ಕುಡುಕ ಗಂಡ ಬೇಡ ಎಂದು ಹಸೆಮಣೆ ಬಿಟ್ಟು ಎದ್ದೇಬಿಟ್ಟ ವಧು
ಅಮೇಥಿ, ಜೂ. 12 : ವರೋಪಚಾರಕ್ಕೆ ಎಲ್ಲಾ ಸಿದ್ಧತೆಗಳೂ ನಡೆದಿದ್ದವು. ವಧುವಿನ ಕಡೆಯವರು ಹೂವಿನ ಹಾರ, ಅರಿಷಿನ ಕುಂಕುಮ, ಸುಗಂಧ ದ್ರವ್ಯಗಳನ್ನೆಲ್ಲಾ ಹಿಡಿದುಕೊಂಡು ಕಾತುರದಿಂದ ಕಾದಿದ್ದರು. ನೋಡನೋಡುತ್ತಲೇ ವರನ ಕಡೆಯ ದಿಬ್ಬಣ ಕೂಡ ಬಂದೇಬಿಟ್ಟಿತು. ಆದರೆ, ಈ ಮದುವೆ ನನಗೆ ಬೇಡವೇ ಬೇಡ ಎಂದು ವಧು ಪಟ್ಟುಹಿಡಿದು ಕುಳಿತುಬಿಟ್ಟಳು.
ಕಾರಣ, ಹೊಸಬಟ್ಟೆ ತೊಟ್ಟು ಹಣೆಗೆ ತಿಲಕವಿಟ್ಟುಕೊಂಡು ಬಂದಿದ್ದ ವರಮಹಾಶಯ ಅನಿಲ್ ಯಾದವ್ ನೈಂಟಿ ಏರಿಸಿಬಿಟ್ಟಿದ್ದ. ನೆಲವೇ ಅಂಕುಡೊಂಕು ಎನ್ನುವಂತೆ ಆಡುತ್ತಿದ್ದ. ವಧುವಿಗೆ ಇಷ್ಟು ಸಾಕಿತ್ತು. ನನಗೆ ಈ ಮದುವೆ ಬೇಡ, ಕುಡುಕ ಗಂಡನನ್ನು ಮದುವೆಯಾಗಲೊಲ್ಲೆ ಎಂದು ದಿಟ್ಟ ನಿರ್ಧಾರ ಪ್ರಕಟಿಸಿಬಿಟ್ಟಳು ರೇಷ್ಮೆ ಸೀರೆಯುಟ್ಟಿದ್ದ ರೂಪಾ.

ಈ ಘಟನೆ ನಡೆದಿದ್ದು ಉತ್ತರಪ್ರದೇಶದ ಸುಲ್ತಾನಪುರ ಜಿಲ್ಲೆಯ ಕಸಬಾ ನಿಹಾಲ್ಘರ್ ಗ್ರಾಮದಲ್ಲಿ. ಆಕೆಯ ಮನವೊಲಿಸಲು ವರನ ಮತ್ತು ವಧುವಿನ ಕಡೆಯವರು ಎಷ್ಟೇ ಪ್ರಯತ್ನಪಟ್ಟರೂ ರೂಪಾ ಒಪ್ಪಲಿಲ್ಲ. ವಿಧಿಯಿಲ್ಲದೆ ವಧುವಿನ ಕಡೆಯವರು ತಮ್ಮ ಮನೆಗೆ ತೆರಳಿದರು, ವರನ ದಿಬ್ಬಣ ಬಂದ ದಾರಿಗೆ ಸುಂಕವಿಲ್ಲವೆಂಬಂತೆ ವಾಪಸ್ ಆಯಿತು.
ಕುಡುಕ ಗಂಡನಿಂದ ಗಂಟು ಹಾಕಿಸಿಕೊಳ್ಳಲು ಒಪ್ಪದ ರೂಪಾಗೆ ಶಭಾಸ್‌ಗಿರಿ ಹೇಳಲೇಬೇಕು. ಕುಡಿತದ ಚಟವಿರುವ ಗಂಡಂದಿರುವ ಎಷ್ಟು ಸಂಸಾರಗಳನ್ನು ಹಾಳು ಮಾಡಿಲ್ಲ? ಕುಡಿತವನ್ನು ಹವ್ಯಾಸ ಮಾಡಿಕೊಂಡಿರುವ ಗಂಡನಿಂದ ಸಂಸಾರ ಯಾವ ದಾರಿ ಹಿಡಿಯುತ್ತದೆ ಎಂದು ಕನ್ನಡ ಚಿತ್ರ ಎದ್ದೇಳು ಮಂಜುನಾಥ ಚಿತ್ರದಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ನಿರ್ದೇಶಕ ಗುರುಪ್ರಸಾದ್ ಹೇಳಿದ್ದರು.












Click it and Unblock the Notifications