'ತಿರುಮಲ ದೇವಸ್ಥಾನ ಮೇಲೆ ನಿಯಂತ್ರಣ ಹೊಂದಲು ಕೇಂದ್ರ ಸರ್ಕಾರ ಸಂಚು'
Recommended Video

ಚಿತ್ತೂರು, ಜೂನ್ 8: ತಿರುಮಲ ದೇವಸ್ಥಾನದ ಆಡಳಿತವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಕೇಂದ್ರದಲ್ಲಿನ ಬಿಜೆಪಿ ಸರ್ಕಾರ ಸಂಚು ಮಾಡಿತ್ತು ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಆರೋಪಿಸಿದ್ದಾರೆ.
ಚಿತ್ತೂರಿನಲ್ಲಿ ನವ ನಿರ್ಮಾಣ ದೀಕ್ಷಾ ಸಮಾವೇಶದ ಆರನೇ ದಿನವಾದ ಗುರುವಾರ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಯಾವುದೇ ಪಿತೂರಿಯನ್ನು ಯಶಸ್ವಿಗೊಳಿಸಲು ಬಿಡುವುದಿಲ್ಲ ಎಂದರು.

'ತಿರುಮಲ ದೇವಸ್ಥಾನದ ವಿರುದ್ಧದ ಯಾವುದೇ ಸಂಚನ್ನು ಸಫಲಗೊಳ್ಳಲು ನಾವು ಬಿಡುವುದಿಲ್ಲ. ದೇವಸ್ಥಾನವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಕೇಂದ್ರ ಪ್ರಯತ್ನಿಸಿತ್ತು. ಅಂತಹ ಪಿತೂರಿಗಳು ಈಡೇರುವುದಿಲ್ಲ.
2003ರಲ್ಲಿ ನಾನು ಭಯೋತ್ಪಾದಕರ ದಾಳಿಯಿಂದ ಬಚಾವಾಗಲು ಬಾಲಾಜಿಯ ಆಶೀರ್ವಾದವೇ ಕಾರಣ. ಬಾಲಾಜಿ ದೇವರ ದೇವಸ್ಥಾನದ ಪಾವಿತ್ರ್ಯವನ್ನು ಹಾಳುಮಾಡಲು ನಾನು ಅವಕಾಶ ನೀಡುವುದಿಲ್ಲ' ಎಂದು ನಾಯ್ಡು ಹೇಳಿದರು.
ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ವಂಚನೆ ಮಾಡಿದೆ ಎಂದು ಅವರು ಆರೋಪಿಸಿದರು.
ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವುದಾಗಿ ಹೇಳಿ ಕೇಂದ್ರ ಸರ್ಕಾರ ಮೋಸ ಮಾಡಿದೆ. ವಿಶೇಷ ಸ್ಥಾನಮಾನ ಕಲ್ಪಿಸುವುದಾಗಿ ಬಾಲಾಜಿ ದೇವರ ಪಾದಗಳಿಗೆ ನಮಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಮಾಣ ಮಾಡಿದ್ದರು.
ನಾನು ಹಿರಿಯ ರಾಜಕಾರಣಿ. ಮುಖ್ಯಮಂತ್ರಿಯಾಗಿ ದೆಹಲಿಗೆ ತೆರಳಿ ರಾಜ್ಯಕ್ಕೆ ವಿಶೇಷ ಸ್ಥಾನಮಾನ ಮತ್ತು ಅಭಿವೃದ್ಧಿಗೆ ಅನುದಾನವನ್ನು ಕೋರಿದ್ದೆ. ಆದರೆ ಅವರು ನೀಡಲಿಲ್ಲ. ಬದಲಾಗಿ ನಮಗೆ ಮೋಸ ಮಾಡಿದರು ಎಂದು ದೂರಿದರು.












Click it and Unblock the Notifications