Karnataka Weather: ತೀವ್ರವಾದ ಬಿಪರ್‌ಜಾಯ್ ಚಂಡಮಾರುತ: ಕರ್ನಾಟಕ, ಕೇರಳ ರಾಜ್ಯಕ್ಕೆ ಭಾರಿ ಮಳೆ
ಪೂರ್ವ-ಮಧ್ಯ ಮತ್ತು ಆಗ್ನೇಯ ಅರೇಬಿಯನ್ ಸಮುದ್ರದ ಮೇಲೆ ನೆಲೆಗೊಂಡಿರುವ 'ಬಿಪರ್‌ಜಾಯ್' ಚಂಡಮಾರುತವು ಉತ್ತರದ ಕಡೆಗೆ ಚಲಿಸುವ ಸಾಧ್ಯತೆಯಿದೆ ಮತ್ತು ಮುಂದಿನ ಕೆಲವು ಗಂಟೆಗಳಲ್ಲಿ ತೀವ್ರ ಚಂಡಮಾರುತವಾಗಿ ರೂಪುಗೊಳ್ಳುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮಂಗಳವಾರ ತಿಳಿಸಿದೆ.
ಚಂಡಮಾರುತದ ಕಾರಣದಿಂದಾಗಿ ಹವಾಮಾನ ತುಂಬಾ ಕಠಿಣವಾಲಿದೆ ಮತ್ತು ಸಮುದ್ರದ ಮೇಲ್ಮೈನಲ್ಲಿ ಮುಂದಿನ ಮೂರು-ನಾಲ್ಕು ದಿನಗಳಲ್ಲಿ ಗಾಳಿಯ ವೇಗ ಗಂಟೆಗೆ 135-145 ಕಿ.ಮೀ ನಿಂದ 160 ಕಿ.ಮೀ. ವರೆಗೆ ಹೆಚ್ಚಾಗಲಿದ್ದು ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಜೂನ್ 9ರಂದು ಮುಂಗಾರು ಆಗಮನದ ಸಾಧ್ಯತೆ
ಬಿಪರ್‌ಜಾಯ್ ಚಂಡಮಾರುತದ ಕಾರಣ ಜೂನ್ 9ರಂದು ಮುಂಗಾರು ಅಲೆಗಳು ಕೇರಳಕ್ಕೆ ಪ್ರವೇಶಿಸುವ ಸಾಧ್ಯತೆ ಇದ್ದು, ಕೇರಳ ಮತ್ತು ಕರ್ನಾಟಕ ರಾಜ್ಯದಲ್ಲಿ ಭಾರಿ ಮಳೆಯಾಗುವ ಸೂಚನೆ ನೀಡಿದೆ. ಬಂಗಾಳಕೊಲ್ಲಿಯಲ್ಲಿ ಕಡಿಮೆ ಒತ್ತಡ ಪ್ರದೇಶ ನಿರ್ಮಾಣವಾಗುವ ಕಾರಣ ಕರಾವಳಿ ಪ್ರದೇಶದಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇದೆ.
ಈ ರಾಜ್ಯಗಳಿಗೆ ಮಳೆ-ಬಿರುಗಾಳಿ ಎಚ್ಚರಿಗೆ
ನೈಋತ್ಯ ರಾಜ್ಯಗಳಲ್ಲಿ ಮುಂದಿನ ಐದು ದಿನಗಳ ಕಾಲ ಭಾರಿ ಗಾಳಿಯ ಜೊತೆ ವ್ಯಾಪಕ ಮಳೆಯಾಗಲಿದೆ ಎಂದು ಎಚ್ಚರಿಕೆಯನ್ನೂ ನೀಡಿದೆ. ದಕ್ಷಿಣ ಭಾರತದ ಕೇರಳ, ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳಲ್ಲಿಐಎಂಡಿ ಭಾರಿ ಮಳೆಯ ಎಚ್ಚರಿಕೆಯನ್ನು ನೀಡಿದೆ. ಮುಂದಿನ ಕೆಲವು ದಿನಗಳವರೆಗೆ ಈಶಾನ್ಯ ರಾಜ್ಯಗಳಿಗೂ ಮಳೆಯ ಎಚ್ಚರಿಕೆಯನ್ನು ನೀಡಲಾಗಿದೆ.
ಕರ್ನಾಟಕ, ಮಹಾರಾಷ್ಟ್ರ, ಕೇರಳದ ಮೇಲೆ ಪ್ರಭಾವ
ಬಿಪರ್‌ಜಾಯ್ ಚಂಡಮಾರುತವು ಕರ್ನಾಟಕ, ಮಹಾರಾಷ್ಟ್ರ, ಕೇರಳದಂತಹ ರಾಜ್ಯಗಳ ಮೇಲೆ ಪರಿಣಾಮ ಬೀರುತ್ತದೆ. ಚಂಡಮಾರುತದ ಪರಿಣಾಮ ಈ ಮೂರು ರಾಜ್ಯಗಳಲ್ಲಿ ಭಾರಿ ಗಾಳಿ ಬೀಸುವ ಸಾಧ್ಯತೆ ಇದೆ. ಬುಧವಾರ ಕೂಡ ರಾಜ್ಯದಾದ್ಯಂತ ಗುಡುಗು ಮಿಂಚು ಸಹಿತ ಅಲ್ಲಲ್ಲಿ ಚದುರಿದಂತೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಚಾಮರಾಜನಗರ, ದಕ್ಷಿಣ ಕನ್ನಡ, ಕೊಡಗು ಮತ್ತು ಉಡುಪಿ ಜಿಲ್ಲೆಗಳಲ್ಲಿ ಒಂದು ಅಥವಾ ಎರಡು ಕಡೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ.
ಬೆಂಗಳೂರಿನಲ್ಲಿ ಗುಡುಗು ಸಹಿತ ಮಳೆ
ಇನ್ನು ಬೆಂಗಳೂರಿನಲ್ಲಿ ಕೂಡ ಗುಡುಗು, ಮಿಂಚು ಸಹಿತ ಉತ್ತಮ ಮಳೆಯಾಗುತ್ತದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಭಾರಿ ಗಾಳಿ ಬೀಸುವ ಸಾಧ್ಯತೆ ಇದ್ದು, ಬುಧವಾರ ರಾತ್ರಿ ಬಿಬಿಎಂಪಿ ವ್ಯಾಪ್ತಿಯಲ್ಲಿ ವ್ಯಾಪಕ ಮಳೆ ಸುರಿಯಲಿದೆ ಎಂದು ಹೇಳಿದೆ.












Click it and Unblock the Notifications