ಆತ್ಮಹತ್ಯೆಗೆ ಯತ್ನಿಸಿದ ಅಸ್ಸಾಂ ಹುಡುಗನ ಕೈಮೇಲೆ ಬ್ಲೂವ್ಹೇಲ್ ಚಿತ್ರ!
ಗುವಾಹಟಿ, ಆಗಸ್ಟ್ 31: ಇಡೀ ವಿಶ್ವಕ್ಕೂ ಸವಾಲೆನ್ನಿಸಿರುವ ವಿವಾದಾತ್ಮಕ, ವಿಕೃತ ಆನ್ ಲೈನ್ ಗೇಮ್ ಬ್ಲೂವ್ಹೇಲ್ ಅಸ್ಸಾಂ ರಾಜಧಾನಿ ಗುವಾಹಟಿಯಲ್ಲೂ ಸದ್ದು ಮಾಡುತ್ತಿದೆ.
ಹತ್ತನೇ ತರಗತಿಯ ವಿದ್ಯಾರ್ಥಿಯೊಬ್ಬ ಬ್ಲೂವ್ಹೇಲ್ ಗೇಮ್ ನಿಂದಾಗಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಆಗಸ್ಟ್ 29 ರಂದು ನಡೆದಿದ್ದು, ಬಾಲಕನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಬಾಲಕನ ಕೈಮೇಲಿದ್ದ ಬ್ಲೂವ್ಹೇಲ್(ನೀಲಿ ತಿಮಿಂಗಿಲ)ನ ಚಿತ್ರ, ಆತ ಬ್ಲೂವ್ಹೇಲ್ ಆಟದ ಬಲೆಗೆ ಸಿಕ್ಕಿಕೊಂಡಿರಬಹುದು ಎಂಬ ಅನುಮಾನವನ್ನು ದೃಢಪಡಿಸಿದೆ. ಕಳೆದ ಕೆಲ ದಿನಗಳಿಂದ ವಿಚಿತ್ರವಾಗಿ ವರ್ತಿಸುತ್ತಿದ್ದ ಬಾಲಕ ಸದಾ ಆನ್ ಲೈನ್ ಗೇಮ್ ನಲ್ಲಿ ಮುಳುಗಿರುತ್ತಿದ್ದ ಎಂದು ಆತನ ಪಾಲಕರೇ ತಿಳಿಸಿದ್ದಾರೆ.
ಆಸ್ಪತ್ರೆಗೆ ಸೇರಿಸಿದ ಮೇಲೂ, ವಾರ್ಡಿನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿ, ಅಸಹಜವಾಗಿ ಬಾಲಕ ವರ್ತಿಸುತ್ತಿದ್ದರಿಂದ ಆತನ ಮೇಲೆ ಹದ್ದಿನ ಕಣ್ಣಿಡುವಂತೆ ಪೊಲೀಸರು ವೈದ್ಯರಿಗೂ, ಬಾಲಕನ ಪಾಲಕರಿಗೂ ತಿಳಿಸಿದ್ದಾರೆ.
ಆಗಸ್ಟ್ 28 ರಂದು ಉತ್ತರ ಪ್ರದೇಶದ ಹಮಿರ್ಪುರ ಜಿಲ್ಲೆಯ ಮೌದಾನಾ ಎಂಬ ಹಳ್ಳಿಯ ಪರ್ಥ್ ಸಿಂಗ್ ಎಂಬ 13 ವರ್ಷದ ಬಾಲಕ ಬ್ಲೂ ವ್ಹೇಲ್ ಕೂಪಕ್ಕೆ ಸಿಕ್ಕಿಕೊಂಡು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂದಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.
ಅಷ್ಟೇ ಅಲ್ಲ, ಇದೇ ಬ್ಲೂವ್ಹೇಲ್ ಗೇಮ್ ನಿಂದಾಗಿ ಜುಲೈ 30 ರಂದು ಮುಂಬೈಯಲ್ಲಿ 14 ವರ್ಷದ ಬಾಲಕ, ಆಗಸ್ಟ್ 10 ರಂದು ಇಂದೋರ್ ನಲ್ಲಿ 7 ನೇ ತರಗತಿಯ ಬಾಲಕ, ಆಗಸ್ಟ್ 12 ರಂದು ಪಶ್ಚಿಮ ಬಂಗಾಳದ 10 ನೇ ತರಗತಿಯ ಬಾಲಕ ಸಾವಿಗೀಡಾಗಿದ್ದು ಬ್ಲೂ ವ್ಹೇಲ್ ಗೇಮ್ ವಿರುದ್ಧ ಗಂಭೀರ ಕ್ರಮ ಕೈಗೊಳ್ಳುವ ಅಗತ್ಯವನ್ನು ಸಾರಿ ಹೇಳಿದೆ.












Click it and Unblock the Notifications