Vande Bharat Sleeper: ಮುಂಬೈ-ಬೆಂಗಳೂರು ರೈಲಿನ ಅಧಿಕೃತ ವೇಳಾಪಟ್ಟಿ ಬಿಡುಗಡೆ, ಉದ್ಘಾಟನೆ ಅಪ್ಡೇಟ್ಸ್
ಬೆಂಗಳೂರು: ಬಹುನಿರೀಕ್ಷೆಯ ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವೆ ಸಂಪರ್ಕ ಸಾಧಿಸುವ ಬೆಂಗಳೂರು SMVT- ಮುಂಬೈ ವಂದೇ ಭಾರತ್ ಸ್ಲೀಪರ್ ಎಕ್ಸ್‌ಪ್ರೆಸ್ ರೈಲು (Bengaluru-Mumbai Sleeper Vande Bharat Express) ಸಂಚಾರಕ್ಕೆ ರೈಲ್ವೆ ಮಂಡಳಿಯು ಅಧಿಕೃತ ವೇಳಾಪಟ್ಟಿ ಬಿಡುಗಡೆ ಮಾಡಿದೆ. ಎರಡು ರಾಜ್ಯಗಳ ರೈಲು ಪ್ರಯಾಣಿಕರಿಗೆ ರೈಲ್ವೆ ಇಲಾಖೆಯು ಗುಡ್‌ನ್ಯೂಸ್ ನೀಡಿದೆ.
ಬೆಂಗಳೂರು ಎಸ್‌ಎಂವಿಟಿ ರೈಲು ನಿಲ್ದಾಣದಿಂದ ಆಂಧ್ರಪ್ರದೇಶದ ಗಡಿ ಮಾರ್ಗವಾಗಿ ಕರ್ನಾಟಕದ ರಾಯಚೂರು, ಕಲಬುರಗಿ ಮೂಲಕ ಹಲವು ಗಂಟೆಗಳಲ್ಲಿ ಗಮ್ಯ ಸ್ಥಳ ಮುಂಬೈ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (CSMT) ತಲುಪುತ್ತದೆ. ಈ ಹಿಂದೆ ತಾತ್ಕಾಲಿಕ ವೇಳಾಪಟ್ಟಿ , ಮಾರ್ಗ ಬಿಡಲಾಗಿತ್ತು. ಇದೀಗ ರೈಲು ಸಂಖ್ಯೆ, ಸಮಯ, ವೇಳಾಪಟ್ಟಿ ಸೇರಿ ಎಲ್ಲ ಮಾಹಿತಿ ಒದಗಿಸಿದೆ. ಈ ರೈಲಿನ ಉದ್ಘಾಟನೆ ಆಗುವುದು ಬಾಕಿ ಇದ್ದು, ಶೀಘ್ರವೇ ಅದರ ಮಾಹಿತಿಯು ಪ್ರಕಟವಾಗಲಿದೆ.

ವಾರದಲ್ಲಿ 6 ದಿನ ಸ್ಲೀಪರ್ ವಂದೇ ಭಾರತ್ ಸಂಚಾರ
ಬೆಂಗಳೂರು- ಮುಂಬೈ ವಂದೇ ಭಾರತ್ ಸ್ಲೀಪರ್ ಎಕ್ಸ್‌ಪ್ರೆಸ್ ರೈಲು (27651/27652) ವಾರದಲ್ಲಿ 6 ದಿನ ಎರಡು ದಿಕ್ಕಿನಲ್ಲೂ ಸಂಚಾರ ಮಾಡಲಿದೆ. ವೇಳಾಪಟ್ಟಿ ಪ್ರಕಾರ ನೋಡುವುದಾದರೆ ಸೋಮವಾರ ಹೊರತುಪಡಿಸಿ ಉಳಿದೆಲ್ಲ ದಿನವು 'ಬೆಂಗಳೂರು- ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು (27652) ರೈಲು ಸಂಚಾರ ಮಾಡುತ್ತದೆ. ಅದೇ ರೀತಿ ಮಂಗಳವಾರ ಒಂದು ದಿನ ಬಿಟ್ಟು ಉಳಿದೆಲ್ಲ ಆರು ದಿನ ಮುಂಬೈ-ಬೆಂಗಳೂರು ಸ್ಲೀಪರ್ ವಂದೇ ಭಾರತ್ ರೈಲು (27651) ರೈಲು ಕಾರ್ಯಾಚರಣೆ ಮಾಡಲಿದೆ ಎಂದು ರೈಲ್ವೆ ಸಚಿವಾಲಯ ವೇಳಾಪಟ್ಟಿಯಲ್ಲಿ ತಿಳಿಸಿದೆ.
ನಿರ್ಗಮನ, ಆಗಮನ ವೇಳಾಪಟ್ಟಿ ಇಲ್ಲಿದೆ
* 20-22 ಗಂಟೆಯ ಪ್ರಯಾಣವನ್ನು ಸ್ಲೀಪರ್ ವಂದೇ ಭಾರತ್ ರೈಲು ಕೇವಲ 14 ಗಂಟೆಗಳ ಆಸುಪಾಸಿನಲ್ಲಿ ಸುಮಾರು 1200 ಕಿಲೋ ಮೀಟರ್ ಕ್ರಮಿಸಲಿದೆ.
* ರೈಲು (27652) ಬೆಂಗಳೂರಿನ ಎಸ್ ಎಂ ವಿಟಿ ರೈಲು ನಿಲ್ದಾಣದಿಂದ ನಿಗದಿತ ದಿನಗಳಲ್ಲಿ ರಾತ್ರಿ 10 ಗಂಟೆಗೆ ಹೊರಡುತ್ತದೆ. ಮಾರನೇ ದಿನ ಮಧ್ಯಾಹ್ನ 1.50ಕ್ಕೆ ಮುಂಬೈ ಸಿಎಸ್ ಎಂಟಿ ತಲುಪುತ್ತದೆ.
* ಮರಳಿ ಅದೇ ದಿಕ್ಕಿನಲ್ಲಿ ರೈಲು (27651) ಮುಂಬೈನಿಂದ ರಾತ್ರಿ 10.30ಗಂಟೆಗೆ ಹೊರಡುತ್ತದೆ. ನಿಗದಿತ ಮಾರ್ಗದ ಮೂಲಕ ಮಾರನೇ ದಿನ ಮಧ್ಯಾಹ್ನ 2.50ಕ್ಕೆ ಬಂದು ತಲುಪುತ್ತದೆ.
ಮಾರ್ಗ/ನಿಲುಗಡೆ ನಿಲ್ದಾಣಗಳು ಯಾವುವು
ಮುಂಬೈ-ಬೆಂಗಳೂರು ಎಸ್‌ಎಂವಿಟಿ-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ಧರ್ಮಾವರಂ (ಮಧ್ಯರಾತ್ರಿ 12.50) ಮತ್ತು ವಾಡಿ (ಬೆಳಗ್ಗೆ 5.05) ಮಾರ್ಗದಲ್ಲಿ ಸಂಚಾರ ಮಾಡುತ್ತದೆ. ಮೂರು ರಾಜ್ಯಗಳ ಜನರಿಗೆ ಸೇವೆ ನೀಡುತ್ತದೆ. ಬೆಂಗಳೂರಿನಿಂದ ಹೊರಟರೇ ಅನಂತಪುರ, ಗುಂತಕಲ್, ರಾಯಚೂರು, ಕಲಬುರಗಿ, ಸೋಲಾಪುರ, ಪುಣೆ, ಕಲ್ಯಾಣ್ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ.
ಟಿಕೆಟ್ ದರ ಎಷ್ಟು? ಉದ್ಘಾಟನೆ ಯಾವಾಗ?
ಸ್ಲೀಪರ್ ವಂದೇ ಭಾರತ್ ರೈಲಿನ ಎಲ್ಲ ಅಂತಿಮ ತಪಾಸಣೆ ಪೂರ್ಣಗೊಂಡಿದ್ದು, ಇನ್ನೇನು ವಾಣಿಜ್ಯ ಕಾರ್ಯಾಚರಣೆ ಆರಂಭದ ಹಂತಕ್ಕೆ ಬರಲಾಗಿದೆ. ಈ ಸಂಬಂಧ ಅಧಿಕೃತ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ. ದಸರಾ, ಛತ್ ಹಬ್ಬ, ದೀಪಾವಳಿ ಹಬ್ಬ ಬಗ್ಗೆ ಆಲೋಚಿಸಿರುವ ರೈಲ್ವೆ ಇಲಾಖೆ ಕೆಲವೇ ದಿನಗಳಲ್ಲಿ ಈ ರೈಲಿನ ಆರಂಭಕ್ಕೆ ಗ್ರೀನ್ ಸಿಗ್ನಲ್ ನೀಡಲಿದೆ. ಟಿಕೆಟ್ ದರ ಎಷ್ಟು ಎಂಬುದು ಇನ್ನೇನು ಫಿಕ್ಸ್ ಆಗಲಿದೆ. ಉದ್ಘಾಟನೆ ದಿನಾಂಕ ಫಿಕ್ಸ್ ಆಗಬೇಕಿದೆ.
ಸ್ಲೀಪರ್ ರೈಲಿನ ವೈಶಿಷ್ಟ್ಯತೆಗಳು
ಈವರೆಗೆ ಇದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮುಂದುವರಿದ ಅಪ್‌ಗ್ರೇಡ್ ರೈಲು ಇದಾಗಿದೆ. ಸ್ಲೀಪರ್ ವಂದೇ ಭಾರತ್ ರೈಲು ಅತ್ಯಾಧುನಿಕ ವ್ಯವಸ್ಥೆ ಹೊಂದಿದ್ದು, ದೀರ್ಘ ಪ್ರಯಾಣದ ಮಾಡುವ ರಾತ್ರಿ ಪ್ರಯಾಣಿಕರನ್ನು ಗಮನದಲ್ಲಿಕೊಂಡು ತಯಾರಿಸಲಾಗಿದೆ. ಗಂಟೆಗೆ ಗರಿಷ್ಠ 180 ಕಿಮೀ ಚಲಿಸಬಲ್ಲ ಸಾಮರ್ಥ್ಯ ಹೊಂದಿದೆ. ಏರೋ ಡೈನಾಮಿಕ್ ವಿನ್ಯಾಸ ಗಾಳಿಯ ಪ್ರತಿರೋಧ ತಗ್ಗಿಸುತ್ತದೆ. ಎಸಿ, ನಾನ್ ಎಸಿ ಸೇರಿ ಎಲ್ಲ ವಿಧದ ಕೋಚ್‌ಗಳೊಂದಿಗೆ ಒಟ್ಟು 16 ಕೋಚ್ ಇವೆ. ಒಂದೊಮ್ಮೆ 823ಪ್ರಯಾಣಿಕರು ಇದರಲ್ಲಿ ಪ್ರಯಾಣಿಸಬಹುದಾಗಿದೆ. ಒಳಗೆ ಸ್ವಯಂ ಚಾಲಿತ ಬಾಗಿಲು, ಸಿಸಿಟಿವಿ, ಬೆಂಕಿ ಪ್ರತಿರೋಧಕ, ಸೆನ್ಸಾರ್, ಆರಾಮದಾಯಕ ಬೆಡ್, ಪ್ರಯಾಣಿಕರಿಗೆ ಬೇಕಾದ ಮೂಲ ಸೌಕರ್ಯ ಇದರಲ್ಲಿ ಒದಗಿಸಲಾಗಿದೆ.


Click it and Unblock the Notifications
