ಶಾಲೆಗಳು ಬಂದ್! ಆನ್‌ಲೈನ್ ತರಗತಿ ನಡೆಸಲು ಸೂಚನೆ
ದೆಹಲಿಯಲ್ಲಿ ಗಾಳಿಯ ಗುಣಮಟ್ಟ ತೀವ್ರವಾಗಿ ಕುಸಿತ ಕಂಡಿದ್ದು ಗಾಳಿಯ ಗುಣಮಟ್ಟವನ್ನು ಸುಧಾರಿಸಲು ಸರ್ಕಾರ ಹಲವು ಕ್ರಮಕ್ಕೆ ಮುಂದಾಗಿದೆ. ಕೇಂದ್ರದ ವಾಯು ಗುಣಮಟ್ಟ ಸಮಿತಿಯು ದೆಹಲಿ-ಎನ್‌ಸಿಆರ್‌ಗೆ ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್ (GRAP) ಹಂತ 4 ರ ಅಡಿಯಲ್ಲಿ ಕಠಿಣ ಮಾಲಿನ್ಯ ನಿಯಂತ್ರಣ ಕ್ರಮ ತೆಗೆದುಕೊಳ್ಳುವಂತೆ ಹೇಳಿದೆ. ಸೋಮವಾರದಿಂದ 10 ಮತ್ತು 12 ನೇ ತರಗತಿಯ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಎಲ್ಲಾ ವಿದ್ಯಾರ್ಥಿಗಳಿಗೆ ಆನ್‌ಲೈನ್‌ನಲ್ಲಿ ಕ್ಲಾಸ್ ತೆಗೆದುಕೊಳ್ಳಲು ಸೂಚನೆ ಕೊಟ್ಟಿದೆ.
ದೆಹಲಿಯ ಪರಿಸರ ಸಚಿವ ಗೋಪಾಲ್ ರೈ ಅವರು ಗ್ರಾಫ್ IV ರ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಎಲ್ಲಾ ಇಲಾಖೆಗಳ ಮುಖ್ಯಸ್ಥರೊಂದಿಗೆ ನಾಳೆ ಸಭೆ ನಡೆಸಲಿದ್ದಾರೆ ಎಂದು ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ. ಸದ್ಯ ಭಾರಿ ವಾಹನಗಳು ಮತ್ತು ಟ್ರಕ್‌ಗಳಿಗೆ ದೆಹಲಿಗೆ ಪ್ರವೇಶಿಸದಂತೆ ನಿರ್ಬಂಧ ಹೇರಲಾಗಿದೆ. ಬೃಹತ್ ಕಟ್ಟಡ, ಹೆದ್ದಾರಿಗಳು, ರಸ್ತೆಗಳು, ವಿದ್ಯುತ್ ಮಾರ್ಗಗಳು, ಮೇಲ್ಸೇತುವೆಯಂತಹ ಕಾಮಗಾರಿಗಳನ್ನ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ದೆಹಲಿಯ ಗಾಳಿ ಗುಣಮಟ್ಟ ಭಾನುವಾರ ಸಂಜೆ 441ಕ್ಕೆ ತಲುಪಿದ್ದು ಅಪಾಯದ ಮಟ್ಟವನ್ನು ಮೀರಿತ್ತು, 5 ರಿಂದ 7 ಗಂಟೆ ವೇಳೆಗೆ ಈ ಪ್ರಮಾಣ ಮತ್ತಷ್ಟು ಕುಸಿತ ಕಂಡಿತು. 5 ಗಂಟೆಗೆ 447 ತಲುಪಿದ ಗಾಳಿ ಗುಣಮಟ್ಟ ಸೂಚ್ಯಂಕ 7 ಗಂಟೆ ವೇಳೆಗೆ 457ಕ್ಕೆ ಏರಿಕೆಯಾಗಿತ್ತು ಎಂದು ಎಂದು ದೆಹಲಿ-ಎನ್‌ಸಿಆರ್ ಗಾಳಿಯ ಗುಣಮಟ್ಟದ ಕೇಂದ್ರದ ಸಮಿತಿಯು ವಾಯು ಗುಣಮಟ್ಟ ನಿರ್ವಹಣೆಯ ಆಯೋಗ (CAQM) ಮಾಹಿತಿ ನೀಡಿದೆ.
ಅಪಾಯದ ಮಟ್ಟ ಮೀರಿದ ಮಾಲಿನ್ಯ
ದೆಹಲಿ-ಎನ್‌ಸಿಆರ್ ನಗರದಲ್ಲಿ ಗಾಳಿಯ ಗುಣಮಟ್ಟವನ್ನು ನಾಲ್ಕು ಹಂತಗಳನ್ನಾಗಿ ವಿಂಗಡಿಸಲಾಗಿದೆ. ಎಕ್ಯೂಐ (Air quality index) 201 ರಿಂದ 300 ವರೆಗೆ ಇದ್ದರೆ ಕಳಪೆ ಎಂದು 301 ರಿಂದ 400 ಎಕ್ಯೂಐ ಇದ್ದರೆ ಅತ್ಯಂತ ಕಳಪೆ ಎಂದು ಹೇಳಿದ್ದು 401 ರಿಂದ 450 ಎಕ್ಯೂಐ ಇದ್ದರೆ ಅಪಾಯಕಾರಿ (ತೀವ್ರ) ಮತ್ತು 450 ಕ್ಕಿಂತ ಹೆಚ್ಚಾದರೆ ಅತ್ಯಂತ ಅಪಾಯಕಾರಿ (ತೀವ್ರ+) ಎಂದು ಗುರುತಿಸಲಾಗುತ್ತದೆ.
ಹೊಸ ಆದೇಶದ ಪ್ರಕಾರ ಅಗತ್ಯ ವಸ್ತುಗಳನ್ನು ಸಾಗಿಸುವ ಅಥವಾ ಶುದ್ಧ ಇಂಧನವನ್ನು ಬಳಸುವುದನ್ನು ಹೊರತುಪಡಿಸಿದ ಯಾವುದೇ ಟ್ರಕ್‌ಗಳಿಗೆ ದೆಹಲಿ ನಗರದ ಒಳಗೆ ಪ್ರವೇಶವನ್ನು ನಿಷೇಧಿಸಲಾಗಿದೆ. ಟ್ರಕ್ ಮಾತ್ರವಲ್ಲದೆ ಎಲೆಕ್ಟ್ರಿಕ್ ವಾಹನಗಳು, ಸಿಎನ್‌ಜಿ ಮತ್ತು ಬಿಎಸ್-VI ಡೀಸೆಲ್ ವಾಹನಗಳನ್ನು ಹೊರತುಪಡಿಸಿ ದೆಹಲಿಯ ಹೊರಗೆ ನೋಂದಾಯಿಸಲಾದ ಅನಿವಾರ್ಯವಲ್ಲದ ಲಘು ವಾಣಿಜ್ಯ ವಾಹನಗಳಿಗೂ ಸಹ ನಗರದೊಳಗೆ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.
ಎನ್‌ಸಿಆರ್ ಪ್ರದೇಶದಲ್ಲಿ ಕಚೇರಿಗಳು 50 ಪ್ರತಿಶತ ಸಿಬ್ಬಂದಿಯೊಂದಿಗೆ ಕೆಲಸ ಮಾಡುತ್ತಿವೆ. ಉಳಿದ ಸಿಬ್ಬಂದಿಗೆ ಮನೆಯಿಂದ ಕೆಲಸ ಮಾಡಲು ಅವಕಾಶ ನೀಡುವಂತೆ ಸರ್ಕಾರ ಸೂಚನೆ ಕೊಟ್ಟಿದೆ. ಕೇಂದ್ರ ಸರ್ಕಾರಿ ನೌಕರರಿಗೂ ಮನೆಯಿಂದ ಕೆಲಸ ಮಾಡುವ ಅವಕಾಶ ಕೊಡಬಹುದು ಎಂದು ಸಮತಿ ಹೇಳಿದೆ.












Click it and Unblock the Notifications