ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇವು ಹಗರಣ: ಲಾಲು ಪ್ರಸಾದ್ ತಪ್ಪಿತಸ್ಥ, ಇಂದೇ ಜೈಲಿಗೆ

By Srinath
|
Google Oneindia Kannada News

Bihar Fodder scam RJD chief former Bihar cm Lalu Prasad guilty CBI court verdict
ರಾಂಚಿ (ಬಿಹಾರ), ಸೆ. 30: ಮೇವು ಹಗರಣಕ್ಕೆ ಸಂಬಂಧಿಸಿದಂತೆ ಬಿಹಾರ ಮಾಜಿ ಮುಖ್ಯಮಂತ್ರಿ ''ಲಾಲು ಪ್ರಸಾದ್‌ ಯಾದವ್‌ ದೋಷಿ'' ಎಂದು ಸಿಬಿಐ ವಿಶೇಷ ನ್ಯಾಯಾಲಯ ಘೋಷಿಸಿದೆ. ಆದರೆ ಶಿಕ್ಷೆಯ ಪ್ರಮಾಣವನ್ನು ಅಕ್ಟೋಬರ್ 3ರಂದು ಪ್ರಕಟಿಸುವುದಾಗಿ ನ್ಯಾಯಾಧೀಶರಾದ ಪಿಕೆ ಸಿಂಗ್ ತಿಳಿಸಿದ್ದಾರೆ.

ಇದರಿಂದ 65 ವರ್ಷದ ಲಾಲುಗೆ ಕನಿಷ್ಠ 3 ವರ್ಷ ಶಿಕ್ಷೆಯಾಗುವುದು ಖಚಿತವಾಗಿದ್ದು ಇಂದಿನಿಂದಲೇ ಅವರ ಜೈಲು ಯಾತ್ರೆ ಆರಂಭವಾಗಲಿದೆ. ಪ್ರಕರಣದಲ್ಲಿ 45 ಮಂದಿ ತಪ್ಪಿತಸ್ಥರೆಂದು ಕೋರ್ಟ್ ಘೋಷಿಸುತ್ತಿದ್ದಂತೆ ಅವರೆಲ್ಲರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಗಮನಾರ್ಹವೆಂದರೆ, ಕನಿಷ್ಠ 2 ವರ್ಷ ಶಿಕ್ಷೆಗೊಳಗಾದ ಸಂಸದರು, ಶಾಸಕರ ಸದಸ್ಯತ್ವವನ್ನು ರದ್ದುಪಡಿಸಬೇಕೆಂಬ ಸುಪ್ರೀಂಕೋರ್ಟ್‌ ತೀರ್ಪು ಮತ್ತು ಇದರ ವಿರುದ್ಧ ಕೇಂದ್ರ ಸರ್ಕಾರ ಹೊರಡಿಸಿರುವ (ನಾನ್ ಸೆನ್ಸ್) ಸುಗ್ರೀವಾಜ್ಞೆ ಬಗ್ಗೆ ಚರ್ಚೆಗಳು ನಡೆಯುತ್ತಿರುವಾಗಲೇ ಲಾಲು ವಿರುದ್ಧ ತೀರ್ಪು ಹೊರಬಿದ್ದಿದ್ದು, ಅವರ ಭವಿಷ್ಯದ ಬಗ್ಗೆ ತೀವ್ರ ಕುತೂಹಲ ಮೂಡಿದೆ. ಪ್ರಕರಣದಲ್ಲಿ ಲಾಲು ಶಿಕ್ಷೆಗೆ ಗುರಿಯಾಗಿರುವುದರಿಂದ ಅವರು ತಕ್ಷಣಕ್ಕೆ ಲೋಕಸಭಾ ಸದಸ್ಯತ್ವವನ್ನೂ ಕಳೆದುಕೊಳ್ಳಲಿದ್ದಾರೆ.

ಲಾಲು ಅವರಲ್ಲದೆ, ಬಿಹಾರ ಮಾಜಿ ಮುಖ್ಯಮಂತ್ರಿ ಜಗನ್ನಾಥ್‌ ಮಿಶ್ರಾ, ಮೂವರು ಶಾಸಕರು, ಪಶು ಸಂಗೋಪನಾ ಇಲಾಖೆಯ ಅಂದಿನ ಕಾರ್ಯದರ್ಶಿ ಸೇರಿದಂತೆ ಒಟ್ಟು 45 ಮಂದಿ ಕೂಡ ಈ ಪ್ರಕರಣದಲ್ಲಿ ತಪ್ಪಿತಸ್ಥರಾಗಿದ್ದಾರೆ. ವಿಚಾರಣೆಯ ವೇಳೆ 7 ಮಂದಿ ಸಾವನ್ನಪ್ಪಿದ್ದರೆ, ಇಬ್ಬರು ಮಾಫಿ ಸಾಕ್ಷಿಗಳಾಗಿದ್ದರು.

ಸುಮಾರು 17 ವರ್ಷಗಳ ಹಿಂದೆ ನಡೆದಿದ್ದ 900 ಕೋಟಿ ರೂ. ಮೊತ್ತದ ಮೇವು ಹಗರಣ ಸಂಬಂಧ ಒಟ್ಟು 53 ಪ್ರಕರಣಗಳು ದಾಖಲಾಗಿದ್ದವು. ಅದರಲ್ಲಿ 44 ಪ್ರಕರಣಗಳ ತೀರ್ಪು ಈಗಾಗಲೇ ಹೊರಬಿದ್ದಿದೆ. ಲಾಲು ಪ್ರಸಾದ್‌ ಯಾದವ್‌ ವಿರುದ್ಧ ಆರು ಪ್ರಕರಣಗಳು ದಾಖಲಾಗಿದ್ದವು. ಅದರಲ್ಲಿ ಮೊದಲ ತೀರ್ಪು ಇಂದು ಸೋಮವಾರ ಪ್ರಕಟವಾಗಿದೆ. ಚಾಯ್‌ ಬಾಸಾ ಖಜಾನೆಯಿಂದ 37 ಕೋಟಿ ರೂ. ಹಣವನ್ನು ಅಕ್ರಮವಾಗಿ ಪಡೆದ ಆರೋಪವನ್ನು ಲಾಲು ಎದುರಿಸುತ್ತಿದ್ದಾರೆ.

ಬಿಹಾರದ ಜಾನುವಾರುಗಳಿಗೆ ಮೇವು ಹಾಗೂ ಔಷಧ ಒದಗಿಸುವ ನೆಪದಲ್ಲಿ ಅಧಿಕಾರಿಗಳು, ರಾಜಕಾರಣಿಗಳು ಸರ್ಕಾರದ ಹಣವನ್ನು ಲೂಟಿ ಮಾಡಿದ್ದರು. 20 ವರ್ಷಗಳ ಕಾಲ ನಡೆದ ಈ ಲೂಟಿ ತಡವಾಗಿ ಬೆಳಕಿಗೆ ಬಂದಿತ್ತು. ಈ ಹಗರಣದಿಂದಾಗಿ ಮುಖ್ಯಮಂತ್ರಿ ಹುದ್ದೆ ಕಳೆದುಕೊಂಡಿದ್ದ ಲಾಲು ಪ್ರಸಾದ್‌ ಯಾದವ್‌ ಜೈಲಿಗೂ ಹೋಗಿಬಂದಿದ್ದರು.

ಲಾಲು ವಿರುದ್ಧ ದಾಖಲಾಗಿರುವ ಆರು ಪ್ರಕರಣಗಳ ಪೈಕಿ ಐದರ ವಿಚಾರಣೆ ಜಾರ್ಖಂಡ್‌ನ‌ಲ್ಲಿ, ಒಂದು ಪ್ರಕರಣದ ವಿಚಾರಣೆ ಬಿಹಾರದಲ್ಲೂ ನಡೆಯುತ್ತಿದೆ. ಜಾರ್ಖಂಡ್‌ ರಚನೆಯಾದ ಬಳಿಕ ಬಹುತೇಕ ಪ್ರಕರಣಗಳ ವಿಚಾರಣೆಯನ್ನು ಆ ರಾಜ್ಯಕ್ಕೆ ವರ್ಗಾಯಿಸಲಾಗಿತ್ತು. ತೀರ್ಪು ಪ್ರಕಟಣೆ ವೇಳೆ ನ್ಯಾಯಾಲಯ ಸೂಚನೆಯ ಹಿನ್ನೆಲೆಯಲ್ಲಿ ಲಾಲೂ ರಾಂಚಿ ಕೋರ್ಟಿನಲ್ಲಿ ಹಾಜರಿದ್ದರು.

English summary
Bihar Fodder scam - RJD chief former Bihar cm Lalu Prasad Yadav found guilty judges Ranchi CBI court. It is an adverse (to Lalu) verdict from CBI special court of PK Singh in the 17-year-old case. It relates to fraudulent withdrawal of money from then Bihar treasury, and diverted to the animal husbandry department and siphoned off. It was called the Rs 950 cr fodder scam in the late 1980s and the early '90s.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X