ಇಂದು ಕರ್ನಾಟಕ ಬಂದ್ ಮಧ್ಯೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ತುರ್ತು ಸಭೆ!
ದೆಹಲಿ ಸೆಪ್ಟೆಂಬರ್ 29: ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರ ಕರುನಾಡಿನ ಜನತೆಯ ತಾಳ್ಮೆಯ ಕಟ್ಟೆ ಒಡೆದಿದೆ. ರಾಜ್ಯದಲ್ಲಿ ಪ್ರತಿಭಟನೆಗಳು ಭುಗಿಲೆದ್ದಿದ್ದು ಇಂದು (ಸೆ.29) ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯುಎಂಎ) ತುರ್ತು ಸಭೆಯನ್ನು ಕರೆದಿದೆ.
ತಮಿಳುನಾಡು ಮತ್ತು ಕರ್ನಾಟಕ ನಡುವೆ ಕಾವೇರಿ ನೀರು ಹಂಚಿಕೆ ಸಮಸ್ಯೆ ತೀವ್ರಗೊಂಡಿದೆ. ಕಾವೇರಿ ನ್ಯಾಯಮಂಡಳಿ ಮತ್ತು ಸುಪ್ರೀಂ ಕೋರ್ಟ್‌ನ ಅಂತಿಮ ತೀರ್ಪಿನ ಆಧಾರದ ಮೇಲೆ ಕರ್ನಾಟಕ ತಮಿಳುನಾಡಿಗೆ ಕಾವೇರಿ ನೀರು ಬಿಡಬೇಕು ಎನ್ನುವ ಒತ್ತಾಯ ತಮಿಳುನಾಡು ಹೇರಿದೆ. ಇತ್ತ ಕರ್ನಾಟಕದಲ್ಲಿ ಕುಡಿಯಲು ನೀರಿಲ್ಲ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ ಎಂದು ಪ್ರತಿಭಟನೆಗಳು ನಡೆಯುತ್ತಿವೆ. ಈ ಬಗ್ಗೆ ಮತ್ತೊಮ್ಮೆ ಪರಿಶೀಲನೆ ಮಾಡಬೇಕು ಎನ್ನುವ ಒತ್ತಾಯ ಹೇರಲಾಗಿದೆ.
ಕರ್ನಾಟಕ ಸರ್ಕಾರ ತಮಿಳುನಾಡಿಗೆ ಸರಿಯಾದ ರೀತಿಯಲ್ಲಿ ನೀರು ಬಿಟ್ಟಿಲ್ಲ ಎಂದು ತಮಿಳುನಾಡು ವಾದಿಸಿದೆ. ಆದರೆ ಇದಕ್ಕೆ ಸರಿಯಾಗಿ ಪ್ರತಿವಾದ ಕರ್ನಾಟಕ ಸರ್ಕಾರ ಮಾಡಿಲ್ಲ ಎನ್ನುವ ಆರೋಪದ ಮೇಲೆ ಪ್ರತಿಭಟನೆಗಳು ಕರ್ನಾಟಕದಲ್ಲಿ ಭಗಿಲೆದ್ದಿವೆ.
ಕೆಆರ್ ಎಸ್ ಸೇರಿದಂತೆ ಕಾವೇರಿ ನೀರಿನ ಮೂಲವಾಗಿರುವ 4 ಅಣೆಕಟ್ಟುಗಳಲ್ಲಿ ನೀರಿನ ಮಟ್ಟ ಕುಸಿದಿದೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಸೆ.13ರಿಂದ 15 ದಿನಗಳ ಕಾಲ ತಮಿಳುನಾಡಿಗೆ ಸೆಕೆಂಡಿಗೆ 5 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಕರ್ನಾಟಕ ಸರ್ಕಾರಕ್ಕೆ ಆದೇಶ ನೀಡಲಾಗಿದೆ. ಇದನ್ನು ಪರಿಶೀಲನೆ ಮಾಡುವಂತೆ ಕರ್ನಾಟಕ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು, ಆದರೆ ಕೋರ್ಟ್ ಅರ್ಜಿಯನ್ನು ತಿರಸ್ಕರಿಸಿದೆ. ಇದರಿಂದ ಕರ್ನಾಟಕದಲ್ಲಿ ಜನರ ತಾಳ್ಮೆಯ ಕಟ್ಟೆ ಒಡೆದಿದೆ.

ಈ ಆದೇಶಗೆ ನಿನ್ನೆ ಅಂತ್ಯಗೊಂಡಿದೆ. ಈ ನಡುವೆ ಕಾವೇರಿ ನೀರು ನಿರ್ವಹಣಾ ಸಮಿತಿ ಸಭೆ ನಿನ್ನೆ ವಿಡಿಯೋ ಮೂಲಕ ನಡೆದಿದೆ. ಈ ಸಭೆಯಲ್ಲಿ ತಮಿಳುನಾಡು ಸರ್ಕಾರದ ಪರವಾಗಿ ಕಾವೇರಿಯಿಂದ ಸರಿಯಾಗಿ ನೀರು ಬಿಡುವಂತೆ ಒತ್ತಾಯಿಸಲಾಯಿತು. ಆದರೆ ಕರ್ನಾಟಕ ನಿರಾಕರಿಸಿತು. ಮತ್ತು ಕರ್ನಾಟಕದಲ್ಲಿ ನೀರಿಲ್ಲ ಎಂದು ವಾದಿಸಿದೆ.
ಎರಡೂ ಕಡೆಯ ವಾದಗಳನ್ನು ಆಲಿಸಿದ ಕಾವೇರಿ ನೀರು ನಿರ್ವಹಣಾ ಸಮಿತಿಯು ಸೆ.8ರಿಂದ ಅಕ್ಟೋಬರ್ 15ರವರೆಗೆ ತಮಿಳುನಾಡಿಗೆ ಸೆಕೆಂಡಿಗೆ 3,000 ಕ್ಯೂಸೆಕ್ ನೀರನ್ನು ಕರ್ನಾಟಕ ಹರಿಸಬೇಕು ಎಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಶಿಫಾರಸು ಮಾಡಿದೆ. ಇದರಿಂದಾಗಿ ಕಾವೇರಿ ನೀರು ನಿಯಂತ್ರಣ ಆಯೋಗದ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ.
ಈ ಹಿನ್ನೆಲೆಯಲ್ಲಿ ಇಂದು (ಸೆ.29) ದೆಹಲಿಯಲ್ಲಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ತುರ್ತು ಸಭೆ ನಡೆಯಲಿದೆ. ತಮಿಳುನಾಡು, ಕರ್ನಾಟಕ, ಕೇರಳ ಪುದುಚೇರಿಯ ಅಧಿಕಾರಿಗಳು ಇದರಲ್ಲಿ ಭಾಗವಹಿಸಲಿದ್ದಾರೆ. ಈ ಸಭೆಯಲ್ಲಿ ಕಾವೇರಿ ನೀರು ನಿರ್ವಹಣಾ ಸಮಿತಿ ಶಿಫಾರಸನ್ನು ಪರಿಶೀಲಿಸಬಹುದು.
ಈ ತುರ್ತು ಸಭೆಯಲ್ಲಿ ಕರ್ನಾಟಕ ತಮಿಳುನಾಡಿಗೆ ನೀರು ಬಿಡುವ ಆದೇಶದ ಮರುಪರಿಶೀಲನೆಗೆ ಮನವಿ ಸಲ್ಲಿಸಲಿದೆ. ಇದನ್ನು ಒಪ್ಪಿಕೊಳ್ಳಲು ನಿರಾಕರಿಸಿದರೆ ಕರ್ನಾಟಕ ಸರ್ಕಾರ ಮತ್ತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಬಹುದು ಎನ್ನಲಾಗಿದೆ. ಪ್ರಸ್ತುತ ವಾತಾವರಣದಲ್ಲಿ ಕಾವೇರಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಕರ್ನಾಟಕ ಮತ್ತು ತಮಿಳುನಾಡು ನಡುವಿನ ಹೋರಾಟಗಳು ವ್ಯಾಪಕವಾಗಿವೆ.
ಕರ್ನಾಟಕದ ಮಂಡ್ಯದಲ್ಲಿ ಬಂದ್ ಬಿಸಿ ಮುಗಿಲು ಮುಟ್ಟಿದೆ. ಮಂಗಳವಾರ ಬೆಂಗಳೂರಿನಲ್ಲಿ ಬಂದ್ ಶಾಂತಿಯುತವಾಗಿ ಮುಕ್ತಾಯವಾಗಿದೆ. ಇಂದು ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. ಇದೇ ದಿನ ದೆಹಲಿಯಲ್ಲಿ ಕಾವೇರಿ ನೀರು ನಿರ್ವಹಣಾ ಸಭೆ ನಡೆಯಲಿದೆ. ಈ ಬಂದ್ ಮೂಲಕ ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಕರ್ನಾಟಕದಲ್ಲಿ ಆಗ್ರಹಿಸಲಾಗುತ್ತಿದೆ. ಇದಕ್ಕೆ ಬಿಜೆಪಿ, ಜೆಡಿಎಸ್ ಪಕ್ಷಗಳು ಬೆಂಬಲ ಸೂಚಿಸಿವೆ.
ಅಂತೆಯೇ ತಮಿಳುನಾಡಿನಲ್ಲಿ ರೈತರು ಮತ್ತು ರಾಜಕೀಯ ಪಕ್ಷಗಳು ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ಆರಂಭಿಸಿವೆ. ಇದೀಗ ಎರಡೂ ರಾಜ್ಯಗಳಲ್ಲಿ ಕಾವೇರಿ ನೀರಿನ ವಿಚಾರ ಚರ್ಚೆಗೆ ಗ್ರಾಸವಾಗಿರುವುದರಿಂದ ಈ ದಿನ ನಡೆಯಲಿರುವ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ತುರ್ತು ಸಭೆ ಮಹತ್ವ ಪಡೆದುಕೊಂಡಿದೆ.












Click it and Unblock the Notifications