Breaking: ಭಾರತದಲ್ಲಿ ಒಂದೇ ದಿನ 20139 ಮಂದಿಗೆ ಕೊರೊನಾ ವೈರಸ್!
ನವದೆಹಲಿ, ಜುಲೈ 14: ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಹಾವಳಿ ಗಣನೀಯ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ. ಮೂರು ತಿಂಗಳ ನಂತರ ಕೋವಿಡ್-19 ಪ್ರಕರಣಗಳ ಸಂಖ್ಯೆಯು 20,000 ಗಡಿ ದಾಟಿದೆ.
ಕಳೆದ 24 ಗಂಟೆಗಳಲ್ಲಿ 20139 ಜನರಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ಪತ್ತೆಯಾಗಿದೆ. ಇದೇ ಅವಧಿಯಲ್ಲಿ 38 ಮಂದಿ ಮಹಾಮಾರಿಯಿಂದ ಪ್ರಾಣ ಬಿಟ್ಟಿದ್ದರೆ, 16,482 ಸೋಂಕಿತರು ಗುಣಮುಖರಾಗಿದ್ದಾರೆ.
ದೇಶದಲ್ಲಿ ಒಟ್ಟು ಕೋವಿಡ್-19 ಸೋಂಕಿತ ಪ್ರಕರಣಗಳ ಸಂಖ್ಯೆ 43,689,989ಕ್ಕೆ ಏರಿಕೆಯಾಗಿದೆ. ಇದರ ಹೊರತಾಗಿ, ಇದುವರೆಗೂ 43,028,356 ಸೋಂಕಿತರು ಗುಣಮುಖರಾಗಿದ್ದು, 525,557 ಮಂದಿ ಮಹಾಮಾರಿಯಿಂದ ಪ್ರಾಣ ಕಳೆದುಕೊಂಡಿದ್ದಾರೆ. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 136,076ಕ್ಕೆ ಏರಿಕೆಯಾಗಿದೆ ಎಂದು ಭಾರತೀಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ಕೊರೊನಾ ವೈರಸ್ ಪಾಸಿಟಿವಿಟಿ ದರ ಶೇ. 5.10ರಷ್ಟಿದೆ
ಕೊರೊನಾ ವೈರಸ್ ಸಾಂಕ್ರಾಮಿಕ ಪಿಡುಗಿನ ಹಾವಳಿ ತಗ್ಗಿತು ಎನ್ನುವಷ್ಟರಲ್ಲೇ ಪಾಸಿಟಿವಿಟಿ ದರದಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. ಕಳೆದ 24 ಗಂಟೆಗಳಲ್ಲಿ 3,94,774 ಮಂದಿಗೆ ಕೋವಿಡ್-19 ಸೋಂಕಿನ ತಪಾಸಣೆ ನಡೆಸಲಾಗಿದೆ. ದೇಶದಲ್ಲಿ ಇದುವರೆಗೂ 86,81,64,348 ಜನರಿಗೆ ಕೊರೊನಾ ವೈರಸ್ ಸೋಂಕಿತ ಪರೀಕ್ಷೆ ನಡೆಸಲಾಗಿದೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ. ಈ ಹಂತದಲ್ಲಿ ಕಳೆದ ಒಂದು ದಿನದಲ್ಲಿ ಕೋವಿಡ್-19 ಪಾಸಿಟಿವಿಟಿ ದರ ಶೇ. 5.10ರಷ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಭಾರತದಲ್ಲಿ ಲಕ್ಷದಿಂದ ಲಕ್ಷಕ್ಕೆ ಹೇಗಿದೆ ಪ್ರಕರಣಗಳ ಸಂಖ್ಯೆ?
ಕೊರೊನಾವೈರಸ್ ಸೋಂಕಿತರ ಸಂಖ್ಯೆಯು ಏಕಾಏಕಿ ಏರಿಕೆಯಾಗದ ಉದಾಹರಣೆಗಳನ್ನೂ ಭಾರತ ಈ ಹಿಂದೆ ಕಂಡಿದೆ. ದೇಶದಲ್ಲಿ 2020ರ ಆಗಸ್ಟ್ 7ರಂದು 20 ಲಕ್ಷ ಕೋವಿಡ್-19 ಸೋಂಕಿತ ಪ್ರಕರಣಗಳು ವರದಿಯಾಗಿದ್ದವು. ಅಲ್ಲಿಂದ ಸೋಂಕಿತರ ಸಂಖ್ಯೆಯು ಗಣನೀಯವಾಗಿ ಏರಿಕೆ ಆಯಿತು. ಆಗಸ್ಟ್ 23ರ ಹೊತ್ತಿಗೆ ಈ ಸಂಖ್ಯೆ 30 ಲಕ್ಷ ತಲುಪಿತು. ಸೆಪ್ಟಂಬರ್ 5ರ ವೇಳೆಗೆ 40 ಲಕ್ಷವಾದರೆ, ಅದೇ ಸೆಪ್ಟಂಬರ್ 16ರ ವೇಳೆಗೆ 50 ಲಕ್ಷದ ಗಡಿ ದಾಟಿತು. ಸೆಪ್ಟಂಬರ್ 28ಕ್ಕೆ ಸೋಂಕಿತ ಪ್ರಕರಣಗಳ ಸಂಖ್ಯೆ 60 ಲಕ್ಷದ ಗಡಿ ದಾಟಿತು. ಅಕ್ಟೋಬರ್ 11ಕ್ಕೆ 70 ಲಕ್ಷ ಸೋಂಕಿತ ಪ್ರಕರಣಗಳಾದರೆ, ಆ ಸಂಖ್ಯೆಯು ಅಕ್ಟೋಬರ್ 29ರ ಹೊತ್ತಿಗೆ 80 ಲಕ್ಷ ತಲುಪಿತು. ಅದೇ ರೀತಿ ನವೆಂಬರ್ 20ರ ವೇಳೆಗೆ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 90 ಲಕ್ಷ ತಲುಪಿದರೆ, ಡಿಸೆಂಬರ್ 19ರ ಹೊತ್ತಿಗೆ ಒಂದು ಕೋಟಿಯ ಗಡಿ ದಾಟಿತು.
2021ರ ಮೇ 4ರ ವೇಳೆಗೆ ಕೋವಿಡ್-19 ಸೋಂಕಿತ ಪ್ರಕರಣಗಳ ಸಂಖ್ಯೆಯು ಒಂದು ಕೋಟಿಯಿಂದ ಎರಡು ಕೋಟಿಗೆ ಜಿಗಿಯಿತು. ಅದೇ ರೀತಿ 2021ರ ಜೂನ್ 23ರ ಹೊತ್ತಿಗೆ ಸೋಂಕಿತ ಪ್ರಕರಣಗಳ ಸಂಖ್ಯೆಯು ಮೂರು ಕೋಟಿ ಗಡಿ ಮುಟ್ಟಿತು ಎಂಬುದನ್ನು ಅಂಕಿ-ಸಂಖ್ಯೆಗಳು ವಿವರಿಸುತ್ತವೆ.

ದೇಶದಲ್ಲಿ ಜುಲೈ 15ರಿಂದ ಬೂಸ್ಟರ್ ಡೋಸ್ ಲಸಿಕೆ ಉಚಿತ
ಕೊರೊನಾ ವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆಯು ಏರಿಕೆ ಆಗುತ್ತಿರುವುದರ ಹಿನ್ನೆಲೆ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡಿದೆ. ದೇಶದಲ್ಲಿ ಕೋವಿಡ್-19 ಬೂಸ್ಟರ್ ಡೋಸ್ ಲಸಿಕೆ ಅನ್ನು ಸಹ ಉಚಿತವಾಗಿ ನೀಡುವುದಕ್ಕೆ ನಿರ್ಧರಿಸಿದೆ. ಜುಲೈ 15 ರಿಂದ ಮುಂದಿನ 75 ದಿನಗಳವರೆಗೂ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಬೂಸ್ಟರ್ ಡೋಸ್ ಅನ್ನು ಉಚಿತವಾಗಿ ನೀಡಲಾಗುವುದು ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಈಗಾಗಲೇ ಘೋಷಿಸಿದ್ದಾರೆ.

ದೇಶದಲ್ಲಿ ಇದುವರೆಗೂ ಕೊರೊನಾ ಲಸಿಕೆ ಪಡೆದವರೆಷ್ಟು?
ಕೊರೊನಾ ವೈರಸ್ ಸೋಂಕಿನಿಂದ ರಕ್ಷಣೆ ಪಡೆದುಕೊಳ್ಳುವ ನಿಟ್ಟಿನಲ್ಲಿ ಸಮರೋಪಾದಿಯಲ್ಲಿ ಲಸಿಕೆಯನ್ನು ವಿತರಣೆ ಮಾಡಲಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ 13,44,714 ಡೋಸ್ ಲಸಿಕೆಯನ್ನು ವಿತರಣೆ ಮಾಡಲಾಗಿದೆ. ದೇಶದಲ್ಲಿ ಒಟ್ಟು ಇದುವರೆಗೂ 199,27,27,559 ಡೋಸ್ ಲಸಿಕೆಯನ್ನು ವಿತರಣೆ ಮಾಡಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.












Click it and Unblock the Notifications