ಕನ್ನಡ ಬಾವುಟವಿಡಿದರೂ ಯೂಟ್ಯೂಬರ್ ಧ್ರುವ ರಾಠಿ ಮೇಲೆ ತಣ್ಣಗಾಗದ ಕನ್ನಡಿಗರ ಕೋಪ, ಕಾರಣವೇನು
ಕನ್ನಡ ಬಾವುಟವಿಡಿದರೂ ಯೂಟ್ಯೂಬರ್ ಹಾಗೂ ರಾಜಕೀಯ ವಿಶ್ಲೇಷಕ ಧ್ರುವ ರಾಠಿ ಮೇಲೆ ಕನ್ನಡಿಗರ ಕೋಪ ತಣ್ಣಗಾಗಿಲ್ಲ. ಈಚೆಗೆ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿನ ಲೋಪ ಹಾಗೂ ಭಾರತೀಯ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿ ದೇಶದಾದ್ಯಂತ ಕಾಕ್ರೋಚ್ ಜನತಾ ಪಾರ್ಟಿಯು ಪ್ರತಿಭಟನೆಗೆ ಕರೆ ನೀಡಿದೆ.
ಈ ಪ್ರತಿಭಟನೆಯ ಭಾಗವಾಗಿ ಯೂಟ್ಯೂಬರ್ ಧ್ರುವ ರಾಠಿ ಸಹ ಭಾಗವಹಿಸಿದ್ದಾರೆ. ಅಲ್ಲದೆ, ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯನ್ನು ವಿರೋಧಿಸಿ ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲೂ ಧ್ರುವ ರಾಠಿ ಭಾಗವಹಿಸಿದ್ದರು, ಈ ವಿಷಯದಲ್ಲಿ ಬಂಧನಕ್ಕೂ ಒಳಗಾಗಿ ಬಿಡುಗಡೆಯಾಗಿದ್ದಾರೆ. ಬೆಂಗಳೂರಿಗೆ ಬಂದಾಗ ಅವರು ಕನ್ನಡದ ಬಾವುಟವಿಡಿದಿದ್ದರು. ಆದರೆ, ಇವರ ಮೇಲೆ ಕನ್ನಡಿಗರಿಗೆ ಇರುವ ಕೋಪ ಇನ್ನೂ ತಣಿಸಿಲ್ಲ, ಬೆಂಗಳೂರಿಗೆ ಬಂದಾಗಲಾದರೂ ಈ ವಿಚಾರದಲ್ಲಿ ಕ್ಷಮೆ ಕೇಳಬಹುದು ಎನ್ನುವ ಕನ್ನಡಿಗರ ನಿರೀಕ್ಷೆ ಹುಸಿಯಾಗಿದೆ.

ದೇಶದಾದ್ಯಂತ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ ಲೋಪ ನಡೆದಿದೆ ಹಾಗೂ ಈ ಪ್ರಕ್ರಿಯೆ ಕೈಬಿಡಬೇಕು ಎಂದು ಕಾಕ್ರೋಚ್ ಜನತಾ ಪಾರ್ಟಿಯ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಧ್ರುವ ರಾಠಿ ಅವರು ನಾನಗೂ ಸಂಬಂಧವಿಲ್ಲ ಎಂದೂ ಹೇಳಿಕೊಂಡಿದ್ದಾರೆ. ಈ ನಡುವೆ ಕನ್ನಡಿಗರು ಧ್ರುವ ರಾಠಿ ಅವರನ್ನು ಕ್ಷಮಿಸುವುದಕ್ಕೆ ಸಿದ್ಧರಿಲ್ಲ. ಧ್ರುವ ರಾಠಿ ಬೆಂಗಳೂರಿಗೆ ಬಂದಾಗಲಾದರೂ ಈ ವಿಷಯದಲ್ಲಿ ಕ್ಷಮೆ ಕೇಳಿರಬೇಕು ಎನ್ನುವ ವಿಚಾರವು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಕನ್ನಡಿಗರನ್ನು ಉಗ್ರರಿಗೆ ಹೋಲಿಸಿದ ಧ್ರುವ ರಾಠಿ!
ಧ್ರುವ ರಾಠಿ ತಮ್ಮ ವಿಡಿಯೋವೊಂದರಲ್ಲಿ ಕನ್ನಡಿಗರನ್ನು ಉಗ್ರರಿಗೆ ಹೋಲಿಸಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಕನ್ನಡಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಧ್ರುವ್ ರಾಠೆ ಅವರು ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಅಪ್ಲೋಡ್ ಮಾಡಲಾದ ವಿಡಿಯೋದಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಉಳಿವಿಗಾಗಿ ಕರ್ನಾಟಕದಲ್ಲಿ ನಡೆಯುವ ಹೋರಾಟವನ್ನು ತಪ್ಪಾಗಿ ಅರ್ಥೈಸಿದ್ದರು. ಅಲ್ಲದೆ ಕನ್ನಡಿಗರ ಹೋರಾಟವನ್ನು ಉಗ್ರವಾದ (Extremism / Terrorism)ಗೆ ಹೋಲಿಕೆ ಮಾಡಿದ್ದರು ಎನ್ನುವ ವಿಚಾರವು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಈಚೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯನ್ನು ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಧ್ರುವ ರಾಠಿ ಸಹ ಭಾಗವಹಿಸಿದ್ದರು. ಈ ಪ್ರತಿಭಟನೆಯ ವೇದಿಕೆಯಲ್ಲಿ ಕನ್ನಡದ ಬಾವುಟ ರಾರಾಜಿಸಿತ್ತು.
ಧ್ರುವ ರಾಠಿ ನಡೆಗೆ ಕನ್ನಡಿಗರಿಂದ ವಿರೋಧ
ಇನ್ನು ಧ್ರುವ ರಾಠಿ ನಡೆಗೆ ಕನ್ನಡಿಗರಿಂದ ವಿರೋಧ ವ್ಯಕ್ತವಾಗಿದೆ. ಕಿರಣ್ ಕೋಡ್ಲಾಡಿ ಎನ್ನುವವರು, ಕನ್ನಡಪರ ದನಿಗಳನ್ನು ಹೀಯಾಳಿಸಿ, ಉಗ್ರಗಾಮಿಗಳಿಗೆ ಹೋಲಿಸಿದ್ದ ವ್ಯಕ್ತಿಯನ್ನು ಪ್ರಶ್ನಿಸಿದ್ದಕ್ಕೆ ಬೇಸರಗೊಂಡ ಕೆಲವು ಎಡಪರರು, ಈಗ ಕನ್ನಡಪರ ಹೋರಾಟಗಾರರಿಗೆ ಯಾವಾಗ ಏನು ಮಾತಾಡಬೇಕು, ಏನು ಮಾತಾಡಬಾರದು, ಕನ್ನಡ ಹೋರಾಟ ಹೇಗಿರಬೇಕು ಎಂದು ಪಾಠ ಮಾಡುತ್ತಿರುವುದನ್ನು ನೋಡಿದರೆ ನಗು ಬರುತ್ತದೆ!
ಇವರ ಪ್ರಕಾರ ಎಡ-ಬಲ ರಾಜಕಾರಣದಲ್ಲಿರುವವರು ತಾಮ್ರವಾದರೂ ಸರಿ, ಕಬ್ಬಿಣವಾದರೂ ಸರಿ. ರಾಜಕೀಯದಲ್ಲಿ ಅದೆಲ್ಲ ಅನಿವಾರ್ಯ ಎಂಬ ಸಮರ್ಥನೆ! ಆದರೆ ಕನ್ನಡಪರ ಹೋರಾಟಗಾರರು ಮಾತ್ರ ಉಸಿರಾಡುವಾಗಲೂ 24 ಕ್ಯಾರೆಟ್ ಚಿನ್ನದಂತೆ ಪರಿಶುದ್ಧರಾಗಿರಬೇಕು. ಎಡಪರ ಸರ್ಕಾರಗಳನ್ನು, ಅವುಗಳ ನೀತಿಗಳನ್ನು ಪ್ರಶ್ನಿಸಬಾರದು; ಕನ್ನಡಪರ ಧೋರಣೆ ಯಾವಾಗಲೂ ಎಡಪರ ಚಿಂತನೆಯ ಪರಿಧಿಯೊಳಗೇ ಇರಬೇಕು. ಆ ಗೆರೆ ದಾಟಿ ಮಾತನಾಡಿದರೆ ಅದು ಬಾಲಿಶ, ಬಲಪಂಥೀಯ ಧೋರಣೆ ಎಂಬ ಹಣೆಪಟ್ಟಿ ಸಿದ್ಧ!
ತಮ್ಮ ಚಿಂತನೆಯ ಆಚೆಗೂ ಒಂದು ವಾದವಿರಬಹುದು, ಕಾಲ ಬದಲಾದಂತೆ ಹೊಸ ಸಾಮಾಜಿಕ ಸಮಸ್ಯೆಗಳು ಹುಟ್ಟಿಕೊಳ್ಳಬಹುದು, ಅವುಗಳಿಗೆ ಎಡವೂ ಅಲ್ಲದ, ಬಲವೂ ಅಲ್ಲದ ಸ್ವತಂತ್ರ ನಿಲುವೊಂದು ಇರಬಹುದು ಎಂಬ ಸಾಧ್ಯತೆಯನ್ನೇ ಇವರು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಏಕೆಂದರೆ, ತಮ್ಮ ಚಿಂತನೆಯೇ ಬೌದ್ಧಿಕವಾಗಿ ಶ್ರೇಷ್ಠ, ಅದಕ್ಕಿಂತ ಮೀರಿದ ಮನುಷ್ಯ ತತ್ವ ಇಲ್ಲ, ಉಳಿದದ್ದೆಲ್ಲ ಅದಕ್ಕಿಂತ ಕೆಳಮಟ್ಟದ್ದು ಎಂಬ ಅಹಂಕಾರ ಎಲ್ಲೋ ಒಂದು ಕಡೆ ಮೌನವಾಗಿ ಇವರ ಮನದ ಗದ್ದುಗೆಯಲ್ಲಿ ಕೂತಿರುತ್ತದೆ!.
ಕನ್ನಡಪರ ಹೋರಾಟ ಯಾರದ್ದೋ ಎಡ-ಬಲದ ಚಿಂತನೆಗೆ ಹೊಂದಿಕೊಂಡು ನಡೆಯಬೇಕಾದ ಹೋರಾಟವಲ್ಲ. ಕನ್ನಡ-ಕನ್ನಡಿಗ-ಕರ್ನಾಟಕದ ಹಿತಾಸಕ್ತಿಯೇ ಅದರ ಕೇಂದ್ರ. ಆ ಹಿತಾಸಕ್ತಿಗೆ ವಿರುದ್ಧವಾಗಿ ಯಾರೇ ನಿಂತರೂ ಪ್ರಶ್ನಿಸುವ ಸ್ವಾತಂತ್ರ್ಯ ಕನ್ನಡಪರರಿಗೆ ಇರಬೇಕು, ಇರುತ್ತದೆ. ತಮಿಳು, ಮಲಯಾಳಂ ಸಿನಿಮಾಗಳನ್ನು ವಿಮರ್ಶಿಸುತ್ತಾ ಪುಟಗಟ್ಟಲೆ ಬರೆಯುವ ಬದಲಿಗೆ ಒಮ್ಮೆ ಕನ್ನಡಪರ ದನಿಗಳು ಬರೆಯುವ, ಮಾತಾಡುವ ಸಮಸ್ಯೆಗಳನ್ನು ಪೂರ್ವಾಗ್ರಹವಿಲ್ಲದೆ ಅರ್ಥೈಸಿಕೊಳ್ಳಲು ಪ್ರಯತ್ನಿಸಿ. ನಿಮಗೂ ಅರ್ಥವಾದೀತು. ಒಂದಂತೂ ಸತ್ಯ.. ಕನ್ನಡ ಹೋರಾಟ ಹೇಗಿರಬೇಕು ಎಂದು ಭಾಷಣ ಕೊಡುವ ಕಾಲ ಮುಗಿದುಹೋಗಿದೆ ಎಂದಿದ್ದಾರೆ.
ಅನುವಾದಕರಾದ ಸುನೀಲ್ ಜೆ ಅವರು, ಕನ್ನಡಿಗರು ಎಂದರೆ ಒಂದು ಜನಾಂಗ. ಯಾವುದೇ ಜನಾಂಗ ತನ್ನ ಅಸ್ತಿತ್ವಕ್ಕಾಗಿ ನಡೆಸುವ ಹೋರಾಟಕ್ಕೆ ಅಯೋಗ್ಯನೊಬ್ಬ ಭಯೋತ್ಪಾದನೆಯ ಹಣೆಪಟ್ಟಿ ಹಚ್ಚುತ್ತಾನೆಂದರೆ, ಆತ ತಮ್ಮ ನೆಲಕ್ಕೆ ಕಾಲಿಡಬಾರದು ಎನ್ನುವುದು, ಆತನನ್ನು ರಾಜಕೀಯ ನೆಲೆಗಟ್ಟಿನಲ್ಲಿ ತಿರಸ್ಕರಿಸುವುದು ತಪ್ಪೇ? ಎಂದು ಪ್ರಶ್ನಿಸಿದ್ದಾರೆ.
ಧ್ರುವ ರಾಠಿ ತನ್ನ ಒಂದು ವಿಡಿಯೋದಲ್ಲಿ ಕನ್ನಡಿಗರನ್ನು ಹೆಚ್ಚು ಕಡಿಮೆ ಭಯೋತ್ಪಾದಕರಿಗೆ ಹೋಲಿಸಿ ಮಾತನಾಡಿದ್ದ. ಕನ್ನಡ ಮಾತನಾಡದ ಪರಭಾಷಿಕರನ್ನು ಕರ್ನಾಟಕದಲ್ಲಿ ಹೊಡೆಯಲಾಗುತ್ತದೆ ಎಂದು ಇವನು ಹೇಳಿದ್ದ. ಸಾಕಷ್ಟು ಕನ್ನಡಿಗರು ಅವನಿಗೆ ಕಮೆಂಟ್ ಮಾಡಿ ಅಂತ ಒಂದು ಘಟನೆ ತೋರಿಸಿ ಎಂದು ಹೇಳಿದ್ದರು. ಅವನದು Hit & Run ಕೇಸ್. ಯಾವುದಕ್ಕೂ ಉತ್ತರಿಸಲಿಲ್ಲ. ತಪ್ಪಾಗಿದೆ ಎಂದು ಕ್ಷಮೆಯನ್ನೂ ಕೇಳಲಿಲ್ಲ.
ಇವತ್ತು ಅದೇ ಧ್ರುವ ರಾಠಿ ಕನ್ನಡ ನೆಲಕ್ಕೆ ಬಂದು ಭಾಷಣ ಮಾಡುತ್ತಿದ್ದಾರೆ. SIR ವಿಷಯದಲ್ಲಿ ನಿರ್ಣಾಯಕ ಹೋರಾಟ ನಡೆಸಿದ್ದು ಕರ್ನಾಟಕ, ಕನ್ನಡ ಜನತೆ. ಆದರೆ ನಮ್ಮವರು ಒಂದು ರೀತಿಯಲ್ಲಿ ಆತ್ಮಾಭಿಮಾನ ಬಿಟ್ಟು ಇಂಥ ಕುತ್ಸಿತ ಮನಸಿನ ಹಿಂದಿವಾಲಗಳನ್ನು ತಲೆಮೇಲೆ ಹೊತ್ತು ಮೆರೆಸುತ್ತಾರೆ. ಕನಿಷ್ಠ ಒಂದು ಕ್ಷಮೆ ಕೇಳಿಸಿ ಬೆಂಗಳೂರಿಗೆ ಕರೆಸಬಹುದಿತ್ತಲ್ಲವೇ? ಅಷ್ಟು ಸ್ವಾಭಿಮಾನವೂ ನಮ್ಮವರಿಗೆ ಇಲ್ಲವಾಯಿತೇ? ಎಂದು ಕನ್ನಡಿಗ ದೇವರಾಜ್ ಅವರು ಪ್ರಶ್ನೆ ಮಾಡಿದ್ದಾರೆ.


Click it and Unblock the Notifications
