ಕೇರಳದ ನ್ಯಾಯಾಲಯಕ್ಕೆ ಕಾಮುಕ ಪಾದ್ರಿಗಳಿಬ್ಬರು ಶರಣು
ತಿರುವನಂತಪುರಂ, ಆಗಸ್ಟ್ 13 : ಒಂದು ತಿಂಗಳಿನಿಂದ ಬಂಧಿತರಾಗುವುದನ್ನು ತಪ್ಪಿಸಲು ಸರ್ವ ಪ್ರಯತ್ನ ಮಾಡಿದ್ದ, ಅತ್ಯಾಚಾರ ಆರೋಪ ಹೊತ್ತಿರುವ ಕೇರಳದ ಇಬ್ಬರು ಕ್ರೈಸ್ತ ಪಾದ್ರಿಗಳು ಅಂತೂ ಸೋಮವಾರ ಶರಣಾಗಿದ್ದಾರೆ.
ಇಡೀ ಪ್ರಕರಣದ ಪ್ರಮುಖ ಆರೋಪಿ ಫಾದರ್ ಅಬ್ರಹಾಂ ವರ್ಗೀಸ್ ಅಲಿಯಾಸ್ ಫಾದರ್ ಸೋನಿ ವರ್ಗೀಸ್ ತಿರುವಲ್ಲಾ ಮ್ಯಾಜಿಸ್ಟ್ರೇಟ್ ಮುಂದೆ ಶರಣಾಗಿದ್ದರೆ, ನಾಲ್ಕನೇ ಆರೋಪಿ ಫಾದರ್ ಜೈಸ್ ಕೆ ಜಾರ್ಜ್ ಕೊಲ್ಲಂ ಕ್ರೈಂ ಬ್ರಾಂಚ್ ಎದಿರು ಶರಣಾಗಿದ್ದಾರೆ.
ಇವರಿಬ್ಬರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯ ಆಗಸ್ಟ್ 6ರಂದು ತಿರಸ್ಕರಿಸಿತ್ತು ಮತ್ತು ಆಗಸ್ಟ್ 13ರೊಳಗೆ ತಮ್ಮನ್ನು ಒಪ್ಪಿಸಿಕೊಳ್ಳಬೇಕೆಂದು ಆದೇಶಿಸಿತ್ತು. ಶರಣಾಗಿ ಪೊಲೀಸರ ತನಿಖೆಗೆ ಸಹಕರಿಸಬೇಕೆಂದೂ ಆಜ್ಞೆ ನೀಡಿತ್ತು.

ಮಧ್ಯ ವಯಸ್ಸಿನ ಮಹಿಳೆಯನ್ನು ನಾಲ್ವರು ಫಾದರ್ ಗಳು ಲೈಂಗಿಕವಾಗಿ ದುರ್ಬಳಸಿಕೊಂಡಿದ್ದಾರೆ ಎಂದು ಮಹಿಳೆಯ ಗಂಡ ದೂರು ನೀಡಿದ್ದ ಹಿನ್ನೆಲೆಯಲ್ಲಿ ಫಾದರ್ ಅಬ್ರಹಾಂ ವರ್ಗೀಸ್, ಫಾದರ್ ಜಾಬ್ ಮ್ಯಾಥ್ಯೂ, ಫಾದರ್ ಜಾನ್ಸನ್ ಮ್ಯಾಥ್ಯೂ ಮತ್ತು ಫಾದರ್ ಜೈಸ್ ಕೆ ಜಾರ್ಜ್ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದರು.
ಮಹಿಳೆಯೇ ಪೊಲೀಸರಿಗೆ ನೀಡಿರುವ ಹೇಳಿಕೆಯ ಪ್ರಕಾರ, ಆಕೆ ಹದಿನಾರರ ಹರೆಯದಲ್ಲಿದ್ದಾಗ ಯುವಕನಾಗಿದ್ದ ಫಾದರ್ ಸೋನಿ ಅಬ್ರಹಾಂ ಜೊತೆ ಲೈಂಗಿಕ ಸಂಪರ್ಕ ಸಾಧಿಸಿದ್ದರು. ಅವರಿಬ್ಬರು ಪ್ರತ್ಯೇಕವಾಗಿ ಮದುವೆಯಾದ ನಂತರವೂ ಸುಮಾರು 10 ವರ್ಷಗಳ ಕಾಲ ಸೋನಿ ಅಬ್ರಹಾಂ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಲೇ ಇದ್ದ.
ಇದರಿಂದ ಬೇಸತ್ತಿದ್ದ ಮಹಿಳೆ, ತನ್ನ ಮಗಳ ಪುಣ್ಯಸ್ನಾನದ ಸಂದರ್ಭದಲ್ಲಿ, 40 ವರ್ಷದ ಕೊಲ್ಲಂ ನಿವಾಸಿಯಾಗಿರುವ ಫಾದರ್ ಜಾಬ್ ಮ್ಯಾಥ್ಯೂ ಮುಂದೆ, ಕನ್ಫೆಷನ್ ಬಾಕ್ಸ್ ನಲ್ಲಿ ಎಲ್ಲವನ್ನೂ ಹೇಳಿಕೊಂಡಿದ್ದರು. ಮಹಿಳೆಯ ಕಥೆ ತಿಳಿದ ನಂತರ ಆಕೆಯನ್ನು ಬ್ಲಾಕ್ ಮೇಲ್ ಮಾಡಲು ಆರಂಭಿಸಿದ ಜಾಬ್ ಮ್ಯಾಥ್ಯೂ ಲೈಂಗಿಕವಾಗಿಯೂ ಬಳಸಿಕೊಂಡ. ಈತ ಈ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿದ್ದಾನೆ. ಆತ ಈಗಾಗಲೆ ಪೊಲೀಸರೆದಿರು ಶರಣಾಗಿದ್ದಾನೆ.
ಇದರ ಬಗ್ಗೆ ತಿಳಿದ ನಂತರ ಪಕ್ಕದ ಚರ್ಚ್ ನಲ್ಲಿದ್ದ ಮತ್ತೊಬ್ಬ ಕಾಮುಕ ಫಾದರ್ ಜಾನ್ಸನ್ ಮ್ಯಾಥ್ಯೂ ಮಹಿಳೆಯನ್ನು ಬ್ಲಾಕ್ ಮೇಲ್ ಮಾಡಿದ್ದಲ್ಲದೆ, ನಿರಂತರವಾಗಿ ಅತ್ಯಾಚಾರ ಎಸಗುತ್ತ ಬಂದಿದ್ದ. ಬಸವಳಿದಿದ್ದ ಮಹಿಳೆಯನ್ನು ಫಾದರ್ ಜೈಸ್ ಕೆ ಜಾರ್ಜ್ ಹತ್ತಿರ ಸಲಹೆಗೆಂದು ಕಳಿಸಲಾಗಿದೆ. ಮನುಷ್ಯ ಆಕೃತಿಯ ಆ ಕಾಮುಕ, ಸಲಹೆ ನೀಡಿ ಸಾಂತ್ವನ ಹೇಳುವ ಬದಲು ಫೈವ್ ಸ್ಟಾರ್ ಹೋಟೆಲುಗಳಿಗೆ ಮಹಿಳೆಯನ್ನು ಕರೆಸಿಕೊಂಡು ಅತ್ಯಾಚಾರ ಎಸಗುತ್ತಿದ್ದ. ಆ ಎಲ್ಲ ಬಿಲ್ ಗಳನ್ನು ಮಹಿಳೆಯೇ ನೀಡಬೇಕಾಗಿತ್ತು.
ಈ ಕೊಳಕು ಮನಸ್ಸಿನ ನಾಲ್ವರು ಫಾದರ್ ಗಳ ದೌರ್ಜನ್ಯದಿಂದ ಬೇಸತ್ತ ಮಹಿಳೆ ಕಡೆಗೊಂದು ದಿನ ತನ್ನ ಗಂಡನಿಗೆ ಎಲ್ಲವನ್ನೂ ಹೇಳಿದ್ದಾಳೆ. ಗಂಡ ಈ ಕಾಮುಕರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಚರ್ಚ್ ಗೆ ದೂರು ನೀಡಿದ್ದರೂ ಪ್ರಯೋಜನವಾಗಿರಲಿಲ್ಲ. ಕಡೆಗೆ ಪೊಲೀಸರಿಗೆ ದೂರು ನೀಡಬೇಕಾಯಿತು. ಈಗ ನಾಲ್ವರೂ ಶರಣಾಗಿದ್ದಾರೆ. ಈ ಪ್ರಕರಣ ಇಡೀ ರಾಜ್ಯದಲ್ಲಿ ಪ್ರತಿಧ್ವನಿಸಿದ್ದು, ಕ್ರೈಸ್ತ ಧರ್ಮಕ್ಕೆ ಕಳಂಕ ತಂದಿದೆ.











Click it and Unblock the Notifications