ಮೋದಿ ಒಬ್ಬ ವಾಚ್ ಮನ್, ಜತೆಗೆ ಅಡಾಲ್ಫ್ ಹಿಟ್ಲರ್ ಸಹ
ಬಾಲಸಿನೋರ್ (ಗುಜರಾತ್), ಮಾರ್ಚ್12- ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ನಿನ್ನೆ ಗುಜರಾತಿನಲ್ಲಿ ಭರ್ಜರಿ ರಾಜಕೀಯ ಭಾಷಣ ಮಾಡಿದ್ದಾರೆ. ಗುಜರಾತಿನಲ್ಲಿ ರಾಜಕೀಯ ಭಾಷಣ ಮಾಡುವಾಗ ಅಲ್ಲಿನವರೇ ಆದ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಿರುದ್ಧ ಮಾತನಾಡದರಲು ಸಾಧ್ಯವೇ? ಆದರೆ ರಾಹುಲ್ ಗಾಂಧಿ ತುಸು ಹೆಚ್ಚಿಗೇ ಮಾತನಾಡಿದ್ದಾರೆ.
ತಮ್ಮ ಮಾತಿನ ಭರದಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಗೆ ಹೋಲಿಸಿದ್ದಾರೆ. ಹಿಟ್ಲರಿನಂತೆ ಇಲ್ಲಿಯೂ ಒಬ್ಬ ಸರ್ವಾಧಿಕಾರಿಯಿದ್ದು, ಅವರು ತಾವು ಮಾಡಿದ್ದೇ ಸರಿ/ಸರ್ವಶ್ರೇಷ್ಠ ಅನ್ನುತ್ತಿದ್ದಾರೆ. ಮತ್ತು ಅದನ್ನು ಬಲವಂತವಾಗಿ ಜನರ ಮೇಲೆ ಹೇರುತ್ತಿದ್ದಾರೆ ಮೋದಿ ಅವರನ್ನು ಜರಿದಿದ್ದಾರೆ.

ರಾಹುಲ್ ಭಾಷಣ ಮಾಡಿದ ಮಧ್ಯ ಗುಜರಾತಿನ ಬಲಾಸಿನೋರ್ (Balasinor) ಕಾಂಗ್ರೆಸ್ ಪಕ್ಷದ ಭದ್ರ ಕೋಟೆ ಎನಿಸಿದೆ. ಇಲ್ಲಿ ಕಾಂಗ್ರೆಸ್ ಚುನಾವಣಾ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ರಾಹುಲ್, ಎರಡು ಮಾದರಿಯ ನಾಯಕರಿದ್ದಾರೆ. ಒಬ್ಬರು ಜನರನ್ನು, ಅವರ ಮನೆಗಳಿಗೆ ಭೇಟಿ ನೀಡಿ ಗಾಂಧೀಜಿಯವರಂತೆ ವಿನಯದಿಂದ ಯಾವುದೇ ಸೊಕ್ಕು ಪ್ರದರ್ಶಿಸದೇ ತೊಂದರೆಗಳನ್ನು ಆಲಿಸುತ್ತಾರೆ.
ಮತ್ತೊಬ್ಬರು ಹಿಟ್ಲರಿನಂತೆ. ಜನರಿಂದ ತಾವೇನೂ ಕಲಿಯುವುದು ಇಲ್ಲ ಎಂದೇ ಭಾವಿಸುತ್ತಾರೆ. ಜರ್ಮನಿಯಲ್ಲಿ ಹಿಟ್ಲರಿನಿಂದ ಆದ ಪ್ರಗತಿಯೇನೂ ಇಲ್ಲ. ಆದರೂ, ಆತ ಎಲ್ಲವೂ ತನ್ನಿಂದಲೇ ಆಗಿದ್ದು ಎಂದು ಹೇಳಿಕೊಳ್ಳುತ್ತಾನೆ ಎಂದು ಪರೋಕ್ಷವಾಗಿ ಮೋದಿಯತ್ತ ಚಾಟಿ ಬೀಸಿದರು.
ಇವೆರಡ ಪೈಕಿ ಇಲ್ಲಿ ಮೊದಲನೆಯ ರೀತಿಯ ನಾಯಕರು ಗಾಂಧೀಜಿಯಂತೆ ಕಾಂಗ್ರೆಸ್ ಪಕ್ಷದವರಾಗಿದ್ದಾರೆ. ಅವರು ಗುಜರಾತಿನ ಎಲ್ಲರ ನೋವುಗಳನ್ನು ಅರ್ಥ ಮಾಡಿಕೊಳ್ಳಬಲ್ಲರು ಮತ್ತು ಅವರು ಶ್ರಮ ಹಾಕಿ ಅಭಿವೃದ್ಧಿಗಾಗಿ ಕೆಲಸ ಮಾಡಬಲ್ಲವರು ಎಂದು ರಾಹುಲ್ ಗಾಂಧಿ ಹೇಳಿದರು.
ಎಲ್ಲಿಯೂ ಮೋದಿಯವರ ಹೆಸರೆತ್ತದೆ ಟೀಕಿಸುತ್ತಲೇ ಹೋದ ರಾಹುಲ್, ದೇಶವನ್ನು ಕಾಯುತ್ತೇನೆ ಎಂದು ಹೇಳುತ್ತಾರೆ. ಆದರೆ ಭಾರತಕ್ಕೆ ವಾಚ್ ಮನ್ ಬೇಡ. ಜನತೆಗೆ ಅವರ ಹಕ್ಕುಗಳು ಬೇಕು. ಗುಜರಾತಿನಲ್ಲಿ ರೈತರ ಭೂಮಿಯನ್ನು ವಶಪಡಿಸಿಕೊಳ್ಳಲಾಗುತ್ತಿದೆ. ಇದು ಕಾವಲುಗಾರ ಮಾಡುವ ಕೆಲಸವೇ ಎಂದು ಛೇಡಿಸಿದರು.












Click it and Unblock the Notifications