ದೇವೇಗೌಡ್ರು ಪ್ರಧಾನಿಯಾಗಿದ್ದು ಆಕಸ್ಮಿಕ, ಮುಂದೆ ಎಂದೂ ಹೀಗಾಗಬಾರದು: ಶರದ್ ಪವಾರ್
ಮುಂಬಯಿ, ಅ 24: ಮುಂಬರುವ ಲೋಕಸಭಾ ಚುನಾವಣೆಗೆ ನರೇಂದ್ರ ಮೋದಿ ವಿರುದ್ದ ಹೋರಾಡಲು, ಒಂದು ಕಡೆಯಿಂದ ಪ್ರಾದೇಶಿಕ ಮತ್ತು ಇತರ ಪಕ್ಷಗಳನ್ನು ಒಗ್ಗೂಡಿಸಿಕೊಂಡು ಬರುವ ಪ್ರಯತ್ನ ನಡೆಯುತ್ತಿದ್ದರೆ, ಇನ್ನೊಂದು ಕಡೆಯಿಂದ ಅದು ಸಡಿಲವಾಗುತ್ತಾ ಬರುತ್ತಿದೆ.
ಪ್ರಮುಖವಾಗಿ, ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷ ಮತ್ತು ಬಿಎಸ್ಪಿ ಇನ್ನೂ ಮೈತ್ರಿಯ ಬಗ್ಗೆ ಗೊಂದಲದಲ್ಲಿ ಇರುವಾಗ, ಮತ್ತೊಂದು ಪ್ರಮುಖ ಪ್ರಾದೇಶಿಕ ಪಕ್ಷವಾದ ಎನ್ಸಿಪಿ, ಮೋದಿ ವಿರುದ್ದ ಏಕತೆ ಮಂತ್ರ ಜಪಿಸುವುದು ಕಷ್ಟ ಎನ್ನುವ ಮಾತನ್ನು ಶರದ್ ಪವಾರ್ ನುಡಿದಿದ್ದಾರೆ.
2019ರ ಚುನಾವಣೆಯ ಬಳಿಕ ಮೋದಿ ಪ್ರಧಾನಿಯಾಗಿ ಇರುವುದಿಲ್ಲ ಎನ್ನುವ ಸ್ಪಷ್ಟತೆಯನ್ನು ನಾನು ಹೊಂದಿದ್ದೇನೆ, ಆದರೆ ಬಿಜಿಪಿಯೇತರ ಪಕ್ಷಗಳನ್ನು ಚುನಾವಣೆಯ ಮುನ್ನ ಒಂದೇ ವೇದಿಕೆಯಡಿ ತರುವುದು ಕಷ್ಟದ ಮಾತು ಎಂದು ಶರದ್ ಪವಾರ್ ಹೇಳಿದ್ದಾರೆ.

ಎಚ್ ಡಿ ದೇವೇಗೌಡ ಮತ್ತು ಐ ಕೆ ಗುಜ್ರಾಲ್ ಪ್ರಧಾನಿಯಾಗಿದ್ದು ಒಂದು ಆಕಸ್ಮಿಕ. ಇಂತಹ ಆಕಸ್ಮಿಕಗಳು ಮುಂದಿನ ದಿನಗಳಲ್ಲಿ ನಡೆಯದಂತೆ ನೋಡಿಕೊಳ್ಳಬೇಕಾಗಿದೆ, ನಡೆದರೂ ಅದರಲ್ಲಿ ನಾನು ಇರುವುದಿಲ್ಲ ಎಂದು ಶರದ್ ಪವಾರ್, ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ರಾಜಕೀಯದಲ್ಲಿ ಯಾವುದೂ ಶಾಸ್ವತವಲ್ಲ ಎನ್ನುವ ಮಾತನ್ನು ಹಿಂದಿನಿಂದಲೂ ಹೇಳಿಕೊಂಡು ಬರುತ್ತಿದ್ದೇನೆ. 2004ರಲ್ಲಿ ಮನಮೋಹನ್ ಸಿಂಗ್ ಪ್ರಧಾನಿಯಾಗುತ್ತಾರೆಂದು ಯಾರು ಊಹಿಸಿದ್ದರು ಎಂದು ಪವಾರ್ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ಹಲವು ಪಕ್ಷಗಳ ಜೊತೆ ಮೈತ್ರಿ ಸಂಬಂಧ ನಾನು ಮಾತುಕತೆ ನಡೆಸುತ್ತಿದ್ದರೂ, ಚುನಾವಣೆಯ ಮುನ್ನ ಯಾವುದೂ ಕೈಗೂಡುವ ಸಾಧ್ಯತೆ ಕಮ್ಮಿ ಎನ್ನುವ ಮಾತನ್ನು ಶರದ್ ಪವಾರ್ ಹೇಳಿದ್ದಾರೆ.












Click it and Unblock the Notifications