National Highway: ಹೈವೇ ಟೋಲ್ ಪ್ಲಾಜಾದಲ್ಲಿ ನಗದು ಪಾವತಿ ನಿಷೇಧ, ಯಾಕೆ?
ಬೆಂಗಳೂರು: ದೇಶದ ಯಾವುದೇ ಹೆದ್ದಾರಿಗಳ ಟೋಲ್ ಬಳಿ ಹೋದರು ಟೋಲ್ ಶುಲ್ಕ ಕಟ್ಟಲು ವಾಹನಗಳ ಸರತಿ ಸಾಲು ನಿಂತಿದ್ದನ್ನು ಕಾಣಬಹುದು. ಇದರಿಂದ ಸಾಕಷ್ಟು ತೊಂದರೆ ಆಗುತ್ತಿದೆ. ಮುಖ್ಯವಾಗಿ ನಗದು ಪಾವತಿಗೆ ಸಮಯ ಹಿಡಿಯುವ ಕಾರಣ ವಾಹನಗಳ ದಟ್ಟಣೆ ಉಂಟಾಗುತ್ತದೆ. ಈ ಸಮಸ್ಯೆ ನಿವಾರಣೆಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) ಮಹತ್ವದ ನಿಯಮ ಜಾರಿಗೆ ಮುಂದಾಗಿದೆ.
ಭಾರತದಲ್ಲಿ ಹೆದ್ದಾರಿ ಪ್ರಯಾಣವು ಇನ್ನು ಮುಂದೆ ಸಂಪೂರ್ಣ ಡಿಜಿಟಲ್ ಆಗಿ ರೂಪಾಂತರಗೊಳ್ಳಲಿದೆ. ಅಂದರೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು 2026 ಏಪ್ರಿಲ್ 1 ರಿಂದ ದೇಶದ ರಾಷ್ಟ್ರೀಯ ಹೆದ್ದಾರಿ ಟೋಲ್ ಪ್ಲಾಜಾಗಳಲ್ಲಿ ನಗದು ಪಾವತಿಯನ್ನು ನಿಷೇಧಿಸಲಿದೆ. ಈ ಕ್ರಮ ಜಾರಿಗೆ ತರಲು ಎಲ್ಲ ವಿಧದಲ್ಲೂ ಸಿದ್ಧತೆ ನಡೆಸಿದೆ. ಇದರಿಂದ ಟೋಲ್ ಬಳಿ ಉಂಟಾಗುವ ವಾಹನಗಳ ದಟ್ಟಣೆ ಕಡಿಮೆ ಮಾಡುವ ಜೊತೆಗೆ ಪ್ರಯಾಣವನ್ನು ಸುಗಮಗೊಳಿಸುವ ಉದ್ದೇಶವನ್ನು ಸಚಿವಾಲಯ ಹೊಂದಿದೆ.

ವಾಹನ ಸವಾರರು/ಪ್ರಯಾಣಿಕರು ಹೆದ್ದಾರಿಗಳಲ್ಲಿ ಟೋಲ್‌ಗಳನ್ನು ಪಾವತಿಸಲು FASTag ಅಥವಾ ಯುಪಿಐ ವ್ಯವಸ್ಥೆಯನ್ನು ಹೆಚ್ಚಾಗಿ ಬಳಸಬೇಕಾಗುತ್ತದೆ. ನಗದು ಹಣ ಪಾವತಿ ಸಂಪೂರ್ಣ ನಿಷೇಧವಾಗಲಿದೆ. ಈ ಬಗ್ಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಅಧಿಕೃತ ಅಧಿಸೂಚನೆ ಹೊರಡಿಸುವುದು ಬಾಕಿ ಇದೆ.
ಸುಗಮ ಸಂಚಾರ ವ್ಯವಸ್ಥೆಗೆ ಆದ್ಯತೆ ನೀಡಿರುವ ಕೇಂದ್ರ ಸರ್ಕಾರ, ಪರಿವರ್ತನೆಗೆ ಸಿದ್ಧತೆ ನಡೆಸುತ್ತಿದೆ. ಈ ಕ್ರಮವು ದೀರ್ಘ ಸರತಿ ಸಾಲುಗಳನ್ನು ನಿವಾರಿಸುತ್ತದೆ. ಹೆದ್ದಾರಿಗಳಲ್ಲಿ ಪ್ರಯಾಣವನ್ನು ಹೆಚ್ಚು ಪರಿಣಾಮಕಾರಿಯಾಗಿಸುತ್ತದೆ. ಆದಷ್ಟು ಶೀಘ್ರವೇ ಪ್ರಯಾಣಿಕರು ಡಿಜಿಟಲ್ ಪಾವತಿ ವ್ಯವಸ್ಥೆಗೆ ಬದಲಾಗಬೇಕಿದೆ. ಈ ಸಂಬಂಧ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆಯೂ ಸಚಿವಾಲಯ ಸೂಚನೆ ನೀಡಿದೆ.
ನಗದು ಪಾವತಿ ನಿಷೇಧ ಏಕೆ?
ನಗದು ಪಾವತಿ ನಿಷೇಧ ನಿಯಮವು ಪ್ರಯಾಣದ ಸಮಯದಲ್ಲಿನ ತಲೆನೋವುಗಳನ್ನು ಪರಿಹರಿಸಲಿದೆ. ವೇಗದ ಪ್ರಯಾಣದಲ್ಲಿ ವಾಹನ ಸವಾರರು/ಪ್ರಯಾಣಿಕರು ನಗದು ಪಾವತಿಸಿ ಹಸ್ತಚಾಲಿತ ರಶೀದಿಗಳಿಗಾಗಿ ಕಾಯುವುದನ್ನು ತಪ್ಪಿಸುತ್ತದೆ. ಇಂಧನ ಉಳಿತಾಯ ಆಗುತ್ತದೆ. ಟೋಲ್ ಬೂತ್‌ಗಳಲ್ಲಿ ವಾಹನಗಳ ಆನ್ ಆಂಡ್ ಆಫ್ ಮಾಡುವ ಪ್ರಮೇಯವನ್ನು ತಪ್ಪಿಸುತ್ತದೆ. ಡೀಸೆಲ್ ಮತ್ತು ಪೆಟ್ರೋಲ್ ಉಳಿತಾಯವಾಗುತ್ತದೆ. ಮುಖ್ಯವಾಗಿ ಡಿಜಿಟಲ್ ಪಾವತಿ ಹೆಚ್ಚಾದರೆ ಎಲ್ಲಾ ವಹಿವಾಟುಗಳ ಸ್ಪಷ್ಟ, ಟ್ರ್ಯಾಕ್ ಮಾಡಬಹುದಾಗಿದೆ.
ಹೆದ್ದಾರಿ ರಸ್ತೆಗಳಲ್ಲಿ ತಡೆರಹಿತ ಟೋಲಿಂಗ್
ಈ ಬದಲಾವಣೆಯು ಬಹು-ಪಥ ಮುಕ್ತ ಸಂಚಾರ ವ್ಯವಸ್ಥೆಯ ಮೊದಲ ಹೆಜ್ಜೆಯಾಗಿದೆ. ಯಾವುದೇ ಭೌತಿಕ ಅಡೆತಡೆಗಳು ಇಲ್ಲದೇ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವೇಗದಲ್ಲಿ ಕಾರುಗಳು ಟೋಲ್ ಪ್ರದೇಶಗಳ ಮೂಲಕ ಓಡಿಸಲು ಅನುವು ಮಾಡಿಕೊಡುವ ತಂತ್ರಜ್ಞಾನ ಅಳಡಿಕೆಗೆ ಪರಿಶೀಲಿಸಲಾಗುತ್ತದೆ. ಈ "ನೋ-ಸ್ಟಾಪ್" ವ್ಯವಸ್ಥೆಗಾಗಿ ಪೈಲಟ್ ಯೋಜನೆ ಈಗಾಗಲೇ ಭಾರತದಾದ್ಯಂತ 25 ಟೋಲ್ ಪ್ಲಾಜಾಗಳಲ್ಲಿ ಪರೀಕ್ಷಿಸಲಾಗುತ್ತಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.
ಹೆದ್ದಾರಿ ಸವಾರರು ಏನು ಮಾಡಬೇಕು?
ಪ್ರಯಾಣಿಕರು ಏಪ್ರಿಲ್ ಒಳಗೆ ತಮ್ಮ FASTag ಖಾತೆಗಳನ್ನು ಪರಿಶೀಲಿಸಿಕೊಂಡ ಡಿಜಿಟಲ್ ಪಾವತಿಯತ್ತ ಆಸಕ್ತಿ ಬೆಳೆಸಿಕೊಳ್ಳಬೇಕು. ನಗದು ವಹೀವಾಟು ಮಾಡುವುದನ್ನು ಈಗಿನಿಂದಲೇ ಬಿಡಲು ಮುಂದಾಗಬೇಕು. ಮುಖ್ಯವಾಗಿ ನಿಮ್ಮ ಫಾಸ್ಟ್ಯಾಗ್ ಸಕ್ರಿಯವಾಗಿದೆಯೇ, ಅದರಲ್ಲಿ ಅಗತ್ಯದಷ್ಟು ಬ್ಯಾಲೆನ್ಸ್ ಇದೆಇಯೇ ಎಂದು ಖಚಿತಪಡಿಸಿಕೊಳ್ಳಿ. ಫಾಸ್ಟ್ಯಾಗ್ ಬಳಸದಿದ್ದರೆ ಟೋಲ್ ಪ್ಲಾಜಾದಲ್ಲಿ ಅನಗತ್ಯ ಕಿರಿಕಿರಿ ಆಗುವುದನ್ನು ತಪ್ಪಿಸಲು ಕಷ್ಟವಾಗುತ್ತದೆ. ಹೀಗಾಗಿ ನೀವು ಸ್ಮಾರ್ಟ್‌ಫೋನ್ ಯುಪಿಐ ಪಾವತಿಗೆ ಸಿದ್ಧರಾಗಬೇಕಿದೆ.












Click it and Unblock the Notifications