1 ಲಕ್ಷ ಮೌಲ್ಯದ ಫೋನ್‌ಗಾಗಿ ಡ್ಯಾಮ್‌ನಿಂದ 21 ಲಕ್ಷ ಲೀಟರ್ ನೀರನ್ನು ಹೊರ ಹಾಕಿಸಿದ ಅಧಿಕಾರಿ!
ನವದೆಹಲಿ, ಮೇ. 26: ಅಧಿಕಾರಿಯೊಬ್ಬರು ಡ್ಯಾಮ್‌ನಲ್ಲಿ ತನ್ನ ಫೋನ್ ಬಿದ್ದ ಕಾರಣ ಮೊಬೈಲ್ ಹುಡುಕಲು ಬರೋಬ್ಬರಿ 21 ಲಕ್ಷ ಲೀಟರ್ ನೀರನ್ನು ಮೂರು ದಿನಗಳ ಕಾಲ ಹೊರಹಾಕಿಸಿರುವ ಘಟನೆ ವರದಿಯಾಗಿದೆ. ಛತ್ತೀಸ್‌ಗಢದ ಸರ್ಕಾರಿ ಅಧಿಕಾರಿಯು ತನ್ನ ಮೊಬೈಲ್‌ಗಾಗಿ ಇಡೀ ಜಲಾಶಯವನ್ನೇ ಖಾಲಿ ಮಾಡಿ ಜನರ ಕೆಂಗಣ್ಣಿಗೆ ಮಾತ್ರವಲ್ಲ ಸರ್ಕಾರದ ಆಕ್ರೋಶಕ್ಕೂ ಗುರಿಯಾಗಿದ್ದಾರೆ.
ಛತ್ತೀಸ್‌ಗಢದಲ್ಲಿ ಈ ವಿಲಕ್ಷಣ ಘಟನೆ ನಡೆದಿದ್ದು, ದುಬಾರಿ ಫೋನ್ ಅನ್ನು ಮರುಪಡೆಯಲು ಜಲಾಶಯದಿಂದ 21 ಲಕ್ಷ ಲೀಟರ್ ನೀರನ್ನು ಹರಿಸಿದ ಆರೋಪದ ಮೇಲೆ ಸರ್ಕಾರಿ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ. ಘಟನೆ ವೈರಲ್ ಆದ ಬೆನ್ನಲ್ಲೆ ಮಾಹಿತಿ ನೀಡಿರುವ ಅವರು, ಆ ನೀರು "ಬಳಕೆಗೆ ಯೋಗ್ಯವಾಗಿಲ್ಲ" ಎಂದು ಹೇಳಿದ್ದಾರೆ.

ಇದರ ಜೊತೆಗೆ ಅಧಿಕಾರಿಯು ಸ್ಥಳೀಯ ಉಪವಿಭಾಗಾಧಿಕಾರಿಯಿಂದ ಪೂರ್ವ ಮೌಖಿಕ ಅನುಮತಿಯನ್ನು ಪಡೆದಿದ್ದಾಗಿ ತಿಳಿಸಿದ್ದಾರೆ. ಇನ್ನು, ತಮ್ಮ ಹುದ್ದೆಯನ್ನು ದುರ್ಬಳಕೆ ಮಾಡಿಕೊಂಡ ಹಾಗೂ ಸಂಬಂಧಪಟ್ಟ ಅಧಿಕಾರಿಯಿಂದ ಅನುಮತಿ ಪಡೆಯದ ಆರೋಪದ ಮೇಲೆ ಜಿಲ್ಲಾಧಿಕಾರಿ ರಾಜೇಶ್ ವಿಶ್ವಾಸ್ ಅವರನ್ನು ಅಮಾನತುಗೊಳಿಸಿದ್ದಾರೆ.
ಕಂಕೇರ್ ಜಿಲ್ಲೆಯ ಕೊಯಿಲಿಬೀಡಾ ಬ್ಲಾಕ್‌ನ ಆಹಾರ ಅಧಿಕಾರಿ ರಾಜೇಶ್ ವಿಶ್ವಾಸ್ ಅವರು ಖೇರ್ಕಟ್ಟಾ ಅಣೆಕಟ್ಟಿನಲ್ಲಿ ರಜೆಯನ್ನು ಆನಂದಿಸುತ್ತಿದ್ದಾಗ ಆಕಸ್ಮಿಕವಾಗಿ 1 ಲಕ್ಷ ರೂಪಾಯಿ ಮೌಲ್ಯದ ಸ್ಮಾರ್ಟ್‌ಫೋನ್ ಅನ್ನು 15 ಅಡಿ ಆಳದ ನೀರಿನಿಂದ ತುಂಬಿದ್ದ ಜಲಾಶಯದಲ್ಲಿ ಬೀಳಿಸಿದ್ದಾರೆ. ತಕ್ಷಣವೇ ಸ್ಥಳೀಯರು ಮೊಬೈಲ್ ಹುಡುಕಲು ನೀರಿಗೆ ಧುಮುಕಿದ್ದರು.

ಆದರೆ, ಮೊಬೈಲ್ ಹೊರತೆಗೆಯುವ ಪ್ರಯತ್ನ ವಿಫಲವಾದಾಗ, ಅಧಿಕಾರಿಯು ಮೂರು ದಿನಗಳ ಕಾಲ ನಿರಂತರವಾಗಿ ಎರಡು 30hp ಡೀಸೆಲ್ ಪಂಪ್‌ಗಳನ್ನು ಚಲಾಯಿಸಿ, 21 ಲಕ್ಷ ಲೀಟರ್ ನೀರನ್ನು ಖಾಲಿ ಮಾಡಿದ್ದಾರೆ. ಈ ನೀರನ್ನು 1,500 ಎಕರೆ ಕೃಷಿ ಭೂಮಿಗೆ ನೀರುಣಿಸಲು ಸಾಕಾಗುತ್ತದೆ. ಆದರೆ ಮೊಬೈಲ್‌ಗಾಗಿ ಎಲ್ಲಾ ನೀರನ್ನು ಹೊರಹಾಕಲಾಗಿದೆ.
ಸೋಮವಾರ ಸಂಜೆಯಿಂದ ಪಂಪ್‌ಗಳು ನೀರನ್ನು ಹೊರ ಹಾಕಲು ಆರಂಭಿಸಿದವು ಮತ್ತು ಗುರುವಾರದವರೆಗೆ ಕೆಲಸ ಮಾಡಿದ್ದವು. ದೂರಿನ ಮೇರೆಗೆ ನೀರಾವರಿ ಮತ್ತು ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಇದನ್ನು ತಡೆದಿದ್ದಾರೆ. ಆದರೆ, ಆರು ಅಡಿ ಆಳದವರೆಗೆ ಅಂದರೆ ಸುಮಾರು 21 ಲಕ್ಷ ಲೀಟರ್ ನೀರನ್ನು ಈಗಾಗಲೇ ಪಂಪ್ ಹೊಎಹಾಕಲಾಗಿತ್ತು. ಈ ಪ್ರದೇಶವು ಬೇಸಿಗೆಯಲ್ಲಿಯೂ ಸಹ 10 ಅಡಿ ಆಳದ ನೀರು ಇದ್ದು, ಪ್ರಾಣಿಗಳು ಬೇಸಿಗೆಯಲ್ಲಿ ದಾಹ ನೀಗಿಸಲು ಬಳಸುತ್ತಿದ್ದವು.
"ಸೆಲ್ಫಿ ತೆಗೆದುಕೊಳ್ಳುವಾಗ ಅವರ ಫೋನ್ ಕೈಯಿಂದ ಜಾರಿದೆ. ಮೊಬೈಲ್‌ನಲ್ಲಿ ಅಧಿಕೃತ ಇಲಾಖೆಯ ಡೇಟಾ ಇದ್ದ ಕಾರಣ ಅದನ್ನು ಮರಳಿ ಪಡೆಯಬೇಕಾಯಿತು. ನಾನು ನನ್ನ ಬಿಡುವಿನ ದಿನದಂದು ಅಲ್ಲಿ ಸ್ನಾನ ಮಾಡಲು ಕೆಲವು ಸ್ನೇಹಿತರೊಂದಿಗೆ ಭಾನುವಾರ ಅಣೆಕಟ್ಟಿಗೆ ಹೋಗಿದ್ದೆ. ನನ್ನ ಫೋನ್ ಓವರ್‌ಫ್ಲೋ ಟ್ಯಾಂಕರ್‌ಗಳಿಗೆ ಬಿತ್ತು. ಅದರ ನೀರು ಬಳಕೆಗೆ ಯೋಗ್ಯವಾಗಿರಲಿಲ್ಲ. ಅದು 10 ಅಡಿ ಆಳವಾಗಿತ್ತು" ಎಂದು ರಾಜೇಶ್ ವಿಶ್ವಾಸ್ ಹೇಳಿದ್ದಾರೆ.
ಛತ್ತೀಸ್‌ಗಢದ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕ ರಮಣ್ ಸಿಂಗ್, ಭೂಪೇಶ್ ಬಘೇಲ್ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಕಟುವಾಗಿ ಟೀಕಿಸಿದ್ದಾರೆ. "ಸರ್ವಾಧಿಕಾರಿ" ರಾಜ್ಯ ಸರ್ಕಾರದ ಅಡಿಯಲ್ಲಿ ಅಧಿಕಾರಿಗಳು ಈ ಪ್ರದೇಶವನ್ನು ತಮ್ಮ ಪೂರ್ವಜರ ಆಸ್ತಿ ಎಂದು ಪರಿಗಣಿಸುತ್ತಿದ್ದಾರೆ ಎಂದು ಹೇಳಿದ್ದಾರೆ.












Click it and Unblock the Notifications