Cyclone Mandous: ಭೀಕರ ಅಲೆಗಳು, ಧರೆಗುರುಳಿದ ಮರಗಳು, ಕೊಚ್ಚಿಹೋದ ಮನೆಗಳು.. ಚಂಡಮಾರುತ ತಂದ ದುರಂತ
ಚೆನ್ನೈ, ಡಿಸೆಂಬರ್ 9: ಮಾಂಡೌಸ್ ಚಂಡಮಾರುತ(Cyclone Mandous) ತಮಿಳುನಾಡು ಕರಾವಳಿಯತ್ತ ವೇಗವಾಗಿ ನುಗ್ಗುತ್ತಿದೆ. ಗಾಳಿಯ ರಭಸಕ್ಕೆ ಮರಗಳು ಬೀಳುತ್ತಿವೆ. ಧಾರಕಾರ ಮಳೆಯಾಗುತ್ತಿದೆ. ಕಡಲ ತೀರಗಳಲ್ಲಿ ಏಳುತ್ತಿರುವ ಅಲೆಗಳು ಜನರನ್ನು ಬೆಚ್ಚಿ ಬೀಳಿಸುತ್ತಿವೆ. ಸುದ್ದಿಸಂಸ್ಥೆ 'ಎಎನ್‌ಐ' ಟ್ವೀಟ್ ಮಾಡಿರುವ ಫೋಟೊಗಳಲ್ಲಿ ಇದೆಲ್ಲವೂ ಸೆರೆಯಾಗಿದೆ.
'ಮಾಂಡೌಸ್ ಚಂಡಮಾರುತವು ತಮಿಳುನಾಡು ಕರಾವಳಿಯನ್ನು ಸಮೀಪಿಸುತ್ತಿರುವಂತೆಯೇ ಮಳೆ ಮತ್ತು ಗಾಳಿ ರಭಸಕ್ಕೆ ಮರಗಳು ನೆಲಕ್ಕುರುಳಿವೆ. ಇದು ಕೊಡೈಕೆನಾಲ್‌ನ ವಿವಿಧ ಭಾಗಗಳಲ್ಲಿ ಸಂಭವಿಸಿದೆ' ಎಂದು ಎಎನ್‌ಐ ತಿಳಿಸಿದೆ.

ಚೆನ್ನೈ ಮರೀನಾ ತೀರದಲ್ಲಿ ಮುರಿದುಹೋದ ರ‍್ಯಾಂಪ್
ಚೆನ್ನೈನ ಮರೀನಾ ಕಡಲತೀರದಲ್ಲಿ ಅಂಗವಿಕಲರಿಗಾಗಿ ಇತ್ತೀಚೆಗೆ ನಿರ್ಮಿಸಲಾಗಿದ್ದ ಮರದ ರ‍್ಯಾಂಪ್ ಶುಕ್ರವಾರ ಬೆಳಗ್ಗೆ ಮಾಂಡೌಸ್ ಚಂಡಮಾರುತದಿಂದಾಗಿ ಹಾನಿಗೊಳಗಾಗಿದೆ. 263 ಮೀಟರ್ ಉದ್ದ, 3 ಮೀಟರ್ ಅಗಲದ ರಾಂಪ್ ಅನ್ನು ಬ್ರೆಜಿಲಿಯನ್ ಮರ ಸೇರಿದಂತೆ ಹಲವು ವರ್ಗಗಳ ಮರದ ಮಿಶ್ರಣದಿಂದ 1.14 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಲೆಗಳ ಹೊಡೆತಕ್ಕೆ ಕೊಚ್ಚಿಹೋದ ಮನೆ
ಅಲೆಗಳ ರಭಸಕ್ಕೆ ಪಿಳ್ಳೈಚಾವಾಡಿ ಗ್ರಾಮದಲ್ಲಿನ ಮನೆಯೊಂದು ಕೊಚ್ಚಿಹೋಗಿದೆ. ಮಂಡೌಸ್ ಚಂಡಮಾರುತದ ಪ್ರಭಾವದಿಂದ ಪುದುಚೇರಿ ಭಾರೀ ಮಳೆಗೆ ಸಾಕ್ಷಿಯಾಗಿದೆ. ಸಂತ್ರಸ್ತ ಪ್ರದೇಶಗಳಿಗೆ ಸಿಎಂ ರಂಗಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪರಿಹಾರ ಕ್ರಮಗಳನ್ನು ತ್ವರಿತಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಚೆನ್ನೈ, ಮಾಧವರಂ (ತಿರುವಲ್ಲೂರು ಜಿಲ್ಲೆ), ಸಿಡಿ ಆಸ್ಪತ್ರೆ ತೊಂಡೈಯರ್‌ಪೇಟ್ (ಚೆನ್ನೈ ಜಿಲ್ಲೆ), ನುಂಗಂಬಾಕ್ಕಂ, ಮೀನಂಬಾಕ್ಕಂ ಪ್ರದೇಶಗಳಲ್ಲಿ 7 ಸೆಂ.ಮೀ ಮಳೆ ದಾಖಲಾಗಿದೆ.
ಚೆನ್ನೈ ಸೇರಿದಂತೆ ತಮಿಳುನಾಡಿನ ಕೆಲವು ಭಾಗಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.

ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ
ಹವಾಮಾನ ಮುನ್ಸೂಚನೆಯ ಹಿನ್ನೆಲೆಯಲ್ಲಿ ಚೆನ್ನೈ, ಚೆಂಗಲ್ಪಟ್ಟು, ಕಾಂಚೀಪುರಂ, ವಿಲುಪುರಂ, ಕಡಲೂರು, ರಾಣಿಪೇಟ್, ವೆಲ್ಲೂರು ಮತ್ತು ತಿರುವಳ್ಳೂರು ಸೇರಿದಂತೆ ಸುಮಾರು 27 ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಚಂಡಮಾರುತ ಮಾಂಡೌಸ್ ನಿನ್ನೆ ತೀವ್ರಗೊಂಡಿತು. ಆದರೆ, ಇಂದು ಸ್ವಲ್ಪ ದುರ್ಬಲಗೊಂಡಿದೆ. ಇದು ಇಂದು ಮಧ್ಯರಾತ್ರಿ ಮತ್ತು ನಾಳೆ ಮುಂಜಾನೆ ಮಹಾಬಲಿಪುರಂ ಸುತ್ತಮುತ್ತಲಿನ ಉತ್ತರ ತಮಿಳುನಾಡು, ಪುದುಚೇರಿ ಮತ್ತು ದಕ್ಷಿಣ ಆಂಧ್ರಪ್ರದೇಶದ ತೀರಗಳಿಗೆ ಸಂಚರಿಸಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ತಮಿಳುನಾಡು, ಪುದುಚೇರಿ ಮತ್ತು ಆಂಧ್ರಪ್ರದೇಶದಲ್ಲಿ ಚಂಡಮಾರುತದ ಭೀತಿ ಹೆಚ್ಚಾಗಿದೆ, ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ. ರಾಷ್ಟ್ರೀಯ ವಿಪತ್ತು ಪರಿಹಾರ ಪಡೆಯನ್ನೂ ನಿಯೋಜಿಸಲಾಗಿದೆ.
ಚೆನ್ನೈನಲ್ಲಿ, 169 ಪರಿಹಾರ ಶಿಬಿರಗಳನ್ನು ಸ್ಥಾಪಿಸಲಾಗಿದೆ ಮತ್ತು ತಗ್ಗು ಪ್ರದೇಶಗಳಲ್ಲಿ ನಿಂತ ನೀರನ್ನು ಹೊರಹಾಕಲು 805 ಮೋಟಾರ್ ಪಂಪ್‌ಗಳನ್ನು ಸಿದ್ಧಪಡಿಸಲಾಗಿದೆ. ಮೀನುಗಾರ ಸಮುದಾಯದ ಸ್ವಯಂಸೇವಕರಿಗೆ ರಕ್ಷಣಾ ದೋಣಿಗಳೊಂದಿಗೆ ಸಿದ್ಧರಾಗಿರಲು ಸೂಚನೆ ನೀಡಲಾಗಿದೆ.

ಸಾರಿಗೆ ಸೇವೆ ನಿಲ್ಲಿಸಿದ ಸರ್ಕಾರ
ಮಂಡೌಸ್ ಚಂಡಮಾರುತದ ಹಿನ್ನೆಲೆಯಲ್ಲಿ ತಮಿಳುನಾಡು ಸಾರಿಗೆ ಸಚಿವ ಎಸ್.ಎಸ್. ಶಿವಶಂಕರ್ ಶುಕ್ರವಾರ ಹೇಳಿಕೆ ನೀಡಿದ್ದಾರೆ. ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಸೂಚನೆಯ ಆಧಾರದ ಮೇಲೆ ಇಲಾಖೆಯು ಚೆನ್ನೈ, ಚೆಂಗಲ್ಪಟ್ಟು, ಕಾಂಚೀಪುರಂ, ತಿರುವಳ್ಳೂರು, ಕಡಲೂರು ಮತ್ತು ಕಡಲೂರಿಗೆ ಸೇವೆಗಳನ್ನು ಒದಗಿಸಲಿದೆ ಎಂದು ತಿಳಿಸಿದ್ದಾರೆ. ಮಹಾಬಲಿಪುರಂ ಮತ್ತು ಪೂರ್ವ ಕರಾವಳಿ ಸುತ್ತಲಿನ ಪ್ರದೇಶಗಳಿಗೆ ಸೇವೆಗಳು ಲಭ್ಯವಿರುವುದಿಲ್ಲ ಎಂದು ಹೇಳಿದ್ದಾರೆ.
ಸೈಕ್ಲೋನ್ ವಿಚಾರವಾಗಿ ಟ್ವೀಟ್ ಮಾಡಿರುವ ಚೆನ್ನೈ ಟ್ರಾಪಿಕ್ ಪೋಲಿಸರು, 'ಮಂಡೌಸ್ ಚಂಡಮಾರುತದಿಂದಾಗಿ ಗಾಳಿ ಸಹಿತ ಭಾರೀ ಮಳೆಯಾಗುವ ಮುನ್ಸೂಚನೆ ಇದೆ. ಆದ್ದರಿಂದ ಸಾರ್ವಜನಿಕರು ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಮನೆಯಿಂದ ಹೊರಬರಲು ವಿನಂತಿಸುತ್ತೇವೆ. ಗ್ರೇಟರ್ ಚೆನ್ನೈ ಸಂಚಾರ ಪೊಲೀಸರು ಸಾರ್ವಜನಿಕ ಹಿತಾಸಕ್ತಿಯಿಂದ ಈ ಮನವಿಯನ್ನು ಮಾಡುತ್ತಿದ್ದಾರೆ' ಎಂದು ಹೇಳಿದ್ದಾರೆ.
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಉಂಟಾದ ಚಂಡಮಾರುತವು ಬೆಂಗಳೂರಿಗೂ ಮಳೆಯನ್ನು ತರಿಸಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಬೆಂಗಳೂರಿನಲ್ಲಿ ಡಿಸೆಂಬರ್ 9 ರಿಂದ 13ರ ವರೆಗೆ ಮಳೆಯಾಗುವ ಸಾಧ್ಯತೆ ಇದೆ. ಈಗಾಗಲೇ ಮೋಡ ಕವಿದ ವಾತಾವರಣವಿದೆ.












Click it and Unblock the Notifications