Theft at Flight: 110 ದಿನಗಳಲ್ಲಿ 200 ವಿಮಾನ ಏರಿದವನು ಕದ್ದದ್ದು ಎಷ್ಟು ಬೆಲೆಯ ಚಿನ್ನಾಭರಣ ಗೊತ್ತೇ?
ದೆಹಲಿ ಮೇ 14: ವಿಮಾನ ನಿಲ್ದಾಣಗಳ ಪ್ರಯಾಣಿಕರನ್ನು ಟಾರ್ಗೇಟ್ ಮಾಡಿಕೊಂಡಿದ್ದ ಕಳ್ಳನೊಬ್ಬ ಪೊಲೀಸರ ಅತಿಥಿಯಾಗಿದ್ದಾನೆ. ಈತ ವಿಮಾನ ನಿಲ್ದಾಣದಲ್ಲಿ ಕಳ್ಳತನ ಮಾಡುವುದಲ್ಲದೆ 110 ದಿನಗಳಲ್ಲಿ 200 ವಿಮಾನಗಳಲ್ಲಿ ಪ್ರಯಾಣ ಮಾಡಿದ್ದಾನೆ.
2023ರಲ್ಲಿ ಹಲವಾರು ಪ್ರಯಾಣಿಕರಿಂದ ಬೆಲೆಬಾಳುವ ವಸ್ತುಗಳನ್ನು ಕದ್ದಿದ್ದ ಈ ಖದೀಮ ಸದ್ಯ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಅಷ್ಟಕ್ಕೂ ಈ ಕಳ್ಳನ್ನನ್ನು ಪೊಲೀಸರು ಎಡಮುರಿ ಕಟ್ಟಿದ್ದು ಹೇಗೆ ಅನ್ನೋದೆ ಇನ್‌ಟ್ರಸ್ಟ್ರಿಂಗ್ ವಿಚಾರ.

ಪ್ರಯಾಣಿಕರಿಂದ ಬೆಲೆಬಾಳುವ ವಸ್ತುಗಳನ್ನು ಕದ್ದು ಪೊಲೀಸರ ಕೈಗೆ ಸಿಕ್ಕಿಬಿದ್ದ ಆರೋಪಿ ಹೆಸರು ರಾಜೇಶ್ ಕಪೂರ್. ದೆಹಲಿ ವಿಮಾನ ನಿಲ್ದಾಣದಲ್ಲಿ ಮಾತ್ರವಲ್ಲದೆ ರೈಲಿನಲ್ಲೂ ತನ್ನ ಕೈಚಳಕ ತೋರಿಸುತ್ತದ್ದ ಖತರ್ನಾಕ್ ಕಳ್ಳ ರಾಜೇಶ್ 100 ದಿನಗಳ ಕಾಲ ದೇಶದಲ್ಲಿ ಸಾವಿರಾರು ಕಿಲೋಮೀಟರ್ ವಿಮಾನ ಪ್ರಯಾಣ ಮಾಡಿದ್ದಾನೆ. ಪೊಲೀಸರಿಗೆ ಅನುಮಾನ ಬಾರದಂತೆ ಈತ ಪ್ರಯಾಣ ಮಾಡಿದ್ದಾನೆ.
27 ಲಕ್ಷ ಮೌಲ್ಯದ ಚಿನ್ನಾಭರಣ ವಸ್ತು ವಿಮಾನದಲ್ಲಿ ಕಳ್ಳತನ
ಕಳೆದ ತಿಂಗಳು ಹೈದರಾಬಾದ್‌ನಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ತಮ್ಮ ಬ್ಯಾಗ್‌ನಿಂದ 7 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳು ಕಳುವು ಮಾಡಲಾಗಿದೆ ಎಂದು ದೆಹಲಿ ಪೊಲೀಸರಿಗೆ ದೂರನ್ನು ನೀಡಿದ್ದರು.
ಅಲ್ಲದೆ ಅಮೆರಿಕದ ವ್ಯಕ್ತಿಯೊಬ್ಬರು ತಮ್ಮ ಕ್ಯಾಬಿನ್ ಬ್ಯಾಗ್‌ನಿಂದ 20 ಲಕ್ಷ ಮೌಲ್ಯದ ವಸ್ತುಗಳನ್ನು ಕಳವು ಮಾಡಲಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ಈ ಎರಡು ದೂರುಗಳ ಆಧಾರದ ಮೇಲೆ ದೆಹಲಿ ಪೊಲೀಸರು ಕಳ್ಳನನ್ನು ಹಿಡಿಯಲು ಬಲೆ ಬೀಸಿದ್ದರು.

ಕಳ್ಳನನ್ನು ಹಿಡಿಯಲು ಕಾರ್ಯಚರಣೆ ಭಾಗವಾಗಿ ಪೊಲೀಸರು ವಿಮಾನ ನಿಲ್ದಾಣದಲ್ಲಿ ಹಲವಾರು ಗಂಟೆಗಳ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಿದರು. ಆಗ ಅನುಮಾನಾಸ್ಪದ ವ್ಯಕ್ತಿಯೊಬ್ಬ ಓಡಾಡುತ್ತಿರುವುದು ಕಂಡು ಬಂದಿದೆ. ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ಮಾಡುತ್ತಿದ್ದಂತೆ ಪೊಲೀಸರಿಗೆ ಅನುಮಾನ ಬಂದಿದ್ದು ರಾಜೇಶ್ ಕಪೂರ್ ಎಂಬ ವ್ಯಕ್ತಿಯ ಮೇಲೆ.
ಈ ವ್ಯಕ್ತಿ ಪ್ರಯಾಣ ಮಾಡಿದ್ದ ದೆಹಲಿ, ಹೈದರಾಬಾದ್ ಮತ್ತು ಅಮೃತಸರ ವಿಮಾನ ನಿಲ್ದಾಣಗಳಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಿದಾಗ ಪೊಲೀಸರು ಕಳ್ಳನ ಕೈಚಳಕ ಕಂಡು ಶಾಕ್ ಆಗಿದ್ದಾರೆ. ಬಳಿಕ ದೆಹಲಿಯ ಪಹರ್‌ಗಂಜ್‌ನಲ್ಲಿ ಆರೋಪಿ ರಾಜೇಶ್ ಕಪೂರ್ ಎಂಬಾತನನ್ನು ಬಂಧಿಸಸಿದ್ದಾರೆ.
ವಿಮಾನದಲ್ಲಿ ಕಳ್ಳತನ ಮಾಡಿದ್ದು ಹೇಗೆ?
ಆರೋಪಿಯು ದೇಶದ ಅತ್ಯಂತ ಹೆಚ್ಚು ಸುರಕ್ಷಿತ ಪ್ರದೇಶಗಳಲ್ಲಿ ಒಂದಾದ ದೆಹಲಿ ವಿಮಾನ ನಿಲ್ದಾಣದಲ್ಲಿ ಒಂದು ವರ್ಷ ಕಳ್ಳತನ ಮಾಡಿದ್ದಾನೆ. ಜೊತೆಗೆ ತಪ್ಪಿಸಿಕೊಳ್ಳುವಲ್ಲಿಯೂ ಆತ ಯಶಸ್ವಿಯಾಗಿದ್ದಾನೆ. ಹಾಗಾದರೆ ಆತ ಕಳ್ಳತನ ಹೇಗೆ ಮಾಡುತ್ತಿದ್ದ? ಹೇಗೆ ತಪ್ಪಿಸಿಕೊಳ್ಳುತ್ತಿದ್ದ ಎಂದು ಪೊಲೀಸರು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಆರೋಪಿ ರಾಜೇಶ್ ಕಪೂರ್ ಸಂಪರ್ಕ ವಿಮಾನಗಳನ್ನು ತೆಗೆದುಕೊಂಡ ಪ್ರಯಾಣಿಕರನ್ನು ಕಳ್ಳತನಕ್ಕೆ ಗುರಿಯಾಗಿಸಿಕೊಳ್ಳುತ್ತಿದ್ದನು. ಉದಾಹರಣೆಗೆ, ಏಪ್ರಿಲ್‌ನಲ್ಲಿ ಹೈದರಾಬಾದ್‌ನಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ಮಹಿಳೆ ದೆಹಲಿಯ ಐಜಿಐ ವಿಮಾನ ನಿಲ್ದಾಣದಿಂದ ಯುಎಸ್‌ಗೆ ಸಂಪರ್ಕ ಕಲ್ಪಿಸುವ ಏರ್ ಇಂಡಿಯಾ ವಿಮಾನವನ್ನು ಹತ್ತಬೇಕಾಗಿತ್ತು.
ಅದೇ ರೀತಿ ಅಮೃತಸರದಿಂದ ಜರ್ಮನಿಯ ಫ್ರಾಂಕ್‌ಫರ್ಟ್‌ಗೆ ಪ್ರಯಾಣಿಸುತ್ತಿದ್ದ ಅಮೇರಿಕಾದ ನಿವಾಸಿ ವರ್ಜಿಂದರ್ಜಿತ್ ಸಿಂಗ್ ಅವರು ದೆಹಲಿಯಿಂದ ಸಂಪರ್ಕ ವಿಮಾನವನ್ನು ಹೊಂದಿದ್ದರು. ಇವರಿಬ್ಬರನ್ನು ಟಾರ್ಗೇಟ್ ಮಾಡಿದ್ದ ರಾಜೇಶ್ ಸಂಚು ರೂಪಿಸಿ ಸಲೀಸಾಗಿ ಚಿನ್ನಭರಣ ಹಾಗೂ ಬೆಲೆ ಬಾಳುವ ವಸ್ತುಗಳನ್ನು ಕದ್ದಿದ್ದಾನೆ.
ವಯಸ್ಸಾದವರೇ ವಿಮಾನ ಕಳ್ಳನ ಟಾರ್ಗೇಟ್
ವಯಸ್ಸಾದವರು ಮತ್ತು ಮಹಿಳಾ ಪ್ರಯಾಣಿಕರನ್ನು ತನ್ನ ಗುರಿಯಾಗಿ ಆಯ್ಕೆ ಮಾಡಿಕೊಂಡಿದ್ದ ರಾಜೇಶ್ ವಿಮಾನ ನಿಲ್ದಾಣದಲ್ಲಿ ಅವರ ನಡವಳಿಕೆಯನ್ನು ಗಮನಿಸುತ್ತಿದ್ದನು. ಅವರನ್ನು ಹಿಂಬಾಲಿಸುತ್ತಿದ್ದನು.
ಬ್ಯಾಗ್‌ನೊಳಗಿನ ಬೆಲೆಬಾಳುವ ವಸ್ತುಗಳ ಬಗ್ಗೆ ಹೆಚ್ಚಿನ ವಿವರಗಳನ್ನು ಪಡೆಯಲು ಲಗೇಜ್ ಡಿಕ್ಲರೇಶನ್ ಸ್ಲಿಪ್‌ನಲ್ಲಿರುವ ಮಾಹಿತಿಯನ್ನು ಮೋಸದಿಂದ ಓದುತ್ತಿದ್ದನು.
ಈ ವ್ಯಕ್ತಿ ಹೆಚ್ಚಾಗಿ ಬೋರ್ಡಿಂಗ್ ಗೇಟ್‌ನಲ್ಲಿ ಪ್ರಯಾಣಿಕರೊಂದಿಗೆ ಸಂವಹನ ನಡೆಸುವುದು ಕಂಡು ಬಂದಿದೆ. ಅದಕ್ಕೂ ಮೊದಲು ಕಳ್ಳ ರಾಜೇಶ್ ಪ್ರಯಾಣಿಕರ ನಡವಳಿಕೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದನು. ಬಳಿಕ ಅವರೊಂದಿಗೆ ಸ್ನೇಹ ಬೆಳೆಸುತ್ತಿದ್ದ ಎಂದು ಎಂದು ದೆಹಲಿ ಪೊಲೀಸ್ ಉಪ ಆಯುಕ್ತ ಉಷಾ ರಂಗರಾಣಿ ಹೇಳಿದ್ದಾರೆ.
ಚಿನ್ನಾಭರಣಗಳು ಇರುವ ಪ್ರಯಾಣಿಕರ ಪಕ್ಕ ಕುಳಿತುಕೊಳ್ಳುತ್ತಿದ್ದ ಕಳ್ಳ
ಆರೋಪಿಯು ತನ್ನ ಸೀಟನ್ನು ಪ್ರಯಾಣಿಕರ ಪಕ್ಕದಲ್ಲಿ ಇರುವಂತೆ ಬದಲಾಯಿಸುವಂತೆ ವಿಮಾನಯಾನ ಸಂಸ್ಥೆಗೆ ಮನವಿ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಕೆಲವೊಮ್ಮೆ ಅವರು ತಮ್ಮ ಸ್ಥಾನವನ್ನು ಬದಲಾಯಿಸಲು ನೆಪದ ಕಾರಣವನ್ನು ನೀಡುತ್ತಿದ್ದನು. ಹೀಗೆ ನೆಪ ಮಾಡಿಕೊಂಡು ಪ್ರಯಾಣಿಕರ ಪಕ್ಕ ಕುಳಿತುಕೊಳ್ಳುತ್ತಿದ್ದನು.
ಆತ ಆಗಾಗ ಕದಿಯುವ ಪ್ರಯಾಣಿಕರ ಬಳಿ ಕುಳಿತುಕೊಂಡು ಓವರ್‌ಹೆಡ್ ವಿಭಾಗದಲ್ಲಿ ಬ್ಯಾಗ್‌ಗಳನ್ನು ಹೊಂದಿಸುವಂತೆ ನಟಿಸಿ, ಇತರ ಪ್ರಯಾಣಿಕರು ವಿಮಾನಕ್ಕೆ ಹತ್ತುವಾಗ ಆಭರಣ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಕದಿಯುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಫೋನ್ ಸಂಖ್ಯೆ ಬದಲಾಯಿಸುತ್ತಿದ್ದ ಖದೀಮ
ಆರೋಪಿಯ ಫೋನ್ ಸಂಖ್ಯೆಯನ್ನು ವಿಮಾನಯಾನ ಸಂಸ್ಥೆಗಳಿಂದ ಪಡೆಯಲಾಗಿದೆ. ಆದರೆ ಆತ ವಂಚಿಸಲು ತನ್ನ ಬುಕ್ಕಿಂಗ್ ಸಮಯದಲ್ಲಿ ನಕಲಿ ಸಂಖ್ಯೆಯನ್ನು ನಮೂದಿಸಿದ್ದಾನೆ ಎಂದು ತಿಳಿದು ಬಂದಿದೆ. ಆತನ ಫೋನ್ ಸಂಖ್ಯೆಯನ್ನು ಬೇರೆಯವರ ಹೆಸರಿನಲ್ಲಿ ನೋಂದಾಯಿಸಲಾಗಿದೆ. ಆರೋಪಿ ಯಾವುದೇ ಪುರಾವೆಗಳನ್ನು ಬಿಟ್ಟಿಲ್ಲ ಎಂದು ತಿಳಿದು ಬಂದಿದೆ.
ಅತಿಥಿ ಗೃಹ, ಮೊಬೈಲ್ ರಿಪೇರಿ ಅಂಗಡಿ ಹೊಂದಿರುವ ಕಳ್ಳ
ರಾಜೇಶ್ ಅವರು ದೆಹಲಿ ಪಹರ್‌ಗಂಜ್‌ನಲ್ಲಿ 'ರಿಕಿ ಡಿಲಕ್ಸ್' ಎಂಬ ಅತಿಥಿ ಗೃಹವನ್ನು ಹೊಂದಿದ್ದಾನೆ. ಇದು ಹೊಸ ದೆಹಲಿ ರೈಲು ನಿಲ್ದಾಣಕ್ಕೆ ಹತ್ತಿರದಲ್ಲಿದೆ. ವ್ಯಕ್ತಿ ಅತಿಥಿ ಗೃಹದ ಮೂರನೇ ಮಹಡಿಯಲ್ಲಿ ವಾಸಿಸುತ್ತಿದ್ದನು.
ಇತರ ಮಹಡಿಗಳು ಗ್ರಾಹಕರಿಗಾಗಿವೆ. ಆರೋಪಿ ಹಣ ವಿನಿಮಯ ವ್ಯವಹಾರವನ್ನು ಹೊಂದಿದ್ದು ದೆಹಲಿಯಲ್ಲಿ ಮೊಬೈಲ್ ರಿಪೇರಿ ಅಂಗಡಿಯನ್ನು ಹೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ದೆಹಲಿ, ಚೆನ್ನೈ, ಹೈದರಾಬಾದ್, ಚಂಡೀಗಢ, ಬೆಂಗಳೂರು, ಮುಂಬೈ ಮತ್ತು ಅಮೃತಸರದಂತಹ ವಿಮಾನ ನಿಲ್ದಾಣಗಳಲ್ಲಿ ಹೆಚ್ಚಿನ ಮಹಿಳಾ ಪ್ರಯಾಣಿಕರ ಬ್ಯಾಗ್‌ಗಳಿಂದ ಬೆಲೆಬಾಳುವ ವಸ್ತುಗಳನ್ನು ಈತ ಕದ್ದಿದ್ದಾನೆ.
ಪೊಲೀಸ್ ವಿಚಾರಣೆ ವೇಳೆ ಪಹರ್‌ಗಂಜ್‌ನಲ್ಲಿರುವ ಆರೋಪಿ ರಾಜೇಶ್ ಮನೆಯಿಂದ ದೊಡ್ಡ ಪ್ರಮಾಣದ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಹಲವಾರು ಸಂದರ್ಭಗಳಲ್ಲಿ ಅವರು ಕದ್ದ ಆಭರಣಗಳನ್ನು ನೆರೆಯ ಕರೋಲ್ ಬಾಗ್‌ನಲ್ಲಿರುವ ಶರದ್ ಜೈನ್ ಎಂಬ ಆಭರಣ ವ್ಯಾಪಾರಿಗೆ ಮಾರಾಟ ಮಾಡಿರುವುದು ಗೊತ್ತಾಗಿದೆ. ವಿಮಾನಗಳನ್ನು ಹತ್ತುತ್ತಿದ್ದ ಈ ಕಳ್ಳನು ರೈಲಿನಲ್ಲಿ ಕೂಡ ಕಳ್ಳತನ ಮಾಡುತ್ತಿದ್ದನೆಂದು ವಿಚಾರವೇಳೆ ತಿಳಿದು ಬಂದಿದೆ. ಸಿಕ್ಕಿಬಿದ್ದ ನಂತರ ಆರೋಪಿ ತನ್ನ ಎಲ್ಲಾ ತಪ್ಪುಗಳನ್ನು ಒಪ್ಪಿಕೊಂಡಿದ್ದಾನೆ.












Click it and Unblock the Notifications