ಛತ್ತೀಸ್‌ಗಢ: ಕ್ಷುಲ್ಲಕ ಕಾರಣಕ್ಕೆ ಅಪ್ಪ, ಅಮ್ಮ, ಅಜ್ಜಿಯನ್ನು ಕೊಂದು ಸುಟ್ಟುಹಾಕಿದ ಆರೋಪಿ
ರಾಯ್‌ಗಢ, ಮೇ.19: ಕಾರಣವೇನೆ ಇದ್ದರೂ ಹೆತ್ತವರ ಮುಂದೆ ಜೋರಾಗಿ ಮಾತನಾಡಲು ಹೆದರುವ ಮಕ್ಕಳಿದ್ದಾರೆ. ಹೆತ್ತವರನ್ನು ಗೌರವಿಸುವ ಈ ದೇಶದಲ್ಲಿ ಕ್ಷುಲ್ಲಕ ಕಾರಣಕ್ಕೆ ಅವರನ್ನೇ ಕೊಂದು ಸುಟ್ಟು ಹಾಕಿರುವ ಘಟನೆ ಛತ್ತೀಸ್‌ಗಢದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಛತ್ತೀಸ್‌ಗಢದ ಮಹಾಸಮುಂದ್ ಜಿಲ್ಲೆಯಲ್ಲಿ 24 ವರ್ಷದ ಯುವಕನೊಬ್ಬರನ್ನು ಬಂಧಿಸಲಾಗಿದೆ.
24 ವರ್ಷದ ಯುವಕರೊಬ್ಬರನ್ನು ತನ್ನ ಅಪ್ಪ, ಅಮ್ಮ ಮತ್ತು ಅಜ್ಜಿಯನ್ನು ಕೊಂದು ಅವರ ದೇಹವನ್ನು ಸುಟ್ಟುಹಾಕಿದ ಆರೋಪದ ಮೇಲೆ ಬಂಧಿಸಲಾಗಿದೆ. ಸಿಂಗ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಪುಟ್ಕಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಆರೋಪಿಯನ್ನು 24 ವರ್ಷದ ಉದಿತ್ ಭೋಯ್ ಎಂದು ಗುರುತಿಸಲಾಗಿದ್ದು, ಮಾದಕ ವ್ಯಸನಿಯಾಗಿದ್ದು, ತಂದೆ ಹಣ ನಿರಾಕರಿಸಿದ ನಂತರ ಕುಟುಂಬ ಸದಸ್ಯರನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಉದಿತ್ ಭೋಯ್ ತನ್ನಯ ತಂದೆ ಪ್ರಭಾತ್ ಭೋಯ್, ತಾಯಿ ಮತ್ತು ಅಜ್ಜಿಯೊಂದಿಗೆ ವಾಸವಾಗಿದ್ದರು. ತನ್ನ ತಂದೆ - ತಾಯಿ ಮತ್ತು ಅಜ್ಜಿ ಮಲಗಲು ಹೋದಾಗ ಅವರನ್ನು ಕೊಲೆ ಮಾಡಿದ್ದಾರೆ. ದೊಣ್ಣೆಯಿಂದ ತಂದೆಯ ತಲೆಗೆ ಹೊಡೆದು ನಂತರ ತಾಯಿಯ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಗಲಾಟೆಯಿಂದ ಎಚ್ಚರಗೊಂಡ ಅಜ್ಜಿ ಮೇಲೂ ಉದಿತ್ ಹಲ್ಲೆ ನಡೆಸಿದ್ದಾನೆ.
ನಂತರ ಅವರ ಶವಗಳನ್ನು ಮನೆಯ ಬಾತ್ ರೂಂನಲ್ಲಿ ಇರಿಸಿ, ಮರುದಿನ, ಉದಿತ್ ಭೋಯ್ ಮನೆಯ ಹಿತ್ತಲಿನಲ್ಲಿ ಮರ ಮತ್ತು ಸ್ಯಾನಿಟೈಸರ್ ಬಳಸಿ ದೇಹಗಳಿಗೆ ಬೆಂಕಿ ಹಚ್ಚಿದ್ದಾರೆ. ಇದಾದ ನಂತರ ಪ್ರಕರಣದಿಂದ ತಪ್ಪಿಸಿಕೊಳ್ಳಲು, ಮೇ 12 ರಂದು ಸಿಂಗ್‌ಪುರ ಪೊಲೀಸ್ ಠಾಣೆಯಲ್ಲಿ ತನ್ನ ತಂದೆ, ತಾಯಿ ಮತ್ತು ಅಜ್ಜಿ ಕಾಣೆಯಾದ ವರದಿಯನ್ನು ಸಲ್ಲಿಸಿದರು.

ಪ್ರಭಾತ್ ಭೋಯ್ ಅವರ ಇನ್ನೊಬ್ಬ ಮಗ, ರಾಯ್‌ಪುರದಲ್ಲಿ ಓದುತ್ತಿದ್ದ ಅಮಿತ್, ತನ್ನ ಹೆತ್ತವರು ಮತ್ತು ಅಜ್ಜಿ ನಾಪತ್ತೆಯಾದ ಬಗ್ಗೆ ತಿಳಿದಾಗ ಅನುಮಾನಗೊಂಡಿದ್ದಾರೆ.ಅವರು ಪುಟ್ಕಾದಲ್ಲಿರುವ ಅವರ ನಿವಾಸಕ್ಕೆ ಬಂದಾಗ, ಹಿತ್ತಲಿನಲ್ಲಿ ರಕ್ತದ ಕಲೆಗಳು ಮತ್ತು ಬೆಂಕಿ ಹಚ್ಚಿರುವ ಬೂದಿಯ ಚಿಹ್ನೆಗಳು ಮತ್ತು ಮಾನವ ಮೂಳೆಗಳನ್ನು ಕಂಡಿದ್ದಾರೆ. ಪರಿಸ್ಥಿತಿಯಿಂದ ಆತಂಕಗೊಂಡ ಅಮಿತ್ ತಕ್ಷಣ ಸಿಂಗ್‌ಪುರ ಪೊಲೀಸ್ ಠಾಣೆಗೆ ತೆರಳಿ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇತ್ತ, ಉದಿತ್ ತನ್ನ ತಂದೆಯ ಮೊಬೈಲ್ ಫೋನ್‌ನಿಂದ ತನ್ನ ಸಂಬಂಧಿಕರಿಗೆ ಸಂದೇಶಗಳನ್ನು ಕಳುಹಿಸಿದ್ದು, ತಾವು ಸುರಕ್ಷಿತವಾಗಿದ್ದು, ತಮ್ಮ ನಾಪತ್ತೆಗೆ ಅಮಿತ್ ಕಾರಣ ಎಂದು ಆರೋಪಿಸಿದ್ದಾರೆ. ಆದರೆ, ಪೊಲೀಸರು ಮೊಬೈಲ್ ಫೋನ್ ಸ್ಥಳವನ್ನು ಪತ್ತೆಹಚ್ಚಿದ್ದಾರೆ. ಇದೇ ತನಿಖೆ ಅವರನ್ನು ಅಪರಾಧದ ಸ್ಥಳದ ಸಮೀಪಕ್ಕೆ ಕರೆದೊಯ್ಯಿತು. ಪೊಲೀಸರು ಮನೆಯಲ್ಲಿ ಹುಡುಕಾಟ ನಡೆಸಿದಾಗ, ಮನೆಯ ಹಿತ್ತಲಿನಲ್ಲಿ ರಕ್ತದ ಕಲೆಗಳು, ಸುಟ್ಟ ಶವಗಳ ಗುರುತುಗಳು ಮತ್ತು ಬೂದಿಯಲ್ಲಿ ಮಾನವ ಅವಶೇಷಗಳು ಪತ್ತೆಯಾಗಿವೆ. ಪೊಲೀಸರು ಉದಿತ್ ಭೋಯ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು.
ಆರಂಭದಲ್ಲಿ ಪೊಲೀಸರಿಗೆ ಅಸ್ಪಷ್ಟ ಉತ್ತರ ನೀಡಿ ದಾರಿತಪ್ಪಿಸಲು ಯತ್ನಿಸಿದ ಉದಿತ್ ಭೋಯ್ ಬಳಿಕ ತಪ್ಪೊಪ್ಪಿಕೊಂಡಿದ್ದಾನೆ. ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 302 (ಕೊಲೆ) ಮತ್ತು 201 (ಸಾಕ್ಷ್ಯ ಕಣ್ಮರೆಯಾಗುವಂತೆ ಮಾಡಿದ್ದು) ಅಡಿಯಲ್ಲಿ ಅವರನ್ನು ಬಂಧಿಸಲಾಗಿದೆ.












Click it and Unblock the Notifications