Delhi Assembly Election 2025: ಎಎಪಿಗೆ ಸಂಕಷ್ಟ, ಕಾಂಗ್ರೆಸ್‌ನಲ್ಲಿ ಹೆಚ್ಚಿದ ಉತ್ಸಾಹ
ನವದೆಹಲಿ, ಜನವರಿ 11: ದೆಹಲಿ ವಿಧಾನಸಭೆ ಚುನಾವಣೆ-2025ರ ವೇಳಾಪಟ್ಟಿ ಪ್ರಕಟವಾಗಿದೆ. ರಾಷ್ಟ್ರ ರಾಜಧಾನಿಯ ಅಧಿಕಾರ ಪಡೆಯಲು ಬಿಜೆಪಿ, ಕಾಂಗ್ರೆಸ್ ತಂತ್ರ ರೂಪಿಸಿವೆ. 70 ಸದಸ್ಯ ಬಲದ ವಿಧಾನಸಭೆಗೆ ಫೆಬ್ರವರಿ 5ರಂದು ಮತದಾನ ನಡೆಯಲಿದ್ದು, ಫೆಬ್ರವರಿ 8ರಂದು ಮತ ಎಣಿಕೆ ನಡೆಯಲಿದೆ. ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 36.
ದೆಹಲಿಯ ಆಡಳಿತ ಸದ್ಯ ಆಮ್ ಆದ್ಮಿ ಪಕ್ಷ ಕೈಯಲ್ಲಿದೆ. 2015, 2020ರಲ್ಲಿ ಗೆದ್ದಿರುವ ಎಎಪಿ ಈ ಬಾರಿ ಸವಾಲು ಎದುರಿಸುತ್ತಿದೆ. ಆಡಳಿತ ವಿರೋಧಿ ಅಲೆ, ಭ್ರಷ್ಟಾಚಾರದ ಪ್ರಕರಣಗಳನ್ನು ಬಳಕೆ ಮಾಡಿಕೊಂಡು ಅಧಿಕಾರ ಪಡೆಯಲು ಬಿಜೆಪಿ ಮತ್ತು ಕಾಂಗ್ರೆಸ್ ಮುಂದಾಗಿವೆ.

2013ರ ಚುನಾವಣೆಯಲ್ಲಿ ಕಾಂಗ್ರೆಸ್ ದೆಹಲಿಯಲ್ಲಿ ಕೆಲವು ಸೀಟು ಪಡೆದಿತ್ತು. ಆದರೆ 2015, 2020ರಲ್ಲಿ ಯಾವುದೇ ಕ್ಷೇತ್ರಗಳಲ್ಲಿ ಗೆದ್ದಿಲ್ಲ. 2024ರ ಲೋಕಸಭೆ ಚುನಾವಣೆಯಲ್ಲಿ ಎಎಪಿ, ಕಾಂಗ್ರೆಸ್ 'ಇಂಡಿಯಾ' ಮೈತ್ರಿಕೂಟದ ಮಿತ್ರಪಕ್ಷಗಳು. ಆದರೆ 2025ರ ಲೋಕಸಭೆ ಚುನಾವಣೆಯನ್ನು ಬೇರೆ-ಬೇರೆಯಾಗಿ ಎದುರಿಸುತ್ತಿವೆ.
15 ವರ್ಷ ದೆಹಲಿ ಆಳಿರುವ ಕಾಂಗ್ರೆಸ್: 1998ರಲ್ಲಿ ದೆಹಲಿಯಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ 15 ವರ್ಷಗಳ ಕಾಲ ರಾಷ್ಟ್ರ ರಾಜಧಾನಿಯನ್ನು ಆಳಿದೆ. ಶೀಲಾ ದೀಕ್ಷಿತ್ ರಾಜ್ಯದ ಪ್ರಭಾವಿ ಮುಖ್ಯಮಂತ್ರಿಯಾಗಿದ್ದರು. ಆದರೆ 2015ರ ಬಳಿಕ ರಾಜ್ಯದಲ್ಲಿ ಪಕ್ಷ ಅಧಿಕಾರ ಕಳೆದುಕೊಂಡಿದೆ. 2020ರ ವಿಧಾನಸಭೆ ಚುನಾವಣೆಯಲ್ಲಿ ಒಂದು ಸೀಟು ಗೆಲ್ಲಲು ಸಹ ಕಾಂಗ್ರೆಸ್ ಪಕ್ಷ ವಿಫಲವಾಗಿತ್ತು.
ಈ ಬಾರಿಯ ಚುನಾವಣೆಯು ಎಎಪಿಯ 10 ವರ್ಷಗಳ ಆಡಳಿತದ ಮೇಲೆ ನಡೆಯಲಿದೆ. ಚುನಾವಣಾ ಕಣದಲ್ಲಿ ಆರೋಪ ಪ್ರತ್ಯಾರೋಪಗಳು ಜೋರಾಗಿವೆ. ಹರ್ಯಾಣ, ಮಹಾರಾಷ್ಟ್ರ ಚುನಾವಣೆಗಳ ಬಳಿಕ ದೆಹಲಿ ವಿಧಾನಸಭೆ ಚುನಾವಣೆಯ ಮೇಲೆ ಕಾಂಗ್ರೆಸ್ ಪಕ್ಷ ಬಹುದೊಡ್ಡ ನಿರೀಕ್ಷೆಯನ್ನು ಹೊಂದಿದೆ.
ಕಾಂಗ್ರೆಸ್ ನಾಯಕಿ, ಪ್ರತಿಷ್ಠಿತ ಕಲ್ಕಾಜಿ ಕ್ಷೇತ್ರದ ಅಭ್ಯರ್ಥಿ ಅಲ್ಕಾ ಲಾಂಬಾ ಮಾತನಾಡಿ, "ಕೇಂದ್ರ ಸರ್ಕಾರ ಮತ್ತು ಎಎಪಿ ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆ ಇದೆ. ದೆಹಲಿಯ ಜನರು 15 ವರ್ಷಗಳ ಕಾಲ ಕಾಂಗ್ರೆಸ್ ನಡೆಸಿದ ಆಡಳಿತವನ್ನು ಹೋಲಿಕೆ ಮಾಡಿ ನೋಡುತ್ತಿದ್ದಾರೆ" ಎಂದರು.
"ಶೀಲಾ ದೀಕ್ಷಿತ್, ಅರವಿಂದ್ ಕೇಜ್ರಿವಾಲ್ ಯಾರ ಆಡಳಿತ ಚೆನ್ನಾಗಿತ್ತು? ಎಂದು ಜನರು ಹೋಲಿಕೆ ಮಾಡುತ್ತಿದ್ದಾರೆ. ಆದ್ದರಿಂದ ಜನರು ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ ನೀಡಲಿದ್ದಾರೆ" ಎಂದು ಎಎನ್‌ಐ ಜೊತೆ ಮಾತನಾಡುವಾಗ ತಿಳಿಸಿದ್ದಾರೆ.
ಈ ಬಾರಿಯ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಲ್ಪ ಸಂಖ್ಯಾತರು, ಒಬಿಸಿ ಮತ್ತು ಎಸ್‌ಟಿ ಮತಗಳ ಮೇಲೆ ಕಣ್ಣಿಟ್ಟಿದೆ. ಅಲ್ಲದೇ ಮಹಿಳೆಯರಿಗೆ ಅನೇಕ ಭರವಸೆಗಳನ್ನು ನೀಡಿ, ಅವರು ಪಕ್ಷವನ್ನು ಬೆಂಬಲಿಸುವಂತೆ ಮಾಡಲು ತಂತ್ರ ರೂಪಿಸಿದೆ. ಜನವರಿ 13ರಂದು ದೆಹಲಿ ಚುನಾವಣೆಗೆ ಲೋಕಸಭೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೊದಲ ಸಮಾವೇಶ ನಡೆಸಲಿದ್ದಾರೆ.
ಕೆಲವು ಕ್ಷೇತ್ರಗಳಲ್ಲಿ ಈ ಹಿಂದೆ ಕಾಂಗ್ರೆಸ್‌ನಲ್ಲಿದ್ದ ನಾಯಕರು ಎಎಪಿ ಸೇರಿದ್ದಾರೆ. ಆದ್ದರಿಂದ ಪಕ್ಷ ಸವಾಲು ಎದುರಿಸುತ್ತಿದೆ. ಚುನಾವಣೆಯಲ್ಲಿ ಬಿಜೆಪಿ, ಎಎಪಿ ಕಾಂಗ್ರೆಸ್ ಪಕ್ಷಕ್ಕೆ ಪ್ರಬಲ ಎದುರಾಳಿಗಳು. ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಣೆ ಮಾಡದೆಯೇ ಕಾಂಗ್ರೆಸ್ ಚುನಾವಣೆಯನ್ನು ಎದುರಿಸಲಿದೆ.












Click it and Unblock the Notifications