Rajasthan Election: ಮಹಿಳೆಯರಿಗೆ ಉಚಿತ ಸ್ಕೂಟಿ, ಬೆಂಬಲ ಬೆಲೆ ಹೆಚ್ಚಳ: ರಾಜಸ್ಥಾನದಲ್ಲಿ ಬಿಜೆಪಿ ಭರವಸೆ
ಭಾರತೀಯ ಜನತಾ ಪಕ್ಷ (ಬಿಜೆಪಿ) ನವೆಂಬರ್ 16, ಗುರುವಾರದಂದು ಮುಂಬರುವ ರಾಜಸ್ಥಾನ ವಿಧಾನಸಭಾ ಚುನಾವಣೆಗೆ ತನ್ನ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಪ್ರಣಾಳಿಕೆಯಲ್ಲಿ ರೈತರು, ಮಹಿಳೆಯರು ಮತ್ತು ವಿದ್ಯಾರ್ಥಿಗಳಿಗೆ ಹಲವು ಭರ್ಜರಿ ಕೊಡುಗೆಗಳನ್ನು ಘೋಷಿಸಿದೆ.
ಜೈಪುರದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು. ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ, ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಮತ್ತು ರಾಜ್ಯ ಘಟಕದ ಹಿರಿಯ ನಾಯಕರು ನಡ್ಡಾ ಜೊತೆ ಉಪಸ್ಥಿತರಿದ್ದರು.

ಪ್ರಣಾಳಿಕೆ ಬಿಡುಗಡೆ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಜೆಪಿ ನಡ್ಡಾ, ಐದು ವರ್ಷಗಳಲ್ಲಿ ಐದು ವಿಷಯಗಳಿಗೆ ಕಾಂಗ್ರೆಸ್ ಹೆಸರುವಾಸಿಯಾಗಿದೆ, ಭ್ರಷ್ಟಾಚಾರ, ಮಹಿಳೆಯರ ಮೇಲೆ ಅಗೌರವ, ರೈತರ ಕಡೆಗಣನೆ, ವಿದ್ಯುತ್, ಪೆಟ್ರೋಲ್, ಡೀಸೆಲ್ ದರ ಹೆಚ್ಚಳ, ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ದಾಖಲೆ ಮಾಡಿದೆ ಎಂದು ಕಾಂಗ್ರೆಸ್ ಆಡಳಿತವನ್ನು ಟೀಕಿಸಿದರು.
ಡಬಲ್ ಇಂಜಿನ್ ಸರ್ಕಾರ
ಬಿಜೆಪಿಯು ರಾಜಸ್ಥಾನದಲ್ಲಿ ಡಬಲ್ ಇಂಜಿನ್ ಸರ್ಕಾರವನ್ನು ರಚಿಸಲು ಬಯಸಿದೆ ಮತ್ತು ಪ್ರಣಾಳಿಕೆಯು ಕಾಂಗ್ರೆಸ್‌ನ ಅವನತಿಯ ಮಾರ್ಗಸೂಚಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ನಡ್ಡಾ ಹೇಳಿದರು.
ಡಬಲ್ ಇಂಜಿನ್ ಸರ್ಕಾರ ಬಂದರೆ ರಾಜ್ಯದಲ್ಲಿ ಅಭಿವೃದ್ಧಿ ವೇಗ ಪಡೆಯಲಿದೆ ಎಂದು ನಡ್ಡಾ ರಾಜ್ಯದ ಜನರಿಗೆ ಭರವಸೆ ನೀಡಿದರು.
ಬಿಜೆಪಿ ಪ್ರಣಾಳಿಕೆಯ ಮುಖ್ಯಾಂಶಗಳು
ಗೋಧಿ ಕನಿಷ್ಠ ಬೆಂಬಲ ಹೆಚ್ಚಳ: ರಾಜ್ಯದಲ್ಲಿ ಗೋಧಿಗೆ ಕ್ವಿಂಟಲ್‌ಗೆ 2015 ರೂ. ಬೆಂಬಲ ಇದ್ದು, ತಾವು ಅಧಿಕಾರಕ್ಕೆ ಬಂದರೆ 2800 ರೂ.ಗೆ ಹೆಚ್ಚಿಸುವುದಾಗಿ ಭರವಸೆ ನೀಡಿದೆ.
ಸ್ವಾಧೀನಪಡಿಸಿಕೊಂಡ ಭೂಮಿಗೆ ಪರಿಹಾರ: ವಿವಿಧ ಯೋಜನೆಗಳಿಗೆ ಭೂಮಿ ಸ್ವಾಧೀನಪಡಿಸಿಕೊಂಡಿರುವ ರೈತರಿಗೆ ಸಮಗ್ರ ಪರಿಹಾರ ಯೋಜನೆ ರೂಪಿಸುವುದಾಗಿ ಬಿಜೆಪಿ ಭರವಸೆ ನೀಡಿದೆ.
ಆ್ಯಂಟಿ ರೋಮಿಯೋ ಸ್ಕ್ವಾಡ್: ಮಹಿಳೆಯರ ಸುರಕ್ಷತೆಗಾಗಿ ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಆ್ಯಂಟಿ ರೋಮಿಯೋ ಸ್ಕ್ವಾಡ್ ಸ್ಥಾಪಿಸುವುದಾಗಿ ಬಿಜೆಪಿ ಭರವಸೆ ನೀಡಿದೆ. ಈ ಸ್ಕ್ವಾಡ್‌ಗಳು ಸಾರ್ವಜನಿಕ ಸ್ಥಳಗಳಲ್ಲಿ ಗಸ್ತು ತಿರುಗಲಿದ್ದು ಮಹಿಳೆಯರಿಗೆ ಕಿರುಕುಳ ನೀಡುವವರ ವಿರುದ್ಧ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದೆ.
ಲಾಡೋ ಪ್ರೋತ್ಸಾಹನ್ ಯೋಜನೆ: ಹೆಣ್ಣು ಮಕ್ಕಳ ಯೋಗಕ್ಷೇಮವನ್ನು ಉತ್ತೇಜಿಸುವ ಯೋಜನೆಯನ್ನು ಬಿಜೆಪಿ ಘೋಷಿಸಿದೆ. ಈ ಯೋಜನೆಯಡಿ, ಹೆಣ್ಣು ಮಗು ಜನಿಸಿದ ಪ್ರತಿ ಮನೆಗೆ 2 ಲಕ್ಷ ರೂ.ಗಳ ಉಳಿತಾಯ ಬಾಂಡ್ ನೀಡಲಾಗುವುದು. ಮಗಳಿಗೆ 18 ವರ್ಷ ತುಂಬಿದಾಗ ಹಣ ಕೈಸೇರಲಿದೆ.
ಉಚಿತ ಸ್ಕೂಟಿ ಯೋಜನೆ: ಉನ್ನತ ಶಿಕ್ಷಣ ಪಡೆಯುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಸ್ಕೂಟಿ ಯೋಜನೆಯನ್ನು ಬಿಜೆಪಿ ಅನಾವರಣಗೊಳಿಸಿದೆ. ಈ ಯೋಜನೆಯು ಅರ್ಹ ವಿದ್ಯಾರ್ಥಿಗಳಿಗೆ ಅವರ ಸಾರಿಗೆ ಅಗತ್ಯಗಳಿಗೆ ಸಹಾಯ ಮಾಡಲು ಸ್ಕೂಟರ್‌ಗಳನ್ನು ಒದಗಿಸಲಿದೆ ಎಂದು ಬಿಜೆಪಿ ಹೇಳಿದೆ.
ಅಡುಗೆ ಅನಿಲಕ್ಕೆ ಸಬ್ಸಿಡಿ : ಉಜ್ವಲ ಯೋಜನೆಯ ಫಲಾನುಭವಿಗಳಿಗೆ 500 ರೂ.ನಿಂದ 950 ರೂ.ಗೆ ಸಬ್ಸಿಡಿ ಹೆಚ್ಚಿಸುವುದಾಗಿ ಬಿಜೆಪಿ ಭರವಸೆ ನೀಡಿದೆ. ಇದು ಅಡುಗೆಗೆ ಎಲ್‌ಪಿಜಿ ಸಿಲಿಂಡರ್ ಗಳನ್ನು ಬಳಸುವ ಕಡಿಮೆ ಆದಾಯದ ಕುಟುಂಬಗಳಿಗೆ ಸಹಕಾರಿಯಾಗಲಿದೆ.
ಪ್ರವಾಸೋದ್ಯಮಕ್ಕೆ ಉತ್ತೇಜನ: ರಾಜ್ಯದಲ್ಲಿ 5 ಲಕ್ಷ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ಗುರಿಯೊಂದಿಗೆ ಪ್ರವಾಸೋದ್ಯಮವನ್ನು ಉತ್ತೇಜಿಸಲು 2,000 ಕೋಟಿ ರೂಪಾಯಿ ನಿಧಿ ಸ್ಥಾಪಿಸುವುದಾಗಿ ಬಿಜೆಪಿ ಘೋಷಿಸಿದೆ.
200 ಸದಸ್ಯ ಬಲದ ರಾಜಸ್ಥಾನ ವಿಧಾನಸಭೆಗೆ ನವೆಂಬರ್ 25 ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಡಿಸೆಂಬರ್ 3 ರಂದು ಫಲಿತಾಂಶ ಪ್ರಕಟವಾಗಲಿದೆ. ಪ್ರಸ್ತುತ ರಾಜಸ್ಥಾನದಲ್ಲಿ ಕಾಂಗ್ರೆಸ್ ಆಡಳಿತ ನಡೆಸುತ್ತಿದೆ.












Click it and Unblock the Notifications