ಈ ರಾಜ್ಯದಲ್ಲಿ ಜೂನ್ 4 ಅಲ್ಲ, 2ಕ್ಕೆ ಚುನಾವಣಾ ಫಲಿತಾಂಶ ಘೋಷಣೆ
ನವದೆಹಲಿ, ಮಾರ್ಚ್ 17: ಕೇಂದ್ರ ಚುನಾವಣಾ ಆಯೋಗ ಎರಡು ರಾಜ್ಯಗಳ ವಿಧಾನಸಭೆ ಚುನಾವಣೆಯ ಮತ ಎಣಿಕೆ ದಿನಾಂಕವನ್ನು ಬದಲಾವಣೆ ಮಾಡಿ ಆದೇಶ ಹೊರಡಿಸಿದೆ. ಶನಿವಾರ ಲೋಕಸಭೆ ಚುನಾವಣೆ 2024ರ ವೇಳಾಪಟ್ಟಿ ಘೋಷಣೆ ಮಾಡುವಾಗಲೇ ವಿವಿಧ ರಾಜ್ಯದ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆ ಮಾಡಲಾಗಿತ್ತು.
ಭಾನುವಾರ ಚುನಾವಣಾ ಆಯೋಗ ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶ ವಿಧಾನಸಭಾ ಚುನಾವಣೆ 2024ರ ಮತ ಎಣಿಕೆ ದಿನಾಂಕ ಬದಲಾವಣೆ ಮಾಡಿದೆ. ಜೂನ್ 4ರ ಬದಲು ಜೂನ್ 2ರಂದು ಮತ ಎಣಿಕೆ ನಡೆಯಲಿದೆ.

ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಶನಿವಾರ ಲೋಕಸಭೆ ಚುನಾವಣೆ ವೇಳಾಪಟ್ಟಿ ಘೋಷಣೆ ಮಾಡುವಾಗ ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶ ವಿಧಾನಸಭೆ ಚುನಾವಣೆಯ ವೇಳಾಪಟ್ಟಿ ಘೋಷಣೆ ಮಾಡಿದ್ದರು. ಜೂನ್ 4ರಂದು ಮತ ಎಣಿಕೆ ಮಾಡಲಾಗುತ್ತದೆ ಎಂದು ಹೇಳಿದ್ದರು.
ಬದಲಾವಣೆ ಏಕೆ?; ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶ ವಿಧಾನಸಭೆಯ ಅವಧಿ ಜೂನ್ 4ರಂದು ಅಂತ್ಯಗೊಳ್ಳಲಿದೆ. ಜೂನ್ 4ರಂದು ಮತ ಎಣಿಕೆ ಮಾಡಿದರೆ ಕೆಲವು ದಿನ ರಾಜ್ಯದಲ್ಲಿ ಜನಪ್ರತಿನಿಧಿಗಳು ಇರುವುದಿಲ್ಲ. ಆದ್ದರಿಂದ ಆಡಳಿತಕ್ಕೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಮತ ಎಣಿಕೆ ದಿನಾಂಕವನ್ನು ಜೂನ್ 2ಕ್ಕೆ ನಿಗದಿ ಮಾಡಲಾಗಿದೆ.
ಆದರೆ ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶ ರಾಜ್ಯಗಳಲ್ಲಿ ನಡೆಯುವ ಲೋಕಸಭೆ ಚುನಾವಣೆಯ ಮತ ಎಣಿಕೆ ಜೂನ್ 4ರಂದೇ ನಡೆಯಲಿದೆ. ವಿಧಾನಸಭಾ ಚುನಾವಣೆ ಮತ ಎಣಿಕೆ ದಿನಾಂಕ ಮಾತ್ರ ಬದಲಾವಣೆ ಮಾಡಲಾಗಿದೆ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.
ಸಿಕ್ಕಿಂ ರಾಜ್ಯದ ವಿಧಾನಸಭೆ ಚುನಾವಣೆ ಅಧಿಸೂಚನೆ ಮಾರ್ಚ್ 20ರಂದು ಘೋಷಣೆಯಾಗಲಿದೆ. ಮಾರ್ಚ್ 27 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ. ಮಾರ್ಚ್ 28ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ.
ಮಾರ್ಚ್ 30 ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನ. ಏಪ್ರಿಲ್ 19ರಂದು ಮತದಾನ ನಡೆಯಲಿದೆ. ಮತ ಎಣಿಕೆ ಕಾರ್ಯ ಜೂನ್ 2ರಂದು ನಡೆಯಲಿದೆ. ಸಿಕ್ಕಿಂನಲ್ಲಿ 32 ವಿಧಾನಸಭಾ ಕ್ಷೇತ್ರಗಳಿವೆ.
2019ರ ಸಿಕ್ಕಿಂ ವಿಧಾನಸಭೆ ಚುನಾವಣೆಯಲ್ಲಿ ಆಡಳಿತಾರೂಢ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ 17 ಸ್ಥಾನಗಳನ್ನು ಗೆದ್ದಿತ್ತು. ಸಿಕ್ಕಿಂ ಡೆಮೋಕ್ರೆಟಿಕ್ ಫ್ರಂಟ್ ಪಕ್ಷ 15 ಸೀಟು ಗೆದ್ದಿತ್ತು.
ಅರುಣಾಚಲ ಪ್ರದೇಶ ರಾಜ್ಯದ 60 ವಿಧಾನಸಭಾ ಕ್ಷೇತ್ರಗಳ ಚುನಾವಣೆಗೆ ಮಾರ್ಚ್ 20ರಂದು ಅಧಿಸೂಚನೆ ಪ್ರಕಟವಾಗಲಿದೆ. ನಾಮಪತ್ರ ಸಲ್ಲಿಕೆ ಮಾರ್ಚ್ 27 ಕೊನೆಯ ದಿನ. ಮಾರ್ಚ್ 28ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಮಾರ್ಚ್ 30 ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನ. ಏಪ್ರಿಲ್ 19ರಂದು ಮತದಾನ ನಡೆಯಲಿದೆ. ಜೂನ್ 2ರಂದು ಮತ ಎಣಿಕೆ ನಡೆಯಲಿದೆ.
2019ರ ಏಪ್ರಿಲ್‌ನಲ್ಲಿ ಅರುಣಾಚಲ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ನಡೆಯಿತು. ಬಿಜೆಪಿ ಅಧಿಕಾರಕ್ಕೆ ಬಂದಿತು ಮತ್ತು ಪೆಮಾ ಖಂಡು ಮುಖ್ಯಮಂತ್ರಿಯಾದರು. ಈಗ ಲೋಕಸಭೆ ಚುನಾವಣೆ 2024ರ ಜೊತೆಗೆ ರಾಜ್ಯದ ವಿಧಾನಸಭೆ ಚುನಾವಣೆ ನಡೆಯುತ್ತಿದೆ.












Click it and Unblock the Notifications