ಇಟಲಿಯನ್ನೂ ಮೀರಿಸಿದ ಭಾರತ; ಇದು ಕೊರೊನಾ ವೈರಸ್ ಕಥೆ!
ನವದೆಹಲಿ, ಜೂನ್.06: ವಿಶ್ವದಲ್ಲೇ ಅತಿಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಎರಡನೇ ರಾಷ್ಟ್ರವಾಗಿರುವ ಭಾರತದಲ್ಲಿ ನೊವೆಲ್ ಕೊರೊನಾ ವೈರಸ್ ಅಟ್ಟಹಾಸ ಮೆರೆಯುತ್ತಿದೆ. ಭಾರತವು ಇಟಲಿಯನ್ನೂ ಹಿಂದಿಕ್ಕಿ ಜಾಗತಿಕ ಪಟ್ಟಿಯಲ್ಲಿ 6ನೇ ಸ್ಥಾನಕ್ಕೆ ಏರಿದ್ದು ಮಹಾಮಾರಿ ಪ್ರಭಾವ ಹೆಚ್ಚುತ್ತಿರುವುದಕ್ಕೆ ಸಾಕ್ಷಿಯಾಗಿದೆ.
ಕಳೆದ 24 ಗಂಟೆಗಳಲ್ಲಿ ಮೊದಲ ಬಾರಿಗೆ ಅತಿಹೆಚ್ಚು ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಶನಿವಾರದ ಅಂಕಿ-ಅಂಶಗಳ ಪ್ರಕಾರ, 9,887 ಮಂದಿಗೆ ಕೊವಿಡ್-19 ಸೋಂಕು ಅಂಟಿಕೊಂಡಿದ್ದು, ಸೋಂಕಿತರ ಸಂಖ್ಯೆ 2,36,657ಕ್ಕೆ ಏರಿಕೆಯಾಗಿದೆ.
ದಾವೂದ್ ಇಬ್ರಾಹಿಂಗೆ ಕೋವಿಡ್-19 : ಸುದ್ದಿ ಸುಳ್ಳು ಎಂದ ಸಹೋದರ ಅನೀಸ್!
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಕೊರೊನಾ ವೈರಸ್ ಕುರಿತು ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದೆ. ಕಳೆದ 24 ಗಂಟೆಗಳಲ್ಲಿ ಕೊರೊನಾ ವೈರಸ್ ನಿಂದಾಗಿ ದೇಶದಲ್ಲಿ 294 ಮಂದಿ ಪ್ರಾಣ ಬಿಟ್ಟಿದ್ದಾರೆ. ದೇಶದಲ್ಲಿ ಇದುವರೆಗೂ ಮಹಾಮಾರಿಗೆ 6,642ಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ.
ಭಾರತದಲ್ಲಿ 1,13,233 ಸೋಂಕಿತರು ಗುಣಮುಖ:
ದೇಶಾದ್ಯಂತ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 2,36,657ರ ಗಡಿ ದಾಟಿದೆ. ಈ ಪೈಕಿ 1,13,233ಕ್ಕೂ ಅಧಿಕ ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದು, ಬಾಕಿ ಉಳಿದಿರುವ 1,16,887ಕ್ಕೂ ಹೆಚ್ಚು ಮಂದಿ ಸೋಂಕಿತರಿಗೆ ಚಿಕಿತ್ಸೆ ಮುಂದುವರಿಸಲಾಗುತ್ತಿದೆ.
ಇಟಲಿಯನ್ನು ಹಿಂದಿಕ್ಕಿ 6ನೇ ಸ್ಥಾನಕ್ಕೇರಿದ ಭಾರತ:
ಭಾರತದಲ್ಲಿ ದಿನೇ ದಿನೆ ಕೊರೊನಾ ವೈರಸ್ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗುತ್ತಿದೆ. ಅತಿಹೆಚ್ಚು ಸೋಂಕಿತರನ್ನು ಹೊಂದಿರುವ ಜಾಗತಿಕ ಪಟ್ಟಿಯಲ್ಲಿ ಭಾರತವು ಇಟಲಿಯನ್ನು ಹಿಂದಿಕ್ಕಿದ್ದು ಆರನೇ ಸ್ಥಾನಕ್ಕೆ ಏರಿದೆ. ಶನಿವಾರದ ಅಂಕಿ-ಅಂಶಗಳ ಪ್ರಕಾರ ಇಟಲಿಯಲ್ಲಿ 2,34,531 ಮಂದಿಗೆ ಸೋಂಕು ತಗಲಿದ್ದು, ಇದುವರೆಗೂ 33,774 ಜನರು ಮಹಾಮಾರಿಗೆ ಪ್ರಾಣತೆತ್ತಿದ್ದಾರೆ. ಕೊರೊನಾ ವೈರಸ್ ಸೋಂಕಿತರ ಸಂಖ್ಯೆಯಲ್ಲಿ ಭಾರತವು ಇದೀಗ ಇಟಲಿಯನ್ನು ಹಿಂದಿಕ್ಕಿದ್ದು, 2,36,657 ಜನ ಸೋಂಕಿತರನ್ನು ಹೊಂದಿದೆ.