2,000 ನೋಟು ಬದಲಾಯಿಸುವ ಆರ್‌ಬಿಐ ನಿರ್ಧಾರ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ ತಿರಸ್ಕರಿಸಿದ ದೆಹಲಿ ಹೈಕೋರ್ಟ್!
ದೆಹಲಿ ಜುಲೈ 3: 2,000 ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ದೆಹಲಿ ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ.
ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸುಬ್ರಮೋನಿಯಂ ಪ್ರಸಾದ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಅರ್ಜಿಯನ್ನು ತಿರಸ್ಕರಿಸಿದೆ. ರಜನೀಶ್ ಭಾಸ್ಕರ್ ಗುಪ್ತಾ ಎಂಬ ವಕೀಲರು ಅರ್ಜಿ ಸಲ್ಲಿಸಿದ್ದು, ಆರ್‌ಬಿಐ ಕಾಯ್ದೆಯಡಿ ನೋಟುಗಳನ್ನು ರದ್ದುಗೊಳಿಸಲು ಆರ್‌ಬಿಐಗೆ ಯಾವುದೇ ಸ್ವತಂತ್ರ ಅಧಿಕಾರವಿಲ್ಲ ಎಂದು ಪ್ರತಿಪಾದಿಸಿದರು.

ನೋಟು ರದ್ದು ಮಾಡುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಮಾತ್ರ ಇದೆ ಎಂದ ಅವರು, ಸರ್ಕಾರ ಅಂತಹ ಯಾವುದೇ ಆದೇಶ ಹೊರಡಿಸಿದೆ ಎಂದು ತೋರಿಸಲು ಯಾವ ದಾಖಲೆ ಇಲ್ಲ ಎಂದು ವಾದಿಸಿದರು. ಯಾವುದೇ ಗುರುತಿನ ಪುರಾವೆಗಳು ಇಲ್ಲದೆ ನೋಟು ಬದಲಾಯಿಸುವ ಆರ್‌ಬಿಐ ನಿರ್ಧಾರವನ್ನು ಪ್ರಶ್ನಿಸಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಅಶ್ವಿನಿ ಉಪಾಧ್ಯಾಯ ಅವರು ಸಲ್ಲಿಸಿದ ಮನವಿಯನ್ನು ಮೇ 29 ರಂದು ಹೈಕೋರ್ಟ್ ತಿರಸ್ಕರಿಸಿತ್ತು.
2,000 ಮುಖ ಬೆಲೆಯ ನೋಟುಗಳನ್ನು ಹಿಂತೆಗೆದುಕೊಳ್ಳುವ ನಿರ್ಧಾರವು ನೀತಿ ವಿಷಯವಾಗಿದ್ದು, ನ್ಯಾಯಾಲಯಗಳು ಮಧ್ಯಪ್ರವೇಶಿಸಬಾರದು ಎಂದು ನ್ಯಾಯಾಲಯವು ಹೇಳಿದೆ. ಆದ್ದರಿಂದ ಸರ್ಕಾರದ ನಿರ್ಧಾರವು ವಿಕೃತ ಅಥವಾ ಅನಿಯಂತ್ರಿತವಾಗಿದೆ ಅಥವಾ ಕಪ್ಪುಹಣ, ಮನಿ ಲಾಂಡರಿಂಗ್, ಲಾಭಕೋರತನವನ್ನು ಉತ್ತೇಜಿಸುತ್ತದೆ ಅಥವಾ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುತ್ತದೆ ಎಂದು ಹೇಳಲಾಗುವುದಿಲ್ಲ ಎಂದು ತೀರ್ಪಿನಲ್ಲಿ ಹೇಳಲಾಗಿದೆ.
ಉಪಾಧ್ಯಾಯ ಅವರು ತಮ್ಮ ಅರ್ಜಿಯೊಂದಿಗೆ ಸುಪ್ರೀಂ ಕೋರ್ಟ್‌ಗೆ ತೆರಳಲು ಮುಂದಾದರು. ಅದು ಪ್ರಸ್ತುತ ಉನ್ನತ ನ್ಯಾಯಾಲಯದ ಮುಂದೆ ಬಾಕಿ ಉಳಿದಿದೆ. ಕಳೆದ ತಿಂಗಳು, ಸುಪ್ರೀಂ ಕೋರ್ಟ್ ಈ ವಿಷಯವನ್ನು ತುರ್ತಾಗಿ ಪಟ್ಟಿ ಮಾಡಲು ನಿರಾಕರಿಸಿತು.
2,000 ಮುಖ ಬೆಲೆಯ ನೋಟು ರದ್ದು
ಆರ್ಥಿಕತೆಯಲ್ಲಿ ಚಲಾವಣೆಯಲ್ಲಿರುವ 2000 ರೂ. ಮುಖಬೆಲೆಯ ನೋಟುಗಳನ್ನು ಹಿಂಪಡೆಯಲು ಆರ್‌ಬಿಐ ಮೇ 19ರಂದು ಆದೇಶ ಹೊರಡಿಸಿದ್ದು, ಮೇ 23ರಿಂದ ಸೆಪ್ಟೆಂಬರ್ 30ರ ಒಳಗೆ 2000 ರೂ. ನೋಟುಗಳನ್ನು ಕಡಿಮೆ ಮುಖಬೆಲೆಯ ಇತರೆ ಕರೆನ್ಸಿಗೆ ವಿನಿಮಯ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದೆ. ಎಲ್ಲಾ ಬ್ಯಾಂಕ್ ಶಾಖೆಗಳಲ್ಲಿ ನೋಟುಗಳ ವಿನಿಮಯ ಆರಂಭವಾಗಲಿದೆ.
''ಸುಗಮ ಮತ್ತು ಅಡಚಣೆರಹಿತವಾಗಿ ವಿನಿಮಯ ಪ್ರಕ್ರಿಯೆ ನಡೆಸಲು ಅಗತ್ಯ ಸಹಕಾರ ತೋರುವಂತೆ ಎಲ್ಲಾಶಾಖೆಗಳಿಗೂ ಸೂಚಿಸಲಾಗಿದೆ'' ಎಂದು ಎಸ್‌ಬಿಐ ತಿಳಿಸಿದೆ. ಸೆ 30, 2023ರವರೆಗೂ ಗಡುವು, ಅಲ್ಲಿಯವರೆಗೂ ಕಾನೂನು ಮಾನ್ಯತೆ ಇದೆ.
ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) 2,000 ರೂ. ಮುಖಬೆಲೆಯ ನೋಟುಗಳನ್ನು ಹಿಂಪಡೆಯಲು ನಿರ್ಧರಿಸಿದ್ದೇ ತಡ, ಜನರಲ್ಲಿಗೊಂದಲ, ಆತಂಕ ಸೃಷ್ಟಿಯಾಗಿದೆ. ತಮ್ಮ ಬಳಿ ಇರುವ ಪಿಂಕ್ ನೋಟುಗಳನ್ನು ಖಾಲಿ ಮಾಡಲು ಜನರು ಮುಗಿಬಿದ್ದಿದ್ದಾರೆ. ಜನರು ವ್ಯಾಪಾರ, ವಹಿವಾಟುಗಳ ಮೂಲಕವೇ ತಮ್ಮ ಬಳಿ ಇರುವ ಪಿಂಕ್ ನೋಟುಗಳನ್ನು ಖಾಲಿ ಮಾಡಲು ಮುಂದಾಗಿದ್ದಾರೆ.












Click it and Unblock the Notifications