ದೆಹಲಿ ಶ್ರದ್ಧಾ ಹತ್ಯೆ ಪ್ರಕರಣ: ಅರಣ್ಯದಲ್ಲಿ ಸಿಕ್ಕ ಮೂಳೆಗಳು ಶ್ರದ್ಧಾಳದ್ದೆ ಎಂದು ಸಾಬೀತು
ನವದೆಹಲಿ ಡಿಸೆಂಬರ್ 15: ದೇಶವನ್ನೇ ಬೆಚ್ಚಿ ಬೀಳಿಸಿದ ಶ್ರದ್ಧಾ ವಾಕರ್ ಹತ್ಯೆ ಪ್ರಕರಣದಲ್ಲಿ ಬಗೆದಷ್ಟು ಸಾಕ್ಷಿಗಳು ಲಭ್ಯವಾಗುತ್ತಿವೆ. ದೆಹಲಿಯ ಮೆಹ್ರೌಲಿ ಪ್ರದೇಶದಲ್ಲಿ ಮತ್ತು ಗುರುಗ್ರಾಮ್‌ನ ಕಾಡಿನಲ್ಲಿ ಸಿಕ್ಕ ಮೂಳೆಗಳು ಶ್ರದ್ಧಾ ಅವರದ್ದೇ ಎಂದು ಡಿಎನ್‌ಎ ಪರೀಕ್ಷೆಯು ದೃಢಪಡಿಸಿದೆ. ಮೇ ತಿಂಗಳಲ್ಲಿ ಆಕೆಯ ತಂದೆಯಿಂದ ಡಿಎನ್‌ಎ ಮಾದರಿಗಳನ್ನು ಬಳಸಿ ನಡೆಸಿದ ಪರೀಕ್ಷಾ ವರದಿಯು ಒಂದು ತಿಂಗಳ ನಂತರ ಇಂದು ಬಂದಿದೆ.
ಶ್ರದ್ಧಾಳ ಪ್ರಿಯಕರ ಆಫ್ತಾಬ್ ಪೂನಾವಾಲಾನನ್ನು ಕೊಲೆ ಆರೋಪದಲ್ಲಿ ಬಂಧಿಸಲಾಗಿದೆ. ಆತ ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ಫ್ರಿಡ್ಜ್‌ನಲ್ಲಿ ಇಟ್ಟಿದ್ದನು. ನಂತರ 18 ದಿನಗಳ ಕಾಲ ದಕ್ಷಿಣ ದೆಹಲಿಯ ಮೆಹ್ರೌಲಿಯಲ್ಲಿರುವ ಅವರ ಬಾಡಿಗೆ ಫ್ಲಾಟ್‌ನ ಬಳಿ ಕಾಡಿನಲ್ಲಿ ಎಸೆದಿದ್ದನು.
ಹಲವಾರು ತಿಂಗಳಿನಿಂದ ಆಕೆ ಸಂಪರ್ಕಕ್ಕೆ ಸಿಗದ ಕಾರಣ ಆಕೆಯ ತಂದೆ ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ಪ್ರಕರಣ ಬೆಳಕಿಗೆ ಬಂದು ಆಫ್ತಾಬ್ ಪೂನಾವಾಲಾನನ್ನು ಬಂಧಿಸಲಾಗಿದೆ. ಇದುವರೆಗೆ ಪೊಲೀಸರು ಅಫ್ತಾಬ್ ಪೂನ್ವಾಲಾ ಬಳಸಿದ ಕೆಲವು ಚಾಕುಗಳನ್ನು ಪತ್ತೆ ಹಚ್ಚಿದ್ದಾರೆ. ಜೊತೆಗೆ ಆಕೆಯ ದೇಹದ ಭಾಗಗಳನ್ನು ಸಂಗ್ರಹಿಸಿದ್ದಾರೆ. ವಿಚಾರಣೆಯಲ್ಲಿ ಆಫ್ತಾಬ್ ತಪ್ಪೊಪ್ಪಿಕೊಂಡಿದ್ದಾನೆ. ಇದಕ್ಕಾಗಿ ಪೊಲೀಸರು ಅವನಲ್ಲಿ ಸುಳ್ಳು ಪತ್ತೆ ಪರೀಕ್ಷೆಗಳನ್ನು ನಡೆಸಿದರು.

ಅಫ್ತಾಬ್ ಪೂನಾವಾಲಾ ಅವರು ಶ್ರದ್ಧಾ ವಾಕರ್ ಅವರನ್ನು ಮೇ 18 ರಂದು ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ ಅಕ್ಟೋಬರ್‌ನಲ್ಲಿ ಆಕೆಯ ತಂದೆ ದೂರು ನೀಡಿದಾಗ ಅಪರಾಧ ಕ್ರಮೇಣ ಬೆಳಕಿಗೆ ಬಂದಿದೆ.
ಅಫ್ತಾಬ್ ಪೂನಾವಾಲಾ ಅವರೊಂದಿಗಿನ ಅಂತರ-ಧರ್ಮೀಯ (ಹಿಂದೂ-ಮುಸ್ಲಿಂ) ಸಂಬಂಧದ ಬಗ್ಗೆ ಅಸಮಾಧಾನಗೊಂಡ ತಂದೆ ವಿಕಾಸ್ ವಾಕರ್ ಅವರು ಅವಳೊಂದಿಗೆ ಸಂಪರ್ಕದಲ್ಲಿರಲಿಲ್ಲ. ಡೇಟಿಂಗ್ ಅಪ್ಲಿಕೇಶನ್‌ನಲ್ಲಿ ಭೇಟಿಯಾದ ಶ್ರದ್ಧಾ- ಆಫ್ತಾಬ್ ದಂಪತಿಯಂತೆ ಒಂದೇ ಮನೆಯಲ್ಲಿ ವಾಸವಾಗಿದ್ದರು. ಈ ವರ್ಷದ ಮೇ ತಿಂಗಳಲ್ಲಿ ದೆಹಲಿಗೆ ಸ್ಥಳಾಂತರಗೊಳ್ಳುವ ಮೊದಲು ಮುಂಬೈ ಬಳಿಯ ತಮ್ಮ ತವರು ವಸಾಯಿಯಲ್ಲಿ ಕೆಲವು ತಿಂಗಳು ಒಟ್ಟಿಗೆ ವಾಸಿಸುತ್ತಿದ್ದರು. ಆದರೆ ಹಣದ ವಿಚಾರವಾಗಿ ಇವರಿಬ್ಬರ ನಡುವೆ ವಾದಗಳು ಕೇಳಿ ಬರುತ್ತಿದ್ದವು ಎಂದು ತಿಳಿದು ಬಂದಿದೆ.
2020ರಲ್ಲಿ ತನ್ನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಶ್ರದ್ಧಾ ಮಹಾರಾಷ್ಟ್ರ ಪೊಲೀಸರಿಗೆ ದೂರು ನೀಡಿದ್ದಳು. ಆದರೆ ಪೊಲೀಸರು ಅದನ್ನು ನಿರ್ಲಕ್ಷ್ಯ ವಹಿಸಿದ್ದರು ಎಂದು ತಂದೆ ಆರೋಪಿಸಿದ್ದಾರೆ. ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶ್ರದ್ಧಾ ತಂದೆ ನ್ಯಾಯಕ್ಕಾಗಿ ಒತ್ತಾಯಿಸಿದ್ದಾರೆ.












Click it and Unblock the Notifications