ದೊಡ್ಡದು ಅಂತಾ ಹೇಳಲಾಗಿತ್ತು. ಯಾಕಂದ್ರೆ ಸುಡು ಸೂರ್ಯನ ಬಳಿ ಯಾವುದೇ ವಸ್ತುವೇ ಹೋದರು ಸುಟ್ಟು ಬೂದಿಯಾಗಿ ಹೋಗುತ್ತೆ. ಹೀಗಾಗಿಯೇ ಅಳೆದು, ತೂಗಿ ಇದೀಗ ಭಾರತ ಸೂರ್ಯನ ಬಗ್ಗೆ ಬೃಹತ್ ಯೋಜನೆ ಕೈಗೊಂಡು ಈಗ ಯಶಸ್ವಿಯಾಗಿದೆ. ಇನ್ನೇನು ಕೆಲವೇ ತಿಂಗಳಲ್ಲಿ ಭಾರತದ ನೌಕೆ ತನ್ನ ಗುರಿ ಮುಟ್ಟಲಿದೆ.
ಸೂರ್ಯನ ಬಿಸಿ ಎಷ್ಟು ಗೊತ್ತಾ?
ನಮ್ಮ, ನಿಮ್ಮ ಮನೆಗಳಲ್ಲಿ ಕುದಿಯುವ ನೀರಿನ ಬಿಸಿ ಎಷ್ಟಿರುತ್ತದೆ ಹೇಳಿ? ಅಬ್ಬಬ್ಬಾ ಅಂದರೆ 100 ಡಿಗ್ರಿ ಸೆಲ್ಸಿಯಸ್, ಬೇಡ ಬೇಡ ಎಂದರೂ 100ರ ಗಡಿ ಆಸುಪಾಸು ಇರಬಹುದು. ಆದರೆ ಇದನ್ನೂ ಮೀರಿ ಹೋದರೆ ಅದರ ಕಥೆ ಬೇರೆ. ಯಾಕೆ ಈ ಉದಾಹರಣೆ ಅಂದರೆ, 100 ಡಿಗ್ರಿ ಸೆಲ್ಸಿಯಸ್ ಇರುವ ಕುದಿವ ನೀರನ್ನೇ ನಾವು ಬಿಸಿ ಅಂತಾ ಕರೆಯುತ್ತೇವೆ. ಆದರೆ ಸೂರ್ಯನ ಮೇಲೆ ಇದು ಎಷ್ಟಿರುತ್ತೆ ಗೊತ್ತಾ? ಸುಮಾರು 5,600 ಡಿಗ್ರಿ ಸೆಲ್ಸಿಯಸ್! ಹೌದು ಕಷ್ಟವಾದರೂ ಈ ವಿಚಾರ ನಂಬಬೇಕು. ಇಷ್ಟು ಬಿಸಿ ವಾತಾವರಣಕ್ಕೆ ಭೂಮಿ ಮೇಲಿನ ಯಾವುದೇ ವಸ್ತು ಹೋದರೂ ಧೂಳ್ ಧೂಳ್.
ಇಸ್ರೋ ಉಪಗ್ರಹ ಏನು ಮಾಡುತ್ತೆ?
ಸೂರ್ಯನ ಸುತ್ತ ಇಷ್ಟು ತಾಪಮಾನ ಇದ್ರೂ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಸೂರ್ಯನ ಕಡೆಗೆ ನೌಕೆ ಕಳುಸಿದೆ. ಮನುಷ್ಯರ ಹಿತಕ್ಕೆ ಸೂರ್ಯನ ಬಗ್ಗೆ ಹೆಚ್ಚು ಅಧ್ಯಯನ ನಡೆಸುವುದು ಅತ್ಯಗತ್ಯ. ಹೀಗಾಗಿ ಭಾರತ ಸೂರ್ಯನ ಕಡೆ ನೌಕೆ ಕಳುಹಿಸಿದೆ. ಪ್ರಮುಖವಾಗಿ ಭೂಮಿಗೆ ಪದೇ ಪದೆ ತೊಂದರೆ ನೀಡುವ ಸೂರ್ಯನ ಜ್ವಾಲೆಗಳು, ಸೂರ್ಯನ ತಾಪಮಾನವು ಸೇರಿದಂತೆ ಇನ್ನೂ ಹಲವು ಅಧ್ಯಯನಕ್ಕೆ ಭಾರತ ಸಿದ್ಧರೆ ನಡೆಸಿದೆ.

ಸೂರ್ಯನ ಇಂಚಿಂಚು ಭಾಗದ ಅಧ್ಯಯನ
ಆದಿತ್ಯ-ಎಲ್1 ಉಪಗ್ರಹ 7 ಉಪಕರಣಗಳನ್ನ ಹೊತ್ತೊಯ್ದಿದೆ. ಪೇ ಲೋಡ್ ಉಪಗ್ರಹದಲ್ಲಿ ಸಾಕಷ್ಟು ಪ್ರಮುಖ ಸಂಶೋಧನೆ ಸಾಧ್ಯವಿದೆ. ವಿಸಿಬಲ್ ಎಮಿಷನ್ ಲೈನ್ ಕರೋನಾಗ್ರಾಫ್ (VELC). ಇದು ಸೂರ್ಯನ ಕರೋನಾ ಕಿರಣಗಳಲ್ಲಿನ ಬದಲಾವಣೆ ಅಧ್ಯಯನ ಮಾಡುತ್ತದೆ. ಸೌರ ಅಲ್ಟ್ರಾ-ವೈಲೆಟ್ ಇಮೇಜಿಂಗ್ ಟೆಲಿಸ್ಕೋಪ್ (SUIT) ಸೂರ್ಯನ ದ್ಯುತಿಗೋಳ ಹಾಗೂ ವರ್ಣಗೋಳದ ಚಿತ್ರಗಳನ್ನು ತೆಗೆದುಕೊಳ್ಳುತ್ತದೆ.
ಹಾಗೇ ಸೋಲಾರ್ ಲೋ-ಎನರ್ಜಿ ಎಕ್ಸ್-ರೇ ಸ್ಪೆಕ್ಟ್ರೋಮೀಟರ್ (ಸೋಲೆಕ್ಸ್) ಮತ್ತು ಹೈ-ಎನರ್ಜಿ ಎಲ್-1 ಆರ್ಬಿಟಿಂಗ್ ಸೂರ್ಯನ ಎಕ್ಸ್- ಕಿರಣ ಅಧ್ಯಯನ ಮಾಡಲಿದೆ. ಇದಲ್ಲದೆ ಮ್ಯಾಗ್ನೆಟೋಮೀಟರ್ (MAG) ಎಲ್-1 ಕಕ್ಷೆಯ ಸುತ್ತ ಇರುವ ಅಂತರಗ್ರಹ ಕಾಂತಕ್ಷೇತ್ರವನ್ನು ಅಳೆಯುತ್ತದೆ. ಉಷ್ಣತೆಯ ಸಮಸ್ಯೆಗಳು, ಪ್ರಭಾವಲಯದಿಂದ ಹೊರಹೊಮ್ಮುವ ಜ್ವಾಲೆಗಳ, ಜ್ವಾಲೆಗೂ ಮೊದಲಿನ ಸ್ಥಿತಿ, ಜ್ವಾಲೆ ಚಟುವಟಿಕೆಗಳು, ಜ್ವಾಲೆ ಗುಣಲಕ್ಷಣ, ಬಾಹ್ಯಾಕಾಶದ ಹವಾಮಾನ ಸೇರಿ ಇನ್ನೂ ಅನೇಕ ವಿಚಾರದ ಬಗ್ಗೆ ಇಸ್ರೋ ನೌಕೆ ಅಧ್ಯಯನ ನಡೆಸಲಿದೆ.
ಸೂರ್ಯನ ಅಧ್ಯಯನ ಏಕೆ ಅತ್ಯಗತ್ಯ ಎಂದರೆ, ಭವಿಷ್ಯದಲ್ಲಿ ಮನಷ್ಯರು ಎಲ್ಲಾ ವಿಪತ್ತು ಎದುರಿಸಲು ಈ ಅಧ್ಯಯನ ಸಹಾಯ ಮಾಡುತ್ತದೆ. ಸೌರ ಬಿರುಗಾಳಿ ಹೇಗೆ ಉಂಟಾಗುತ್ತವೆ ಅನ್ನೋದರ ಬಗ್ಗೆ ಅಧ್ಯಯನ ಇದರಿಂದ ಸಾಧ್ಯ. ಮುಂದೆ ಭೀಕರ ಸೌರಮಾರುತ ಭೂಮಿಗೆ ಅಪ್ಪಳಿಸುವ ಮುನ್ನ ಮುನ್ನೆಚ್ಚರಿಕೆ ಕೈಗೊಳ್ಳಲು ಸಹಾಯಕ. ಹಾಗೇ ಸೂರ್ಯನ ತಾಪದ ಮುನ್ನೆಚ್ಚರಿಕೆ ಸಿಕ್ಕರೆ ಮುಂದೆ ಭೂಮಿ ಮೇಲೆ ಜೀವರಾಶಿ ರಕ್ಷಣೆ ಮಾಡಬಹುದು. ಅಲ್ಲದೆ ಸೌರ ಜ್ವಾಲೆಗಳಿಂದ ಉಂಟಾಗುವ ಪರಿಣಾಮಗಳ ಬಗ್ಗೆ ತಿಳಿಯಬಹುದು.

ಸ್ಥಳೀಯ ವಾತಾವರಣಕ್ಕೆ ಸಹಾಯಕ
ಜಾಗತಿಕವಾಗಿ ಮಾತ್ರವಲ್ಲ ನಮ್ಮ ಸ್ಥಳಿಯ ಹವಾಮಾನ ಪರಿಸ್ಥಿತಿ ಮೇಲೆ ಪರಿಣಾಮ ಬೀರುವ ವಿವಿಧ ವಿದ್ಯಮಾನ ಅರ್ಥಮಾಡಿಕೊಳ್ಳಲು ಇಸ್ರೋ ಯೋಜನೆ ಸಹಾಯಕ. ಇದೀಗ ನಮ್ಮ ಯೋಜನೆಯಿಂದ ದೇಶದ ಹವಾಮಾನ ಪರಿಸ್ಥಿತಿಯನ್ನು ಮೊದಲೇ ಅರಿಯಬಹುದು. ಈ ಮಧ್ಯೆ ಸೌರ ಮೇಲ್ಮೈ ಅಧ್ಯಯನ ಮಾಡುವುದು ಭವಿಷ್ಯದಲ್ಲಿ ಹೊಸ ಆಯಾಮ ನೀಡುತ್ತೆ. ನಮ್ಮ ಅಕ್ಕಪಕ್ಕದ ಗ್ರಹಗಳ ಅಧ್ಯಯನಕ್ಕೂ ಸಹಾಯಕವಾಗಲಿದೆ. ಹಾಗೆ ಮುಂದೆ ಮನಷ್ಯ ಬೇರೆ ಗ್ರಹದಲ್ಲಿ ವಾಸ ಮಾಡಲು ಆರಂಭಿಸಿದರೆ ಇಂತಹ ಯೋಜನೆ ಅತ್ಯಗತ್ಯ.
ಹವಾಮಾನ ಬದಲಾವಣೆ ಕಂಟಕ
ಎಲ್ಲಕ್ಕಿಂತ ಹೆಚ್ಚಾಗಿ ಆಧುನಿಕ ಕಾಲಘಟ್ಟದಲ್ಲಿ ಮನುಷ್ಯರಿಗೆ ಹವಾಮಾನ ಬದಲಾವಣೆಯ ಕಂಟಕ ಕಾಡುತ್ತಿದೆ. ಹೀಗಾಗಿ ಹವಾಮಾನ ಬದಲಾವಣೆಯ ಅಧ್ಯಯನದಲ್ಲಿ ಸೌರ ವಿಕಿರಣದ ದೀರ್ಘಕಾಲೀನ ವ್ಯತ್ಯಾಸದ ಮೇಲಿನ ಸಂಶೋಧನೆಯೂ ಮುಖ್ಯವಾಗುತ್ತದೆ. ಆದಿತ್ಯ-ಎಲ್1 ಮೂಲಕ ಈ ಎಲ್ಲ ಅಂಶಗಳ ಕುರಿತು ಮೂಲ ಜ್ಞಾನ ಪಡೆದುಕೊಳ್ಳಲಾಗುವುದು. ಉಪಗ್ರಹವು ಸೂರ್ಯನ ವಿದ್ಯಮಾನಗಳ ಬಗ್ಗೆ ನಿಖರ ಮಾಹಿತಿ ಸಂಗ್ರಹಿಸಲಿದೆ ಅಂತಿದ್ದಾರೆ ವಿಜ್ಞಾನಿಗಳು.
ಒಟ್ನಲ್ಲಿ ಚಂದ್ರಯಾನ ರೀತಿಯೇ ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋಗೆ ಸೂರ್ಯನ ಅಧ್ಯಯನ ದೊಡ್ಡ ತಿರುವು ನೀಡಲಿದೆ. ಇಡೀ ಜಗತ್ತು ಭಾರತದ ಮತ್ತೊಂದು ಸಾಧನೆಗಾಗಿ ಕಾದು ಕೂತಿದೆ. ಹೀಗಾಗಿ ಭಾರತ ತನ್ನ ಗುರಿ ತಲುಪಿದ ದಿನ ಮತ್ತೊಂದು ಇತಿಹಾಸವೇ ನಿರ್ಮಾಣ ಆಗಲಿದೆ. ಘಟಾನುಘಟಿ ದೇಶಗಳ ಪಟ್ಟಿಗೆ ಭಾರತ ಕೂಡ ಸೇರಲಿದ್ದು, ಮುಂದೆ ಬಾಹ್ಯಾಕಾಶ ಜಗತ್ತಿನಲ್ಲಿ ಭಾರತವೇ ಬಾಸ್ ಆಗಿ ಮೆರೆಯಲಿದೆ.












Click it and Unblock the Notifications