Bengaluru - Chennai Highway Accident: ಬೆಂಗಳೂರು - ಚೆನ್ನೈ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ, ಬಸ್ ಪಲ್ಟಿ
ಚೆನ್ನೈ- ಬೆಂಗಳೂರು ರಾಷ್ಟ್ರೀಯ (Chennai-Bengaluru Highway) ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ರಸ್ತೆ ಅಪಘಾತದ ಭಯಾನಕ ದೃಶ್ಯಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ತಮಿಳುನಾಡಿನ ಶ್ರೀಪೆರಂಬದೂರು ಮಾರ್ಗದ ತಾಂಡಲಂನ ಚೆನ್ನೈ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ದುರಂತ ಸಂಭವಿಸಿದೆ. ಬುಧವಾರ ಮುಂಜಾನೆ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ. ಸ್ಥಳೀಯ ಸಿಸಿಟಿವಿಯಲ್ಲಿ ಈ ಅಪಘಾತದ ಭಯಾನಕ ದೃಶ್ಯಗಳು ಸೆರೆಯಾಗಿದ್ದು, ಇದೀಗ ವೈರಲ್ ಆಗುತ್ತಿದೆ.
ಇಲ್ಲಿನ ಚೆನ್ನೈ-ಬೆಂಗಳೂರು ರಾಷ್ಟ್ರೀಯ ಹೈವೇಯಲ್ಲಿ ಈ ಅಪಘಾತ ಸಂಭವಿಸಿದೆ. ಖಾಸಗಿ ಬಸ್‌ವೊಂದಕ್ಕೆ ಟ್ರಕ್ ಡಿಕ್ಕಿ ಹೊಡೆದಿದ್ದು ಈ ಅಪಘಾತ ಸಂಭವಿಸಿದೆ. ಇದರಲ್ಲಿ ಕನಿಷ್ಠ 10ಕ್ಕೂ ಹೆಚ್ಚು ಜನ ಗಾಯಗೊಂಡಿದ್ದು, ಹಲವರು ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ. ಅದೃಷ್ಟವಶಾತ್ ಯಾವುದೇ ಸಾವು ಸಂಭವಿಸಿಲ್ಲ ಎಂದು ಹೇಳಲಾಗಿದೆ.

ಅಪಘಾತ ಸಂಭವಿಸಿದ್ದು ಹೇಗೆ: ಇಲ್ಲಿನ ಎಕ್ಸ್‌ಪ್ರೆಸ್‌ವೇನಲ್ಲಿ ರಸ್ತೆಯ ತಿರುವೊಂದರಲ್ಲಿ ಬಸ್ ಕ್ರಾಸ್ ಮಾಡುವಾಗ ಈ ಅವಘಡ ಸಂಭವಿಸಿದೆ. ಬಸ್ ಚಾಲಕ ಕ್ರಾಸ್ ತೆಗೆದುಕೊಳ್ಳುವಾಗ ಏಕಾಏಕಿ ಬಂದ ಟ್ರಕ್ ಬಸ್‌ಗೆ ಡಿಕ್ಕಿಯಾಗಿದೆ. ಇದರಿಂದ ಬಸ್ ಪಲ್ಟಿ ಆಗಿರುವುದು ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ. ವೇಗವಾಗಿ ಬಂದಿರುವ ಟ್ರಕ್ ಬಸ್‌ಗೆ ಜೋರಾಗಿ ಗುದ್ದಿದೆ. ಇದರಿಂದ ಬಸ್ ಚಾಲಕನಿಗೆ ನಿಯಂತ್ರಣ ಸಿಕ್ಕಿಲ್ಲ ಅಲ್ಲದೆ ಬಸ್ ರಸ್ತೆ ಕ್ರಾಸ್ ಮಾಡುತ್ತಿದ್ದರಿಂದ ಬಸ್‌ನ ಮಧ್ಯ ಭಾಗಕ್ಕೆ ಟ್ರಕ್ ಗುದ್ದಿದ್ದು, ಬಸ್‌ನಲ್ಲಿದ್ದ ಹಲವರಿಗೆ ಗಂಭೀರವಾದ ಗಾಯಗಳು ಆಗಿವೆ. ಅಪಘಾತ ಸಂಭವಿಸುತ್ತಿದ್ದಂತೆಯೇ ಸ್ಥಳೀಯರು ಗಾಯಾಳುಗಳ ರಕ್ಷಣೆಗೆ ಮುಂದಾಗಿದ್ದಾರೆ. ಬಸ್‌ನಲ್ಲಿ ಇದ್ದವರನ್ನು ಮೇಲಕ್ಕೆ ಎತ್ತಿ ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಸ್ತೆ ದಾಟುತ್ತಿದ್ದವ ಮೇಲೆ ಬಿದ್ದ ಬಸ್!
ಇನ್ನು ಚೆನ್ನೈ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ರಸ್ತೆ ದಾಟುತ್ತಿದ್ದವರಿಗೂ ಸಂಷಕ್ಟವನ್ನು ತಂದೊಡ್ಡಿದೆ. ಬಸ್ ನ ಪಕ್ಕದಲ್ಲೇ ವ್ಯಕ್ತಿಯೊಬ್ಬರು ಅಪಘಾತ ಸಂಭವಿಸುವ ಕೆಲವೇ ನಿಮಿಷಗಳ ಮುಂದೆ ರಸ್ತೆ ದಾಟುವುದಕ್ಕೆ ಮುಂದಾಗಿದ್ದರು. ಏಕಾಏಕಿ ಬಸ್‌ಗೆ ಟ್ರಕ್ ಡಿಕ್ಕಿಯಾಗಿದ್ದರಿಂದ ರಸ್ತೆ ದಾಟುತ್ತಿದ್ದವರ ಮೇಲೆಯೇ ಬಸ್ ಬಿದ್ದಿದೆ. ಅಲ್ಲದೇ ಟ್ರಕ್ ಸಹ ಬಸ್‌ನ ಹಿಂದೆ ಸ್ಕಿಡ್ ಆಗಿದ್ದು, ರಸ್ತೆ ದಾಟುತ್ತಿದ್ದವರಿಗೆ ಗಂಭೀರವಾದ ಗಾಯಗಳು ಆಗಿವೆ. ದೃಶ್ಯಗಳು ಭೀಕರವಾಗಿದ್ದು ಅವರು ಯಾವ ರೀತಿ ಗಂಭೀರವಾಗಿ ಗಾಯಗೊಂಡಿರಬಹುದು ಎನ್ನುವುದಕ್ಕೆ ಸಾಕ್ಷಿಯಂತೆ ಇವೆ.
ಅಪಘಾತಕ್ಕೆ ಕಾರಣವೇನು: ಪ್ರಾಥಮಿಕ ತನಿಖಾ ವರದಿಯ ಪ್ರಕಾರ ಹಾಗೂ ಪ್ರತ್ಯಕ್ಷದರ್ಶಿಗಳು ಹೇಳಿರುವಂತೆ ಈ ಅಪಘಾತಕ್ಕೆ ಅತಿಯಾದ ವೇಗ ಹಾಗೂ ನಿರ್ಲಕ್ಷಿತ ವಾಹನ ಚಾಲನೆಯೇ ಪ್ರಮುಖ ಕಾರಣ ಎಂದು ಹೇಳಲಾಗಿದೆ. ಬಸ್ ಚಾಲಕ ಸಹ ಏಕಾಏಕಿ ಬಸ್ ತಿರುವು ತೆಗೆದುಕೊಳ್ಳುತ್ತಿರುವಂತೆ ದೃಶ್ಯಗಳಲ್ಲಿ ಇವೆ. ಆದರೆ, ಈ ಬಗ್ಗೆ ತನಿಖೆಯ ನಂತರವಷ್ಟೇ ಕಾರಣ ತಿಳಿದು ಬರಬೇಕಿದೆ. ಇನ್ನು ಈ ಅಪಘಾತಕ್ಕೆ ನಿಖರ ಕಾರಣ ಏನು ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ.












Click it and Unblock the Notifications