ಕಾರ್ಗಿಲ್ ಯೋಧನ ಸಂಕಷ್ಟ: ಮಧ್ಯಪ್ರವೇಶಿಸಲು ಆಗೊಲ್ಲ ಎಂದ ಸೇನೆ
ಗುವಾಹಟಿ, ಜೂನ್ 1: ಅಸ್ಸಾಂನಲ್ಲಿ ಹುಟ್ಟಿ ಬೆಳೆದಿರುವುದಕ್ಕೆ ಸೂಕ್ತ ದಾಖಲೆ ಇಲ್ಲದೆ ಜೈಲುಪಾಲಾಗಿರುವ ಕಾರ್ಗಿಲ್ ಯುದ್ಧದ ಹಿರಿಯ ಯೋಧ ಮೊಹಮ್ಮದ್ ಸನಾವುಲ್ಲಾ ಅವರಿಗೆ ಅಪಾರ ಕಾಳಜಿ ಇರುವುದಾಗಿ ಭಾರತೀಯ ಸೇನೆ ಹೇಳಿದೆ. ಆದರೆ, ಈ ಸಂದರ್ಭದಲ್ಲಿ ಯಾವುದೇ ಸಹಾಯ ಮಾಡಲು ಸಾಧ್ಯವಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದೆ.
2017ರಲ್ಲಿ ಗೌರವಾನ್ವಿತ ಕ್ಯಾಪ್ಟನ್ ಆಗಿ ನಿವೃತ್ತರಾದ ಯೋಧ ಸನಾವುಲ್ಲಾ ಅವರು ಸೇನೆಯಲ್ಲಿ 30 ವರ್ಷ ಸೇವೆ ಸಲ್ಲಿಸಿದ್ದಾರೆ. ಅವರ ಬಳಿ ಯಾವುದೇ ದಾಖಲೆಗಳು ಇಲ್ಲದೆ ಇರುವುದರಿಂದ ವಿದೇಶಿಗ ಎಂದು ತೀರ್ಮಾನಿಸಿ ಅಸ್ಸಾಂ ಗಡಿ ಪೊಲೀಸರು ಅವರನ್ನು ಬಂಧಿಸಿದ್ದರು.
'ಸನಾವುಲ್ಲಾ ಅವರ ಪತ್ನಿ ಸಮೀನಾ ಬೇಗಂ ಅವರಿಗೆ ಗುರುವಾರ ಕರೆ ಮಾಡಿ ಸಂತೈಸಿದ್ದೇವೆ. ಅವರಿಗೆ ಅಗತ್ಯವಾದ ಎಲ್ಲ ನೆರವು ನೀಡುವುದಾಗಿ ಭರವಸೆ ನೀಡಿದ್ದೇವೆ' ಎಂದು ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ.

'ಈ ವಿಚಾರದಲ್ಲಿ ಸೇನೆ ಹೆಚ್ಚೇನೂ ಮಾಡಲು ಸಾಧ್ಯವಿಲ್ಲ. ಏಕೆಂದರೆ ಇದು ಕಾನೂನು ಪ್ರಕರಣ. ರಾಜ್ಯ ಸೈನಿಕ ಮಂಡಳಿಯೊಂದಿಗೆ ಕೂಡ ಅವರ ವಿಚಾರವನ್ನು ಚರ್ಚಿಸಿದ್ದೇವೆ. ಅವರು ವಕೀಲರ ಮುಲಕವೇ ಹೋರಾಟ ನಡೆಸಬೇಕು ಎಂದು ಮಂಡಳಿ ಹೇಳಿದೆ. ಆದರೆ, ಕಾನೂನು ಪ್ರಕ್ರಿಯೆ ಸಂದರ್ಭದಲ್ಲಿ ಅಗತ್ಯವಿದ್ದರೆ ಅವರಿಗೆ ಸಹಾಯ ಮಾಡಲು ಖಂಡಿತವಾಗಿಯೂ ನಾವು ಸಿದ್ಧರಿದ್ದೇವೆ' ಎಂದು ಅವರು ಹೇಳಿದ್ದಾರೆ.
ಸನಾವುಲ್ಲಾ ಅವರ ಬಿಡುಗಡೆಗೆ ನಾಗರಿಕರು, ನಿವೃತ್ತ ಸೇನಾಧಿಕಾರಿಗಳು ಆಗ್ರಹಿಸಿದ್ದಾರೆ.












Click it and Unblock the Notifications