ಶಬರಿಮಲೆ ಅಯ್ಯಪ್ಪನ ಸನ್ನಿಧಿಯಲ್ಲಿ ಅರ್ಚಕರ ಪುತ್ರಿ!
ತಿರುವನಂತಪುರ, ಮೇ 10: ಶಬರಿಮಲೆ ದೇವಾಲಯದ ಮುಖ್ಯ ಅರ್ಚಕರ ಪುತ್ರಿಗೆ ದೇವಾಲಯ ಭೇಟಿಗೆ ಅವಕಾಶ ಕಲ್ಪಿಸಿದ ಪ್ರಸಂಗ ನಡೆದಿದೆ. ಶಬರಿಮಲೆ ಅಯ್ಯಪ್ಪ ಸ್ವಾಮಿ ಸನ್ನಿಧಿಯಲ್ಲಿ 11 ವರ್ಷದ ಬಾಲಕಿ ಪ್ರಾರ್ಥನೆ ಸಲ್ಲಿಸಲು ಅನುಮತಿ ನೀಡಿದ ಪ್ರಕರಣ ದೇಗುಲದ ಸಮಿತಿಗೆ ತಲೆನೋವಾಗಿದೆ. ಈ ಪ್ರಕರಣದಲ್ಲಿ ದೇವಾಲಯದ ಐವರು ಅಧಿಕಾರಿಗಳು ತಪ್ಪಿತಸ್ಥರು ಎಂದು ಇಲಾಖಾ ತನಿಖೆಯಿಂದ ಗೊತ್ತಾಗಿದೆ.
ಶಬರಿಮಲೆ ದೇವಾಲಯದಲ್ಲಿ 10 ರಿಂದ 50 ವರ್ಷದೊಳಗಿನ ಮಹಿಳೆಯರಿಗೆ ಪ್ರವೇಶ ನಿಷಿದ್ಧವಿದೆ. ದೇವಾಲಯದ ಸಂಪ್ರದಾಯವನ್ನು ಉಲ್ಲಂಘಿಸಿ ಈ ಯುವತಿ ಏಪ್ರಿಲ್ 17ರಂದು ಸನ್ನಿಧಾನಕ್ಕೆ ಬಂದು ಪ್ರಾರ್ಥನೆ ಸಲ್ಲಿಸಿದ್ದಾಳೆ ಎಂದು ಹೈಕೋರ್ಟ್ ಗೆ ನೀಡಿರುವ ವರದಿಯಲ್ಲಿ ಶಬರಿಮಲೆಯ ವಿಶೇಷ ಆಯುಕ್ತರು ತಿಳಿಸಿದ್ದರು.
ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ ತೋರಿಸಿರುವ ಕೇರಳ ರಾಜ್ಯದ ಮೂವರು ಪೊಲೀಸರು ಮತ್ತು ತಿರುವಾಂಕೂರು ದೇವಸ್ಥಾನ ಮಂಡಳಿಯ (ಟಿಡಿಬಿ) ಇಬ್ಬರು ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ.

ಶಬರಿಮಲೆಯ ಮುಖ್ಯ ಅರ್ಚಕರ ಭದ್ರತಾ ಅಧಿಕಾರಿ, ಇಬ್ಬರು ಮಹಿಳಾ ಪೊಲೀಸ್ ಅಧಿಕಾರಿಗಳು ಮತ್ತು ಟಿಡಿಬಿಯ ಇಬ್ಬರು ಗುತ್ತಿಗೆ ಆಧಾರದ ಸಿಬ್ಬಂದಿಯ ಮೇಲೆ ದೂರು ಸಲ್ಲಿಸಲಾಗಿತ್ತು. ಮುಖ್ಯ ಅರ್ಚಕರ ಪುತ್ರಿಗೆ ದೇವಾಲಯ ಪ್ರವೇಶಕ್ಕೆ ಅವಕಾಶ ನೀಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಟಿಡಿಬಿಯ ವಿಚಕ್ಷಣಾ ವಿಭಾಗದ ತನಿಖೆಯನ್ನು ಆಧರಿಸಿ ಈ ವರದಿ ಸಿದ್ಧಪಡಿಸಲಾಗಿದೆ.
ದೇವಾಲಯದೊಳಗೆ 10ರಿಂದ 50 ವರ್ಷದೊಳಗಿನ ಮಹಿಳೆಯರು ಪ್ರವೇಶಿಸುವಂತಿಲ್ಲ. ಋತುಮತಿಯಾದ ಮಹಿಳೆ ದೇವಸ್ಥಾನ ಪ್ರವೇಶಿಸಲು ಅವಕಾಶವಿಲ್ಲ. ಈ ಹಿಂದೆ ಕರ್ನಾಟಕದ ಚಲನಚಿತ್ರ ನಟಿ ಜಯಮಾಲ ಅವರು ಅಯ್ಯಪ್ಪಸ್ವಾಮಿ ಗರ್ಭಗುಡಿ ಪ್ರವೇಶಿಸಿ ಪಾದ ಸ್ಪರ್ಶ ಮಾಡಿದ್ದೆ ಎಂದು ಹೇಳಿ ದೇಗುಲ ಸಮಿತಿ ಹಾಗೂ ಕೇರಳದ ಭಕ್ತರ ಕೋಪಕ್ಕೆ ತುತ್ತಾಗಿದ್ದರು. ದೇವಸ್ಥಾನದ ಜ್ಯೋತಿಷಿ ಉನ್ನಿಕೃಷ್ಣನ್ ಪಣಿಕ್ಕರ್, ಅವರ ಸಹಾಯಕ ರಘುಪತಿ ಮತ್ತು ದೇವಸ್ಥಾನದ ಕಾರ್ಯಕಾರಿ ಅಧಿಕಾರಿ ರಾಜಶೇಖರ್ ಇನ್ನಿತರರು ಕೂಡಾ ಆರೋಪಿಗಳಾಗಿ ಕೋರ್ಟ್ ಮೆಟ್ಟಿಲೇರಿದಿದ್ದರು. ಆದರೆ, ಕೊನೆಗೂ ಹರಿಹರಪುತ್ರನ ಅನುಗ್ರಹ ಸಿಕ್ಕಿ ಜಯಮಾಲಾ ಅವರನ್ನು ನಿರ್ದೋಷಿ ಎಂದು ಕೋರ್ಟ್ ಘೋಷಿಸಿತ್ತು. [ವಿವರ ಇಲ್ಲಿ ಓದಿ]












Click it and Unblock the Notifications