ನೋಡುತ್ತಿರಿ, ಕೇಂದ್ರ ಸರ್ಕಾರ ಮಹಿಳಾ ಮೀಸಲಾತಿ ಮಸೂದೆ ಜಾರಿ ಮಾಡಲ್ಲ: ಬಿಹಾರ ಸಿಎಂ ನಿತೀಶ್ ಕುಮಾರ್
ಪಾಟ್ನಾ, ಸೆಪ್ಟೆಂಬರ್ 20: ಮಹಿಳಾ ಮೀಸಲಾತಿ ಮಸೂದೆ ಜಾರಿ ಕುರಿತು ಸಂಸತ್ತಿನಲ್ಲಿ ನಡೆಯುತ್ತಿರುವ ಚರ್ಚೆಯ ನಡುವೆಯೇ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಮಸೂದೆಯನ್ನು ಜಾರಿಗೆ ತರುವುದಿಲ್ಲ ಮತ್ತು ಚುನಾವಣೆಯಲ್ಲಿ ರಾಜಕೀಯ ಲಾಭ ಪಡೆಯಲು ಅವರು ಅದನ್ನು ಮುಂದಕ್ಕೆ ತೆಗೆದುಕೊಂಡಿದ್ದಾರೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಬುಧವಾರ ಆರೋಪಿಸಿದ್ದಾರೆ.
ಬಿಜೆಪಿಯವರು ಮಸೂದೆಯನ್ನು ಜಾರಿಗೆ ತರುವುದಿಲ್ಲ. ಅವರು ಮಸೂದೆ ಜಾರಿ ಮಾಡಲು ಬಯಸಿದರೆ ಅದನ್ನು ಮೊದಲೇ ಮಾಡುತ್ತಿದ್ದರು. ಮಹಿಳಾ ಮೀಸಲಾತಿ ಅಗತ್ಯವಾಗಿದ್ದು, ನಾವು ಮೊದಲಿನಿಂದಲೂ ಅದರ ಜಾರಿಗೆ ಒತ್ತಾಯಿಸುತ್ತಿದ್ದೇವೆ. ಬಿಜೆಪಿಯವರು ಅದನ್ನು ಜಾರಿಗೆ ತರುವುದಿಲ್ಲ. ನಾವು ಜಾತಿ ಆಧಾರಿತ ಜನಗಣತಿ ಮಾಡುವಂತೆ ಹೇಳಿದ್ದೇವೆ. ಹಾಗೆಯೇ ಇದನ್ನು ಒತ್ತಾಯಿಸಿದ್ದೇವೆ" ಎಂದು ಬಿಹಾರ ಸಿಎಂ ಹೇಳಿದರು.

ಇಂದು 11 ಗಂಟೆಗೆ ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಮಸೂದೆಯಲ್ಲಿನ ತಿದ್ದುಪಡಿಗಳನ್ನು ಮಂಡಿಸುವುದರೊಂದಿಗೆ ಸದನದಲ್ಲಿ ಮಸೂದೆಯನ್ನು ಅಂಗೀಕರಿಸುವ ಚರ್ಚೆ ಪ್ರಾರಂಭವಾಯಿತು. ಸೆಪ್ಟೆಂಬರ್ 21 ರಂದು ರಾಜ್ಯಸಭೆಯಲ್ಲಿ ಮಸೂದೆಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಏತನ್ಮಧ್ಯೆ, ಮಹಿಳಾ ಮೀಸಲಾತಿ ಮಸೂದೆಯನ್ನು ತಕ್ಷಣವೇ ಜಾರಿಗೆ ತರಲು ಕೋರಿ, ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು "ನಾರಿ ಶಕ್ತಿ ವಂದನ್ ಅಧಿನಿಯಮ್ 2023" ಮಸೂದೆಗೆ ತಮ್ಮ ಪಕ್ಷದ ಬೆಂಬಲವನ್ನು ನೀಡಿದರು.
ಮಸೂದೆ ಜಾರಿಯಲ್ಲಿನ ವಿಳಂಬವು ದೇಶದ ಮಹಿಳೆಯರಿಗೆ ಘೋರ ಅನ್ಯಾಯವಾಗಿದೆ. ನಾರಿ ಶಕ್ತಿ ವಂದನ್ ಅಧಿನ್ಯಂ 2023 ರ ಬೆಂಬಲಕ್ಕೆ ನಾನು ನಿಂತಿದ್ದೇನೆ. ಮಹಿಳೆಯರು ಹೆಚ್ಚು ಸಮಯ ಕಾಯಬೇಕಾಗುತ್ತದೆ ಎಂದು ಹೇಳಲಾಗುತ್ತಿದೆ. ಈ ಮಸೂದೆ ಕಾನೂನಾಗಬೇಕು. ಈ ಮಸೂದೆಯನ್ನು ಕೂಡಲೇ ಕಾನೂನಾಗಿಸಬೇಕೆಂದು ನಾವು ಒತ್ತಾಯಿಸುತ್ತೇವೆ. ಇದನ್ನು ತಕ್ಷಣವೇ ಮಾಡುವಂತೆ ನಾನು ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದು ಸೋನಿಯಾ ಗಾಂಧಿ ಲೋಕಸಭೆಯಲ್ಲಿ ಹೇಳಿದರು.
ಇತರೆ ಹಿಂದುಳಿದ ವರ್ಗ/ಪರಿಶಿಷ್ಟ ಜಾತಿ (OBC/SC) ಸಮುದಾಯಗಳಿಗೆ ಸೇರಿದ ಮಹಿಳೆಯರ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ಜಾತಿ ಗಣತಿಯನ್ನು ಕೈಗೊಳ್ಳಬೇಕು. ಹಿಂದುಳಿದ ಮತ್ತು ಪರಿಶಿಷ್ಟ ಜಾತಿ (ಎಸ್‌ಸಿ) ಸಮುದಾಯಕ್ಕೆ ಸೇರಿದ ಮಹಿಳೆಯರನ್ನು ಸೇರಿಸದ ಕೇಂದ್ರವನ್ನು ಟೀಕಿಸಿದ ಕಾಂಗ್ರೆಸ್ ಸಂಸದ ಪ್ರಮೋದ್ ತಿವಾರಿ ಅವರು 2010 ರ ಮಸೂದೆಯನ್ನು ಲೋಕಸಭೆಯಲ್ಲಿ ಅಂಗೀಕರಿಸಿ ಮೀಸಲಾತಿಯನ್ನು ಪ್ರಾರಂಭಿಸಬೇಕು ಎಂದು ಕೇಂದ್ರವನ್ನು ಒತ್ತಾಯಿಸಿದರು.
"ಬಿಜೆಪಿಯ ನೀತಿ ಮತ್ತು ಉದ್ದೇಶ ಪ್ರಾಮಾಣಿಕವಾಗಿದ್ದರೆ, 2024 ರ ಚುನಾವಣೆಯಲ್ಲಿ ಮಹಿಳೆಯರಿಗೆ ಮೀಸಲಾತಿ ಸಿಗುತ್ತದೆ ಎಂಬ ಭರವಸೆ ನೀಡಿ - ನಾವು ನಮ್ಮ ಎಲ್ಲಾ ಶಕ್ತಿಯೊಂದಿಗೆ ನಿಮ್ಮೊಂದಿಗೆ ನಿಲ್ಲುತ್ತೇವೆ" ಎಂದು ಸಂಸದ ತಿವಾರಿ ಹೇಳಿದರು.
ಹಿಂದುಳಿದವರು ಮತ್ತು ಎಸ್‌ಸಿಗಳು ಮಹಿಳೆಯರಲ್ಲವೇ? ಅವರನ್ನು ಸೇರಿಸದೆ ಮಹಿಳಾ ಮೀಸಲಾತಿಗೆ ಹೇಗೆ ಹೋಗುತ್ತೀರಿ? ನೀವು ಪ್ರಾಮಾಣಿಕರಾಗಿದ್ದರೆ, ರಾಜ್ಯಸಭೆಯಲ್ಲಿ ಅಂಗೀಕರಿಸಲ್ಪಟ್ಟ 2010 ರ ಮಸೂದೆ ಇನ್ನೂ ಇದೆ ಎಂದು ನಾನು ಹೇಳುತ್ತೇನೆ. ನೀವು ಅದನ್ನು ಲೋಕಸಭೆಯಲ್ಲಿ ಅಂಗೀಕರಿಸಿ ಮೀಸಲಾತಿಯನ್ನು ಪ್ರಾರಂಭಿಸಬೇಕಾಗಿತ್ತು ಎಂದು ಹೇಳಿದರು.











Click it and Unblock the Notifications