ದಾವೂದ್ ಇಬ್ರಾಹಿಂ ಆಪ್ತ ಎಂದು ಕರೆ ಮಾಡಿ ರಾಮ ಮಂದಿರ ಸ್ಫೋಟಿಸುವ ಬೆದರಿಕೆ ಹಾಕಿದ್ದ ಯುವಕನ ಬಂಧನ
ಅಯೋಧ್ಯೆ ರಾಮ ಮಂದಿರವನ್ನು ಸ್ಫೋಟಿಸುವುದಾಗಿ ಪೊಲೀಸರಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದ 21 ವರ್ಷದ ಯುವಕನನ್ನು ಬಿಹಾರ ಪೊಲೀಸರು ಬಂಧಿಸಿದ್ದಾರೆ. ತಾನು ದಾವೂದ್ ಇಬ್ರಾಹಿಂ ಆಪ್ತ ಎಂದು ಕರೆ ಮಾಡಿದ್ದ ಇಂತೆಖಾಬ್ ಆಲಂ ದೇವಸ್ಥಾನ ಸ್ಫೋಟಿಸುವ ಬೆದರಿಕೆ ಹಾಕಿದ್ದ ಎಂದು ವರದಿಯಾಗಿದೆ.
ಕರೆ ಮಾಡಿದ ಯುವಕನನ್ನು ಇಂತೆಖಾಬ್ ಆಲಂ ಎಂದು ಗುರುತಿಸಲಾಗಿದೆ ಎಂದು ಅರಾರಿಯಾದ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕುಮಾರ್ ಸಿಂಗ್ ಹೇಳಿದ್ದಾರೆ. ಶನಿವಾರ ತಡರಾತ್ರಿ ಪಲಾಸಿ ಪೊಲೀಸ್ ಠಾಣೆ ವ್ಯಾಪ್ತಿಯ ಬಲುವಾ ಕಲಿಯಗಂಜ್‌ನಲ್ಲಿರುವ ಆರೋಪಿ ಮನೆಯಿಂದ ಬಂಧಿಸಲಾಯಿತು.

"ಆ ವ್ಯಕ್ತಿ ಜನವರಿ 19 ರಂದು ನಾಗರಿಕರು ತುರ್ತು ಸಹಾಯವನ್ನು ಪಡೆಯಬಹುದಾದ 112 ಗೆ ಡಯಲ್ ಮಾಡಿದ್ದರು. ಅವನು ತನ್ನ ಹೆಸರು ಛೋಟಾ ಶಕೀಲ್ ಮತ್ತು ತಾನು ದಾವೂದ್ ಇಬ್ರಾಹಿಂನ ಆಪ್ತ ಎಂದು ಹೇಳಿಕೊಂಡಿದ್ದಾನೆ" ಎಂದು ಅಶೋಕ್ ಕುಮಾರ್ ಸಿಂಗ್ ಪಿಟಿಐಗೆ ತಿಳಿಸಿದರು.
ಮೊಬೈಲ್ ಫೋನ್ ವಶಕ್ಕೆ
ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ಸ್ಫೋಟಿಸುವುದಾಗಿ ಆಲಂ ಫೋನ್‌ನಲ್ಲಿ ಹೇಳಿದ್ದಾನೆ, ಆತನ ಮೇಲೆ ಕ್ರಿಮಿನಲ್ ದಾಖಲೆ ಇಲ್ಲ, ಆದರೆ ಮಾನಸಿಕವಾಗಿ ಅಸ್ಥಿರವಾಗಿರುವಂತೆ ತೋರುತ್ತಿದೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
"ಸಮಸ್ಯೆಯ ಸೂಕ್ಷ್ಮತೆಯ" ದೃಷ್ಟಿಯಿಂದ ಪಲಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಮತ್ತು ಆರೋಪಿಯ ಮೊಬೈಲ್ ಫೋನ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಕರೆ ಸ್ವೀಕರಿಸಿದ ತಕ್ಷಣ, ವಿವರಗಳನ್ನು ಸೈಬರ್ ಸೆಲ್‌ನೊಂದಿಗೆ ಹಂಚಿಕೊಳ್ಳಲಾಗಿದೆ. ಅವರು ಕರೆ ಮಾಡಿದ ಮೊಬೈಲ್ ಸಂಖ್ಯೆಯು ಅವರ ತಂದೆಯ ಹೆಸರಿನಲ್ಲಿ ನೋಂದಾಯಿಸಲ್ಪಟ್ಟಿದೆ ಎಂದು ಅಶೋಕ್ ಕುಮಾರ್ ಸಿಂಗ್ ಹೇಳಿದರು.
ಸೋಮವಾರ ಪ್ರಾಣ ಪ್ರತಿಷ್ಠಾಪನೆ
ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಮಂದಿರದ ಪ್ರಾಣ ಪ್ರತಿಷ್ಠಾಪನೆ ಸಮಾರಂಭ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಬಾಲರಾಮನ ಪಟ್ಟಾಭಿಷೇಕ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಹಲವಾರು ಗಣ್ಯರೊಂದಿಗೆ ವೇದಿಕೆಯನ್ನು ಹಂಚಿಕೊಳ್ಳಲಿದ್ದಾರೆ.
ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನಿಂದ 7,000 ಕ್ಕೂ ಹೆಚ್ಚು ಜನರನ್ನು ಸಮಾರಂಭಕ್ಕೆ ಆಹ್ವಾನಿಸಲಾಗಿದೆ. ಮಧ್ಯಾಹ್ನ 12.20ಕ್ಕೆ 'ಪ್ರಾಣ ಪ್ರತಿಷ್ಠಾ' ಸಮಾರಂಭವನ್ನು ವಾರಣಾಸಿಯ ಅರ್ಚಕ ಲಕ್ಷ್ಮೀಕಾಂತ ದೀಕ್ಷಿತ್ ನೆರವೇರಿಸುವರು. ಮಧ್ಯಾಹ್ನ 1 ಗಂಟೆಗೆ ಸಮಾರಂಭ ಮುಕ್ತಾಯವಾಗುವ ನಿರೀಕ್ಷೆಯಿದೆ.
ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು ಕೆತ್ತಿರುವ ಬಾಲರಾಮ ವಿಗ್ರಹವನ್ನು ಪ್ರತಿಷ್ಠಾಪನೆಗೆ ಆಯ್ಕೆ ಮಾಡಲಾಗಿದೆ. ಮಹಾಮಸ್ತಕಾಭಿಷೇಕದ ಏಳು ದಿನಗಳ ಧಾರ್ಮಿಕ ವಿಧಿವಿಧಾನಗಳು ಮಂಗಳವಾರದಿಂದ ಆರಂಭಗೊಂಡಿದ್ದವು. ಆಚರಣೆಗಳು ವಿವಿಧ ರೀತಿಯ ಪೂಜೆಗಳನ್ನು ಒಳಗೊಂಡಿವೆ. ಜನವರಿ 21 ರಂದು ಬಾಲರಾಮನಿಗೆ 125 ಕಲಶಗಳೊಂದಿಗೆ ದೈವಿಕ ಸ್ನಾನ ಸಿಗುತ್ತದೆ.
ಜನವರಿ 22 ರ ಕಾರ್ಯಕ್ರಮದ ನಂತರ, ರಾಮ ಮಂದಿರವನ್ನು ಭಕ್ತರಿಗೆ ತೆರೆಯಲಾಗುತ್ತದೆ. ಭಾರತದಾದ್ಯಂತ ಪ್ರತಿ ದಿನ ಸಾವಿರಾರು ಯಾತ್ರಿಕರು ಮತ್ತು ಪ್ರವಾಸಿಗರು ದೇವಾಲಯಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ.












Click it and Unblock the Notifications