ಉತ್ತರಾಖಂಡ ಸುರಂಗ ಕುಸಿತ: ಕೆಲವೇ ಕ್ಷಣಗಳಲ್ಲಿ ಕಾರ್ಮಿಕರು ಹೊರಕ್ಕೆ!
ಉತ್ತರಾಖಂಡದ ಸಿಲ್ಕ್ಯಾರಿ ಸುರಂಗದಲ್ಲಿ ಸಿಲುಕಿರುವ ನಲವತ್ತೊಂದು ಕಾರ್ಮಿಕರು 17 ದಿನಗಳ ಸುರಂಗವಾಸದ ಬಳಿಕ ಕೆಲವೇ ಕ್ಷಣಗಳಲ್ಲಿ ಹೊರಬರಲಿದ್ದಾರೆ ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಮಂಗಳವಾರ ಮಧ್ಯಾಹ್ನ ಟ್ವೀಟ್ ಮಾಡಿದ್ದಾರೆ.
41 ಜನರನ್ನು ಉಳಿಸಲು ರಕ್ಷಣಾ ತಂಡಗಳು ಅಂತಿಮ ಕೆಲವು ಮೀಟರ್ ಬಂಡೆಗಳನ್ನು ತೆರವುಗೊಳಿಸಿವೆ. "ರಾಟ್-ಹೋಲ್" ಗಣಿಗಾರಿಕೆ ತಂತ್ರದಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಹೈಟೆಕ್ ಯಂತ್ರಗಳು ಅಥವಾ ಆಗರ್‌ಗಳು ಸುಮಾರು 60 ಮೀಟರ್ ಬಂಡೆಯನ್ನು ಕೊರೆಯಲು ವಿಫಲವಾದ ನಂತರ, ರ್‍ಯಾಟ್ ಹೋಲ್ ತಂತ್ರದ ಮೂಲಕ ಸುರಂಗ ಕೊರೆಯಲಾಗಿದೆ.

"ಬಾಬಾ ಬೌಖ್ ನಾಗ್ಜಿ ಮತ್ತು ಕೋಟ್ಯಂತರ ದೇಶವಾಸಿಗಳ ಪ್ರಾರ್ಥನೆ ಮತ್ತು ಎಲ್ಲಾ ರಕ್ಷಣಾ ತಂಡಗಳ ಅವಿರತ ಶ್ರಮದ ಫಲವಾಗಿ. ಕಾರ್ಮಿಕರನ್ನು ಹೊರತೆಗೆಯಲು ಸುರಂಗದಲ್ಲಿ ಪೈಪ್‌ಗಳನ್ನು ಹಾಕುವ ಕೆಲಸ ಪೂರ್ಣಗೊಂಡಿದೆ. ಶೀಘ್ರದಲ್ಲೇ ಎಲ್ಲಾ ಕಾರ್ಮಿಕ ಸಹೋದರರನ್ನು ಹೊರ ತೆಗೆಯಲಾಗುವುದು," ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಟ್ವೀಟ್ ಮಾಡಿದ್ದಾರೆ.
41 ಆಂಬುಲೆನ್ಸ್ ನಿಯೋಜನೆ
ಅಧಿಕಾರಿಗಳು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಮತ್ತು ತುರ್ತು ವೈದ್ಯಕೀಯ ಸಿಬ್ಬಂದಿ ಈಗ ಸುರಂಗವನ್ನು ಪ್ರವೇಶಿಸಲು ಸಿದ್ಧರಾಗಿದ್ದಾರೆ ಮತ್ತು ಕುಸಿದ ಗುಹೆಯೊಳಗೆ ಕೆಲಸ ಮಾಡಲು ಸಿದ್ಧರಾಗಿದ್ದಾರೆ ಮತ್ತು ಸಿಕ್ಕಿಬಿದ್ದ ಜನರ ಸ್ಥಿತಿಯನ್ನು ನಿರ್ಣಯಿಸಿ ಅವರನ್ನು ಹೊರತರುವ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತಾರೆ.
ಕಳೆದ ಎರಡು ವಾರಗಳಲ್ಲಿ ಸುರಂಗ ತಜ್ಞರು, ವಿಪತ್ತು ಪ್ರತಿಕ್ರಿಯೆ ತಂಡಗಳು ಮತ್ತು ವೈದ್ಯಕೀಯ ಸಿಬ್ಬಂದಿಯ ಬೆಟಾಲಿಯನ್‌ಗಳು ಸಿಕ್ಕಿಬಿದ್ದ 41 ಜನರನ್ನು ರಕ್ಷಿಸಲು ಕೆಲಸ ಮಾಡುತ್ತಿವೆ. ಈಗಾಗಲೇ ಸುರಂಗದ ಬಳಿ 41 ಆಂಬ್ಯುಲೆನ್ಸ್‌ಗಳನ್ನು ನಿಲ್ಲಿಸಲಾಗಿದೆ, ಪ್ರತಿಯೊಬ್ಬ ಕಾರ್ಮಿಕನಿಗೆ ಒಂದೊಂದು ಆಂಬುಲೆನ್ಸ್ ನಿಯೋಜಿಸಲಾಗಿದೆ.
ಅಲ್ಲದೆ ತಾತ್ಕಾಲಿಕವಾಗಿ ಸುರಂಗದ ಬಳಿ ಆಸ್ಪತ್ರೆಯನ್ನು ನಿರ್ಮಾಣ ಮಾಡಲಾಗಿದ್ದು, ಪ್ರಾಥಮಿಕ ತಪಾಸಣೆ ನಂತರ ಸುರಂಗದ ಸ್ಥಳದಿಂದ 30 ಕಿಮೀ ದೂರದಲ್ಲಿರುವ ಚಿನ್ಯಾಲಿಸೌರ್‌ನಲ್ಲಿರುವ ತಾತ್ಕಾಲಿಕ ಆಸ್ಪತ್ರೆಗೆ ಸಾಗಿಸಲಾಗುತ್ತದೆ. ಯಾವುದೇ ಅಡೆ ತಡೆಯಿಲ್ಲದೆ ಕಾರ್ಮಿಕರನ್ನು ಆಸ್ಪತ್ರೆಗೆ ಸಾಗಿಸಲು ವ್ಯವಸ್ಥೆ ಮಾಡಲಾಗಿದೆ.
ಕಾರ್ಮಿಕರಿಗಾಗಿ 41 ಆಮ್ಲಜನಕ-ಸಜ್ಜಿತ ಹಾಸಿಗೆಗಳನ್ನು ವ್ಯವಸ್ಥೆ ಮಾಡಲಾಗಿದೆ ಮತ್ತು ಪ್ರತಿ ಕೆಲಸಗಾರನಿಗೆ ಅಗತ್ಯವಾದ ವೈದ್ಯಕೀಯ ಆರೈಕೆಯನ್ನು ಒದಗಿಸಲು ಅಗತ್ಯ ಉಪಕರಣಗಳು ಮತ್ತು ಔಷಧಿಗಳನ್ನು ಹೊಂದಿದೆ ಎಂದು ವರದಿಯಾಗಿದೆ.
ಎಲ್ಲಾ ಕಾರ್ಮಿಕರು ಸುರಕ್ಷಿತವಾಗಿದ್ದು, ಅವರಿಗೆ ಅಗತ್ಯವಾದ ಊಟ, ತಿಂಡಿಗಳನ್ನು ಒದಗಿಸಲಾಗಿತ್ತು. ಯಂತ್ರಗಳ ಬಳಕೆಯಿಂದ ಸುರಕ್ಷತಾ ಕಾರ್ಯಾಚರಣೆ ವಿಳಂಬವಾಗುತ್ತದೆ ಎಂದು ಭಾವಿಸಲಾಗಿತ್ತು. ಆದರೆ ರ್‍ಯಾಟ್ ಹೋಲ್ ತಂತ್ರದ ಮೂಲಕ ಅಂದುಕೊಂಡಿದ್ದಕ್ಕಿಂತ ವೇಗವಾಗಿ ಕಾರ್ಮಿಕರನ್ನು ತಲುಪಲಾಗಿದೆ.












Click it and Unblock the Notifications