Video: ಜೇಶೋರೇಶ್ವರಿ ದೇವಸ್ಥಾನದಲ್ಲಿ ಕಳ್ಳತನ: ಕಾಳಿಗೆ ಮೋದಿ ನೀಡಿದ್ದ ಕಿರೀಟ ಕದ್ದ ಕಳ್ಳರು
ಢಾಕಾ ಅಕ್ಟೋಬರ್ 11: ಬಾಂಗ್ಲಾದೇಶದ ಜೇಶೋರೇಶ್ವರಿ ದೇವಸ್ಥಾನದಿಂದ ಕಾಳಿಯ ಕಿರೀಟವನ್ನು ಕಳವು ಮಾಡಲಾಗಿದೆ. ಬೆಳ್ಳಿ ಮತ್ತು ಚಿನ್ನದ ಲೇಪಿತ ಕಿರೀಟವನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ದೇವಾಲಯಕ್ಕೆ ಉಡುಗೊರೆಯಾಗಿ ನೀಡಿದ್ದಾರೆ. ಈ ಕಿರೀಟವನ್ನು ಕಳ್ಳರು ಕದ್ದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಹೌದು.. ನರೇಂದ್ರ ಮೋದಿ ಅವರು 2021ರಲ್ಲಿ ಬಾಂಗ್ಲಾದೇಶಕ್ಕೆ ಭೇಟಿ ನೀಡಿದಾಗ ಜೇಶೋರೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅವರು ಈ ಕಿರೀಟವನ್ನು ಕಾಳಿಗೆ ಉಡುಗೊರೆಯಾಗಿ ನೀಡಿದ್ದರು. ಆದರೀಗ ಕಾಳಿ ದೇವಿಗೆ ನೀಡಿದ್ದ ಈ ಉಡುಗೊರೆ ಕಿರೀಟವನ್ನು ಕಳವು ಮಾಡಲಾಗಿದೆ ಎಂದು ವರದಿಯಾಗಿದೆ. ಢಾಕಾದಲ್ಲಿರುವ ಭಾರತೀಯ ಹೈಕಮಿಷನ್ ಈ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಹೈಕಮಿಷನ್ ಕಿರೀಟವನ್ನು ಪತ್ತೆ ಮಾಡಲು ಹಾಗೂ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದೆ.

ಬಾಂಗ್ಲಾದೇಶದ ದಿನಪತ್ರಿಕೆ ದಿ ಡೈಲಿ ಸ್ಟಾರ್ ಪ್ರಕಾರ, ದೇವಾಲಯದ ಅರ್ಚಕ ಹಾಗೂ ದೇವಸ್ಥಾನ ಶುಚಿಗೊಳಿಸುವ ಸಿಬ್ಬಂದಿ ಕಾಳಿ ದೇವಿಯ ತಲೆಯಿಂದ ಕಿರೀಟ ಕಾಣೆಯಾಗಿದೆ ಎಂದು ದೂರು ನೀಡಿದ್ದಾರೆ. ಬಾಂಗ್ಲಾದೇಶ ಪೊಲೀಸರು ಕಳ್ಳತನವಾಗಿದೆ ಎಂದು ಖಚಿತಪಡಿಸಿದ್ದು ತನಿಖೆಯನ್ನು ಪ್ರಾರಂಭಿಸಿದ್ದಾರೆ. ಆರೋಪಿಯನ್ನು ಪತ್ತೆ ಮಾಡಲು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದ್ದು, ಶೀಘ್ರದಲ್ಲೇ ಕಳ್ಳನನ್ನು ಹಿಡಿಯಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
Bangladesh: CCTV footage shows a thief stealing the crown of Kali Mata from Jeshoreshwari Kali Temple in Satkhira, which was gifted by Indian PM Modi in 2021. The temple is a significant Hindu Shakti Peeth. https://t.co/NVVG2ZD9AY pic.twitter.com/wY6dyK9746
— Sidhant Sibal (@sidhant) October 11, 2024
ಜೇಶೋರೇಶ್ವರಿ ದೇವಸ್ಥಾನ ಅರ್ಚಕರಿಂದ ಮಾಹಿತಿ
ತಲೆಮಾರುಗಳಿಂದ ದೇವಾಲಯವನ್ನು ನೋಡಿಕೊಳ್ಳುತ್ತಿರುವ ಕುಟುಂಬದ ಸದಸ್ಯರಾದ ಜ್ಯೋತಿ ಚಟ್ಟೋಪಾಧ್ಯಾಯ ಅವರು ಬಾಂಗ್ಲಾದೇಶದ ಮಾಧ್ಯಮಗಳಿಗೆ ಕಿರೀಟ ಕಳ್ಳತನದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಕಿರೀಟವನ್ನು ಬೆಳ್ಳಿಯಿಂದ ಮಾಡಲಾಗಿತ್ತು. ಜೊತೆಗೆ ಅದಕ್ಕೆ ಚಿನ್ನದ ಲೇಪನ ಮಾಡಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 2021 ರಲ್ಲಿ ಜೇಶೋರೇಶ್ವರಿ ದೇವಸ್ಥಾನಕ್ಕೆ ಕಿರೀಟವನ್ನು ಅರ್ಪಿಸುವಾಗ, ದೇವಾಲಯದಲ್ಲಿ ಬಹುಪಯೋಗಿ ಸಮುದಾಯ ಭವನವನ್ನು ನಿರ್ಮಿಸುವುದಾಗಿ ಘೋಷಿಸಿದ್ದರು. ಆದರೀಗ ಆ ಕಿರೀಟ ಕಾಣಿಸುತ್ತಿಲ್ಲ. ನಾವು ಬೆಳಿಗ್ಗೆ ದೇವಸ್ಥಾನಕ್ಕೆ ಬಂದಾಗ ಕಿರೀಟ ಕಳ್ಳತನವಾಗಿತ್ತು ಎಂದು ಅವರು ಹೇಳಿದ್ದಾರೆ.
ದೇವಸ್ಥಾನದ ಬಗ್ಗೆ
ಬಾಂಗ್ಲಾದೇಶದ ಹೊರತಾಗಿ ಜೇಶೋರೇಶ್ವರಿ ದೇವಾಲಯವು ಭಾರತ ಮತ್ತು ಇತರ ನೆರೆಯ ದೇಶಗಳಲ್ಲಿ ಹೆಚ್ಚು ಗುರುತಿಸಲ್ಪಟ್ಟಿದೆ. ಇದು ಭಾರತ ಮತ್ತು ನೆರೆಯ ದೇಶಗಳಾದ್ಯಂತ ಇರುವ 51 ಶಕ್ತಿಪೀಠಗಳಲ್ಲಿ ಒಂದಾಗಿದೆ. ಈ ದೇವಾಲಯವು ಭಕ್ತರ ಪ್ರಮುಖ ತಾಣವಾಗಿದ್ದು, ಈಶ್ವರಿಪುರ ಸತ್ಖಿರಾದಲ್ಲಿದೆ. ಈ ದೇವಸ್ಥಾನವನ್ನು 12ನೇ ಶತಮಾನದಲ್ಲಿ ನಿರ್ಮಿಸಲಾಗಿದೆ.
ಅಲ್ಪಸಂಖ್ಯಾತರ ಆರಾಧನಾ ಸ್ಥಳಗಳ ಭದ್ರತೆಯ ಪ್ರಶ್ನೆಗಳು
ಬಾಂಗ್ಲಾದೇಶದಲ್ಲಿ ದೇವಿಯ ಕಿರೀಟದ ಕಳ್ಳತನದ ಬಗ್ಗೆ ಜನ ಆತಂಕ ವ್ಯಕ್ತಪಡಿಸಿದ್ದಾರೆ. ಈ ವರ್ಷದ ಆಗಸ್ಟ್‌ನಲ್ಲಿ ಶೇಖ್ ಹಸೀನಾ ಅವರ ಸರ್ಕಾರ ಪತನವಾದ ನಂತರ ಬಾಂಗ್ಲಾದೇಶವು ಅಲ್ಪಸಂಖ್ಯಾತರ ಮೇಲಿನ ಸರಣಿ ದಾಳಿಗಳಿಗೆ ಸಾಕ್ಷಿಯಾಗಿದೆ. ಆದರೆ ಈಗಿನ ಕಳ್ಳತನದಲ್ಲಿ ಅಂತಹ ಯಾವುದೇ ಕೋನದ ಬಗ್ಗೆ ಪೊಲೀಸರು ಇನ್ನೂ ಮಾತನಾಡಿಲ್ಲ. ಅದಾಗ್ಯೂ ಅಲ್ಪಸಂಖ್ಯಾತರ ಆರಾಧನಾ ಸ್ಥಳಗಳ ಭದ್ರತೆಯ ಪ್ರಶ್ನೆಗಳು ಉದ್ಬವಿಸಿವೆ.












Click it and Unblock the Notifications