ಅನರ್ಹ ಸಂಸದ ರಾಹುಲ್ ಗಾಂಧಿಗೆ ಸಾಮಾನ್ಯ ಪಾಸ್‌ಪೋರ್ಟ್ ಹೊಂದಲು ಅನುಮತಿ, ಆದರೆ...
ಲೋಕಸಭೆ ಸದಸ್ಯ ಸ್ಥಾನದಿಂದ ಅನರ್ಹಗೊಂಡ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸಂಸದರ ಎಲ್ಲ ಸವಲತ್ತುಗಳನ್ನು ಕಳೆದುಕೊಂಡಿದ್ದು, ಇದೇ ವೇಳೆ ತಮ್ಮ ರಾಜತಾಂತ್ರಿಕ ಪಾಸ್‌ಪೋರ್ಟ್ ಅನ್ನು ಸರ್ಕಾರಕ್ಕೆ ಒಪ್ಪಿಸಿದ್ದಾರೆ.
ಇದೀಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮೂರು ವರ್ಷಗಳ ಕಾಲದ ಸಾಮಾನ್ಯ ಪಾಸ್‌ಪೋರ್ಟ್ ಪಡೆಯಲು ದೆಹಲಿ ನ್ಯಾಯಾಲಯ ಶುಕ್ರವಾರ (ಮೇ 26) ಅನುಮತಿ ನೀಡಿದೆ.

ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ಸದಸ್ಯ ಸ್ಥಾನದಿಂದ ಅನರ್ಹತೆಯ ನಂತರ ತಮ್ಮ ರಾಜತಾಂತ್ರಿಕ ಪಾಸ್‌ಪೋರ್ಟ್ ಅನ್ನು ಒಪ್ಪಿಸಿದ ಬಳಿಕ, ರಾಹುಲ್ ಗಾಂಧಿ ಅವರು ಸಾಮಾನ್ಯ ಪಾಸ್‌ಪೋರ್ಟ್ ಪಡೆಯಲು ನಿರಾಕ್ಷೇಪಣಾ ಪ್ರಮಾಣಪತ್ರ (ಎನ್‌ಒಸಿ) ಕ್ಕಾಗಿ ನ್ಯಾಯಾಲಯ ಮೆಟ್ಟಿಲೇರಿದ್ದರು.
"ಈ ವೇಳೆ ನಾನು ನಿಮ್ಮ ಅರ್ಜಿಯನ್ನು ಭಾಗಶಃ ಅನುಮತಿಸುತ್ತಿದ್ದೇನೆ. ಆದರೆ 10 ವರ್ಷಗಳಿಗಲ್ಲ, ಮೂರು ವರ್ಷಗಳಿಗೆ ಅನುಮತಿ ನೀಡುತ್ತೇನೆ," ಎಂದು ನ್ಯಾಯಾಧೀಶರು ರಾಹುಲ್ ಗಾಂಧಿಯವರ ವಕೀಲರಿಗೆ ತಿಳಿಸಿದ್ದಾರೆ.
ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ದೂರು ನೀಡಿರುವ ಹಣ ವರ್ಗಾವಣೆ ಮತ್ತು ಹಣ ದುರುಪಯೋಗವನ್ನು ಒಳಗೊಂಡಿರುವ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಆರೋಪಿಯಾಗಿರುವ ಕಾರಣ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ನ್ಯಾಯಾಲಯದ ಕ್ಲಿಯರೆನ್ಸ್ ಸರ್ಟಿಫಿಕೇಟ್ ಅಗತ್ಯವಿತ್ತು.

ನಿರಪೇಕ್ಷಣಾ ಪ್ರಮಾಣಪತ್ರವನ್ನು ಕೋರಿ ರಾಹುಲ್ ಗಾಂಧಿಯ ಮನವಿಗೆ ಶುಕ್ರವಾರದೊಳಗೆ ಉತ್ತರವನ್ನು ಸಲ್ಲಿಸುವಂತೆ ನ್ಯಾಯಾಲಯವು ಬುಧವಾರದಂದು ಬಿಜೆಪಿಯ ಮಾಜಿ ಸಂಸದ ಸುಬ್ರಮಣಿಯನ್ ಸ್ವಾಮಿಯವರಿಗೆ ತಿಳಿಸಿತ್ತು.
ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ವೈಭವ್ ಮೆಹ್ತಾ ಅವರು ಪ್ರಯಾಣದ ಹಕ್ಕು ಮೂಲಭೂತ ಹಕ್ಕು ಎಂದು ಗಮನ ಸೆಳೆದರು. ಅನುಮತಿ ಪಡೆಯದೆ ಹಲವಾರು ಬಾರಿ ಪ್ರಯಾಣಿಸಿದ ಕಾಂಗ್ರೆಸ್ ನಾಯಕನ ಚಲನೆಗೆ ನ್ಯಾಯಾಲಯ ಯಾವುದೇ ನಿರ್ಬಂಧವನ್ನು ವಿಧಿಸಿಲ್ಲ ಎಂದು ತಿಳಿಸಿದರು.
ಡಿಸೆಂಬರ್ 2015ರಲ್ಲಿ ರಾಹುಲ್ ಗಾಂಧಿಗೆ ಜಾಮೀನು ನೀಡುವಾಗ, ನ್ಯಾಯಾಲಯವು ಅವರ ಪ್ರಯಾಣದ ಮೇಲೆ ಯಾವುದೇ ನಿರ್ಬಂಧಗಳನ್ನು ವಿಧಿಸಿಲ್ಲ ಮತ್ತು ನಿರ್ಬಂಧಗಳನ್ನು ವಿಧಿಸಲು ಕೋರಿದ್ದ ಸುಬ್ರಮಣಿಯನ್ ಸ್ವಾಮಿಯ ಅವರ ಮನವಿಯನ್ನು ತಿರಸ್ಕರಿಸಲಾಗಿತ್ತು ಎಂದು ಮ್ಯಾಜಿಸ್ಟ್ರೇಟ್ ಹೇಳಿದರು.

ಎರಡು ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರ ಉಪನಾಮದ (ಅಡ್ಡ ಹೆಸರು) ಟೀಕೆಗಳ ಮೇಲೆ ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಾಗಿತ್ತು. ನಂತರ ಶಿಕ್ಷೆಗೊಳಗಾದ ರಾಹುಲ್ ಗಾಂಧಿ ಅವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿತ್ತು.
ಸೂರತ್ ನ್ಯಾಯಾಲಯವು ರಾಹುಲ್ ಗಾಂಧಿ ಅವರನ್ನು ದೋಷಿ ಎಂದು ಪರಿಗಣಿಸಿ ಶಿಕ್ಷೆ ವಿಧಿಸಿದ್ದ ಹಿನ್ನೆಲೆಯಲ್ಲಿ ಅವರ ಸಂಸತ್ ಸದಸ್ಯತ್ವ ರದ್ದಾಗಿತ್ತು.
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಇತರರ ವಿರುದ್ಧ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿಯವರ ಖಾಸಗಿ ಕ್ರಿಮಿನಲ್ ದೂರನ್ನು ದಾಖಲಿಸಲಾಗಿದೆ. ಗಾಂಧಿ ಕುಟುಂಬದ ವಿರುದ್ಧ ವಂಚನೆ, ಪಿತೂರಿ ಮತ್ತು ಕ್ರಿಮಿನಲ್ ಉಲ್ಲಂಘನೆಯ ಆರೋಪ ಹೊರಿಸಲಾಗಿದೆ.
ಸದ್ಯ ನಿಷ್ಕ್ರಿಯಗೊಂಡಿರುವ ಆಂಗ್ಲ ದಿನಪತ್ರಿಕೆ ನ್ಯಾಷನಲ್ ಹೆರಾಲ್ಡ್‌ನ ಮಾಲೀಕತ್ವವನ್ನು ಸ್ವಾಧೀನಪಡಿಸಿಕೊಳ್ಳುವಲ್ಲಿ ವಂಚನೆ ಮತ್ತು ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಸುಬ್ರಮಣಿಯನ್ ಸ್ವಾಮಿ ಆರೋಪಿಸಿದ್ದಾರೆ.
ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ 2010ರಲ್ಲಿ ಸಂಘಟಿತವಾದ ಮತ್ತು ನ್ಯಾಷನಲ್ ಹೆರಾಲ್ಡ್‌ನ ಪ್ರಕಾಶಕ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್‌ನ (ಎಜೆಎಲ್) ಸಾಲವನ್ನು ವಹಿಸಿಕೊಂಡ ಕಂಪನಿಯಾದ ಯಂಗ್ ಇಂಡಿಯನ್ ಲಿಮಿಟೆಡ್‌ನ ನಿರ್ದೇಶಕರಾಗಿದ್ದರು.
ಅಷ್ಟೇ ಅಲ್ಲದೆ, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಮತ್ತು ಇತರರು ಕೇವಲ 50 ಲಕ್ಷ ರೂ. ಪಾವತಿಸುವ ಮೂಲಕ ವಂಚನೆ ಮತ್ತು ಹಣವನ್ನು ದುರುಪಯೋಗಪಡಿಸಿಕೊಳ್ಳಲು ಪಿತೂರಿ ನಡೆಸಿದ್ದಾರೆ ಎಂದು ಸುಬ್ರಮಣಿಯನ್ ಸ್ವಾಮಿ ಆರೋಪಿಸಿದ್ದಾರೆ.












Click it and Unblock the Notifications