Jammu: ಪಂಜಾಬ್ ಮತ್ತು ಜಮ್ಮುವಿನ ಹಲವು ಕಡೆ ಕ್ಷಿಪಣಿ ದಾಳಿಗೆ ಪಾಕ್ ಯತ್ನ; 8 ಕ್ಷಿಪಣಿ ಹೊಡೆದುರುಳಿಸಿದ ಭಾರತ
ಪಹಲ್ಗಾಮ್ ದಾಳಿ ಬಳಿಕ ಭಾರತ ಪಾಕಿಸ್ತಾನದ ಮೇಲೆ ಆಪರೇಷನ್ ಸಿಂಧೂರ ಹೆಸರಿನಲ್ಲಿ ಭಯೋತ್ಪಾಕರ ವಿರುದ್ಧ ಕಾರ್ಯಾಚರಣೆ ನಡೆಸಿದೆ. ಭಾರತ ದಾಳಿಗೆ ಪ್ರತಿದಾಳಿ ಮಾಡಲು ಪಾಕಿಸ್ತಾನ ಮುಂದಾಗಿದ್ದು ಗುರುವಾರ ಜಮ್ಮುವಿನ ಮೇಲೆ ಕ್ಷಿಪಣಿ ದಾಳಿ ಮಾಡುವ ಪ್ರಯತ್ನ ಮಾಡಿದೆ. ಪಾಕಿಸ್ತಾನದ ದಾಳಿಯನ್ನು ಭಾರತ ವಿಫಲಗೊಳಿಸಿದೆ.
ಜಮ್ಮುವಿನ ಮೇಲೆ ಪಾಕಿಸ್ತಾನ ಕ್ಷಿಪಣಿ ದಾಳಿ ಮಾಡಿದೆ ಎಂದು ವರದಿಯಾಗಿದ್ದು ಎಸ್-400 ವಾಯುರಕ್ಷಣಾ ಪಡೆ 8 ಕ್ಷಿಪಣಿಗಳನ್ನು ಹೊಡೆದುರುಳಿಸಿದೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ. ಜಮ್ಮುವಿನ ಹಲವು ಕಡೆ ಸ್ಫೋಟದ ಸದ್ದು ಕೇಳಿಬಂದಿದ್ದು ನಂತರ ಸೈರನ್‌ಗಳ ಕೂಗು ಕೇಳಿಬಂದಿದೆ. 300 ಕಿ.ಮೀ.ಗಿಂತ ಹೆಚ್ಚು ದೂರದಲ್ಲಿರುವ ಕುಪ್ವಾರಾ ಪಟ್ಟಣದಲ್ಲಿಯೂ ಸೈರನ್‌ಗಳ ಸದ್ದು ಕೇಳಿಬಂದಿದೆ, ಎರಡೂ ಪಟ್ಟಣಗಳಲ್ಲಿ ವಿದ್ಯುತ್ ಕಡಿತಗೊಂಡಿವೆ.

ಸ್ಥಳೀಯರು ಮೊಬೈಲ್‌ನಲ್ಲಿ ಸೆರೆಹಿಡಿದ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಪಾಕಿಸ್ತಾನದ ಡ್ರೋನ್‌ಗಳನ್ನು ಭಾರತ ಹೊಡೆದುರುಳಿಸುವ ದೃಶ್ಯಗಳನ್ನು ಎಕ್ಸ್ ವೇದಿಕೆಯಲ್ಲಿ ಹಲವರು ಹಂಚಿಕೊಂಡಿದ್ದಾರೆ. ಸದ್ಯ ಜಮ್ಮುವಿನಲ್ಲಿ ಮೊಬೈಲ್ ನೆಟ್‌ವರ್ಕ್ ಸಮಸ್ಯೆಯಾಗಿದೆ ಎಂದು ವರದಿಯಾಗಿದೆ.
ಪಂಜಾಬ್‌ನ ಹಲವು ಕಡೆ ಡ್ರೋನ್ ದಾಳಿಗೆ ಯತ್ನ
ಜಮ್ಮುವಿನ ಮೇಲೆ ಮಾತ್ರವಲ್ಲ ಪಂಜಾಬ್‌ನ ಹಲವು ಕಡೆಗಳಲ್ಲೂ ಡ್ರೋನ್ ದಾಳಿ ಮಾಡಲು ಪಾಕಿಸ್ತಾನ ಯತ್ನಿಸಿದೆ. ರಾಯಿಟರ್ಸ್ ಮತ್ತು ಇತರ ವಿಶ್ವಾಸಾರ್ಹ ಮೂಲಗಳ ವರದಿಯ ಪ್ರಕಾರ, ಗುರುವಾರ ಸಂಜೆ ಶಂಕಿತ ಡ್ರೋನ್ ಸ್ಫೋಟಗಳು ಕೇಳಿಬಂದ ಜಮ್ಮು ಮತ್ತು ಪಂಜಾಬ್‌ನ ಅಖ್ನೂರ್, ಸಾಂಬಾ, ಕಥುವಾ, ಸೇನಾ, ಕಂಟೋನ್ಮೆಂಟ್ ರತ್ನುಚಕ್, ಬಾರಾಮುಲ್ಲಾ, ಹೋಶಿಯಾರ್‌ಪುರ, ಪಠಾಣ್‌ಕೋಟ್‌ನಲ್ಲಿ ಸ್ಫೋಟದ ಸದ್ದು ಕೇಳಿದೆ.
ಬುಧವಾರ ರಾತ್ರಿ ಭಾರತೀಯ ಮಿಲಿಟರಿ ಸ್ಥಾಪನೆಗಳ ವಿರುದ್ಧ ಪಾಕಿಸ್ತಾನ ನಡೆಸಿದ ಡ್ರೋನ್ ಮತ್ತು ಕ್ಷಿಪಣಿ ದಾಳಿಯ ಅಲೆಗೆ ಪ್ರತಿಕ್ರಿಯೆಯಾಗಿ ಭಾರತ ಗುರುವಾರ ಮುಂಜಾನೆ ಪಾಕಿಸ್ತಾನದ ವಾಯು ರಕ್ಷಣಾ ವ್ಯವಸ್ಥೆಗಳನ್ನು ಹೊಡೆದುರುಳಿಸಿತ್ತು.












Click it and Unblock the Notifications