ಅಸಾರಮ್ ಬಾಪು ಪುತ್ರನ ಮೇಲೆ ಚಾರ್ಜ್ ಶೀಟ್
ನವದೆಹಲಿ, ಮಾ.3: ಅಪ್ರಾಪ್ತ ವಯಸ್ಸಿನ ಆಶ್ರಮವಾಸಿ ಬಾಲಕಿ ಹಾಗೂ ಈ ಮೊದಲು ಆಶ್ರಮದಲ್ಲಿದ್ದ ಸಹೋದರಿಯರಿಬ್ಬರಲ್ಲಿ ಒಬ್ಬಳ ಮೇಲೆ ಅತ್ಯಾಚಾರ ಎಸಗಿದ ಆರೋಪ ಹೊತ್ತಿರುವ ನಾರಾಯಣ ಸಾಯಿ ತಪ್ಪೊಪ್ಪಿಗೆ ನೀಡಿರುವ ಸ್ವಯಂ ಘೋಷಿತ ದೇವಮಾನವ ಅಸಾರಾಮ್ ಬಾಪು ಅವರ ಪುತ್ರ ನಾರಾಯಣ ಸಾಯಿ ವಿರುದ್ಧ ಸಾವಿರಾರು ಪುಟಗಳ ಆರೋಪ ಪಟ್ಟಿಯನ್ನು ಕೋರ್ಟಿಗೆ ಸಲ್ಲಿಸಲಾಗಿದೆ.
ಐಪಿಸಿ ಸೆಕ್ಷನ್ 376ರ ಅನ್ವಯ ಸಾಯಿ ವಿರುದ್ಧ ಅತ್ಯಾಚಾರ, ಸೆಕ್ಷನ್ 377ರ ಪ್ರಕಾರ ಅಸ್ವಾಭಾವಿಕ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳುವಿಕೆ ಹಾಗೂ ಸೆಕ್ಷನ್ 120(ಬಿ) ಅನ್ವಯ ಕ್ರಿಮಿನಲ್ ಪಿತೂರಿ ಎಂಬ ಆರೋಪಗಳನ್ನು ಹೊರಿಸಲಾಗಿದೆ ಎಂದು ಸೂರತ್ ಪೊಲೀಸರು ತಿಳಿಸಿದ್ದಾರೆ.
ಲೈಂಗಿಕ ಕಿರುಕುಳ, ಅಕ್ರಮ ಬಂಧನ, ಕಾನೂನು ಬಾಹಿರ ಒಟ್ಟುಸೇರುವಿಕೆ, ಶಸ್ತ್ರಾಸ್ತ್ರ, ಮಾರಕ ಆಯುಧಗಳಿಂದ ಬೆದರಿಸಿರುವುದು ಎಂಬಿತ್ಯಾದಿ ಆರೋಪಗಳನ್ನು ಸಾಯಿ ಹಾಗೂ ಇತತರೆ 29 ಮಂದಿ ಆರೋಪಿಗಳ ವಿರುದ್ಧ ಸೇರಿಸಲಾಗಿದೆ. ಸುಮಾರು 150 ಸಾಕ್ಷಿಗಳ ಹೇಳಿಕೆಗಳನ್ನೊಳಗೊಂಡ 1,100 ಪುಟಗಳ ಆರೋಪ ಪಟ್ಟಿಯನ್ನು ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಜೆ.ಎನ್.ಥಕ್ಕರ್ ಪೀಠಕ್ಕೆ ಸಲ್ಲಿಸಲಾಗಿದೆ.

ಸಾಯಿ ವಿರುದ್ಧ ದೂರು ದಾಖಲಿಸಿದ್ದ ಮಹಿಳೆಯ ಹಿರಿಯ ಸಹೋದರಿ ಅಸಾರಾಮ್ ವಿರುದ್ಧವೂ ಇದೇ ಮಾದರಿಯ ದೂರು ಸಲ್ಲಿಸಿದ್ದರು. ಅಸಾರಾಮ್ ನ ಸೂರತ್ ಆಶ್ರಮದಲ್ಲಿ 2002ರಿಂದ 2005ರವರೆಗೆ ಸಾಯಿ ತನ್ನ ಮೇಲೆ ಪದೇಪದೇ ಅತ್ಯಾಚಾರವೆಸಗಿರುವುದಾಗಿ ಮಹಿಳೆ ದೂರಿದ್ದರು. ಅತ್ಯಾಚಾರ ಆರೋಪದ ಜತೆಗೆ ಮಹಿಳೆ ಲಂಚದ ಆರೋಪ ಕೂಡಾ ಮಾಡಿದ್ದರು. 8 ಕೋಟಿ ರು ಲಂಚದ ಮೊತ್ತವನ್ನು ವಶಪಡಿಸಿಕೊಂಡಿರುವುದಾಗಿ ಕೂಡಾ ಪೊಲೀಸರು ದಾಖಲಿಸಿದ್ದಾರೆ.
ಆಶ್ರಮದಲ್ಲಿದ್ದ 16 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ ದೇವಮಾನನನ್ನು ಕಳೆದ ಆಗಸ್ಟ್ ನಲ್ಲೇ ಜೈಲಿಗೆ ಹಾಕಲಾಗಿದೆ. ನಂತರ ಈ ಹಿಂದೆ 2002-05ರಲ್ಲಿ ಆಶ್ರಮದಲ್ಲಿದ್ದ ತಮ್ಮ ಮೇಲೆ ಅಸಾರಾಂ ಹಾಗೂ ಮಗ ನಾರಾಯಣ್ ಸಾಯಿ ಅತ್ಯಾಚಾರ ಎಸಗಿದ್ದರು ಎಂದು ಅಹ್ಮದಾಬಾದ್ ನಿವಾಸಿಗಳಾಗಿರುವ ಸಹೋದರಿಯರಿಬ್ಬರು ಅ.6ರಂದು ಕೇಸು ದಾಖಲಿಸಿದ್ದರು.
ನಾರಾಯಣ್ ಸಾಯಿ ವಿರುದ್ಧ ಸೂರತ್ ನ ಜೆಹಾಂಗೀರ್ ಪುರ್ ನಲ್ಲಿ ಕೇಸು ದಾಖಲಿಸಲಾಗಿತ್ತು. ಇತ್ತೀಚೆಗೆ ಅಸಾರಾಂ ಹಾಗೂ ನಾರಾಯಣ ಸಾಯಿ ವಿರುದ್ಧ ಸುಮಾರು 1,011 ಪುಟಗಳಷ್ಟು ಆರೋಪಪಟ್ಟಿಯನ್ನು ಜೋಧಪುರದ ಕೋರ್ಟಿಗೆ ಸಲ್ಲಿಸಲಾಗಿತ್ತು. 121 ದಾಖಲೆ ಪತ್ರ, ಹೇಳಿಕೆಗಳು ಹಾಗೂ 58 ಸಾಕ್ಷಿಗಳ ಹೆಸರನ್ನು ಇದರಲ್ಲಿ ನಮೂದಿಸಲಾಗಿದೆ. ಅಸಾರಾಂ ಹಾಗೂ ಇತರೆ ಆರೋಪಿಗಳ ಮೇಲೆ ಐಪಿಸಿ ಸೆಕ್ಷನ್ 342,376(ಎಫ್), 376 (ಡಿ), 354(ಎ), 506 ಹಾಗೂ 109 ಅನ್ವಯ ಪ್ರಕರಣ ದಾಖಲಿಸಲಾಗಿತ್ತು.











Click it and Unblock the Notifications