ತರುಣ್ ತೇಜಪಾಲ್ ಬಗ್ಗೆ ಹಿರಿಯ ಪತ್ರಕರ್ತರೇನಂತಾರೆ?
ಕಿರಿಯ ಸಹೋದ್ಯೋಗಿಗೆ ಗೋವಾದಲ್ಲಿ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ 'ತೆಹೆಲ್ಕಾ' ಪತ್ರಿಕೆಯ ಮಾಜಿ ಸಂಪಾದಕ ತರುಣ್ ತೇಜಪಾಲ್ ಬಗ್ಗೆ ದೇಶದೆಲ್ಲೆಡೆ ಬಿಸಿಬಿಸಿ ಚರ್ಚೆ ನಡೆಯುತ್ತಿದೆ. ಕಿರುಕುಳಕ್ಕೊಳಗಾಗಿದ್ದಾಳೆ ಎನ್ನಲಾದ ಯುವತಿ ಕೆಲಸಕ್ಕೆ ರಾಜೀನಾಮೆ ನೀಡಿ ಕಾನೂನು ಹೋರಾಟ ನಡೆಸುತ್ತಿದ್ದರೆ, ತರುಣ್ ಅವರ ಇತರ ಹಿರಿಯ ಸಹೋದ್ಯೋಗಿಗಳು ಒಬ್ಬೊಬ್ಬರಾಗಿ ಸಂಸ್ಥೆ ಬಿಟ್ಟು ಹೊರನಡೆಯುತ್ತಿದ್ದಾರೆ.
ಈ ಘಟನೆಯಿಂದಾಗಿ ಇಡೀ ಪತ್ರಿಕೋದ್ಯಮದ ಮೇಲೆ ಅನುಮಾನದ ದೃಷ್ಟಿಯಿಂದ ಜನರು ನೋಡುವಂತಾಗಿದೆ ಎಂಬೆಲ್ಲ ಮಾತುಗಳು ಕೇಳಿಬರುತ್ತಿವೆ. ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್, ಇಂಡಿಯಾ ಟುಡೆ, ದಿ ಫೈನಾನ್ಶಿಯಲ್ ಎಕ್ಸ್ ಪ್ರೆಸ್, ಔಟ್ ಲುಕ್ ಮುಂತಾದ ಪತ್ರಿಕೆಗಳಲ್ಲಿ ಕೆಲಸ ಮಾಡಿ 2000ರಲ್ಲಿ 'ತೆಹೆಲ್ಕಾ' ಪತ್ರಿಕೆ ಆರಂಭಿಸಿ, ಅನೇಕ ಹಗರಣಗಳನ್ನು ಬಯಲಿಗೆಳೆದು ಆಕಾಶದೆತ್ತರಕ್ಕೆ ಬೆಳೆದ ತರುಣ್ ಈಗ ನೆಲಕ್ಕೆ ಧೊಪ್ಪನೆ ಬಿದ್ದಿದ್ದಾರೆ.
ಹಗರಣಗಳಲ್ಲಿ ಸಿಲುಕಿಕೊಂಡವರ ಬಗ್ಗೆ ಆಡುತ್ತಿದ್ದವರ ಬಗ್ಗೆಯೇ ಈಗ ಎಲ್ಲರೂ ಆಡಿಕೊಳ್ಳುವಂತಾಗಿದೆ. ಹಿಂದೆ ಅವರ ಜೊತೆ ಕೆಲಸ ಮಾಡಿದ ಇಬ್ಬರು ಹಿರಿಯ ಪತ್ರಕರ್ತರು ತರುಣ್ ತೇಜಪಾಲ್ ಬಗ್ಗೆ ತಮ್ಮ ವಸ್ತುನಿಷ್ಠ ಅಭಿಪ್ರಾಯವನ್ನು ಮಂಡಿಸಿದ್ದಾರೆ. ಒಬ್ಬರು, ಇಂಡಿಯಾ ಟುಡೆ ಎಡಿಟರ್-ಇನ್-ಚೀಫ್ ಆಗಿರುವ ಅರುಣ್ ಪುರಿ ಮತ್ತು ಔಟ್ ಲುಕ್ ಪತ್ರಿಕೆಯ ಎಡಿಟೋರಿಯಲ್ ಚೇರ್ಮನ್ ಆಗಿರುವ ವಿನೋದ್ ಮೆಹ್ತಾ ಅವರು.
ತರುಣ್ ತೇಜಪಾಲ್ ಕುರಿತ ಲೇಖನಕ್ಕೆ ಇಂಡಿಯಾ ಟುಡೆ ಪತ್ರಿಕೆಯಲ್ಲಿ 'ಡಿಸ್ ಗ್ರೇಸ್' ಎಂಬ ಶೀರ್ಷಿಕೆ ಮುಖಪುಟದಲ್ಲಿ ರಾರಾಜಿಸುತ್ತಿದ್ದರೆ, ಔಟ್ ಲುಕ್ ಪತ್ರಿಕೆ 'ತೆಹೆಲ್ಕಾ ಆಫ್ಟರ್ ತರುಣ್' ಎಂಬ ಶೀರ್ಷಿಕೆ ನೀಡಿದೆ. ಎರಡೂ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಇಬ್ಬರು ಪತ್ರಿಕಾ ದಿಗ್ಗಜರ ಅನಿಸಿಕೆಗಳನ್ನು sans sarif ಬ್ಲಾಗ್ ಪ್ರಕಟಿಸಿದೆ. ಅವರ ಅನಿಸಿಕೆಗಳು ಕೆಳಗಿನಂತಿವೆ.

ಅರುಣ್ ಪುರಿ, ಇಂಡಿಯಾ ಟುಡೆ ಎಡಿಟರ್-ಇನ್-ಚೀಫ್
"25 ವರ್ಷಗಳ ಹಿಂದೆ ಸುಮಾರು 6 ವರ್ಷಗಳ ಕಾಲ ತರುಣ್ ತೇಜಪಾಲ್ ಈ ಪತ್ರಿಕೆಯಲ್ಲಿ ಕೆಲಸ ಮಾಡಿದ್ದರು. ನನಗೆ ಅವರು ತುಂಬಾ ಇಷ್ಟವಾಗಿದ್ದರು ಎಂದು ಧೈರ್ಯವಾಗಿ ಹೇಳುತ್ತೇನೆ. ಅವರು ತುಂಬಾ ಪ್ರತಿಭಾವಂತರಾಗಿದ್ದರು ಮತ್ತು ಅದು ಅವರಿಗೂ ತಿಳಿದಿತ್ತು. ಇಂದಿನ ಮಟ್ಟಿಗೆ ಹೇಳುವುದಾದರೆ, ಅವರು ನಿಜವಾದ ಷೋಕಿಲಾಲ.
ಹಿರಿಯ ಉಪ ಸಂಪಾದಕ ಹುದ್ದೆಗೆ ಅವರನ್ನು ಸಂದರ್ಶಿಸಿದಾಗ ಅವರಿಗೆ ಕೇವಲ ಇಪ್ಪತ್ತೈದೇ ವಯಸ್ಸಾಗಿದ್ದರೂ ಬೌದ್ಧಿಕ ಧಿಮಾಕು ಮತ್ತು ಅಪಾರ ಸಾಹಿತ್ಯಿಕ ಹಸಿವು ಇತ್ತು. ಮುಂದೆ 1994ರಲ್ಲಿ ಅವರು ರಾಜೀನಾಮೆ ನೀಡಿದಾಗ, ವಿಷಣ್ಣತೆ ತನ್ನನ್ನು ನುಂಗುವ ಮೊದಲೆ ನಿರ್ಗಮಿಸುವುದಾಗಿ ಅವರು ಪ್ರಾಮಾಣಿಕವಾಗಿ ಹೇಳಿಕೊಂಡಿದ್ದರು.
ಇಷ್ಟೊಂದು ಪ್ರತಿಭೆ, ಜಾಣ್ಮೆ, ಯಶಸ್ಸು ಇರುವ ವ್ಯಕ್ತಿ ಅದ್ಹೇಗೆ ಲೈಂಗಿಕ ದೌರ್ಜನ್ಯದ ಸುಳಿಯಲ್ಲಿ ಸಿಲುಕಿದ ಎಂಬ ಬಗ್ಗೆ ಒಬ್ಬೊಬ್ಬರು ಒಂದೊಂದು ರೀತಿ ವ್ಯಾಖ್ಯಾನಿಸುತ್ತಿದ್ದಾರೆ. ನನ್ನ ವ್ಯಾಖ್ಯಾನ ಅತ್ಯಂತ ಸರಳ. ಅನೇಕ ಪ್ರತಿಭಾವಂತರು ತಾನೇ 'ದೇವರು' ಎಂಬ ಸಂಕೀರ್ಣತೆ ಬೆಳೆಸಿಕೊಂಡುಬಿಡುತ್ತಾರೆ.
ಅವರು ಯಶಸ್ಸಿನ ಶಿಖರ ಏರಿದೊಡನೆ ತಮ್ಮದೇ ಆದ ಜಗತ್ತಿನಲ್ಲಿ ಬದುಕಲು ಆರಂಭಿಸುತ್ತಾರೆ. ಮತ್ತು ಸಾಮಾಜಿಕ ನಡವಳಿಕೆಯ ಸಾಮಾನ್ಯ ನಿಯಮಗಳು ಮತ್ತು ದೇಶದ ಕಾನೂನುಗಳು ತಮಗೆ ಅನ್ವಯವಾಗುವುದಿಲ್ಲ ಎಂದು ಅಂದುಕೊಳ್ಳುತ್ತಾರೆ."
ವಿನೋದ್ ಮೆಹ್ತಾ, ಔಟ್ ಲುಕ್ ಪತ್ರಿಕೆಯ ಎಡಿಟೋರಿಯಲ್ ಚೇರ್ಮನ್
"ತರುಣ್ ತೇಜಪಾಲ್ ಔಟ್ ಲುಕ್ ಪತ್ರಿಕೆಯಲ್ಲಿ ಆರು ವರ್ಷಗಳ ಕಾಲ ನನ್ನ ಕಿರಿಯ ಸಹೋದ್ಯೋಗಿಯಾಗಿದ್ದರು. ವೃತ್ತಿಯ ದೃಷ್ಟಿಯಿಂದ ಪತ್ರಿಕೆಗೆ ಅವರ ಕೊಡುಗೆ ಅಪಾರವಾಗಿತ್ತು.
ಅವರ ನಡವಳಿಕೆಯನ್ನು ನಾನು ಒಪ್ಪುತ್ತೇನೆ ಎಂಬುದು ಹುಚ್ಚುತನವಾಗುತ್ತದೆ. ಲೈಂಗಿಕ ಕಿರುಕುಳವನ್ನು ನಾನು ಹೇಗೆ ತಾನೆ ಬೆಂಬಲಿಸಲಿ? ತರುಣ್ ಅವರು ಬಹುದೊಡ್ಡ ತಪ್ಪನ್ನು ಎಸಗಿದ್ದಾರೆ ಮತ್ತು ಕಿರುಕುಳಕ್ಕೊಳಗಾದ ಯುವತಿಯ ದೂಷಣೆ ಮಾಡಿ ಮತ್ತಷ್ಟು ಸಂದಿಗ್ಧದಲ್ಲಿ ಸಿಲುಕಿಕೊಂಡಿದ್ದಾರೆ.
ಮಾಧ್ಯಮದಲ್ಲಿ, ಅದರಲ್ಲೂ ಉನ್ನತ ಹುದ್ದೆ ಹೊಂದಿರುವವರಲ್ಲಿ, ಅಧಿಕಾರವನ್ನು ದುರ್ಬಳಕೆ ಮಾಡುತ್ತಿರುವುದು ಹೆಚ್ಚಾಗುತ್ತಿದೆ. ಸಂಪಾದಕರು ಕಿರಿಯ ಸಹೋದ್ಯೋಗಿಗಳನ್ನು, ಟ್ರೇನಿಗಳನ್ನು ಸೆಕ್ಷುವಲ್ ಆಗಿ ಕಿರುಕುಳಕ್ಕೀಡು ಮಾಡುವುದು ನಡೆಯುತ್ತಲೇ ಇರುತ್ತದೆ. ಒಂದು ವೇಳೆ ಯುವತಿ 'ಸಹಕಾರ' ನೀಡಿದರೆ ಕೆಲಸ ಉಳಿಸಿಕೊಳ್ಳುವುದು ಮಾತ್ರವಲ್ಲ ಭಡ್ತಿಯನ್ನೂ ಪಡೆಯುತ್ತಾಳೆ. ಇಲ್ಲದಿದ್ದರೆ ಕಿತ್ತು ಬಿಸಾಕುತ್ತಾರೆ.
ಇದು ನಮ್ಮ ವೃತ್ತಿಯಲ್ಲಿ ಕಾಪಾಡಿಕೊಂಡು ಬರಲಾಗಿರುವ ಅತ್ಯಂತ ಕೆಟ್ಟ ಗೌಪ್ಯತೆ. ಇದರ ಬಗ್ಗೆ ಬಾಯಿ ಬಿಡದ ಪತ್ರಿಕೋದ್ಯಮದ ಘಟಾನುಘಟಿಗಳಲ್ಲಿ ಕೆಲವರು ಕೂಡ ಆರೋಪಿ ಸ್ಥಾನದಲ್ಲಿ ನಿಂತಿದ್ದಾರೆ. ಅವರಿಗೆ ಅಂತರಂಗ ಮತ್ತು ಬಹಿರಂಗದ ಎಲ್ಲ ವಿಷಯಗಳು ತಿಳಿದಿರುತ್ತವೆ. ಆದರೂ ಮೌನ ವಹಿಸಿರುತ್ತಾರೆ. ನಾಚಿಕೆಗೀಡು ಮಾಡುವ ಈ ಮೌನವನ್ನು ಮುರಿಯಲೇಬೇಕು."












Click it and Unblock the Notifications