ಇಡೀ ಜಗತ್ತಿನ ಎದುರು ತೆರೆದುಕೊಳ್ಳಲಿರುವ Co-win ಅಪ್ಲಿಕೇಷನ್: ಮೋದಿ
ನವದೆಹಲಿ, ಜುಲೈ 05: "ಭಾರತವು ಇಡೀ ಜಗತ್ತು ಒಂದು ಕುಟುಂಬ ಎಂಬ ತತ್ವದ ಮೇಲೆ ವಿಶ್ವಾಸವಿಟ್ಟಿದೆ. ಈ ನಿಟ್ಟಿನಲ್ಲಿ ಕೊರೊನಾವೈರಸ್ ಲಸಿಕೆಗಾಗಿ ರೂಪಿಸಿರುವ ಕೋ-ವಿನ್ ಅಪ್ಲಿಕೇಷನ್ ಅನ್ನು ಮುಕ್ತಗೊಳಿಸಲಾಗುತ್ತಿದೆ. ಶೀಘ್ರದಲ್ಲೇ ಈ ಆಪ್ ಎಲ್ಲ ರಾಷ್ಟ್ರಗಳಲ್ಲೂ ಲಭ್ಯವಾಗಲಿದೆ," ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಕೋ-ವಿನ್ ಜಾಗತಿಕ ಸಮಾವೇಶ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ವಿಶ್ವದಲ್ಲಿ ಸಾಂಕ್ರಾಮಿಕದಿಂದ ಮೃತಪಟ್ಟ ಎಲ್ಲರಿಗೂ ಸಂತಾಪ ಸೂಚಿಸುವುದರ ಮೂಲಕ ಮಾತು ಆರಂಭಿಸಿದರು. ಕಳೆದ ನೂರು ವರ್ಷಗಳಲ್ಲಿ ಇಂಥ ಸಾಂಕ್ರಾಮಿಕ ಪಿಡುಗನ್ನು ನೋಡಿಲ್ಲ. ಈ ಸಾಂಕ್ರಾಮಿಕಕ್ಕೆ ಸಮನಾದ್ದು ಯಾವುದೂ ಇಲ್ಲ. ಯಾವುದೇ ರಾಷ್ಟ್ರವು ಎಷ್ಟೇ ಬಲಿಷ್ಠವಾಗಿದ್ದರೂ ಈ ರೀತಿ ಸವಾಲನ್ನು ಏಕಾಂಗಿಯಾಗಿ ಎದುರಿಸಲು ಸಾಧ್ಯವಿಲ್ಲ," ಎಂದರು.
"ಮಾನವೀಯತೆ ಮತ್ತು ಮಾನವಕುಲಕ್ಕಾಗಿ, ನಾವು ಒಟ್ಟಾಗಿ ಶ್ರಮಿಸಬೇಕು. ನಾವೆಲ್ಲರೂ ಒಟ್ಟಾಗಿ ಮುಂದುವರಿಯಬೇಕು ಎಂಬುದು ಕೊವಿಡ್-19 ಸಾಂಕ್ರಾಮಿಕದಿಂದ ಕಲಿಯಬೇಕಾದ ದೊಡ್ಡ ಪಾಠವಾಗಿದೆ. ನಾವು ಕಲಿಯಬೇಕು ಹಾಗೂ ನಮ್ಮ ಉತ್ತಮ ರೂಢಿಗಳ ಬಗ್ಗೆ ಪರಸ್ಪರ ಮಾರ್ಗದರ್ಶನ ಮಾಡಬೇಕು"ಎಂದು ಪ್ರಧಾನಮಂತ್ರಿ ಹೇಳಿದ್ದಾರೆ.

ದೇಶದಲ್ಲಿ ತಂತ್ರಜ್ಞಾನ ಬಳಕೆ ಬಗ್ಗೆ ಉಲ್ಲೇಖ
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ವಿರುದ್ಧದ ಹೋರಾಟದಲ್ಲಿ ತಂತ್ರಜ್ಞಾನದ ಮಹತ್ವದ ಬಗ್ಗೆ ಪ್ರಧಾನಿ ಮೋದಿ ಪ್ರಸ್ತಾಪಿಸಿದರು. "ಭಾರತ ತನ್ನ ಕೋವಿಡ್-19 ಪ್ರಕರಣಗಳ ಪತ್ತೆ ಮತ್ತು ಸಂಪರ್ಕಿತರ ಪತ್ತೆ ಆ್ಯಪ್ ತಾಂತ್ರಿಕವಾಗಿ ಕಾರ್ಯಸಾಧ್ಯವಾದ ತಕ್ಷಣ ಅದರ ಮೂಲವನ್ನು ಮುಕ್ತಗೊಳಿಸಲಾಗುತ್ತದೆ. ಸುಮಾರು 200 ದಶಲಕ್ಷ ಬಳಕೆದಾರರನ್ನು ಹೊಂದಿರುವ 'ಆರೋಗ್ಯ ಸೇತು' ಆ್ಯಪ್ ಅಭಿವೃದ್ಧಿಪಡಿಸಿದವರಿಗೆ ಸುಲಭವಾಗಿ ಲಭ್ಯವಿರುವ ಪ್ಯಾಕೇಜ್ ಆಗಿದೆ. ಭಾರತದಲ್ಲಿ ಈ ಆ್ಯಪ್ ಬಳಕೆಯಲ್ಲಿದ್ದು, ಅದರ ವೇಗ ನೈಜ ಜಗತ್ತಿನಲ್ಲಿ ಸಾಬೀತಾಗಿದೆ," ಎಂದು ಹೇಳಿದರು.

ದೇಶದ ಸಾರ್ವಜನಿಕರಿಗೆ ವಿಶ್ವಾಸಾರ್ಹ ಪುರಾವೆ
"ದೇಶದಲ್ಲಿ ಕೊವಿಡ್-19 ಲಸಿಕೆಯ ಪ್ರಾಮುಖ್ಯತೆಯನ್ನು ಗಮನದಲ್ಲಿಟ್ಟುಕೊಂಡು ಡಿಜಿಟಲ್ ವಿಧಾನವನ್ನು ಅಳವಡಿಸಿಕೊಳ್ಳಲು ನಿರ್ಧರಿಸಲಾಗಿದೆ. ಇದರಿಂದ ಜನರಿಗೆ ತಾವು ಲಸಿಕೆ ಪಡೆದಿರುವುದನ್ನು ಸಾಬೀತು ಪಡಿಸಲು ನೆರವಾಗುತ್ತದೆ. ಸಾಂಕ್ರಾಮಿಕೋತ್ತರ ಜಗತ್ತು ತ್ವರಿತವಾಗಿ ಸಹಜತೆಯತ್ತ ಸಾಗಲು ಸಹಾಯವಾಗುತ್ತದೆ. ಜನರು ಯಾವಾಗ, ಎಲ್ಲಿ ಮತ್ತು ಯಾರಿಂದ ಲಸಿಕೆ ಹಾಕಿಸಿಕೊಂಡಿದ್ದಾರೆ ಎಂಬುದಕ್ಕೆ ಸುರಕ್ಷಿತ, ಸುಭದ್ರ ಮತ್ತು ವಿಶ್ವಾಸಾರ್ಹ ಪುರಾವೆಯನ್ನು ಒದಗಿಸುತ್ತದೆ. ಲಸಿಕೆ ಬಳಕೆಯನ್ನು ಪತ್ತೆ ಮಾಡಲು ಈ ಡಿಜಿಟಲ್ ವಿಧಾನವು ಸಹಾಯ ಮಾಡುತ್ತದೆ ಮತ್ತು ವ್ಯರ್ಥವಾಗುವುದನ್ನು ಕಡಿಮೆ ಮಾಡುತ್ತದೆ," ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಜಾಗತಿಕ ಮಟ್ಟದಲ್ಲಿ ಕೋ-ವಿನ್ ಪರಿಚಯ
"ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ನಡುವೆ ಜಾಗತಿಕ ಮಟ್ಟದಲ್ಲಿ ಕೋವಿನ್ ವೇದಿಕೆಯನ್ನು ಪರಿಚಯಿಸಲು ಇಂದಿನ ಸಮಾವೇಶ ಪ್ರಥಮ ಹೆಜ್ಜೆಯಾಗಿದೆ," ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಿಳಿಸಿದರು. ಕೋವಿನ್ ಆಪ್ ಮೂಲಕ ಭಾರತವು ಕೆಲವೇ ದಿನಗಳ ಹಿಂದೆ ಒಂದೇ ದಿನದಲ್ಲಿ 90 ಲಕ್ಷ ಡೋಸ್ ಲಸಿಕೆ ನೀಡಿತ್ತು ಎಂದರು.

ಕೊವಿಡ್-19 ಲಸಿಕೆ ಪಡೆದದ್ದಕ್ಕೆ ಕಾಗದದ ಸಾಕ್ಷಿ ಬೇಕಿಲ್ಲ
ಕೊರೊನಾವೈರಸ್ ಲಸಿಕೆ ಹಾಕಿಸಿಕೊಂಡಿದ್ದನ್ನು ಸಾಬೀತುಪಡಿಸಲು ಜನರು ದುರ್ಬಲವಾದ ಕಾಗದದ ತುಂಡುಗಳನ್ನು ತೆಗೆದುಕೊಂಡು ಹೋಗುವ ಅಗತ್ಯವಿಲ್ಲ. ಎಲ್ಲವೂ ಡಿಜಿಟಲ್ ಸ್ವರೂಪದಲ್ಲಿ ಲಭ್ಯವಿದೆ. ಆಸಕ್ತ ರಾಷ್ಟ್ರಗಳ ಸ್ಥಳೀಯ ಅವಶ್ಯಕತೆಗಳಿಗೆ ಅನುಗುಣವಾಗಿ ತಂತ್ರಾಂಶವನ್ನು ಹೊಂದಿಸಿಕೊಳ್ಳಬಹುದು. 'ಒಂದು ಭೂಮಿ, ಒಂದು ಆರೋಗ್ಯ' ವಿಧಾನದಿಂದ ಮಾರ್ಗದರ್ಶಿತವಾದ ಮಾನವೀಯತೆಯು ಖಂಡಿತವಾಗಿಯೂ ಈ ಸಾಂಕ್ರಾಮಿಕ ರೋಗವನ್ನು ಮಣಿಸುತ್ತದೆ ಎಂಬ ಭರವಸೆಯೊಂದಿಗೆ ಪ್ರಧಾನಿ ತಮ್ಮ ಮಾತು ಮುಗಿಸಿದರು.












Click it and Unblock the Notifications