ಒಡಿಶಾ ರೈಲು ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 289ಕ್ಕೆ ಏರಿಕೆ
ಒಡಿಶಾ: ಜೂನ್ 2ರಂದು ಒಡಿಶಾದ ಬಾಲಾಸೋರ್ ಜಿಲ್ಲೆಯಲ್ಲಿ ಸಂಭವಿಸಿದ್ದ 3 ರೈಲುಗಳ ಅಪಘಾತ ಇನ್ನೂ ಕಣ್ಣಿಗೆ ಕಟ್ಟಿದಂತೆ ಇದೆ. ಜಗತ್ತೇ ಈ ಘಟನೆ ನೋಡಿ ಕಂಬನಿ ಮಿಡಿದು ಅಯ್ಯೋ ಎಂದಿತ್ತು. ಆದರೆ ಭೀಕರ ರೈಲು ಅಪಘಾತದಲ್ಲಿ ಗಾಯಗೊಂಡ ಪ್ರಯಾಣಿಕರ ಪರಿಸ್ಥಿತಿ ಹೇಗಿದೆ ಎಂದರೆ, ಗಾಯಾಳುಗಳು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಭಾರತದ ಇತಿಹಾಸದಲ್ಲೇ ಅತ್ಯಂತ ಭೀಕರ ರೈಲು ದುರಂತ ಎಂದು ಕರೆಸಿಕೊಂಡ ಬಾಲಸೋರ್ ಆಕ್ಸಿಡೆಂಟ್ ಇದೀಗ ಮತ್ತೆ ಸುದ್ದಿಯಾಗಿದೆ. ರೈಲು ಅಪಘಾತದಲ್ಲಿ ಗಾಯಗೊಂಡಿದ್ದ ಹಲವರ ಸ್ಥಿತಿ ಚಿಂತಾಜನಕವಾಗಿದೆ. ಹೀಗಾಗಿ ಮತ್ತೊಬ್ಬರ ಪ್ರಾಣಪಕ್ಷಿ ಹಾರಿಹೋಗಿದ್ದು, ಒಡಿಶಾ ರೈಲು ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 289ಕ್ಕೆ ಏರಿಕೆಯಾಗಿದೆ. ಕಟಕ್‌ನ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೀತಿದ್ದ ಗಾಯಾಳು ಬಿಜಯ್ ಪಾಸ್ವಾನ್ ಎಂಬಾತ ಮೃತಪಟ್ಟಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಬಿಜಯ್ ಮೃತಪಟ್ಟಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.

1000ಕ್ಕೂ ಹೆಚ್ಚು ಜನರಿಗೆ ಗಾಯ
ಘಟನೆ ನಡೆದು ಬರೋಬ್ಬರಿ 10 ದಿನ ಕಳೆದರೂ ಸಾವಿನ ಸಂಖ್ಯೆ ನಿಂತಿಲ್ಲ. ಅದ್ರಲ್ಲೂ ಈ ಪೈಕಿ ಚಿಕಿತ್ಸೆ ಪಡೆಯುತ್ತಿರುವ ಜನರ ಸಂಖ್ಯೆ 1000ಕ್ಕೂ ಹೆಚ್ಚಿದೆ ಎನ್ನಲಾಗಿದೆ. ಹಲವರು ಈಗಾಗಲೇ ಡಿಸ್ಚಾರ್ಜ್ ಆಗಿ ಮನೆ ಸೇರಿದ್ದಾರೆ. ಆದರೆ ತೀವ್ರವಾಗಿ ಗಾಯಗೊಂಡವರ ಸ್ಥಿತಿ ಕ್ಷಣಕ್ಷಣಕ್ಕೂ ಬಿಗಡಾಯಿಸ್ತಿದೆ. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಬಗ್ಗೆ ವೈದ್ಯರು ಹೆಚ್ಚಿನ ಮುತುವರ್ಜಿ ವಹಿಸಿ ಚಿಕಿತ್ಸೆ ನೀಡುತ್ತಿದ್ದಾರೆ. ಆದರೂ ಚಿಕಿತ್ಸೆ ಫಲಕಾರಿ ಆಗದೆ ಮತ್ತೋರ್ವ ಪ್ರಯಾಣಿಕ ಮೃತಪಟ್ಟಿದ್ದಾರೆ. ಅದೆಷ್ಟೋ ಪ್ರಯಾಣಿಕರ ಶವಗಳನ್ನು ಗುರುತು ಹಿಡಿಯುವುದೇ ಕಷ್ಟವಾಗಿತ್ತು ಎಂದರೆ ಅಪಘಾತದ ತೀವ್ರತೆ ನೀವೇ ಊಹಿಸಿ.
ಶವ ಇಟ್ಟಿದ್ದ ಶಾಲೆ ಉಡೀಸ್!
ಒಡಿಶಾದ ಬಹನಾಗಾ ಬಜಾರ್ ನಿಲ್ದಾಣದ ಸಮೀಪ ಮೂರು ರೈಲುಗಳ ನಡುವೆ ಈ ಅಪಘಾತ ಸಂಭವಿಸಿತ್ತು. ಕೋರೊಮಂಡಲ್ ಎಕ್ಸ್‌ಪ್ರೆಸ್, ಬೆಂಗಳೂರು ಮತ್ತು ಹೌರಾ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ಹಾಗೂ ಸರಕು ರೈಲುಗಳ ಮಧ್ಯೆ ಅಪಘಾತ ಸಂಭವಿಸಿತ್ತು. ಈ ನಡುವೆ ಮೊನ್ನೆ ಮೊನ್ನೆ ತಾನೆ ರೈಲು ಅಪಘಾತದಲ್ಲಿ ಮೃತಪಟ್ಟವರ ಶವ ಇಟ್ಟಿದ್ದ ಬಹನಾಗದಲ್ಲಿ ಹೈಸ್ಕೂಲ್ ಕಟ್ಟಡ ಒಡೆದು ಹಾಕುವ ಕೆಲಸ ಶುರುವಾಗಿದೆ. ಇನ್ನು ರೈಲು ದುರಂತದ ನಂತರ ಶಾಲೆಯನ್ನು ತಾತ್ಕಾಲಿಕ ಶವಾಗಾರವಾಗಿ ಪರಿವರ್ತನೆ ಮಾಡಿದ್ದಕ್ಕೆ ವಿದ್ಯಾರ್ಥಿಗಳು, ಪೋಷಕರು ಆತಂಕ ವ್ಯಕ್ತಪಡಿಸಿದ್ದರು.

ಹೊಸ ಶಾಲಾ ಕಟ್ಟಡ ನಿರ್ಮಾಣ
ಶಾಲಾ ವ್ಯವಸ್ಥಾಪಕ ಸಮಿತಿ ಸದಸ್ಯರು ಹಾಗೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಶಾಲೆ ಕಟ್ಟಡವನ್ನು ನೆಲಸಮಗೊಳಿಸುವ ಕಾರ್ಯ ಕೈಗೊಳ್ಳಲಾಯಿತು. ಅಲ್ದೆ 65 ವರ್ಷ ಹಳೆಯದಾದ ಈ ಶಾಲಾ ಕಟ್ಟಡದಲ್ಲಿ ಮಕ್ಕಳು ಓದಲು ಭಯದಲ್ಲೇ ತೆರಳಬೇಕಿತ್ತು. ಜೂನ್ 16ರಿಂದ ಶಾಲೆಗೆ ಬರಲು ಮಕ್ಕಳು ಭಯಪಡುವಂತಾಗಿತ್ತು. ಕಟ್ಟಡದಲ್ಲಿ ಇಷ್ಟೊಂದು ಮೃತದೇಹ ಇಟ್ಟಿದ್ದು ಮರೆಯುವುದು ಕಷ್ಟವಾಗಲಿದೆ ಎಂಬ ಮಾತು ಕೂಡ ಕೇಳಿಬಂದಿತ್ತು. ಹೀಗಾಗಿಯೇ ಹೊಸ ಕಟ್ಟಡವನ್ನ ಅದೇ ಜಾಗದಲ್ಲಿ ಕಟ್ಟಲು ಒಡಿಶಾ ಸರ್ಕಾರ ಮುಂದಾಗಿದೆ. ಈ ಎಲ್ಲಾ ಬೆಳವಣಿಗೆ ನಡುವೆ ಮೃತರ ಸಂಖ್ಯೆ ಕೂಡ ಏರಿಕೆಯಾಗಿದೆ.
10 ಲಕ್ಷ ಪರಿಹಾರ ಘೋಷಣೆ
ಈ ಮೂಲಕ ಒಡಿಶಾ ರೈಲು ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 289ಕ್ಕೆ ಏರಿಕೆಯಾಗಿದೆ. ಹಾಗೇ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ 10 ಲಕ್ಷ ಮತ್ತು ಗಂಭೀರವಾಗಿ ಗಾಯಗೊಂಡ ಪ್ರಯಾಣಿಕರಿಗೆ 2 ಲಕ್ಷ ರೂಪಾಯಿ ಸೇರಿದಂತೆ ಸಣ್ಣಪುಟ್ಟ ಗಾಯಗಳೊಂದಿಗೆ ನರಳುತ್ತಿರುವ ಇತರ ಪ್ರಯಾಣಿಕರಿಗೆ 50 ಸಾವಿರ ರೂಪಾಯಿ ಪರಿಹಾರವನ್ನ ಈಗಾಗಲೇ ರೈಲ್ವೆ ಇಲಾಖೆ ಘೋಷಿಸಿದೆ. ಹಾಗೇ ಚಿಕಿತ್ಸೆ ವೆಚ್ಚವನ್ನು ಸರ್ಕಾರವೇ ಭರಿಸಿ, ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸುತ್ತಿದೆ. ಇಷ್ಟೆಲ್ಲಾ ನೋವಿನ ನಡುವೆಯೇ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುತ್ತಿರುವುದು ದುರಂತವೇ ಸರಿ.












Click it and Unblock the Notifications