Ayodhya: ರಾಮಜನ್ಮಭೂಮಿ ದೇಗುಲದ ಆವರಣದಲ್ಲಿ ಅರ್ಚಕರ ಭೀಕರ ಕೊಲೆ
ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆ ಜಿಲ್ಲೆ ಇಂದು ಭೀಕರ ಘಟನೆಗೆ ಸಾಕ್ಷಿಯಾಗಿದ್ದು ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡವಾಗಿದೆ. ಇನ್ನು ರಾಮ ಜನ್ಮಭೂಮಿಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಹನುಮಾನ್ ಗರ್ಹಿ ದೇಗುಲದ ಸಂಕೀರ್ಣದಲ್ಲಿ ಹೀಗೆ ಅರ್ಚಕರನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಹಾಗಾದರೆ ಈ ಘಟನೆ ನಡೆದಿದ್ದು ಹೇಗೆ? ಮೃತಪಟ್ಟ ಅರ್ಚಕರು ಯಾರು?
ಹೀಗೆ ಅರ್ಚಕರೊಬ್ಬರು ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿರುವುದು, ಅಯೋಧ್ಯೆ ರಾಮ ಜನ್ಮಭೂಮಿ ಆವರಣದ ಹೈ-ಸೆಕ್ಯುರಿಟಿ ವಲಯದ ರೂಮ್‌ನಲ್ಲಿ ಎನ್ನಲಾಗಿದೆ. ಹನುಮಾನ್ ಗರ್ಹಿ ದೇವಸ್ಥಾನ ಅರ್ಚಕರು ಶವವಾಗಿ ಪತ್ತೆಯಾಗಿದ್ದಾರೆ. ಇಂದು ಬೆಳಗ್ಗೆ ರಕ್ತದ ಮಡುವಲ್ಲಿ ಶವವಾಗಿ 44 ವರ್ಷದ ಅರ್ಚಕರು ಪತ್ತೆಯಾಗಿದ್ದಾರೆ. ಇನ್ನು ಬೆಳಗ್ಗೆ ದೇಗುಲದ ಪ್ರಾರ್ಥನೆಗೆ ಅರ್ಚಕರು ಹಾಜರಾಗದೇ ಇದ್ದಾಗ ಸತ್ಯ ಗೊತ್ತಾಗಿದೆ. ಹಾಗಾದರೆ ಈ ಕೊಲೆ ಮಾಡಿರುವುದು ಯಾರು? ಘಟನೆ ನಡೆದಿದ್ದು ಹೇಗೆ? ಪೊಲೀಸರು ಹೇಳುತ್ತಿರುವುದು ಏನು?

ಅರ್ಚಕರ ಕೊಲೆ ನಡೆದಿರುವುದು ಹೇಗೆ?
ಅಂದಹಾಗೆ ಇದೀಗ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿರುವ ಅರ್ಚಕರ ಕೋಣೆಗೆ ಕೂಡ ಹೆಚ್ಚಿನ ಭದ್ರತೆ ಇತ್ತು. ಅರ್ಚಕರ ಕೋಣೆಗೆ ಅವರ ಇಬ್ಬರು ಶಿಷ್ಯರನ್ನ ಬಿಟ್ಟರೆ ಬೇರೆಯವರಿಗೆ ಪ್ರವೇಶ ಕೂಡ ಇರಲಿಲ್ಲ. ಹೀಗಾಗಿಯೇ ಪೊಲೀಸ್ ಅಧಿಕಾರಿಗಳು ತನಿಖೆ ತೀವ್ರಗೊಳಿಸಿದ್ದು, ಅನುಮಾನ ಬಂದವರನ್ನು ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿಗಳ ಪತ್ತೆಗೆ ಒಟ್ಟು ನಾಲ್ಕು ತಂಡ ರಚಿಸಲಾಗಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ. ಅಲ್ಲದೆ ಸುದ್ದಿ ತಿಳಿದ ತಕ್ಷಣ ಹಿರಿಯ ಪೊಲೀಸ್ ಅಧಿಕಾರಿಗಳೇ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಹಾಗೇ ಸ್ಥಳದಲ್ಲೇ ಇದ್ದು ಪರಿಸ್ಥಿತಿಯ ಮಾಹಿತಿ ಪಡೆದಿದ್ದಾರೆ ಎನ್ನಲಾಗಿದೆ.
ವಿಕೃತವಾಗಿ ಕೊಲೆ ಮಾಡಿದ ವಿಕೃತರು
ಮೊದಲು ತಂತಿಯಿಂದ ಅರ್ಚಕರ ಕತ್ತನ್ನು ಬಿಗಿದಿದ್ದಾರೆ ಎಂದು ಆರೋಪ ಮಾಡಲಾಗಿದೆ. ಅಲ್ಲದೆ ಮೃತ 44 ವರ್ಷದ ಅರ್ಚಕರ ಮೇಲೆ ಹರಿತವಾದ ಆಯುಧದಿಂದ ದಾಳಿ ಮಾಡಿರುವ ಬಗ್ಗೆಯೂ ಆರೋಪ ಮಾಡಲಾಗಿದೆ. ಆದ್ರೆ ಇಲ್ಲಿಯ ತನಕ ಅರ್ಚಕರ ಸಾವಿಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಹೀಗಾಗಿ ಸೂಕ್ತ ತನಿಖೆ ಬಳಿಕ ನಿಖರ ಕಾರಣ ಗೊತ್ತಾಗಲಿದೆ ಅಂತಾ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಒಟ್ನಲ್ಲಿ ಮೊದಲೇ ಸೂಕ್ಷ್ಮವಾಗಿದ್ದ ರಾಮಜನ್ಮಭೂಮಿ ಈಗ ಬೂದಿ ಮುಚ್ಚಿ ಕೆಂಡವಾಗಿದೆ. ಈ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಅಲ್ಲದೆ ಸ್ಥಳಕ್ಕೆ ಬಂದ ಹಿರಿಯ ಅಧಿಕಾರಿಗಳು ಅಗತ್ಯ ಇರುವ ಮತ್ತು ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆಯನ್ನ ಕೈಗೊಳ್ಳಲು ಸೂಚಿಸಿದ್ದಾರೆ. ಈ ಮೂಲಕ ಎಲ್ಲೆಲ್ಲೂ ಹದ್ದಿನ ಕಣ್ಣಿಡಲಾಗಿದೆ.












Click it and Unblock the Notifications