ಮೂಗಿನ ಕೆಳಗೆ ಮಾಸ್ಕ್ ಇದ್ದರೆ ವಿಮಾನದಿಂದಲೇ ಇಳಿಸುತ್ತೇವೆ!: ಡಿಜಿಸಿಎ ಎಚ್ಚರಿಕೆ
ನವದೆಹಲಿ, ಮಾರ್ಚ್ 13: ವಿಮಾನಗಳಲ್ಲಿ ಕೋವಿಡ್-19 ಸುರಕ್ಷತಾ ನಿಯಂತ್ರಣ ನಿಯಮಗಳನ್ನು ಪಾಲಿಸದ ಪ್ರಯಾಣಿಕರಿಗೆ ನಾಗರಿಕ ವಿಮಾನಯಾನ ಪ್ರಧಾನ ನಿರ್ದೇಶನಾಲಯದ (ಡಿಜಿಸಿಎ) ಕಠಿಣ ಎಚ್ಚರಿಕೆ ನೀಡಿದೆ. ವಿಮಾನದೊಳಗೆ ಸಮರ್ಪಕ ರೀತಿಯಲ್ಲಿ ಮಾಸ್ಕ್ ಧರಿಸದವರು ಮತ್ತು ಕೋವಿಡ್ ನಿಯಮಾವಳಿಗಳನ್ನು ಸರಿಯಾಗಿ ಪಾಲಿಸದವರನ್ನು ವಿಮಾನದಿಂದ ಕೆಳಗೆ ಇಳಿಸಲಾಗುತ್ತದೆ ಎಂದು ಅದು ತಿಳಿಸಿದೆ.
ಎಚ್ಚರಿಕೆ ನೀಡಿದ ನಂತರವೂ ಶಿಷ್ಟಾಚಾರಗಳನ್ನು ಉಲ್ಲಂಘನೆ ಮಾಡಿದರೆ ಆ ಪ್ರಯಾಣಿಕನನ್ನು 'ಅಶಿಸ್ತಿನ ಪ್ರಯಾಣಿಕ' ಎಂದು ಪರಿಗಣಿಸಲಾಗುವುದು ಎಂದು ಸಹ ಡಿಜಿಸಿಎ ಶನಿವಾರ ಬಿಡುಗಡೆ ಮಾಡಿರುವ ಹೊಸ ಸುತ್ತೋಲೆಯಲ್ಲಿ ಹೇಳಿದೆ.
'ವಿಮಾನ ಪ್ರಯಾಣ ಮಾಡುತ್ತಿರುವ ಕೆಲವು ಪ್ರಯಾಣಿಕರು 'ಕೋವಿಡ್ 19 ಶಿಷ್ಟಾಚಾರ'ಗಳನ್ನು ಸರಿಯಾಗಿ ಪಾಲಿಸದೆ ಇರುವುದು ನಮ್ಮ ಗಮನಕ್ಕೆ ಬಂದಿದೆ. ಮಾಸ್ಕ್ ಅನ್ನು ಸರಿಯಾಗಿ ಧರಿಸಬೇಕು. ಮೂಗಿನ ಕೆಳಗೆ ಅಲ್ಲ. ವಿಮಾನ ನಿಲ್ದಾಣಕ್ಕೆ ಪ್ರವೇಶಿಸಿದಾಗಿನಿಂದ ವಿಮಾನದಿಂದ ಇಳಿದು ಹೊರ ಹೋಗುವವರೆಗೂ ಈ ಶಿಷ್ಟಾಚಾರಗಳನ್ನು ಪಾಲಿಸಬೇಕು' ಎಂದು ಡಿಜಿಸಿಎ ತಿಳಿಸಿದೆ.

ಮೂಗಿನ ಕೆಳಗೆ ಮಾಸ್ಕ್
ವಿಮಾನ ನಿಲ್ದಾಣದ ಆವರಣದಲ್ಲಿ ಸೂಕ್ತ ರೀತಿಯಲ್ಲಿ ಮಾಸ್ಕ್ ಧರಿಸದೆ ಇರುವ ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳದ ಘಟನೆಗಳು ನಡೆಯುತ್ತಿವೆ. ಅದೇ ರೀತಿ ವಿಮಾನ ಏರುವ ಸಂದರ್ಭದಲ್ಲಿ ಕೂಡ ಅನೇಕ ಪ್ರಯಾಣಿಕರು ಸರಿಯಾದ ರೀತಿಯಲ್ಲಿ ಮಾಸ್ಕ್ ಧರಿಸಿರುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದೆ.

ನಿಯಮ ಸರಿಯಾಗಿ ಪಾಲಿಸಿ
ಈ ಹಿನ್ನೆಲೆಯಲ್ಲಿ ನಿರ್ದೇಶನಾಲಯವು ಎಲ್ಲ ಪ್ರಯಾಣಿಕರಿಗೂ ಸರಿಯಾದ ರೀತಿಯಲ್ಲಿ ಮಾಸ್ಕ್ ಧರಿಸುವಂತೆ ಮತ್ತು ವಿಮಾನ ಪ್ರಯಾಣದ ಎಲ್ಲ ಸಮಯದಲ್ಲಿಯೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಆದೇಶಿಸಿದೆ. ಕೆಲವು ವಿನಾಯಿತಿಯ ಸನ್ನಿವೇಶಗಳನ್ನು ಹೊರತುಪಡಿಸಿ ಯಾವ ಕಾರಣಕ್ಕೂ ಮೂಗಿಗಿಂತ ಕೆಳಗೆ ಮಾಸ್ಕ್ ಇರುವಂತಿಲ್ಲ ಎಂದು ಕಟ್ಟುನಿಟ್ಟಾಗಿ ತಿಳಿಸಿದೆ.

ಒಳಗೇ ಬಿಡುವಂತಿಲ್ಲ
ವಿಮಾನ ನಿಲ್ದಾಣದ ಪ್ರವೇಶ ಭಾಗದಲ್ಲಿ ನಿಯೋಜಿತರಾಗಿರುವ ಸಿಐಎಸ್‌ಎಫ್ ಅಥವಾ ಇತರೆ ಪೊಲೀಸ್ ಸಿಬ್ಬಂದಿ, ಸರಿಯಾದ ರೀತಿಯಲ್ಲಿ ಮಾಸ್ಕ್ ಧರಿಸದ ಯಾರೊಬ್ಬರನ್ನೂ ವಿಮಾನ ನಿಲ್ದಾಣದ ಒಳಗೆ ಬಿಡದಂತೆ ನೋಡಿಕೊಳ್ಳಲಿದ್ದಾರೆ. ಪ್ರಯಾಣಿಕರು ಕೋವಿಡ್ ನಿಯಮಗಳನ್ನು ಸರಿಯಾಗಿ ಪಾಲಿಸುವಂತೆ ನೋಡಿಕೊಳ್ಳುವ ಹೊಣೆಯನ್ನು ವಿಮಾನ ನಿಲ್ದಾಣ ನಿರ್ದೇಶಕರು ಅಥವಾ ಟರ್ಮಿನಲ್ ವ್ಯವಸ್ಥಾಪಕರಿಗೆ ನೀಡಲಾಗಿದೆ.

ಮಾತು ಕೇಳದಿದ್ದರೆ ಪ್ರಯಾಣವೇ ರದ್ದು
ಕೋವಿಡ್-19 ಶಿಷ್ಟಾಚಾರಗಳನ್ನು ಉಲ್ಲಂಘಿಸುವುದು ಕಂಡುಬಂದರೆ ಆ ಪ್ರಯಾಣಿಕರಿಗೆ ಭದ್ರತಾ ಸಿಬ್ಬಂದಿ ಸೂಕ್ತ ಎಚ್ಚರಿಕೆ ನೀಡಬೇಕು. ಅಗತ್ಯಬಿದ್ದರೆ ಅವರನ್ನು ಕಾನೂನಿನ ಕ್ರಮಕ್ಕೆ ಒಳಪಡಿಸಬೇಕಾಗಬಹುದು. ವಿಮಾನದೊಳಗೆ ಕೂರುವ ಪ್ರಯಾಣಿಕರಲ್ಲಿಯಾರಾದರೂ ಸರಿಯಾಗಿ ಮಾಸ್ಕ್ ಧರಿಸದೆ ಹೋದರೆ ಅವರಿಗೆ ಎಚ್ಚರಿಕೆ ನೀಡಬೇಕು. ಆಗಲೂ ಅವರು ಅದನ್ನು ಮುಂದುವರಿಸಿದರೆ ವಿಮಾನ ಹೊರಡುವ ಮುನ್ನ ಕೆಳಕ್ಕೆ ಇಳಿಸಲು ಕೂಡ ಅವಕಾಶವಿದೆ.












Click it and Unblock the Notifications